ಬೆಂಗಳೂರು: ‘ವಾಲ್ಮೀಕಿ ಅಭಿವೃದ್ಧಿ ನಿಗಮ ಹಾಗೂ ‘ಮುಡಾ’ ಹಗರಣಗಳ ಹೊಣೆ ಹೊತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಕ್ಷಣ ರಾಜೀನಾಮೆ ನೀಡಬೇಕು. ಇಲ್ಲದಿದ್ದರೆ ರಾಜ್ಯದಾದ್ಯಂತ ಹೋರಾಟ ತೀವ್ರಗೊಳಿಸಲಾಗುವುದು’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದರು.
ಎರಡನೇ ದಿನದ ‘ಮೈಸೂರು ಚಲೋ’ ಪಾದಯಾತ್ರೆಗೆ ಭಾನುವಾರ ಬಿಡದಿಯಲ್ಲಿ ತಮಟೆ ಬಾರಿಸುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.
ದಲಿತರು, ಪರಿಶಿಷ್ಟ ಜಾತಿ, ಪಂಗಡದ ಜನರು, ಬಡವರು, ನಿರ್ಗತಿಕರ ಪರವಾಗಿ ಧ್ವನಿ ಎತ್ತಿರುವ ವಿರೋಧ ಪಕ್ಷದ ಪ್ರಶ್ನೆಗಳಿಗೆ ಸದನದಲ್ಲೂ ಉತ್ತರ ಕೊಡದೆ, ಹೊರಗೂ ಉತ್ತರ ನೀಡದೆ ವಿರೋಧ ಪಕ್ಷಗಳನ್ನೇ ಪ್ರಶ್ನಿಸುವ ಮೂಲಕ ಹಗರಣಗಳನ್ನು ಮುಚ್ಚುವ ಪ್ರಯತ್ನ ಮಾಡುತ್ತಿದ್ದಾರೆ. ಪರಿಶಿಷ್ಟ ಪಂಗಡದ ಅಭಿವೃದ್ಧಿಗೆ ಮೀಸಲಿಟ್ಟ ಹಣವನ್ನು ದುರ್ಬಳಕೆ ಮಾಡಿಕೊಂಡಿರುವುದನ್ನು ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಒಪ್ಪಿಕೊಂಡಿದ್ದಾರೆ. ಅವರು ತಕ್ಷಣ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.
ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಅಧಿಕಾರದ ದರ್ಪ, ಅಧಿಕಾರದ ಅಹಂ ಬದಿಗಿಟ್ಟು ಹಗರಣಗಳ ಬಗ್ಗೆ ಜನರಿಗೆ ಉತ್ತರ ನೀಡಬೇಕು ಎಂದು ಆಗ್ರಹಿಸಿದರು.
ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು, ‘ಉಪ ಮುಖ್ಯಮಂತ್ರಿ ಕುರಿತು ಬಿಚ್ಚಿಡುವುದು ಪುಟಗಟ್ಟಲೆ ಇದೆ. ದಲಿತರಿಗೆ ಸೇರಬೇಕಾದ 68 ಎಕರೆ ಜಮೀನು ಲಪಟಾಯಿಸಿದ್ದಾರೆ. ದಲಿತರಿಗೆ ಸಿಗಬೇಕಾದ ನಿವೇಶನಗಳನ್ನು ಹೊಡೆದುಕೊಂಡಿದ್ದಾರೆ. ನಾನು ಮೋಸ ಮಾಡಿ ಕೇತಗಾನಹಳ್ಳಿಯ 45 ಎಕರೆ ಜಮೀನು ವಂಚನೆ ಮಾಡಿ ಖರೀದಿಸಿದ್ದರೆ ರಾಜಕೀಯ ನಿವೃತ್ತಿ ಹೊಂದುತ್ತೇನೆ’ ಎಂದು ಸವಾಲು ಹಾಕಿದರು.
ಪ್ರಮಾಣ ಮಾಡಲಿ: ‘ಗಾಜಿನ ಮನೆಯಲ್ಲಿ ಕುಳಿತವರು ಬೀದಿಯಲ್ಲಿ ಇರುವವರ ಮೇಲೆ ಕಲ್ಲು ಎಸೆಯುತ್ತಿದ್ದಾರೆ. ಶಿವಕುಮಾರ್‌ಗೆ ಅಜ್ಜಯ್ಯನ ಶಾಪ ಆರಂಭವಾಗಿದೆ. ಸ್ವಚ್ಛವಾಗಿದ್ದೇನೆ ಎಂದು ಅಜ್ಜಯ್ಯನ ಮುಂದೆ ನಿಂತು ಪ್ರಮಾಣ ಮಾಡಲಿ. ನಾನೂ ಮಾಡುತ್ತೇನೆ’ ಎಂದು ಆಹ್ವಾನ ನೀಡಿದರು.
‘ಯಡಿಯೂರಪ್ಪ ಸೇರಿದಂತೆ ನಾನು ಯಾರಿಗೂ ದ್ರೋಹ ಮಾಡಲಿಲ್ಲ ಬಿಜೆಪಿ-ಜೆಡಿಎಸ್ ಮೈತ್ರಿ ಕಾಂಗ್ರೆಸ್ ನಿದ್ದೆಗೆಡಿಸಿದೆ. ಅದಕ್ಕೆ ಶಿವಕುಮಾರ್ ಹೊಟ್ಟೆ ಉರಿ ಅನುಭವಿಸುತ್ತಿದ್ದಾರೆ. ಎರಡು ಬಾರಿ ಮುಖ್ಯಮಂತ್ರಿಯಾಗಿದ್ದೇನೆ. ನನಗೆ ಮತ್ತೆ ಅಧಿಕಾರವನ್ನು ಪಡೆಯುವ ಆಸೆ ಇಲ್ಲ’ ಎಂದರು.
ಪಾದಯಾತ್ರೆಯಲ್ಲೂ ದಲಿತರು ರೈತರ ಅಸ್ಮಿತೆಗೆ ಆದ್ಯತೆ ನೀಡಲಾಗಿದೆ. ಬಿಡದಿಯಲ್ಲಿ ತಮಟೆ ಬಾರಿಸುವ ಮೂಲಕ ಪಾದಯಾತ್ರೆ ಸಾಗಿದರೆ ಮಂಡ್ಯದಲ್ಲಿ ಬಾರುಕೋಲು ಬೀಸುವ ಮೂಲಕ ಪಾದಯಾತ್ರೆಗೆ ಚಾಲನೆ ನೀಡಲಾಗುತ್ತದೆ.ಎನ್. ರವಿಕುಮಾರ್ ವಿಧಾನ ಪರಿಷತ್ ಸದಸ್ಯ.
ಜೆಡಿಎಸ್ ನಾಯಕರು ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಸೂಚಿಸಲಾಗಿದೆ. ಯಾತ್ರೆಯ ಯಶಸ್ವಿಗೆ ಎರಡೂ ಪಕ್ಷಗಳು ಶ್ರಮಿಸಲಿವೆ.ಸುರೇಶ್ ಬಾಬು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ.
ಮುಖ್ಯಮಂತ್ರಿ ಸಿದ್ದರಾಮಯ್ಯ ಆ.10ರ ಒಳಗೆ ರಾಜೀನಾಮೆ ನೀಡಬೇಕು. ಹೋರಾಟವನ್ನು ತಾರ್ಕಿಕ ಅಂತ್ಯಕ್ಕೆ ತೆಗೆದುಕೊಂಡು ಹೋಗಲಾಗುವುದುವಿ.ಸುನಿಲ್ ಕುಮಾರ್ ಬಿಜೆಪಿ ಪ್ರಧಾನ ಕಾರ್ಯದರ್ಶಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.