ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಠ್ಯ ‘ದೋಷ’ ತಿದ್ದುವ ಇರಾದೆ; ಸಾಧ್ಯಾಸಾಧ್ಯತೆಗಳೇನು?

ಮಕ್ಕಳ ಮನಸಲ್ಲಿ ವಿಷ ತುಂಬುವ ಪಠ್ಯಕ್ಕೆ ಅವಕಾಶವಿಲ್ಲ, ಲೋಪ ಸರಿಪಡಿಸುವೆವು: ಸಿದ್ದರಾಮಯ್ಯ
Published 29 ಮೇ 2023, 19:27 IST
Last Updated 29 ಮೇ 2023, 19:27 IST
ಅಕ್ಷರ ಗಾತ್ರ

ಬೆಂಗಳೂರು: ಬಿಜೆಪಿ ನೇತೃತ್ವದ ಸರ್ಕಾರದ ಅವಧಿಯಲ್ಲಿ ಪಠ್ಯಪುಸ್ತಕ ಪರಿಶೀಲನೆಗಾಗಿ ರಚಿಸಿದ್ದ ಸಮಿತಿಯು, ತನ್ನ ಮಿತಿಯನ್ನು ಮೀರಿ ತಿರುಚಿದ ಇತಿಹಾಸ ಹಾಗೂ ಜಗತ್ತಿಗೆ ಕೊಡುಗೆ ನೀಡಿದ ದಾರ್ಶನಿಕರ ಪಾಠಗಳಿಗೆ ಕತ್ತರಿ ಹಾಕಿ ಪಠ್ಯವನ್ನು ಪರಿಷ್ಕರಿಸಿತ್ತು. ಕಾಂಗ್ರೆಸ್‌ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ಈ ಹಂತದಲ್ಲಿ, ತೀವ್ರ ಆಕ್ಷೇಪಣೆಗೆ ಗುರಿಯಾಗಿದ್ದ ಈ ಪಠ್ಯಪುಸ್ತಕಗಳನ್ನೇ ಶಾಲೆಗಳಲ್ಲಿ ಬೋಧನೆ ಮಾಡಲಾಗುತ್ತಿದೆಯೇ ಎಂಬ ಚರ್ಚೆ ಶೈಕ್ಷಣಿಕ ವಲಯದಲ್ಲಿ ಶುರುವಾಗಿದೆ.

2019ರಲ್ಲಿ ಅಸ್ತಿತ್ವಕ್ಕೆ ಬಂದ ಬಿಜೆಪಿ ಸರ್ಕಾರದಲ್ಲಿ ಪ್ರಾಥಮಿಕ ಶಿಕ್ಷಣ ಸಚಿವರಾಗಿದ್ದ ಎಸ್. ಸುರೇಶ್‌ಕುಮಾರ್ ಅವರು, ಪಠ್ಯಪುಸ್ತಕ ಪರಿಶೀಲನೆಗಾಗಿ ಶಿಕ್ಷಣ ತಜ್ಞರೇ ಅಲ್ಲದ ರೋಹಿತ್ ಚಕ್ರತೀರ್ಥ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಿದ್ದರು. ಬಳಿಕ, ಶಿಕ್ಷಣ ಸಚಿವರಾದ ಬಿ.ಸಿ. ನಾಗೇಶ್ ಅವರು, ಪಠ್ಯ ಪರಿಷ್ಕರಣೆ ಹೊಣೆಯನ್ನೂ ಆ ಸಮಿತಿಗೆ ವಹಿಸಿದ್ದರು. ಸಮಿತಿ ನೀಡಿದ್ದ ಸಲಹೆ ಆಧರಿಸಿ, ಪಠ್ಯಗಳನ್ನು ಪರಿಷ್ಕರಣೆ ಮಾಡಿ, ತರಾತುರಿಯಲ್ಲಿ ಮುದ್ರಣಕ್ಕೂ ಕಳುಹಿಸಲಾಗಿತ್ತು. ಇದು ತೀವ್ರ ವಿವಾದಕ್ಕೆ ಕಾರಣವಾಗಿತ್ತು.

ಅನೇಕ ಲೇಖಕರು, ಸಾಹಿತಿಗಳು ತಮ್ಮ ಕವಿತೆ, ಲೇಖನಗಳನ್ನು ವಾಪಸ್ ಪಡೆದಿದ್ದರು. ವಿವಾದ ಭುಗಿಲೆದ್ದ ಅವಧಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದ್ದ ನಾಗೇಶ್‌, ಚಕ್ರತೀರ್ಥ ಅವರನ್ನು ‘ಐಐಟಿ ಪ್ರೊಫೆಸರ್’ ಎಂದು ಸಮರ್ಥಿಸಿಕೊಂಡಿದ್ದು ಅಪಹಾಸ್ಯಕ್ಕೆ ಈಡಾಗಿತ್ತು.

ಪಠ್ಯಪರಿಷ್ಕರಣೆಯನ್ನು ತೀವ್ರವಾಗಿ ಖಂಡಿಸಿದ್ದ ಅಂದಿನ ವಿರೋಧ ಪಕ್ಷ ಕಾಂಗ್ರೆಸ್‌, ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿತ್ತು. ಅಲ್ಲದೇ, ವೈಜ್ಞಾನಿಕ ಮನೋಭಾವ ಬೆಳೆಸುವ ಪಠ್ಯವನ್ನು ಸೇರಿಸಲಾಗುವುದು ಎಂದೂ ಪ್ರತಿಪಾದಿಸಿತ್ತು.

ಪಠ್ಯಪರಿಷ್ಕರಣೆಯನ್ನು ವಿರೋಧಿಸಿದ ಆಂದೋಲನದಲ್ಲಿ ಸಕ್ರಿಯರಾಗಿದ್ದ ಅನೇಕರು, ಚುನಾವಣೆ ವೇಳೆ ಸಮಾನ ಮನಸ್ಕರ ಒಕ್ಕೂಟವನ್ನು ರಚಿಸಿಕೊಂಡಿದ್ದರು. ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಸೋಮವಾರ ಭೇಟಿ ಮಾಡಿದ ಒಕ್ಕೂಟದ ಪ್ರಮುಖರಿದ್ದ ನಿಯೋಗ, ಬರಗೂರು ರಾಮಚಂದ್ರಪ್ಪ ನೇತೃತ್ವದ ಸಮಿತಿ ಪರಿಷ್ಕರಿಸಿದ್ದ ಪಠ್ಯವನ್ನೇ ಮುಂದುವರಿಸುವಂತೆ ಮನವಿ ಮಾಡಿದೆ.

ಇದಕ್ಕೆ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ, ‘ಮಕ್ಕಳ ಮನಸ್ಸಿಗೆ ವಿಷ ತುಂಬುವ ಪಠ್ಯಕ್ಕೆ ಅವಕಾಶ ನೀಡುವುದಿಲ್ಲ. ಪಠ್ಯ ಮತ್ತು ಪಾಠಗಳ ಮೂಲಕ ಮಕ್ಕಳ ಮನಸ್ಸನ್ನು ಕಲುಷಿತಗೊಳಿಸಲು ನಡೆಸಿರುವ ಕೃತ್ಯವನ್ನು ಕ್ಷಮಿಸಲು ಸಾಧ್ಯವಿಲ್ಲ. ಶೈಕ್ಷಣಿಕ ವರ್ಷ ಆರಂಭ ಆಗಿರುವುದರಿಂದ ಮಕ್ಕಳ ಶಿಕ್ಷಣಕ್ಕೆ ತೊಂದರೆ ಆಗದಂತೆ ಚರ್ಚಿಸಿ ಕ್ರಮ ಕೈಗೊಳ್ಳುತ್ತೇವೆ’ ಎಂದು ಭರವಸೆ ನೀಡಿದ್ದಾರೆ.

ಶೇ 90ರಷ್ಟು ಪಠ್ಯ ಪುಸ್ತಕಗಳು ಈಗಾಗಲೇ ಶಾಲೆಯನ್ನು ತಲುಪಿವೆ. ಇದೇ 31ರ ಬುಧವಾರದಿಂದ ಶಾಲೆಗಳು ಆರಂಭವಾಗಲಿವೆ. ಈ ಹಂತದಲ್ಲಿ ಮತ್ತೆ ಪಠ್ಯ ಪರಿಷ್ಕರಣೆ ನಡೆಯಲಿದೆಯೇ ಎಂಬ ಚರ್ಚೆ ಬಿರುಸುಗೊಂಡಿದೆ.

‘ಪರಿಷ್ಕೃತ ಪಠ್ಯಪುಸ್ತಕಗಳು ಈಗಾಗಲೇ ಮುದ್ರಣಗೊಂಡು ಶಾಲೆಗಳನ್ನು ತಲುಪಿರುವುದರಿಂದ ಈ ಹಂತದಲ್ಲಿ ಬದಲಾವಣೆ ಅಥವಾ ಪರಿಷ್ಕರಣೆ ಕಾರ್ಯಸಾಧುವಲ್ಲ. ಕೊಟ್ಟ ಮಾತೂ ಉಳಿಯಬೇಕು. ಯಡವಟ್ಟುಗಳೂ ಸರಿಯಾಗಬೇಕು’ ಎನ್ನುವುದು ಈ ಹಿಂದೆ ಪಠ್ಯಪುಸ್ತಕ ಪರಿಷ್ಕರಣೆ ಸಮಿತಿಯ ಅಧ್ಯಕ್ಷರಾಗಿದ್ದ ಪ್ರೊ.ಬರಗೂರು ರಾಮಚಂದ್ರಪ್ಪ ಅವರ ಅನಿಸಿಕೆ.

’ಪಠ್ಯಪುಸ್ತಕ ಪರಿಷ್ಕರಣೆ ಸುದೀರ್ಘ ಸಮಯ ತೆಗೆದುಕೊಳ್ಳುವ ಪ್ರಕ್ರಿಯೆ. ಮರುಮುದ್ರಣವೂ ವೆಚ್ಚದಾಯಕ. ಶೈಕ್ಷಣಿಕ ವರ್ಷ ಆರಂಭವಾಗಿರುವುದರಿಂದ ಈಗ ಅಂತಹ ಸಾಹಸ ಮಕ್ಕಳ ಶೈಕ್ಷಣಿಕ ಚಟುವಟಿಕೆಗಳ ಮೇಲೆ ಪ್ರತಿಕೂಲ ಪರಿಣಾಮ ಬೀರಬಹುದು. ಸದ್ಯಕ್ಕೆ ಪಠ್ಯಪುಸ್ತಕದಲ್ಲಿರುವ ಸಾಮಾಜಿಕ, ಪ್ರಾದೇಶಕ ಅಸಮಾನತೆಗೆ ಕಾರಣವಾದ ಕೆಲ ಪಾಠಗಳನ್ನು ಕೈಬಿಟ್ಟು, ಪೂರಕವಾದ ಕೆಲ ಪಾಠಗಳನ್ನು ಸೇರಿಸಿಕೊಂಡು ಪಾಠ ಮಾಡಲು ಸುತ್ತೋಲೆ ಹೊರಡಿಸಬೇಕು. ಮಹಾರಾಷ್ಟ್ರದಲ್ಲಿರುವಂತೆ ವಿಷಯ ತಜ್ಞರು, ಅಧಿಕಾರಿಗಳನ್ನು ಒಳಗೊಂಡ ಶಾಶ್ವತವಾದ ಪಠ್ಯಪುಸ್ತಕ ಆಯೋಗ ಅಥವಾ ಪ್ರಾಧಿಕಾರ ರಚಿಸಬೇಕು. ಭವಿಷ್ಯದಲ್ಲಿ ಪಠ್ಯಪುಸ್ತಕಗಳು ಯಾವುದೇ ಪಕ್ಷದ ಪುಸ್ತಕಗಳಾಗದಂತೆ ಕಾನೂನು ರೂಪಿಸಬೇಕು‘ ಎನ್ನುತ್ತಾರೆ ಬರಗೂರು.

ಈಗಾಗಲೇ ಮುದ್ರಣವಾಗಿ ಬಿಇಒ ಕಚೇರಿ, ಶಾಲೆಗಳಿಗೆ ತಲುಪಿರುವ ಕಲುಷಿತ ಪುಸ್ತಕಗಳನ್ನು ಯಥಾವತ್ತಾಗಿ ವಿತರಿಸಬಾರದು. ಬದಲಾಗಿರುವ ಪ್ರಮುಖ ಪಾಠ ತೆಗೆದು ಹಾಕಿ ಸುತ್ತೋಲೆ ಹೊರಡಿಸಬೇಕು.
ನಿರಂಜನಾರಾಧ್ಯ, ಪ್ರಗತಿ ಶಿಕ್ಷಣ ತಜ್ಞ

45.05 ಲಕ್ಷ: ಸರ್ಕಾರಿ ಶಾಲೆ ಮಕ್ಕಳು

12.59 ಲಕ್ಷ: ಅನುದಾನಿತ ಶಾಲೆ ಮಕ್ಕಳು 

44.19 ಲಕ್ಷ: ಖಾಸಗಿ ಶಾಲೆಗಳು

3.40 ಕೋಟಿ: ಮುದ್ರಣಗೊಂಡ ಪಠ್ಯಪುಸ್ತಕಗಳು

ರಾಷ್ಟ್ರಗೀತೆಗೆ ಅವಮಾನ ಮಾಡಿದ ಬರಗೂರು ಅವರಿಗೆ ಸರ್ಕಾರ ಮಣೆಹಾಕುತ್ತದೆ. ತಿರುಚಿದ್ದ ಇತಿಹಾಸವನ್ನು ಸರಿಪಡಿಸಿದ್ದ ಪಠ್ಯಪುಸ್ತಕಗಳನ್ನು ಮತ್ತೆ ಬದಲಾಯಿಸಿ, ಹೊಸ ಸರ್ಕಾರ ವೋಟ್‌ ಬ್ಯಾಂಕ್‌ ರಾಜಕಾರಣ ಮಾಡುತ್ತಿದೆ.
ಬಿ.ಸಿ.ನಾಗೇಶ್‌, ಮಾಜಿ ಶಿಕ್ಷಣ ಸಚಿವ
ಶಾಲೆ ತಲುಪಿದ 3.40 ಕೋಟಿ ಪುಸ್ತಕ
‘ರಾಜ್ಯದ ಸರ್ಕಾರಿ, ಅನುದಾನಿತ ಶಾಲೆಗಳ 57 ಲಕ್ಷ ಮಕ್ಕಳಿಗೆ (ಖಾಸಗಿ ಶಾಲೆಗಳನ್ನು ಹೊರತುಪಡಿಸಿ) 3.40 ಕೋಟಿಗೂ ಹೆಚ್ಚು ಪುಸ್ತಕಗಳು ಮುದ್ರಣಗೊಂಡಿವೆ. ಶೇ 90ರಷ್ಟು ಪುಸ್ತಕಗಳು ಶಾಲೆಗಳನ್ನು ತಲುಪಿವೆ’ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಆಯುಕ್ತ ಆರ್‌.ವಿಶಾಲ್‌ ‘ಪ್ರಜಾವಾಣಿ’ಗೆ ತಿಳಿಸಿದರು. ‘ಉಳಿದ ಪುಸ್ತಕಗಳು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿದ್ದು, ಒಂದೆರಡು ದಿನಗಳಲ್ಲಿ ವಿದ್ಯಾರ್ಥಿಗಳಿಗೆ ತಲುಪಲಿವೆ. ಶಾಲೆಗಳಿಗೆ ಸುರಕ್ಷಿತವಾಗಿ ತಲುಪಿಸಲು ಸಾಗಣೆ ವೆಚ್ಚವನ್ನೂ ಬಿಡುಗಡೆ ಮಾಡಲಾಗಿದೆ. ಮೇ 31ರಿಂದ ಅಧಿಕೃತವಾಗಿ ತರಗತಿಗಳೂ ಆರಂಭವಾಗಲಿವೆ’ ಎಂದು ಅವರು ಹೇಳಿದರು.
ಸಾಕಷ್ಟು ಪರಿಶೀಲನೆ ನಡೆಸಿಯೇ ಪಠ್ಯಪುಸ್ತಕ ಪರಿಷ್ಕರಣೆ ಮಾಡಲಾಗಿತ್ತು. ರೂ‍ಪಿಸಿದ ಪಠ್ಯ ಜಾರಿಗೆ ತರುವುದು, ಬಿಡುವುದು ಆಯಾ ಸರ್ಕಾರಗಳಿಗೆ ಬಿಟ್ಟ ವಿಷಯ.
ವಿಠಲ್‌ ಪೋತೇದಾರ್, ಸದಸ್ಯ, ಪಠ್ಯಪುಸ್ತಕ ಪರಿಷ್ಕರಣಾ ಸಮಿತಿ (ಬಿಜೆಪಿ ಸರ್ಕಾರದ ಅವಧಿ)
ಕಾಂಗ್ರೆಸ್ ಪ್ರಣಾಳಿಕೆ ಹೇಳಿದ್ದೇನು?
‘ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರ ಪಠ್ಯಪುಸ್ತಕದ ವಿಷಯಗಳನ್ನು ವಿಕೃತಗೊಳಿಸಿತ್ತು. ಅದನ್ನು ಸರಿಪಡಿಸಿ ಕುವೆಂಪು, ಬಸವಣ್ಣ, ಆದಿಕವಿ ಪಂಪ ಹಾಗೂ ವೈಜ್ಞಾನಿಕ ಮನೋಭಾವವನ್ನು ಮರಳಿ ಪಠ್ಯಪುಸ್ತಕಗಳಲ್ಲಿ ಸೇರಿಸಲು ಕ್ರಮ ಕೈಗೊಳ್ಳಲಾಗುವುದು. ಅವೈಜ್ಞಾನಿಕ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ರದ್ದು ಮಾಡಿ ಕರ್ನಾಟಕ ಶಿಕ್ಷಣ ನೀತಿಯನ್ನು ಅನುಷ್ಠಾನಗೊಳಿಸಲಾಗುವುದು. 
ಪಠ್ಯಪುಸ್ತಕ ಪರಿಷ್ಕರಣೆಯಲ್ಲಿ ಹಿಂದಿನ ಸರ್ಕಾರ ಮಾಡಿದ್ದ ಲೋಪಗಳನ್ನು ಸರಿಪಡಿಸುವ ಕುರಿತು ಮುಖ್ಯಮಂತ್ರಿ ನೇತೃತ್ವದಲ್ಲಿ ಶಿಕ್ಷಣ ತಜ್ಞರ ಜತೆ ಸಭೆ ನಡೆಸಿ ಸೂಕ್ತ ನಿರ್ಧಾರ ತೆಗೆದುಕೊಳ್ಳಲಾಗುವುದು.
ಮಧು ಬಂಗಾರಪ್ಪ,, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ

ಸಾಧ್ಯಾಸಾಧ್ಯತೆಗಳು

l ಪಠ್ಯಪುಸ್ತಕಗಳು ಈಗಾಗಲೇ ಶಾಲೆಗಳನ್ನು ತಲುಪಿವೆ. ಈ ಹಂತದಲ್ಲಿ ವಾಪಸ್ ಪಡೆಯುವ ಬದಲು, ವಿವಾದಿತ ಪಾಠಗಳನ್ನು ಬೋಧನೆ ಮಾಡಬಾರದು ಮತ್ತು ಪರೀಕ್ಷೆಗೆ ಪರಿಗಣಿಸಬಾರದು ಎಂಬ ಸುತ್ತೋಲೆ ಹೊರಡಿಸಬಹುದು(ಬಿಜೆಪಿ ಸರ್ಕಾರ ಹೀಗೆ ಮಾಡಿತ್ತು)

l ಹೊಸ ಸಮಿತಿ ರಚಿಸಿ ಬಿಜೆಪಿ ಸರ್ಕಾರದ ಅವಧಿಯಲ್ಲಿನ ತಪ್ಪುಗಳನ್ನು ಸರಿಪಡಿಸಬೇಕಾದರೆ ಸಾಕಷ್ಟು ಸಮಯ ಹಿಡಿಯುತ್ತದೆ. ಅಷ್ಟು ಸಮಯ ಪಠ್ಯಪುಸ್ತಕಗಳನ್ನು ತಡೆಹಿಡಿಯುವುದು ಶೈಕ್ಷಣಿಕ ಪ್ರಗತಿಯ ದೃಷ್ಟಿಯಿಂದ ಅಸಮಂಜಸ ಕ್ರಮ ಎಂಬ ಸಲಹೆ ಕೇಳಿಬಂದಿದೆ

l ಎಲ್ಲ ಪಠ್ಯಪುಸ್ತಕಗಳು ಪರಿಷ್ಕರಣೆ ಮಾಡಿರಲಿಲ್ಲ. ತಿರುಚಿದ ಪಠ್ಯಗಳಿರುವ ಪುಸ್ತಕಗಳನ್ನು ಮಾತ್ರ ವಾಪಸ್ ಪಡೆದರೆ, ವೆಚ್ಚ ಹೆಚ್ಚಾಗದು ಎನ್ನುವ ವಾದವೂ ಇದೆ

l ಸಮಿತಿ ರಚಿಸಿ, ಮುಂದಿನ ಶೈಕ್ಷಣಿಕ ವರ್ಷದ ಹೊತ್ತಿಗೆ ಹೊಸ ಪಠ್ಯಪುಸ್ತಕಗಳನ್ನು ಪೂರೈಸುವ ಲೆಕ್ಕಾಚಾರವೂ ಸರ್ಕಾರದ ಮುಂದಿದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT