ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮರಾಠಾ ಮೀಸಲಾತಿ ಮಸೂದೆ ಅಂಗೀಕಾರ: ಧರಣಿ ಕೈಬಿಡಲು ಮನೋಜ್ ಜಾರಂಗೆ ನಿರಾಕರಣೆ

Published 20 ಫೆಬ್ರುವರಿ 2024, 11:02 IST
Last Updated 20 ಫೆಬ್ರುವರಿ 2024, 11:02 IST
ಅಕ್ಷರ ಗಾತ್ರ

ಮುಂಬೈ: ಮರಾಠ ಸಮುದಾಯದವರಿಗೆ ಉದ್ಯೋಗ ಮತ್ತು ಶಿಕ್ಷಣದಲ್ಲಿ ಮೀಸಲಾತಿ ನೀಡುವ ಉದ್ದೇಶವುಳ್ಳ ‘ಮರಾಠಾ ಮೀಸಲಾತಿ ಮಸೂದೆ’ಗೆ ಇಂದು (ಮಂಗಳವಾರ) ಮಹಾರಾಷ್ಟ್ರ ವಿಧಾನಸಭೆ, ವಿಧಾನ ಪರಿಷತ್‌ನಲ್ಲಿ ಅಂಗೀಕಾರ ದೊರೆತಿರುವುದನ್ನು ಮರಾಠಾ ಮೀಸಲಾತಿ ಹೋರಾಟಗಾರ ಮನೋಜ್ ಜಾರಂಗೆ ಸ್ವಾಗತಿಸಿದ್ದಾರೆ.

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ‘ಈಗ ಸರ್ಕಾರ ನೀಡಿರುವ ಮೀಸಲಾತಿ ಪ್ರಮಾಣವು ನಮ್ಮ ಬೇಡಿಕೆಗೆ ಅನುಗುಣವಾಗಿಲ್ಲ. ಹಾಗಾಗಿ ನಾಯಕರೊಂದಿಗೆ ಚರ್ಚಿಸಲು ಬುಧವಾರ ಸಭೆ ಕರೆಯಲಾಗಿದೆ. ಜತೆಗೆ, ಮರಾಠ ಸಮುದಾಯಕ್ಕೆ ಮೀಸಲಾತಿ ಒದಗಿಸುವಂತೆ ಆಗ್ರಹಿಸಿ ನಡೆಸುತ್ತಿರುವ ಧರಣಿಯನ್ನು ಕೈಬಿಡದಿರಲು ನಿರ್ಧರಿಸಿದ್ದೇನೆ’ ಎಂದು ಹೇಳಿದ್ದಾರೆ.

‘ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಹಿಂಪಡೆಯಲು ಸಿದ್ಧ. ಆದರೆ, ರಾಜ್ಯ ಸರ್ಕಾರವು ಮರಾಠಾ ಪ್ರಾಂತ್ಯದ ಮರಾಠಾ ಸಮುದಾಯಕ್ಕೆ ಕುಂಬಿ ಜಾತಿ ಪ್ರಮಾಣಪತ್ರ ನೀಡುವವರೆಗೆ ಪ್ರತಿಭಟನೆ ನಿಲ್ಲಿಸುವುದಿಲ್ಲ’ ಎಂದು ಅವರು ಹೇಳಿದ್ದಾರೆ.

ಇತರ ಹಿಂದುಳಿದ ವರ್ಗಗಳ (ಒಬಿಸಿ) ಕೋಟಾದ ಅಡಿಯಲ್ಲಿ ಉದ್ಯೋಗ ಮತ್ತು ಶಿಕ್ಷಣದಲ್ಲಿ ಮರಾಠರಿಗೆ ಮೀಸಲಾತಿ ಕಲ್ಪಿಸಲು ಆಗ್ರಹಿಸಿ 40 ವರ್ಷ ವಯಸ್ಸಿನ ಜಾರಂಗೆ 2023ರ ಆಗಸ್ಟ್ 29ರಿಂದ ಜಾಲ್ನಾ ಜಿಲ್ಲೆಯ ಅಂತರವಾಲಿ ಸಾರ್ತಿ ಗ್ರಾಮದಲ್ಲಿ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಕೈಗೊಂಡಿದ್ದರು.

ನಿಜಾಮರ ಕಾಲದ ದಾಖಲೆಗಳಲ್ಲಿ ‘ಕುಂಬಿ’ ಎಂದು ಉಲ್ಲೇಖಿಸಿರುವ ಮರಾಠವಾಡ ಪ್ರದೇಶದಲ್ಲಿರುವ ಮರಾಠ ಸಮುದಾಯಕ್ಕೆ ಸೇರಿದ ಈ ಉಪ ವರ್ಗಕ್ಕೆ ಜಾತಿ ಪ್ರಮಾಣ ಪತ್ರ ನೀಡಲು ಮಹಾರಾಷ್ಟ್ರ ಸರ್ಕಾರ ನಿರ್ಧರಿಸಿತ್ತು. ಆದರೆ, ಇದಕ್ಕೆ ವಿರೋಧ ವ್ಯಕ್ತಪಡಿಸಿರುವ ಜಾರಂಗೆ ಮರಾಠಾ ಸಮುದಾಯದ ಎಲ್ಲ ಜನರನ್ನು ‘ಕುಂಬಿ’ಗಳೆಂದು ಎಂದು ಪರಿಗಣಿಸುವಂತೆ ಒತ್ತಾಯಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT