ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರವಾಸ | ಜೆನೊಲೆನ್ ಗುಹೆಗಳ ಕೌತುಕ...

Published 10 ಮಾರ್ಚ್ 2024, 0:30 IST
Last Updated 10 ಮಾರ್ಚ್ 2024, 0:30 IST
ಅಕ್ಷರ ಗಾತ್ರ

ಪ್ರಕೃತಿ ಮಡಿಲಿನಲ್ಲಿ ಅದೆಷ್ಟೋ ಕುತೂಹಲಕಾರಿ ಸಂಗತಿಗಳು ಜರುಗಿಹೋಗಿರುತ್ತವೆ. ಅವು ಆಕಸ್ಮಿಕವಾಗಿ ಪತ್ತೆಯಾಗಿ ಜನರ ಗಮನಕ್ಕೆ ಬರುತ್ತವೆ. ಅಂತಹದೊಂದು ಅಪರೂಪದ ಕೌತುಕ ಆಸ್ಟ್ರೇಲಿಯಾದ ಸಿಡ್ನಿಯ ಪ್ರಸಿದ್ಧ ಗುಹಾಸರಣಿ ಜೆನೊಲೆನ್ ಕೇವ್ಸ್.

ಆಸ್ಟ್ರೇಲಿಯಾದ ಸಿಡ್ನಿಯ ಪಶ್ಚಿಮಕ್ಕೆ ಸುಮಾರು 110 ಮೈಲಿ ದೂರದಲ್ಲಿ ಪ್ರಸಿದ್ಧ ಗುಹಾಸರಣಿ ಜೆನೊಲೆನ್ ಕೇವ್ಸ್ ಇದೆ. ಬ್ಲೂ ಮೌಂಟೇನ್‌ಗಳ ಅಂಚಿನಲ್ಲಿ ಸುಮಾರು 430 ಮಿಲಿಯನ್ ವರ್ಷಗಳ ಹಿಂದೆ ಸಿಲೂರಿಯನ್ ಎಂದು ಕರೆಯುವ ಭೂವೈಜ್ಞಾನಿಕ ಅವಧಿಯಲ್ಲಿ ಸುಣ್ಣದಕಲ್ಲಿನ ನಡುವೆ ಹರಿಯುವ ಹೊಳೆಗಳಿಂದ ರೂಪುಗೊಂಡ ಗುಹೆಗಳಿವು. ಹರಿಯುವ ಸಿಹಿನೀರಿನಲ್ಲಿ ಸುಣ್ಣದಕಲ್ಲು ಕರಗುವುದಲ್ಲದೆ, ಮಳೆ-ಗಾಳಿಯಿಂದ ಮತ್ತು ಸಹಜ ಸವೆತದಿಂದ ಬಂಡೆಗಳಲ್ಲಿ ಅಲ್ಲಲ್ಲಿ ರಂಧ್ರಗಳು ಉಂಟಾಗಿ, ಅವು ದೊಡ್ಡದಾದಂತೆ ಗುಹೆಗಳಾಗುತ್ತವೆ.

ಇವುಗಳಿಗೆ ಕಾರ್ಸ್ಟ್ ಗುಹೆಗಳು ಎಂದು ಹೆಸರು. ಭೂಗತವಾದ ನದಿಗಳು ಮತ್ತು ನೈಸರ್ಗಿಕ ಕಮಾನುಗಳಿಂದ ಕೂಡಿದ ಈ ಗುಹೆಗಳು ವಿಶ್ವದ ಅತ್ಯಂತ ಪ್ರಾಚೀನ ತೆರೆದ ಗುಹೆಗಳಾಗಿದ್ದು ಜೆನೊಲೆನ್ ನದಿಯ ಭೂಗತ ಹಾದಿಯಲ್ಲಿವೆ. ಸುಮಾರು 25 ಮೈಲಿ ಹಾದಿಯ ಈ ಗುಹಾಸರಣಿಯಲ್ಲಿ 400ಕ್ಕೂ ಹೆಚ್ಚು ಗುಹೆಗಳಿದ್ದು, 300  ಪ್ರವೇಶ ದ್ವಾರಗಳಿವೆ. ಇವುಗಳಲ್ಲಿ ಹದಿನೈದು ಗುಹೆಗಳಿಗೆ ಬೆಳಕಿನ ವ್ಯವಸ್ಥೆ ಕಲ್ಪಿಸಿ ಮಾರ್ಗದರ್ಶಿಗಳ ಸಹಾಯದಿಂದ ಸಂದರ್ಶಿಸಲು ಪ್ರವಾಸಿಗರಿಗೆ ತೆರೆಯಲಾಗಿದೆ. ಉಳಿದ ಗುಹೆಗಳ ಸಂಶೋಧನೆ ಇನ್ನೂ ನಡೆಯುತ್ತಿದೆ. ಈ ಗುಹೆಗಳು ಆಸ್ಟ್ರೇಲಿಯಾದ ರಾಷ್ಟ್ರೀಯ ಪರಂಪರೆಯ ಪಟ್ಟಿಯಲ್ಲಿ ಸೇರಿವೆ.

೧೮೩೮ ರಲ್ಲಿ ಜೇಮ್ಸ್ ವ್ಹಾಲನ್ ಈ ಗುಹೆಗಳಿಗೆ ಪ್ರಪ್ರಥಮವಾಗಿ ಭೇಟಿ ನೀಡಿದ ಎಂದು ಹೇಳಲಾಗುತ್ತದೆ. ಅದೂ ಆಕಸ್ಮಿಕವಾಗಿ! ದನ-ಕರು, ಆಹಾರ ಪದಾರ್ಥ, ಬಟ್ಟೆ ಕದಿಯುತ್ತಿದ್ದ ಮೆಕೇನ್ ಎಂಬ ಕಳ್ಳ ತಪ್ಪಿಸಿಕೊಳ್ಳಲು ಅಡಗುತ್ತಿದ್ದ ತಾಣ ಇದಾಗಿತ್ತು. ಅವನನ್ನು ಪತ್ತೆ ಹಚ್ಚಲು ಹುಡುಕಾಟ ನಡೆಸಿದಾಗ ಈ ಗುಹೆಗಳು ಇರುವುದು ಗೊತ್ತಾಯಿತು. ಈ ವಿಷಯವನ್ನು ತನ್ನ ಸಹೋದರ ಚಾರ್ಲ್ಸ್ವ್ಹಾಲನ್‌ಗೆ ತಿಳಿಸಿದಾಗ ಅವರು ಒಟ್ಟಿಗೆ ಕೂಡಿ ಇವುಗಳನ್ನು ಕಂಡುಹಿಡಿದರು . ೧೮೬೬ ರಲ್ಲಿ ಈ ಗುಹೆಗಳ ಜವಾಬ್ದಾರಿಯನ್ನು ಸರ್ಕಾರ ವಹಿಸಿಕೊಂಡು ಜೆರೆಮಿಯಾ ವಿಲ್ಸನ್ ಅವರನ್ನು ಮೊದಲ ಗುಹೆಗಳ ರಕ್ಷಕರನ್ನಾಗಿ ನೇಮಿಸಿತು. ೧೮೮೪ ರಲ್ಲಿ ಜೆನೊಲೆನ್ (ಸ್ಥಳೀಯ ಭಾಷೆಯಲ್ಲಿ ಎತ್ತರದ ಸ್ಥಳ) ಎಂಬ ಹೆಸರನ್ನು ಈ ಗುಹೆಗಳಿಗೆ ನೀಡಲಾಯಿತು.

ಜೆನೊಲೆನ್ ಕೇವ್ಸ್ ಒಳಗಿನ ದೃಶ್ಯ

ಜೆನೊಲೆನ್ ಕೇವ್ಸ್ ಒಳಗಿನ ದೃಶ್ಯ

ಮೂಲನಿವಾಸಿಗಳ ಮಹತ್ವದ ನೆಲೆ ಹೊರಜಗತ್ತಿಗೆ ಬೆಳಕಿಗೆ ಬಂದಿದ್ದು 19ನೇ ಶತಮಾನದಲ್ಲಾದರೂ ಸಾವಿರಾರು ವರ್ಷಗಳಿಂದ ಜೆನೊಲೆನ್ ಪ್ರದೇಶವು ಮೂಲನಿವಾಸಿಗಳಾದ ಗುಂಡುಂಗುರ್ರಾ ಮತ್ತು ವಿರಾಡ್ಜುರಿ ಜನಸಂಸ್ಕೃತಿಯ ಅವಿಭಾಜ್ಯ ಅಂಗವಾಗಿದ್ದು ಬಿನಾಮಿಲ್ ಎನ್ನುವ ಹೆಸರಿನಿಂದ ಪರಿಚಿತವಾಗಿತ್ತು. ಈ ವಿಶ್ವ ಮತ್ತು ಜೀವಿಗಳ ಹುಟ್ಟಿನ ಬಗ್ಗೆ ವಿವರಿಸುವ ಅವರ ಕನಸಿನ ಸೃಷ್ಟಿ ಕಥೆ ಇದನ್ನು ವಿವರಿಸುತ್ತದೆ. ಪೂರ್ವಜರ ಆತ್ಮ ಹೊಂದಿದ ಗುರಂಗಾಚ್ ಎನ್ನುವ ಜಲಚರ ಮತ್ತು ಮಿರಾಗನ್ ಎನ್ನುವ ಸ್ಥಳೀಯ ಬೆಕ್ಕಿಗೂ ಭೀಕರ ಹೋರಾಟ ನಡೆಯುತ್ತದೆ. ಅದರಲ್ಲಿ ಬಳಲಿ ಗುರಂಗಾಚ್ ವಿಶ್ರಮಿಸಿ, ತನ್ನ ಗಾಯಗಳನ್ನು ನೆಕ್ಕಿ ಗುಣಪಡಿಸಿಕೊಂಡ ಸ್ಥಳ ಈ ಜೆನೊಲೆನ್ ಗುಹೆಗಳು. ಇದಕ್ಕೆ ಸಾಕ್ಷಿಯಾಗಿ ಗುಹೆಗಳ ಪ್ರವೇಶ ದ್ವಾರದಲ್ಲಿರುವ ದೊಡ್ಡ ಕಮಾನಿನ ಹತ್ತಿರ ರಕ್ತದ ಕಲೆಯನ್ನು ತೋರಿಸಲಾಗುತ್ತದೆ.

ಗಾಯಗೊಂಡ ಗುರಂಗಾಚ್ ವಿಶ್ರಾಂತಿಯನ್ನು ಪಡೆದ ಸ್ಥಳವಾದ್ದರಿಂದ ಇದು ಜನರ ಪಾಲಿಗೆ ನೆಮ್ಮದಿಯನ್ನು ನೀಡುವ ತಾಣ ಎನ್ನಲಾಗುತ್ತದೆ. ಮಾತ್ರವಲ್ಲ ಗುಹೆಯ ಒಳಗಿರುವ ಸ್ಪಟಿಕದ ರಚನೆಗಳು ಕೂಡ ಪವಿತ್ರವಾಗಿದ್ದು ಅವುಗಳಿಗೆ ಮಾಂತ್ರಿಕ ಶಕ್ತಿ ಇದೆ ಎಂದು ಜನರು ನಂಬುತ್ತಾರೆ. ಮೂಲನಿವಾಸಿಗಳು 20ನೇ ಶತಮಾನದ ಆರಂಭದವರೆಗೆ ಇಲ್ಲಿಗೆ ಭೇಟಿ ನೀಡಿ ಹರಿಯುತ್ತಿದ್ದಂತಹ ನದಿಯಲ್ಲಿ ರೋಗಿಗಳನ್ನು ಸ್ನಾನ ಮಾಡಿಸುತ್ತಿದ್ದರು ಎಂಬುದಕ್ಕೆ ದಾಖಲೆಗಳಿವೆ. ಹಾಗಾಗಿ ಗುಹೆ ತೋರಿಸುವಾಗಲೆಲ್ಲಾ ಮೂಲನಿವಾಸಿಗಳ ಪವಿತ್ರ ಜಾಗ; ಅದನ್ನು ಗೌರವಿಸಬೇಕು ಎನ್ನುವುದನ್ನು ನೆನಪಿಸುತ್ತಾರೆ. 

ಕೇವ್ಸ್‌ನಲ್ಲಿ ಶಿಲೆಗಳಿಂದ ತೊಟ್ಟಿಕ್ಕುವ ನೀರು

ಕೇವ್ಸ್‌ನಲ್ಲಿ ಶಿಲೆಗಳಿಂದ ತೊಟ್ಟಿಕ್ಕುವ ನೀರು


ನೆಲಗವಿಯಲ್ಲಿ ನಡೆದಾಡುತ್ತಾ…

ಆಸ್ಟ್ರೇಲಿಯಾದ ಎಲ್ಲಾ ಕಡೆ ಈ ಗುಹೆಗಳ ಕುರಿತು ‘ಇತಿಹಾಸ ಹೇಳುವ, ಕಲಾತ್ಮಕವಾಗಿ ರೂಪುಗೊಂಡಿರುವ, ಸಂಶೋಧನೆಗೆ ಅವಕಾಶವಿರುವ, ಅಪರೂಪದ ಗುಹೆಗಳಿವು ಎಂಬ ಬಣ್ಣನೆ ಜತೆ ಸಂಪೂರ್ಣ ಮಾಹಿತಿಯ ಕರಪತ್ರಗಳಿದ್ದವು. ಇಲ್ಲಿಗೆ ಬರುವ ಪ್ರವಾಸಿಗರ ಸಂಖ್ಯೆ ಎಷ್ಟಿದೆ ಎಂದರೆ ಕನಿಷ್ಠ ಎರಡು ವಾರಗಳ ಮುಂಚೆಯೇ ಟಿಕೆಟ್ ಅನ್ನು ( ಸುಮಾರು ₹4 ಸಾವಿರ) ಕಾದಿರಿಸಬೇಕು. ಹಾಗಿದ್ದೂ ಈ ಗುಹೆಗಳಿಗೆ ತೆರಳಲು ಸರ್ಕಾರಿ ಸಾರಿಗೆ ವ್ಯವಸ್ಥೆ ಇಲ್ಲ! ಕಟೂಂಬಾ ಎನ್ನುವ ಸ್ಟೇಷನ್‌ಗೆ ರೈಲಿನಲ್ಲಿ ಪ್ರಯಾಣ ಮಾಡಿ ಅಲ್ಲಿಂದ ಮುಂದೆ ಟ್ಯಾಕ್ಸಿ ತೆಗೆದುಕೊಳ್ಳುವುದು ಅನಿವಾರ್ಯ. ಈ ವ್ಯವಸ್ಥೆ ಸಾಕಷ್ಟು ದುಬಾರಿ. (₹ 30 ಸಾವಿರ). ನಮಗೆ ಚಾಲಕ ಬೇರೆ ಹೆದರಿಸಿದ್ದ. ಕಡೆಗೆ ನೋಡಿದರೆ ಜನಜಂಗುಳಿ ಇಲ್ಲದ ನೇರವಾದ ಚಿಕ್ಕ-ಸ್ವಚ್ಛ ದಾರಿಯಲ್ಲಿ ನಾಲ್ಕೈದು ಕಡೆ ತಿರುವು, ಗಾಳಿಗೆ ಅಡ್ಡ ಬಿದ್ದ ಒಂದೆರೆಡು ರೆಂಬೆಯಷ್ಟೇ !

ಪ್ರದರ್ಶನ ಗುಹೆಗಳನ್ನು ವೀಕ್ಷಣೆಯನ್ನು ವಿಸ್ತಾರ , ವಿಷಯ ಮತ್ತು ಕ್ರಮಿಸಲು ಬೇಕಾದ ದೈಹಿಕ ಸಾಮರ್ಥ್ಯವನ್ನು ಗಮನದಲ್ಲಿಟ್ಟು ಸಮಯ ಮತ್ತು ಜನರ ಸಂಖ್ಯೆಯನ್ನು ನಿರ್ಧರಿಸಲಾಗುತ್ತದೆ. ಹಾಗಾಗಿ ಮೊದಲೇ ನಿರ್ಧರಿಸಿ ಟಿಕೆಟ್ ಪಡೆಯಬೇಕು. ಲ್ಯುಕಸ್, ಟೆಂಪಲ್ ಆಫ್ ಬಾಲ್, ಚಿಫ್ಲಿ, ಇಂಪೀರಿಯಲ್ , ಡೈಮಂಡ್, ಜ್ಯುಬಿಲಿ, ನೆಟಲ್, ಓರಿಯನ್ , ರಿಬ್ಬನ್, ಪ್ಲಗ್ ಹೋಲ್, ಒರಿಯೆಂಟ್– ಇವೆಲ್ಲ ಗುಹೆಗಳ ಹೆಸರುಗಳು. ಲ್ಯುಕಸ್ ಗುಹೆ ಎಲ್ಲಕ್ಕಿಂತ ದೊಡ್ಡದಾಗಿದ್ದು ಒಮ್ಮೆಗೆ 60 ಜನರು ಪ್ರವೇಶಿಸಲು ಸಾಧ್ಯವಿದೆ.

ಸುಮಾರು ಸಾವಿರ ಮೆಟ್ಟಿಲುಗಳಿದ್ದು ನೋಡಲು ಎರಡು ಗಂಟೆ ಸಮಯ ಬೇಕು. ಒಳ ಹೊಕ್ಕೊಡನೆ ಗವ್ವೆನ್ನುವ ಕತ್ತಲು, ತಣ್ಣಗಿನ ವಾತಾವರಣ, ಅಲ್ಲಲ್ಲಿ ಹೊತ್ತಿಸಿದ ದೀಪಗಳು, ತೊಟ್ಟಿಕ್ಕುವ ನೀರು, ಮೈ ಕಿರಿದಾಗಿಸಿ ತೆವಳಿ, ಜಾಗರೂಕತೆಯಿಂದ ನಡೆಯಬೇಕಾದ ಹಾದಿ.. ಒಟ್ಟಿನಲ್ಲಿ ಈ ನೆಲಗವಿಯಲ್ಲಿ ಪಯಣ ರೋಮಾಂಚನ ಅನುಭವ. ನಡೆದಂತೆಲ್ಲಾ ಸುತ್ತಲೂ ಸ್ಟಾಲಕ್ವೈಟ್ ಮತ್ತು ಸ್ಟಾಲಗ್ಮೈಟ್ ಎನ್ನುವ ಶಿಲಾ ರಚನೆಗಳು ಮೂಡಿಸಿರುವ ಚಿತ್ತಾರಗಳು ವೈವಿಧ್ಯಮಯ. ಕಲ್ಲಿನ ಸ್ಕರ್ಟ್, ಆನೆ, ಅಜ್ಜ, ಟೇಬಲ್, ಮುರಿದ ಸ್ತಂಭ, ಪರದೆ, ಮಗು, ಕೇಕ್ , ಹೀಗೆ ಕಣ್ಣಿಗೆ ಕಂಡಿದ್ದು , ಕಲ್ಪನೆಗೆ ಹೊಳೆದಂತೆ ವಿನ್ಯಾಸಗಳು. ಕೆಲವು ಅಚ್ಚ ಬಿಳಿಯ ಬಣ್ಣದ್ದಾದರೆ ಇನ್ನು ಕೆಲವು ಕೆನೆ, ಬಂಗಾರ, ತಿಳಿ ಹಸಿರು ಹೀಗೆ ವರ್ಣಮಯ. ಅಲ್ಲಲ್ಲಿ ಭೂಗತ ನದಿಯ ಜಾಡು ಮತ್ತು ಈಗ ಅಸ್ತಿತ್ವದಲ್ಲಿ ಇರದ ಪ್ರಾಣಿಗಳ ಪಳೆಯುಳಿಕೆಗಳನ್ನು ಕಾಣಬಹುದು. ಲ್ಯುಕಸ್ ಗುಹೆಯಲ್ಲಿ ಇರುವ ಪ್ರಮುಖ ಆಕರ್ಷಣೆ ಎಂದರೆ ಕೆಥಾಡ್ರಲ್ ಚೇಂಬರ್ ( ಪ್ರಾರ್ಥನಾ ಮಂದಿರದ ಭಾಗ). ಇಗರ್ಜಿಗಳಲ್ಲಿ ಕಂಡುಬರುವ ಹಾಗೆ ಎತ್ತರದ ಛಾವಣಿ ಇರುವ ಜಾಗವಿದು. ನೈಸರ್ಗಿಕವಾದ ಧ್ವನಿ ವ್ಯವಸ್ಥೆ ಅತ್ಯಂತ ವಿಶಿಷ್ಟವಾಗಿದ್ದು ಆಗಾಗ್ಗೆ ಸಂಗೀತ ಕಾರ್ಯಕ್ರಮಗಳು ನಡೆಯುತ್ತವೆ. ಶಾಲಾ ಮಕ್ಕಳಿಗೆ ರಜೆಯಲ್ಲಿ ಈ ಗುಹೆಗಳ ವಿಶೇಷ ಪ್ರದರ್ಶನ ಏರ್ಪಡಿಸಲಾಗುತ್ತದೆ.

ಕೇವ್ಸ್ ಹೊರಗಿನ ನೋಟ

ಕೇವ್ಸ್ ಹೊರಗಿನ ನೋಟ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT