ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಚ್ ಎಂಜಿನ್ ಏಕಸ್ವಾಮ್ಯತೆ: Google–Apple ಒಪ್ಪಂದಕ್ಕೆ ಸತ್ಯಾ ನಾದೆಲ್ಲಾ ಕಿಡಿ

Published 3 ಅಕ್ಟೋಬರ್ 2023, 7:21 IST
Last Updated 3 ಅಕ್ಟೋಬರ್ 2023, 7:21 IST
ಅಕ್ಷರ ಗಾತ್ರ

ವಾಷಿಂಗ್ಟನ್‌: ‘ಸರ್ಚ್‌ ಎಂಜಿನ್‌ ಕ್ಷೇತ್ರದಲ್ಲಿ ಗೂಗಲ್‌ ತನ್ನ ಏಕಸ್ವಾಮ್ಯತೆ ಕಾಯ್ದುಕೊಳ್ಳಲು ಅನುಸರಿಸುತ್ತಿರುವ ರೀತಿಯಿಂದಾಗಿ ಪ್ರತಿಸ್ಪರ್ಧಿಗಳು ತಮ್ಮ ಅಸ್ತಿತ್ವ ಉಳಿಸಿಕೊಳ್ಳುವುದೇ ಕಷ್ವವಾಗಿದೆ’ ಎಂದು ಮೈಕ್ರೊಸಾಫ್ಟ್‌ನ ಸಿಇಒ ಸತ್ಯಾ ನಾದೆಲ್ಲಾ ಅವರು ಅಮೆರಿಕದ ನ್ಯಾಯಾಲಯದಲ್ಲಿ ಮಾಡಿರುವ ಆರೋಪ ಐಟಿ ಕ್ಷೇತ್ರದಲ್ಲಿ ಸಂಚಲನ ಮೂಡಿಸಿದೆ.

ಏಕಸ್ವಾಮ್ಯತೆಗಾಗಿ ಗೂಗಲ್ ಕಂಪನಿಯು ಇತರ ಕೆಲ ಕಂಪನಿಗಳಿಗೆ ಬಿಲಿಯನ್‌ಗಟ್ಟಲೆ ಹಣ ನೀಡುತ್ತಿದೆ ಎಂಬ ಆರೋಪ ಕುರಿತು ಅಮೆರಿಕದ ನ್ಯಾಯಾಂಗ ಇಲಾಖೆಯ ವಕೀಲರ ಪ್ರಶ್ನೆಗೆ ಸತ್ಯಾ ಹೇಳಿಕೆ ನೀಡಿದರು.

'2009ರಿಂದ ಮಾರುಕಟ್ಟೆಯಲ್ಲಿ ಗೂಗಲ್ ವಿರುದ್ಧ ತನ್ನ ಸ್ಥಾನ ಸೃಷ್ಟಿಸಿಕೊಳ್ಳಲು ಮೈಕ್ರೊಸಾಫ್ಟ್‌ನ ಬಿಂಗ್‌ ಯತ್ನಿಸುತ್ತಲೇ ಇದೆ. ಆದರೆ ಆ್ಯಪಲ್‌ನೊಂದಿಗಿನ ಒಳ ಒಪ್ಪಂದದಿಂದಾಗಿ ಬೃಹದಾಕಾರವಾಗಿ ಬೆಳೆದು ನಿಂತಿರುವ ಸರ್ಚ್ ಎಂಜಿನ್‌ ಗೂಗಲ್ ಎದುರು ಸ್ಪರ್ಧಿಸುವುದೂ ಅಸಾಧ್ಯವಾಗಿದೆ. ನೀವು ಅದನ್ನು ಬೇಕಿದ್ದರೆ ‘ಜನಪ್ರಿಯ‘ ಎನ್ನಬಹುದು. ಆದರೆ ನಾನು ಮಾತ್ರ ಅದನ್ನು ‘ಪ್ರಬಲ‘ ಎಂದೆನ್ನುತ್ತೇನೆ’ ಎಂದು ಗೂಗಲ್‌ ವಕೀಲರ ಪ್ರಶ್ನೆಗೆ ನಾದೆಲ್ಲಾ ತೀಕ್ಷ್ಣ ಪ್ರತಿಕ್ರಿಯೆ ನೀಡಿದರು ಎಂದು ಎನ್‌ಡಿಟಿವಿ ವರದಿ ಮಾಡಿದೆ.

ವಿಶ್ವಾಸದ್ರೋಹ ಪ್ರಕರಣದಲ್ಲಿ ದೈತ್ಯ ಕಂಪನಿ ವಿರುದ್ಧ ಕಳೆದ ಮೂರು ತಿಂಗಳಿಂದ ವಿಚಾರಣೆ ನಡೆಯುತ್ತಿದೆ. ಆದರೆ ಎರಡು ದಶಕದ ಹಿಂದೆ ವಿಂಡೋಸ್ ಆಪರೇಟಿಂಗ್ ಸಿಸ್ಟಂ ಪ್ರಾಬಲ್ಯ ಕುರಿತು ಇದೇ ಸಂಸ್ಥೆ ವಿಚಾರಣೆ ನಡೆಸಿದ್ದನ್ನು ಇಲ್ಲಿ ಸ್ಮರಿಸಬಹುದು

ಸರ್ಕಾರದ ನಿಲುವನ್ನು ಬೆಂಬಲಿಸಿದ ನಾದೆಲ್ಲಾ, ‘ಜಗತ್ತಿನ ಅತಿ ಹೆಚ್ಚು ಬಳಕೆಯ ಸರ್ಚ್‌ ಎಂಜಿನ್‌ ಆಗಿರುವ ಗೂಗಲ್‌, ಮಾಹಿತಿ ಪಡೆಯುತ್ತಿರುವ ರೀತಿಯಿಂದಾಗಿ ತನ್ನ ಜಾಹೀರಾತುದಾರರು ಮತ್ತು ಬಳಕೆಗಾರರಿಗೆ ಹೆಚ್ಚು ಶಕ್ತಿಶಾಲಿ ಎಂದು ಕಾಣಿಸುತ್ತಿದೆ. ಆದರೆ ಅದು ಅನುಸರಿಸುತ್ತಿರುವ ರೀತಿ ಈ ಇಡೀ ಕ್ಷೇತ್ರದ ಸಂಪರ್ಕ ಜಾಲಕ್ಕೇ ಮಾರಕವಾಗಿದೆ’ ಎಂದು ಆರೋಪಿಸಿದ್ದಾರೆ.

‘ಹಂಚಿಕೆ ಎನ್ನುವುದು ಸರ್ಚ್‌ ಎಂಜಿನ್‌ನಲ್ಲಿ ಅತ್ಯಂತ ಯಶಸ್ಸಿನ ಮಾರ್ಗವಾಗಿದೆ. ಐಫೋನ್‌ಗಳಲ್ಲಿ ಮೈಕ್ರೊಸಾಫ್ಟ್‌ನ ಬಿಂಗ್‌ಗೆ ಸೂಕ್ತ ಸ್ಥಾನ ನೀಡುವಂತೆ ಕೋರಿದ್ದೇವೆ. ಅದಕ್ಕಾಗಿ ಆ್ಯಪಲ್‌ಗೆ ಪಾವತಿಸಲು ಮೈಕ್ರೊಸಾಫ್ಟ್ ಸಿದ್ಧವಿದೆ. ಈ ಕ್ಷೇತ್ರದಲ್ಲಿ ಡಿಫಾಲ್ಟ್ ಎಂಬುದೇ ಸತ್ಯ. ಬಳಕೆದಾರರು ಸುಲಭವಾಗಿ ಮತ್ತೊಂದು ಆ್ಯಪ್‌ನತ್ತ ಹೊರಳುತ್ತಾರೆ ಎಂಬ ಗೂಗಲ್‌ನ ವಾದ ‘ಬೋಗಸ್‌’ ಎಂದು ಸತ್ಯಾ ಆರೋಪಿಸಿದರು.

‘ಸಫಾರಿ ಬ್ರೌಸರ್‌ನಲ್ಲಿ ಬಿಂಗ್‌ಗೆ ಸ್ಥಾನ ನೀಡಿದರೆ ದೊಡ್ಡ ಮಟ್ಟದ ಬದಲಾವಣೆ ಸಾಧ್ಯವಾಗಲಿದೆ. ಆದರೆ ಆ್ಯಪಲ್‌ ಮಾತ್ರ ಗೂಗಲ್‌ನೊಂದಿಗೆ ಸೇರಿಕೊಂಡಿದೆ. ಇದಕ್ಕಾಗಿ ತನಗೆ ಬರುವ ಆದಾಯದಲ್ಲಿ ಆ್ಯಪಲ್‌ನೊಂದಿಗೆ ಗೂಗಲ್‌ ಹಂಚಿಕೆ ಮಾಡಿಕೊಳ್ಳುತ್ತಿದೆ. ಇದು ಶತಕೋಟಿಗೂ ಮೀರಿದ ವಹಿವಾಟಾಗಿದೆ. ಆದರೆ ನಮ್ಮ ಕೋರಿಕೆಯನ್ನು ಆ್ಯಪಲ್‌ ನಿರಾಕರಿಸಿದ್ದರಿಂದಾಗಿ ಈಗಲೂ ಬಿಂಗ್ ಸಣ್ಣ ಸರ್ಚ್ ಎಂಜಿನ್ ಆಗಿಯೇ ಉಳಿದಿದೆ. ಪರಿಸ್ಥಿತಿ ಹೀಗಿದ್ದರೂ ಬಿಂಗ್ ಮೇಲಿನ ಕಂಪನಿ ಹೂಡಿಕೆ ಮುಂದುವರಿಯಲಿದೆ. ಯಾವುದೇ ಕ್ಷಣದಲ್ಲಿ ದೊಡ್ಡ ಬದಲಾವಣೆ ಆದರೂ ಆಗಬಹುದು’ ಎಂದು ನಾದೆಲ್ಲಾ ನ್ಯಾಯಾಲಯಕ್ಕೆ ಹೇಳಿದರು.

‘ಸರ್ಚ್ ಎಂಜಿನ್‌ ವಹಿವಾಟಿನಲ್ಲಿ ಚಾಟ್‌ಬಾಟ್ ಆಗಿರುವ ಚಾಟ್‌ಜಿಪಿಟಿಯು ಗೂಗಲ್‌ನ ಏಕಸ್ವಾಮ್ಯತೆಯನ್ನು ಮುರಿಯಲಿದೆ ಎಂಬ ವಾದವನ್ನು ನಾನು ನಂಬುವುದಿಲ್ಲ. ಆದರೆ ಕೃತಕ ಬುದ್ಧಿಮತ್ತೆಗೆ ಮಾಹಿತಿ ಸಂಗ್ರಹಿಸಿ ನೀಡುವ ಕ್ಷೇತ್ರದಲ್ಲೂ ಗೂಗಲ್ ತನ್ನ ಪ್ರಾಬಲ್ಯ ಮೆರೆಯುವ ಸಾಧ್ಯತೆಯನ್ನೂ ಅಲ್ಲಗಳೆಯುವಂತಿಲ್ಲ’ ಎಂದಿದ್ದಾರೆ.

ಮೈಕ್ರೊಸಾಫ್ಟ್ ಕೂಡಾ ತನ್ನ ಬಿಂಗ್‌ ಸರ್ಚ್‌ ಎಂಜಿನ್‌ನಲ್ಲಿ ಕೃತಕ ಬುದ್ಧಿಮತ್ತೆ ಆಧಾರಿತ ತಂತ್ರಜ್ಞಾನವನ್ನು ಅಳವಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT