ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟ್ರೆಕ್ಕಿಂಗ್ ವಿತ್‌ ಕ್ಲೀನಿಂಗ್

Last Updated 24 ಅಕ್ಟೋಬರ್ 2019, 6:35 IST
ಅಕ್ಷರ ಗಾತ್ರ

ಪ್ರವಾಸಿ ತಾಣಕ್ಕೆ ಚಾರಣ ಮಾಡುತ್ತಾ, ಆ ಜಾಗವನ್ನು ಸ್ವಚ್ಛಗೊಳಿಸುವ ಮೂಲಕ, ವಿಹಾರದ ಜತೆಗೆ, ಕ್ಲೀನಿಂಗ್ ಎಂಬ ವಿಶೇಷ ಕಾರ್ಯಕ್ರವನ್ನು ಕೈಗೊಂಡಿದ್ದಾರೆ ಮೂಡುಬಿದಿರೆ ಎಸ್‌ಎನ್‌ಎಂ ಪಾಲಿಟೆಕ್ನಿಕ್ ಕಾಲೇಜಿನ ಎನ್‌ಎಸ್‌ಎಸ್ ವಿದ್ಯಾರ್ಥಿಗಳು.

ಸಾಮಾನ್ಯವಾಗಿ ಕಾಲೇಜುಗಳಲ್ಲಿ ಚಾರಣ, ಪ್ರವಾಸ ಆಯೋಜಿಸು ವುದು ಖುಷಿಗಾಗಿ. ಆದರೆ, ಮೂಡುಬಿದಿರೆಯ ಎಸ್‌ಎನ್‌ಎಂ ಪಾಲಿಟೆಕ್ನಿಕ್ ಕಾಲೇಜಿನ ಎನ್‌ಎಸ್‌ಎಸ್ ವಿಭಾಗದ ವಿದ್ಯಾರ್ಥಿ ಗಳು ಖುಷಿಗಾಗಿ ಚಾರಣವನ್ನು ಆಯೋಜಿಸುವ ಜತೆಗೆ, ಆ ಚಾರವನ್ನು ತಾವು ಭೇಟಿ ನೀಡಿದ ಪ್ರವಾಸಿ ತಾಣದ ಸ್ವಚ್ಛತೆಗೆ ಮೀಸಲಿಟ್ಟರು. ಇವರ ಚಾರಣದ ಕಾರ್ಯಕ್ಕೆ ರೆಡ್ ಕ್ರಾಸ್ ಸಂಸ್ಥೆಯೂ ಕೈ ಜೋಡಿಸಿತ್ತು.

ಈ ತಂಡ ಚಾರಣ ಮತ್ತು ಸ್ವಚ್ಛತೆಗಾಗಿ ಆಯ್ಕೆ ಮಾಡಿಕೊಂಡ ತಾಣ ಮೂಡುಬಿದಿರೆ ಸಮೀಪದ ಕೊಣಾಜೆಕಲ್ಲು ಬೆಟ್ಟ.ಪಾಲಿಟೆಕ್ನಿಕ್ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಕಾರ್ಯಕ್ರಮ ಅಧಿಕಾರಿ ರಾಮಪ್ರಸಾದ್ ಮತ್ತು ರೆಡ್ ಕ್ರಾಸ್ ಸಂಸ್ಥೆಯ ರವಳನಾಥ ಪ್ರಭು ನೇತೃತ್ವದಲ್ಲಿ ಈ ಕಾರ್ಯ ಆರಂಭವಾಯಿತು.

ನಿಗದಿಯಂತೆ, ಭಾನುವಾರ ಬೆಳಿಗ್ಗೆ 9.30ಕ್ಕೆ ಆರಂಭವಾಯಿತು ಚಾರಣ. ಆದರೆ, ಮೋಡ ಕವಿದ ವಾತಾವರಣ, ಕಾರ್ಯಕ್ರಮಕ್ಕೆ ತೊಡಕಾಗುವ ಸೂಚನೆ ಇತ್ತು. ಏಕೆಂದರೆ, ಹಿಂದಿನ ದಿನ ರಾತ್ರಿಯಿಂದಲೇ ಸತತ ಮಳೆ ಸುರಿಯುತ್ತಿತ್ತು. ಮುಂಜಾನೆಯೂ ಮೋಡ ಕವಿದಿತ್ತು. ಜೊತೆಗೆ ತುಂತುರು ಮಳೆಯೂ ಸೇರಿತ್ತು. ಇವೆಲ್ಲ ನೋಡಿ, ‘ಚಾರಣವನ್ನು ಮುಂದಿನ ವಾರಕ್ಕೆ ಮುಂದೂ ಡೋಣವೇ’ ಎಂದು ಮನಸ್ಸಿನಲ್ಲೇ ಯೋಚಿಸುತ್ತಿದ್ದರು ಅಧಿಕಾರಿಗಳು. ಆದರೂ ಗಟ್ಟಿ ಮನಸ್ಸು ಮಾಡಿ ‘ಒಳ್ಳೆ ಕಾರ್ಯಕ್ಕೆ ಹೋಗುತ್ತಿದ್ದೇವೆ. ನಿಲ್ಲಿಸುವುದು ಬೇಡ. ಏನಾದರಾಗಲಿ, ಮುಂದುವರಿಯೋಣ’ ಎಂದು ತೀರ್ಮಾನಿಸಿ, ನಿಗದಿತ ಸಮಯಕ್ಕೆ ಚಾರಣ ಆರಂಭಿಸಿದರು. ಕ್ರಮೇಣ, ವಾತಾವರಣವೂ ತಿಳಿಯಾಯಿತು.

65 ಮಂದಿ ವಿದ್ಯಾರ್ಥಿ–ವಿದ್ಯಾರ್ಥಿನಿಯರಿದ್ದ ತಂಡ ಕೊಣಾಜೆ ಕಲ್ಲು ಆಶ್ರಮದತ್ತ ಹೆಜ್ಜೆ ಹಾಕುತ್ತಲೇ, ದಾರಿಯುದ್ದಕ್ಕೂ ಬಿದ್ದಿದ್ದ ಪ್ಲಾಸ್ಟಿಕ್, ಬಾಟಲಿ ಯಂತಹ ತ್ಯಾಜ್ಯಗಳನ್ನು ಸಂಗ್ರಹಿ ಸಿದರು. ಸುಮಾರು ಒಂದೂವರೆ ಗಂಟೆಗಳ ಕಾಲ ನಡೆದು ಈ ತಂಡ ಬೆಟ್ಟ ತಲುಪುವ ಹೊತ್ತಿಗೆ ಗಂಟೆ ಹತ್ತೂವರೆಯಾಯಿತು. ದಣಿದಿದ್ದವರಿಗೆಲ್ಲ ಹತ್ತು ನಿಮಿಷದ ವಿಶ್ರಾಂತಿ. ನಂತರ ತಂಡವನ್ನು ಮೂರು ವಿಭಾಗಗಳನ್ನಾಗಿಸಿ, ಬೆಟ್ಟದ ಮೇಲಿನ ಆಶ್ರಮದ ಆವರಣವನ್ನು ಸ್ವಚ್ಛಗೊಳಿ ಸಲು ಆರಂಭಿಸಿದರು.

ಕೊಣಾಜೆಕಲ್ಲು ಬೆಟ್ಟದಲ್ಲಿರುವ ಆಶ್ರಮ ಬಹಳ ಸುಂದರವಾಗಿದೆ. ಇಂಥ ಸುಂದರ ತಾಣವನ್ನು ಇಲ್ಲಿಗೆ ಬರುವ ಪ್ರವಾಸಿಗರು, ನೀರಿನ ಬಾಟಲ್, ಕುರುಕಲು ತಿಂಡಿ ತಿಂದ ಪ್ಲಾಸ್ಟಿಕ್ ಕವರ್‌ಗಳನ್ನು ಎಲ್ಲೆಂದರಲ್ಲಿ ಬಿಸಾಡಿದ್ದರು. ಆಶ್ರಮದ ಮೂಲೆ ಮೂಲೆಯಲ್ಲಿದ್ದ ಇಂಥ ತ್ಯಾಜ್ಯವನ್ನು ಸಂಗ್ರಹಿಸುತ್ತಾ, ಸುಮಾರು 12 ಗಂಟೆವರೆಗೆ ಸ್ವಚ್ಛತಾ ಕಾರ್ಯ ಮುಂದುವರಿಯಿತು. ಬಳಿಕ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಆಶ್ರಮದ ಆವರಣದಲ್ಲಿ ವಿಶ್ರಾಂತಿ ಪಡೆದರು.

ಕಸದ ರಾಶಿಯಾಗಿದ್ದ ಜಾಗ ಸ್ವಚ್ಛವಾದ ಮೇಲೆ, ಕೊಣಾಜೆಕಲ್ಲು ಆಶ್ರಮದ ಸೌಂದರ್ಯ ಮರುಕಳಿಸಿತು. ತಾವು ಸ್ವಚ್ಛಗೊಳಿಸಿದ ಜಾಗದಲ್ಲೇ ನಿಂತ ತಂಡದ ಸದಸ್ಯರು ಸಂಭ್ರಮದಿಂದ ಸೆಲ್ಫಿ ಫೋಟೊ ಸೆಷನ್ಸ್‌ಗೆ ಮುಂದಾದರು. ಮಧ್ಯಾಹ್ನ ಆಶ್ರಮದ ಪೂಜೆಯಲ್ಲಿ ಭಾಗವಹಿಸಿ, ಸಹಭೋಜನ ಸ್ವೀಕರಿಸಿ, ತಾವು ಸಂಗ್ರಹಿಸಿದ 50 ಗೋಣಿ ಚೀಲದ ತ್ಯಾಜ್ಯದೊಂದಿಗೆ ಊರಿನತ್ತ ಹೊರಟರು.

ಮಧ್ಯಾಹ್ನ 3.30ಕ್ಕೆ ಚಾರಣದೊಂದಿಗೆ ಸ್ವಚ್ಛತಾ ಕಾರ್ಯ ಪೂರ್ಣಗೊಂಡಿತ್ತು. ಸುಮಾರು 200 ಕೆ.ಜಿಯಷ್ಟು ತ್ಯಾಜ್ಯ ಸಂಗ್ರಹವಾಗಿತ್ತು. ಈ ವಿದ್ಯಾರ್ಥಿಗಳು ಸಂಗ್ರಹಿಸಿದ ತ್ಯಾಜ್ಯದ ವಿಲೇವಾರಿಯ ಜವಾಬ್ದಾರಿಯನ್ನು ಗ್ರಾಮ ಪಂಚಾಯ್ತಿ ಸದಸ್ಯ ಸಂತೋಷ್ ಶೆಟ್ಟಿ ವಹಿಸಿಕೊಂಡರು (ಕಸವನ್ನು ಅಲ್ಲಿಂದ ತಾಜ್ಯ ವಿಲೇವಾರಿ ಘಟಕಕ್ಕೆ ಸಾಗಿಸುವ ಪ್ರಕ್ರಿಯೆ).

ಚಾರಣದಲ್ಲಿ ಎನ್‌ಎಸ್‌ಎಸ್ ಕಾರ್ಯಕ್ರಮ ಅಧಿಕಾರಿಯ ವರೊಂದಿಗೆ ಅದೇ ಕಾಲೇಜಿನ ಉಪನ್ಯಾಸಕರಾದ ಸುಧಿರಾಜ್, ರಾಘವೇಂದ್ರ ಭಟ್ ಹಾಗೂ ಅದೇ ಕಾಲೇಜಿನ ಹಳೆ ವಿದ್ಯಾರ್ಥಿ ಪ್ರಮೋದ್ ಭಾಗವಹಿಸಿದ್ದರು.

ಹೇಗೆ ಬಂತು ‘ಕ್ಲೀನ್–ಟ್ರೆಕ್’ ಐಡಿಯಾ?
ಎನ್‌ಎಸ್‌ಎಸ್‌ನಿಂದ ಒಂದು ದಿನ ಕಾಲೇಜು ಆವರಣವನ್ನು ಸ್ವಚ್ಛ ಮಾಡುವ ಕೆಲಸ ನಡೆಯುತ್ತಿತ್ತು. ಮರುದಿನ ಈ ಕಾಲೇಜಿನ ವಿದ್ಯಾರ್ಥಿಗಳು ಕೊಣಾಜೆಬೆಟ್ಟಕ್ಕೆ ಟ್ರೆಕ್ಕಿಂಗ್ ಹೋಗಿದ್ದರು. ಆ ಸುಂದರ ತಾಣದಲ್ಲಿ ಬಿದ್ದಿದ್ದ ಪ್ಲಾಸ್ಟಿಕ್, ಗಾಜಿನ ತಾಜ್ಯಗಳನ್ನು ಕಂಡು ಬೇಸರಗೊಂಡಿದ್ದರು.

ಕೊಣಾಜೆಕಲ್ಲು ಬೆಟ್ಟದಲ್ಲಿದ್ದ ಪರಿಸ್ಥಿತಿಯನ್ನು ಎನ್‌ಎಸ್‌ಎಸ್‌ ಅಧಿಕಾರಿಗಳೊಂದಿಗೆ ಹಂಚಿಕೊಂಡಾಗ, ‘ಮುಂದಿನ ಸ್ವಚ್ಛತಾ ಕೆಲಸ, ಅಲ್ಲಿಯೇ ಮಾಡೋಣ’ ಎಂದು ತೀರ್ಮಾನಿಸಿದರು.

‘ನಮ್ಮ ಕಾಲೇಜಿನ ಕೆಲವರು ಆ ಬೆಟ್ಟವನ್ನು ನೋಡಿರಲಿಲ್ಲ. ಒಂದು ಕಡೆ ಪ್ರವಾಸ ಹೋದಂತಾಗುತ್ತದೆ, ಮತ್ತೊಂದು ಕಡೆ ಸ್ವಚ್ಛತೆಯೂ ಆಗುತ್ತದೆ ಎಂದು ತೀರ್ಮಾನಿಸಿ ಈ ಸ್ವಚ್ಛಯಾನಕ್ಕೆ ಮುಂದಾದೆವು’ ಎನ್ನುತ್ತಾ ಚಾರಣ ರೂಪುಗೊಂಡ ಹಿನ್ನೆಲೆ ವಿವರಿಸಿದರು ರಾಮ್‌ಪ್ರಸಾದ್.

ಈ ಚಾರಣದಿಂದ ಉತ್ತೇಜಿತವಾಗಿರುವ ಎನ್‌ಎಸ್‌ಎಸ್ ಟೀಮ್, ಮುಂದಿನ ವರ್ಷದ ಜನವರಿ 26ರಂದು ಇದೇ ಬೆಟ್ಟದಲ್ಲಿ ಎರಡು ದಿನಗಳ ಶಿಬಿರ ಮಾಡಲು ಯೋಜನೆ ರೂಪಿಸಿದೆ. ಈ ಅವಧಿಯಲ್ಲಿ ಬೆಟ್ಟದಲ್ಲಿ ಉಳಿದಿರುವ ತ್ಯಾಜ್ಯವನ್ನು ವಿಲೇವಾರಿ ಮಾಡಿ, ಶಾಶ್ವತ ಕಸದ ಬುಟ್ಟಿಗಳನ್ನು ಇಡುವುದರ ಬಗ್ಗೆ ಯೋಚಿಸಿದ್ದಾರೆ.‌

ಕೊಣಾಜೆ ಕಲ್ಲುಬೆಟ್ಟ
ಕಲ್ಲಿನ ಸೂರಿನಡಿ ಇರುವ ಜಾಗ ಇದು. ಬಹುಶಃ ಈ ಕಾರಣಕ್ಕೆ ಕೊಣಾಜೆಕಲ್ಲು ಬೆಟ್ಟ ಎಂಬ ಹೆಸರು ಬಂದಿರಬಹುದು. ಮೊದಲು ಇಲ್ಲಿ ಸಿದ್ಧರು ಇದ್ದರಂತೆ. ಇಲ್ಲಿ ಪುರಾತನ ಕಾಲದ ಬಾವಿಗಳಿವೆ. ಅವುಗಳಲ್ಲಿ ನೀರಿದೆ.ಹೀಗಾಗಿ ಈ ಬೆಟ್ಟ ಸ್ಥಳೀಯರಿಗೆ ಧಾರ್ಮಿಕ ತಾಣವಾಗಿದೆ. ಹೊರಗಿನವರಿಗೆ ಪ್ರವಾಸಿ ತಾಣವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT