ಶುಕ್ರವಾರ, 2 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೋಕೋಪಯೋಗಿ ಇಲಾಖೆ: ನಿಯಮ ಉಲ್ಲಂಘಿಸಿ ಟೆಂಡರ್

2016–2021ರ ಅವಧಿಯಲ್ಲಿನ ರಸ್ತೆ ಕಾಮಗಾರಿ: ಸಿಎಜಿ ವರದಿ
Last Updated 22 ಫೆಬ್ರವರಿ 2023, 22:15 IST
ಅಕ್ಷರ ಗಾತ್ರ

ಬೆಂಗಳೂರು: 2016–2021ರ ಅವಧಿ ಯಲ್ಲಿ ಲೋಕೋಪಯೋಗಿ ಇಲಾಖೆ (ಪಿಡಬ್ಲ್ಯುಡಿ) ಮೂಲಕ ನಡೆದ ಸಾವಿ ರಾರು ಕೋಟಿ ರೂಪಾಯಿಗಳ ವೆಚ್ಚದ ರಸ್ತೆ ಕಾಮಗಾರಿಗಳ ಟೆಂಡರ್‌ ಪ್ರಕ್ರಿಯೆ ಯಲ್ಲಿ ನಿಯಮಗಳ ಉಲ್ಲಂಘನೆ ಹಾಗೂ ತಪಾಸಣಾ ವರದಿಗಳೇ ಇಲ್ಲದೆ ಬಿಲ್‌ ಪಾವತಿಸಲಾಗಿದೆ ಎಂದು ಮಹಾ ಲೇಖಪಾಲರ (ಸಿಎಜಿ) ವರದಿ ಹೇಳಿದೆ.

2021ರ ಮಾರ್ಚ್‌ಗೆ ಕೊನೆ ಗೊಂಡಂತೆ ರಸ್ತೆ ಕಾಮಗಾರಿಗಳ ಯೋಜನೆ ಮತ್ತು ಗುತ್ತಿಗೆ ನಿರ್ವಹಣೆಗೆ ಸಂಬಂಧಿಸಿದ ಸಿಎಜಿ ವರದಿಯನ್ನು ವಿಧಾನಮಂಡಲದಲ್ಲಿ ಬುಧವಾರ ಮಂಡಿಸಲಾಯಿತು. 2016–2021ರ ಅವಧಿಯಲ್ಲಿ ಪಿಡಬ್ಲ್ಯುಡಿ ರಸ್ತೆ ಕಾಮಗಾರಿಗಳಿಗಾಗಿ ₹ 17,046.97 ಕೋಟಿ ವೆಚ್ಚ ಮಾಡಲಾಗಿತ್ತು. ಈ ಅವಧಿಯ ₹ 3,583.28 ಕೋಟಿ ವೆಚ್ಚದ 499 ಕಾಮಗಾರಿಗಳ ಕುರಿತು ಸಿಎಜಿ ಪರೀಕ್ಷಾ ತನಿಖೆ ನಡೆಸಿದೆ.

ನೂರಾರು ಕಾಮಗಾರಿಗಳಲ್ಲಿ ಸ್ಪರ್ಧಾತ್ಮಕ ಬಿಡ್‌ಗಳು ಸಲ್ಲಿಕೆಯಾಗ ದಿದ್ದರೂ ಮಾನದಂಡ ಉಲ್ಲಂಘಿಸಿ ಟೆಂಡರ್‌ ಪ್ರಕ್ರಿಯೆಯನ್ನು ಅಂತಿಮಗೊಳಿ ಸಲಾಗಿದೆ. ಕೆಲವೇ ಗುತ್ತಿಗೆದಾರರಿಗೆ ಅನುಕೂಲ ಮಾಡಿಕೊಡಲು ಟೆಂಡರ್‌ ಷರತ್ತುಗಳನ್ನು ನಿಗದಿಪಡಿಸಿರುವುದು ಕಂಡುಬಂದಿದೆ ಎಂದು ವರದಿ ತಿಳಿಸಿದೆ.

ಭಾರತೀಯ ರಸ್ತೆ ಕಾಂಗ್ರೆಸ್‌ ಮಾನದಂಡಗಳು ಮತ್ತು ಸರ್ಕಾರದ ನಿಯಮಗಳನ್ನು ಉಲ್ಲಂಘಿಸಿ ಅಂದಾಜುಪಟ್ಟಿ ಸಿದ್ಧಪಡಿಸಿರುವುದು, ಗುತ್ತಿಗೆದಾರರಿಂದ ನಿಗದಿತ ಪ್ರಮಾಣದ ಬ್ಯಾಂಕ್‌ ಭದ್ರತೆ ಪಡೆಯದೇ ಇರುವುದು, ಗುತ್ತಿಗೆದಾರರಿಗೆ ಅನಧಿಕೃತವಾಗಿ ಮುಂಗಡಗಳನ್ನು ಪಾವತಿಸಿರುವುದು ಸಿಎಜಿ ಪರಿಶೀಲನೆಯಲ್ಲಿ ಪತ್ತೆಯಾಗಿದೆ.

ರಸ್ತೆ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುವುದಕ್ಕೆ ಪೂರಕವಾಗಿ ನಡೆಸಿದ ವಾಹನ ಸಂಚಾರ ಗಣತಿಯಲ್ಲೇ ಲೋಪ ವಿತ್ತು. ಇದರಿಂದಾಗಿ ಕೆಲವು ಕಾಮಗಾರಿ ಗಳಲ್ಲಿ ಅನಗತ್ಯ ವೆಚ್ಚ ಮಾಡಲಾಗಿದೆ. ಹಲವು ಕಾಮಗಾರಿಗಳಿಗೆ ಅಲ್ಪಾವಧಿ ಟೆಂಡರ್‌ ಆಹ್ವಾನಿಸಿ ನೂರಾರು ದಿನಗಳ ಬಳಿಕ ಬಿಡ್‌ ಅಂತಿಮಗೊಳಿಸಿರುವುದೂ ಕಂಡುಬಂದಿದೆ ಎಂದು ಸಿಎಜಿ ಹೇಳಿದೆ.

ಲೋಕೋಪಯೋಗಿ ಇಲಾಖೆ: ನಿಯಮ ಉಲ್ಲಂಘಿಸಿ ಟೆಂಡರ್



₹2,738 ಕೋಟಿ ಮೊತ್ತದ ಟೆಂಡರ್‌ನಲ್ಲಿ ಲೋಪ

₹ 2,738.86 ಕೋಟಿ ವೆಚ್ಚದ 373 ಕಾಮಗಾರಿಗಳಿಗೆ ಕೇವಲ ಒಂದು ಅಥವಾ ಎರಡು ಬಿಡ್‌ಗಳು ಸಲ್ಲಿಕೆಯಾಗಿದ್ದವು. ಇಂತಹ ಪ್ರಕರಣಗಳಲ್ಲಿ ಮರು ಟೆಂಡರ್‌ ನಡೆಸಬೇಕೆಂಬ ನಿಯಮ ಪಾಲಿಸದೇ ಬಿಡ್‌ ಅಂತಿಮಗೊಳಿಸಲಾಗಿದೆ ಎಂದು ಸಿಎಜಿ ಆಕ್ಷೇಪಿಸಿದೆ.

131 ಕಾಮಗಾರಿಗಳಿಗೆ ತಲಾ ಒಂದು ಬಿಡ್‌ ಮಾತ್ರ ಸಲ್ಲಿಕೆಯಾಗಿದ್ದರೂ ಅವರಿಗೇ ಗುತ್ತಿಗೆ ನೀಡಲಾಗಿದೆ. 242 ಕಾಮಗಾರಿಗಳಿಗೆ ತಲಾ ಎರಡು ಬಿಡ್‌ ಸಲ್ಲಿಕೆಯಾಗಿದ್ದು, ಇಬ್ಬರಲ್ಲಿ ಒಬ್ಬರನ್ನು ಆಯ್ಕೆ ಮಾಡಲಾಗಿತ್ತು. ಶೇಕಡ 10ಕ್ಕಿಂತ ಹೆಚ್ಚಿನ ಪ್ರೀಮಿಯಂ ಹೊಂದಿದ್ದ 42 ಬಿಡ್‌ಗಳನ್ನು ಕಾನೂನುಬಾಹಿರವಾಗಿ ಅನುಮೋದಿಸಿದ್ದು, ಇದರಿಂದ ಸರ್ಕಾರದ ಬೊಕ್ಕಸಕ್ಕೆ ₹ 18.68 ಕೋಟಿಯಷ್ಟು ಹೊರೆಯಾಗಿದೆ ಎಂದು ತಿಳಿಸಿದೆ.

ಅರ್ಹತೆ ಇದ್ದರೂ ತಿರಸ್ಕಾರ

ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆ (ಎಸ್‌ಎಚ್‌ಡಿಪಿ) ಮೂರನೇ ಹಂತ ಹಾಗೂ ನಾಲ್ಕನೇ ಹಂತದ ಕಾಮಗಾರಿಗಳಲ್ಲಿ ಅರ್ಹತೆ ಇದ್ದ ಬಿಡ್‌ಗಳನ್ನೂ ತಾಂತ್ರಿಕ ಮೌಲ್ಯಮಾಪನದ ಸಮಯದಲ್ಲಿ ತಿರಸ್ಕರಿಸಲಾಗಿತ್ತು ಎಂದು ಸಿಎಜಿ ಹೇಳಿದೆ.

ಬಿಡ್ಡರ್‌ಗಳ ಸಾಮರ್ಥ್ಯ ಪರಿಶೀಲಿಸಲು ಸರಿಯಾದ ವ್ಯವಸ್ಥೆಯೇ ಪಿಡಬ್ಲ್ಯುಡಿಯಲ್ಲಿ ಇಲ್ಲ. ಅರ್ಹತಾ ಪ್ರಮಾಣಪತ್ರ, ವಹಿವಾಟು ದಾಖಲೆ, ಯಂತ್ರೋಪಕರಣಗಳ ಮೌಲ್ಯಮಾಪನದಲ್ಲಿ ಲೋಪಗಳಾಗಿವೆ. ಪ್ರಮಾಣೀಕರಿಸದ ವಹಿವಾಟು ಪತ್ರಗಳನ್ನು ಒಪ್ಪಿಕೊಂಡು ಗುತ್ತಿಗೆ ನೀಡುವ ಮೂಲಕ ಕಾನೂನು ಉಲ್ಲಂಘಿಸಲಾಗಿದೆ ಎಂದು ವರದಿಯಲ್ಲಿ ತಿಳಿಸಿದೆ

ಅಂದಾಜು ಪಟ್ಟಿ ಅನುಮೋದನೆಗೂ ಮುನ್ನ ಟೆಂಡರ್‌

ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆಯ ಮೂರನೇ ಹಂತದಲ್ಲಿ 127 ಪ್ಯಾಕೇಜ್‌ಗಳಲ್ಲಿ ₹ 3,500 ಕೋಟಿ ವೆಚ್ಚದ 399 ಕಾಮಗಾರಿಗಳನ್ನು ಕೈಗೊಳ್ಳಲಾಗಿತ್ತು. ಈ ಕಾಮಗಾರಿಗಳ ಅಂದಾಜು ಪಟ್ಟಿಗೆ ತಾಂತ್ರಿಕ ಅನುಮೋದನೆ ದೊರೆಯುವ ಮೊದಲೇ ಟೆಂಡರ್‌ ಆಹ್ವಾನಿಸುವ ಮೂಲಕ ನಿಯಮ ಉಲ್ಲಂಘಿಸಿರುವುದು ಪತ್ತೆಯಾಗಿದೆ.

ಗುಣಮಟ್ಟದ ಖಾತರಿ ಇಲ್ಲ!

333 ಪ್ರಕರಣಗಳಲ್ಲಿ ಕಾಮಗಾರಿ ಸ್ಥಳಗಳಲ್ಲಿ ಪ್ರಯೋಗಾಲಯಗಳನ್ನು ಸ್ಥಾಪಿಸಲು ಗುತ್ತಿಗೆದಾರರಿಗೆ ₹ 1,408.37 ಕೋಟಿ ಬಿಡುಗಡೆ ಮಾಡಲಾಗಿತ್ತು. ಆದರೆ, ಗುತ್ತಿಗೆದಾರರು ಯಾವುದೇ ಪ್ರಯೋಗಾಲಯ ಸ್ಥಾಪಿಸಿರಲಿಲ್ಲ. ಗುಣಮಟ್ಟ ನಿಯಂತ್ರಣ ಪರೀಕ್ಷಾ ವರದಿಗಳನ್ನು ಬಿಲ್‌ಗಳ ಜತೆ ಸಲ್ಲಿಸಿರಲಿಲ್ಲ ಎಂದು ಸಿಎಜಿ ಹೇಳಿದೆ.

ಗುಣಮಟ್ಟ ಭರವಸೆ ಯೋಜನೆ, ಗುಣಮಟ್ಟ ಪರೀಕ್ಷೆ, ಗುಣಮಟ್ಟ ನಿಯಂತ್ರಣ ಪರೀಕ್ಷಾ ವರದಿಗಳು ಲಭ್ಯವಿಲ್ಲದೇ ಇರುವುದು ಮತ್ತು ಗುಣಮಟ್ಟಕ್ಕೆ ಸಂಬಂಧಿಸಿದಂತೆ ನ್ಯೂನತೆಗಳಿದ್ದರೂ 174 ಕಾಮಗಾರಿಗಳಲ್ಲಿ ₹ 708.98 ಕೋಟಿ ಬಿಲ್‌ ಪಾವತಿಸಲಾಗಿತ್ತು ಎಂಬುದನ್ನು ವರದಿ ಬಹಿರಂಗಪಡಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT