ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

Lok Sabha Polls 2024: 5 ಸಚಿವರ ಮಕ್ಕಳಿಗೆ ಕಾಂಗ್ರೆಸ್ ಟಿಕೆಟ್‌

Published 20 ಮಾರ್ಚ್ 2024, 2:16 IST
Last Updated 20 ಮಾರ್ಚ್ 2024, 2:16 IST
ಅಕ್ಷರ ಗಾತ್ರ

ನವದೆಹಲಿ: ಕರ್ನಾಟಕದ 16 ಲೋಕಸಭಾ ಕ್ಷೇತ್ರಗಳಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳ ಪಟ್ಟಿಯನ್ನು ಕಾಂಗ್ರೆಸ್‌ನ ಕೇಂದ್ರ ಚುನಾವಣಾ ಸಮಿತಿ ಅಖೈರುಗೊಳಿಸಿದ್ದು, 5 ಸಚಿವರ ಮಕ್ಕಳಿಗೆ ಟಿಕೆಟ್ ನೀಡಲಾಗಿದೆ.

ಉಳಿದ ಐದು ಕ್ಷೇತ್ರಗಳ ಅಭ್ಯರ್ಥಿಗಳನ್ನು ಅಂತಿಮಗೊಳಿಸಲು ಕೇಂದ್ರ ಚುನಾವಣಾ ಸಮಿತಿಯು ಬುಧವಾರ ಮತ್ತೆ ಸಭೆ ಸೇರಲಿದೆ.

ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಪುತ್ರಿ ಸೌಮ್ಯಾ ರೆಡ್ಡಿ (ಬೆಂಗಳೂರು ದಕ್ಷಿಣ), ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಪುತ್ರಿ ಪ್ರಿಯಾಂಕಾ ಜಾರಕಿಹೊಳಿ (ಚಿಕ್ಕೋಡಿ), ಮಹಿಳಾ ಹಾಗೂ ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಪುತ್ರ ಮೃಣಾಲ್ (ಬೆಳಗಾವಿ), ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ್ ಪುತ್ರಿ ಸಂಯುಕ್ತಾ ಪಾಟೀಲ್ (ಬಾಗಲಕೋಟೆ) ಹಾಗೂ ಅರಣ್ಯ ಸಚಿವ ಈಶ್ವರ ಖಂಡ್ರೆ ಪುತ್ರ ಸಾಗರ್ ಖಂಡ್ರೆಗೆ (ಬೀದರ್) ಟಿಕೆಟ್ ಅಂತಿಮಗೊಳಿಸಲಾಗಿದೆ.

ಕೋಲಾರ, ಚಿತ್ರದುರ್ಗ, ಚಿಕ್ಕಬಳ್ಳಾಪುರ, ಚಾಮರಾಜನಗರ ಹಾಗೂ ಬಳ್ಳಾರಿ ಕ್ಷೇತ್ರಗಳಿಗೆ ಹಲವು ಮಂದಿ ಆಕಾಂಕ್ಷಿಗಳು ಲಾಬಿ ನಡೆಸುತ್ತಿದ್ದು, ಅಭ್ಯರ್ಥಿಗಳ ಆಯ್ಕೆ ಇನ್ನಷ್ಟೇ ಮಾಡಬೇಕಿದೆ.

ಗುಲಬರ್ಗಾ ಕ್ಷೇತ್ರಕ್ಕೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಅಳಿಯ ರಾಧಕೃಷ್ಣ ದೊಡ್ಡಮನಿ ಅವರನ್ನು ಉಮೇದುವಾರರನ್ನಾಗಿ ಮಾಡಲಾಗಿದೆ. ದಾವಣಗೆರೆ ಕ್ಷೇತ್ರದಲ್ಲಿ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಅವರ ಸೊಸೆ, ಗಣಿ ಸಚಿವ ಎಸ್‌.ಎಸ್‌ ಮಲ್ಲಿಕಾರ್ಜುನ ಅವರ ಪತ್ನಿ ಪ್ರಭಾ ಮಲ್ಲಿಕಾರ್ಜುನ್ ಅವರನ್ನು ಅಭ್ಯರ್ಥಿಯನ್ನಾಗಿ ಮಾಡಲಾಗಿದೆ.

ಐಐಎಂನ ಮಾಜಿ ಪ್ರಾಧ್ಯಾಪಕ, ಈ ಹಿಂದೆ ರಾಜ್ಯಸಭಾ ಸದಸ್ಯರಾಗಿದ್ದ ರಾಜೀವ್ ಗೌಡ ಅವರಿಗೆ ಬೆಂಗಳೂರು ಉತ್ತರ, ಬೆಂಗಳೂರು ಕೇಂದ್ರಕ್ಕೆ ರಾಜ್ಯಸಭೆಯ ಮಾಜಿ ಉಪಸಭಾಪತಿ ರೆಹಮಾನ್ ಖಾನ್ ಅವರ ಪುತ್ರ ಮನ್ಸೂರ್ ಅಲಿಖಾನ್ ಅವರ ಹೆಸರನ್ನು ಅಂತಿಮಗೊಳಿಸಲಾಗಿದೆ.

ಈ ಹಿಂದೆ 7 ಕ್ಷೇತ್ರಗಳಿಗೆ ಕಾಂಗ್ರೆಸ್ ತನ್ನ ಅಭ್ಯರ್ಥಿಗಳನ್ನು ಪ್ರಕಟಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT