ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ಲೇಷಣೆ | ಹಸಿರು ಪಟಾಕಿ: ಬಣ್ಣ ಮಾತ್ರ ಬೇರೆ!

ಬೆಳಕಿನ ಹಬ್ಬದಲ್ಲಿ ಬೆಳಕನ್ನು ಮೀರಿ ಸದ್ದು ಮಾಡುವ ಹುಮ್ಮಸ್ಸೇ ಹೆಚ್ಚು ಕಾಣುತ್ತದೆ
Published 9 ನವೆಂಬರ್ 2023, 23:30 IST
Last Updated 9 ನವೆಂಬರ್ 2023, 23:30 IST
ಅಕ್ಷರ ಗಾತ್ರ

ನೀವು ಕೊಳ್ಳುವ ಪಟಾಕಿ ಹಸಿರು ಪಟಾಕಿ ಹೌದೇ ಅಲ್ಲವೇ ಎಂಬುದನ್ನು ಹೇಗೆ ಪತ್ತೆ ಹಚ್ಚುತ್ತೀರಿ? ಸುಲಭವಾಗಿ ಗುರುತಿಸಲು ಹೀಗೆ ಮಾಡಿ. ಸಿಡಿಯುವ ಪಟಾಕಿ ಹಸಿರು ಬಣ್ಣ ಹೊಮ್ಮಿಸದಿದ್ದರೆ ಅದು ಹಸಿರು ಪಟಾಕಿ! ಹಸಿರು ಬಣ್ಣ ಹೊಮ್ಮಿಸಿದರೆ ಅದು ಹಸಿರು ಪಟಾಕಿಯಲ್ಲ!

ವಿಚಿತ್ರವೆನ್ನಿಸುತ್ತಿದ್ದರೆ ಅದು ಏಕೆ, ಹೇಗೆ ಎಂದು ತಿಳಿಯಲು ಮುಂದೆ ಓದಿರಿ. ಹಸಿರು ಪಟಾಕಿ ಎಂದರೆ, ಅದರ ಹೊರಭಾಗಕ್ಕೆ ಸುತ್ತಿದ ಹಾಳೆ ಹಸಿರಾಗಿರುತ್ತದೆ ಎಂದಲ್ಲ. ಸಿಡಿದಾಗ ಅತಿಯಾದ ಹೊಗೆ, ಶಬ್ದ ಎಬ್ಬಿಸದ, ವಾತಾವರಣದ ಮಾಲಿನ್ಯ ತಡೆಯುವ ಪರಿಸರಸ್ನೇಹಿ ಪಟಾಕಿಯನ್ನು ಹಸಿರು ಪಟಾಕಿ ಎನ್ನುತ್ತೇವೆ. ಇವು ಸಿಡಿದಾಗ ಹೊಗೆಯ ಬದಲಿಗೆ ನೀರಿನ ಆವಿ ಚಿಮ್ಮಿಸುತ್ತವೆ. ಗಾತ್ರದಲ್ಲಿ ಚಿಕ್ಕದಾಗಿರುತ್ತವೆ. ಪ್ರಖರ ಬೆಳಕು ಸೂಸುವ, ಕಡಿಮೆ ಗಂಧಕವುಳ್ಳ ಇವು ದೂಳನ್ನು ಸಂಪೂರ್ಣ ನಿಯಂತ್ರಿಸಿ ಶೇಕಡ 40ರಷ್ಟು ಮಾಲಿನ್ಯವನ್ನು ಕಡಿಮೆ ಮಾಡುತ್ತವೆ.

ಹಸಿರು ಪಟಾಕಿಗಳಲ್ಲಿ ನೀರಿನಲ್ಲಿ ಕರಗಬಲ್ಲ ಥರ್ಮೈಟ್ ಮತ್ತು ಅಲ್ಯೂಮಿನಿಯಂ ಹುಡಿಗಳಿರುತ್ತವೆ. ಮಾಮೂಲಿ ಪಟಾಕಿಗಳಲ್ಲಿರುವ ಬೇರಿಯಂ ನೈಟ್ರೇಟ್, ಚಾರ್ಕೋಲ್, ಲೀಥಿಯಂ, ಆರ್ಸೆನಿಕ್ ಮತ್ತು ಸತುವಿನಂಥ ಭಾರದ, ವಿಷಕಾರಿ ಲೋಹಗಳ ಬಳಕೆ ಇರುವುದಿಲ್ಲ. ಜಿಯೋಲೈಟ್ ಸಂಯುಕ್ತ ಬಳಸುವುದರಿಂದ ಏಳುವ ಅಲ್ಪಸ್ವಲ್ಪ ಹೊಗೆಯೂ ನಿಯಂತ್ರಣದಲ್ಲಿ ಇರುತ್ತದೆ.

ಪ್ರತಿವರ್ಷ ದೀಪಾವಳಿ ಬಂದಾಗ ಹಸಿರು ಪಟಾಕಿಯ ಮಾತು ಬರುತ್ತದೆ. ಸಿಡಿಸುವುದಿದ್ದರೆ ಹಸಿರು ಪಟಾಕಿಗಳನ್ನು ಮಾತ್ರ ಎಂದು ಸರ್ಕಾರ ಹೇಳುತ್ತದೆ. ಬೇರಿಯಂ ಸಂಯುಕ್ತವಿರುವ ಪಟಾಕಿಯನ್ನು ದೇಶದಾದ್ಯಂತ ನಿಷೇಧಿಸಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಮಾಮೂಲಿ ಪಟಾಕಿಗೂ ಹಸಿರು ಪಟಾಕಿಗೂ ಏನು ವ್ಯತ್ಯಾಸ ಎಂದು ಗೊತ್ತಿರದ ಅನೇಕರು, ಅಂಗಡಿಯವನು ಹೇಳುವುದನ್ನು ನಂಬಿ ಖರೀದಿಸುತ್ತಾರೆ ಮತ್ತು ಸಿಡಿಸಿ ಆನಂದಿಸುತ್ತಾರೆ. ಉನ್ನತ ವಿದ್ಯಾಭ್ಯಾಸ ಮಾಡಿರುವವರಿಗೂ ಹಸಿರು ಪಟಾಕಿಯ ಬಗ್ಗೆ ಅಷ್ಟಾಗಿ ತಿಳಿದಿರುವುದಿಲ್ಲ. ಎಲ್ಲೆಲ್ಲಿ ಮಾರುತ್ತಾರೆ, ಬಾಕ್ಸಿನ ಮೇಲೆ ಯಾವ ಗುರುತಿದ್ದರೆ ಅದು ಹಸಿರು ಪಟಾಕಿ, ಮಾಮೂಲಿ ಪಟಾಕಿಗಿಂತ ಎಷ್ಟು ಸುರಕ್ಷಿತ ಎಂಬ ಬಗ್ಗೆ ಸ್ವಲ್ಪವೂ ಮಾಹಿತಿ ಇರುವುದಿಲ್ಲ.

ಭಾರತದಲ್ಲಿ ಈಗ ಸ್ವಾಸ್, ಸ್ಟಾರ್ ಮತ್ತು ಸಫಲ್ ಎಂಬ ಮೂರು ಬಗೆಯ ಹಸಿರು ಪಟಾಕಿಗಳು ಲಭ್ಯವಿವೆ. ಸ್ವಾಸ್ (ಸೇಫ್ ವಾಟರ್ ರಿಲೀಸರ್)- ಈ ಪಟಾಕಿ ಸಿಡಿದಾಗ ನಮ್ಮ ಕಣ್ಣು, ಮೈಗೆ ಸುರಕ್ಷಿತವೆನಿಸುವ ನೀರಿನ ಆವಿ ಬಿಡುಗಡೆಯಾಗುತ್ತದೆ. ಸ್ಟಾರ್ (ಸೇಫ್ ಥರ್ಮೈಟ್ ಕ್ರ್ಯಾಕರ್) ಪಟಾಕಿ ಸಿಡಿದಾಗ ಮಾಮೂಲಿಗಿಂತ ಕಡಿಮೆ ಶಬ್ದ ಹೊಮ್ಮುತ್ತದೆ. ಸಫಲ್ (ಸೇಫ್ ಮಿನಿಮಲ್ ಅಲ್ಯೂಮಿನಿಯಂ) ಪಟಾಕಿ ಸಿಡಿದಾಗ ಕಡಿಮೆ ಹೊಗೆ ಮತ್ತು ಪ್ರಖರ ಬೆಳಕು ಹೊಮ್ಮುತ್ತದೆ. ಈ ಮೂರೂ ಬಗೆಯ ಪಟಾಕಿಗಳನ್ನು ಸಿಡಿಸಿದಾಗ ವಾತಾವರಣಕ್ಕೆ ಸೇರಿಕೊಳ್ಳುವ ಲೋಹದ ತೇಲುಕಣಗಳ (ಪಾರ್ಟಿಕ್ಯುಲೇಟ್ ಮ್ಯಾಟರ್) ಪ್ರಮಾಣ ಶೇ 30ರಿಂದ 40ರಷ್ಟು ಕಡಿಮೆಯಾಗುತ್ತದೆ ಎಂದು ಕೇಂದ್ರೀಯ ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಮಂಡಳಿ (ಸಿಎಸ್‍ಐಆರ್) ಪ್ರಮಾಣಿಸಿದೆ.

ಅಚ್ಚರಿಯೆಂದರೆ, ಹಸಿರು ಪಟಾಕಿಗಳಲ್ಲಿ ಹಸಿರು ಬಣ್ಣ ಹೊಮ್ಮಿಸುವ ಬೇರಿಯಂ ನೈಟ್ರೇಟ್ ಸಂಯುಕ್ತವೇ ಇರುವುದಿಲ್ಲ. ಪಟಾಕಿ ಸಿಡಿದಾಗ ಹಸಿರು ಬಣ್ಣ ಹೊಮ್ಮುವುದೇ ಇಲ್ಲ!

ಸುಪ್ರೀಂ ಕೋರ್ಟ್‌ನ ಆದೇಶದಂತೆ ಸಿಎಸ್‍ಐಆರ್ ಹಾಗೂ ನ್ಯಾಷನಲ್ ಎನ್ವಿರಾನ್‍ಮೆಂಟಲ್ ಎಂಜಿನಿಯರಿಂಗ್ ರಿಸರ್ಚ್ ಇನ್‌ಸ್ಟಿಟ್ಯೂಟ್‌ನವರು (ನೀರಿ) ಪ್ರಮಾಣೀಕರಿಸಿದ ಉದ್ಯಮಗಳು ಮಾತ್ರ ಹಸಿರು ಪಟಾಕಿ ತಯಾರಿಸುತ್ತವೆ. ಹಸಿರು ಪಟಾಕಿಗಳ ಮೇಲೆ ಕ್ಯುಆರ್ ಕೋಡ್ ಇರಲೇಬೇಕು ಎಂದು ನ್ಯಾಯಾಲಯ ಹೇಳಿದೆ. ಉತ್ಪಾದನೆಗೆ ಕೇಂದ್ರ ಸರ್ಕಾರ ಹಲವು ಉದ್ಯಮಗಳೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಹಸಿರು ಪಟಾಕಿಗಳ ಮೇಲೆ ನೀರಿ ಮತ್ತು ಸಿಎಸ್‍ಐಆರ್‌ನ ಲೋಗೊ ಮತ್ತು ಕ್ಯುಆರ್ ಕೋಡ್‍ಗಳು ಇರುತ್ತವೆ. ಮೊಬೈಲಿನ ಪ್ಲೇಸ್ಟೋರ್‌ನಲ್ಲಿರುವ ಆ್ಯಪ್ ಬಳಸಿ ಕ್ಯುಆರ್ ಕೋಡ್ ಸ್ಕ್ಯಾನ್ ಮಾಡಿದರೆ ಅದು ಹಸಿರು ಪಟಾಕಿ ಹೌದೋ ಅಲ್ಲವೋ ಎನ್ನುವುದು ತಿಳಿಯುತ್ತದೆ.

ಸಿಡಿದಾಗ ಹೊಮ್ಮುವ ಶಬ್ದದ ವಿಚಾರದಲ್ಲಿ ಮಾಮೂಲಿ ಮತ್ತು ಹಸಿರು ಪಟಾಕಿಗಳ ನಡುವೆ ಅಂಥ ವ್ಯತ್ಯಾಸವೇನೂ ಇಲ್ಲ. ಹಸಿರು ಪಟಾಕಿಗಳು ಗರಿಷ್ಠ 125 ಡೆಸಿಬಲ್ (ಡಿ.ಬಿ.) ಶಬ್ದ ಹೊಮ್ಮಿಸಿದರೆ ಸಾಮಾನ್ಯ ಪಟಾಕಿಗಳು 125– 160 ಡೆಸಿಬಲ್ ಶಬ್ದ ಉಂಟುಮಾಡುತ್ತವೆ. ಮನುಷ್ಯನ ಕಿವಿಗಳು 70ರಿಂದ 80 ಡಿ.ಬಿವರೆಗಿನ ಶಬ್ದವನ್ನು ಸಹಜವಾಗಿ ತಡೆದುಕೊಳ್ಳುತ್ತವೆ. ನಮ್ಮ ಉಸಿರಾಟದ ಶಬ್ದ 10 ಡಿ.ಬಿ.ಯಷ್ಟಿದ್ದರೆ, ಮೋಟರ್ ಬೈಕಿನ ಶಬ್ದ 85-90 ಡಿ.ಬಿ. ಇರುತ್ತದೆ.

ಪಟಾಕಿಗಳಲ್ಲಿ ಹೆಚ್ಚು ಶಬ್ದ, ಬೆಳಕು ಹಾಗೂ ಬಣ್ಣಗಳನ್ನು ಉತ್ಪತ್ತಿ ಮಾಡಲು ಬಳಕೆಯಾಗುವ ಹಲವು ಲೋಹಗಳು ಜನರ ಆರೋಗ್ಯ ಕೆಡಿಸುತ್ತವೆ. ಪಟಾಕಿ ಸಿಡಿದಾಗ ಗಾಳಿಯಲ್ಲಿ ತೇಲುವ ತಾಮ್ರದ ತೇಲುಕಣಗಳು ಚರ್ಮ ವ್ಯಾಧಿ ತರುತ್ತವೆ, ಅಲ್ಯೂಮಿನಿಯಂನ ಕಣಗಳು ಮೆದುಳು ಮತ್ತು ಶ್ವಾಸಕೋಶದ ಕಾರ್ಯಕ್ಷಮತೆಯ ಮೇಲೆ ಅಡ್ಡಪರಿಣಾಮ ಬೀರುತ್ತವೆ, ಸ್ಟ್ರಾನ್ಷಿಯಂ ಕಣಗಳು ಮಕ್ಕಳ ಎಲುಬುಗಳ ಬೆಳವಣಿಗೆಯನ್ನು ಕುಂಠಿತಗೊಳಿಸುತ್ತವೆ, ಚಾರ್ಕೋಲ್ ಮತ್ತು ಗಂಧಕವು ಶ್ವಾಸಕೋಶದ ಕ್ಯಾನ್ಸರ್ ತರುವ ಸಾಧ್ಯತೆ ಇದೆ ಮತ್ತು ಥೈರಾಯಿಡ್ ಗ್ರಂಥಿಗಳ ಚಟುವಟಿಕೆಯನ್ನು ದಾರಿತಪ್ಪಿಸುತ್ತವೆ ಎಂಬುದಕ್ಕೆ ವೈಜ್ಞಾನಿಕ ದಾಖಲೆಗಳಿವೆ. ಕೆಲವು ಹಸಿರು ಪಟಾಕಿಗಳಲ್ಲಿ ಅಲ್ಯೂಮಿನಿಯಂ, ಪೊಟಾಶಿಯಂ ನೈಟ್ರೇಟ್ ಮತ್ತು ಇಂಗಾಲ ಇರುತ್ತವಾದರೂ ಮಾಮೂಲಿ ಪಟಾಕಿಗಳಿಗಿಂತ ಶೇ 40ರಷ್ಟು ಕಡಿಮೆ ಪ್ರಮಾಣವನ್ನು ಒಳಗೊಂಡಿರುತ್ತವೆ.

ಪಟಾಕಿಗಳು ಉರಿದಾಗ, ಸಿಡಿದಾಗ, ತಿರುಗಿದಾಗ ತಮ್ಮಲ್ಲಿರುವ ರಾಸಾಯನಿಕಗಳಿಂದಾಗಿ ಬೇರೆ ಬೇರೆ ಬಣ್ಣ ಸೂಸಿ ನೋಡುಗರ ಹೃನ್ಮನಗಳಲ್ಲಿ ಬಣ್ಣದ ಚಿತ್ತಾರ ಮೂಡಿಸುತ್ತವೆ. ಸ್ಟ್ರಾನ್ಷಿಯಂ ಮತ್ತು ಲೀಥಿಯಂ ಲೋಹಗಳು ದಟ್ಟ ಕೆಂಪು ವರ್ಣ ಹೊಮ್ಮಿಸಿದರೆ, ತಾಮ್ರವು ದಟ್ಟ ನೀಲಿಬಣ್ಣ ನೀಡುತ್ತದೆ. ಬೆಳ್ಳಿ ಬೆಳಕು ಸೂಸಲು ಟೈಟಾನಿಯಂ ಮತ್ತು ಮೆಗ್ನೀಶಿಯಂ ಉರಿಯಲೇಬೇಕು. ಕ್ಯಾಲ್ಶಿಯಂ ಕಿತ್ತಳೆ, ರುಬಿಡಿಯಮ್ ನೇರಳೆ ಬಣ್ಣ ಸೂಸುತ್ತವೆ. ಸೋಡಿಯಂ ಹಳದಿಯ ಉತ್ಪಾತ ಸೃಷ್ಟಿಸುತ್ತದೆ ಮತ್ತು ಬೇರಿಯಂ ದಟ್ಟ ಹಸಿರು ಬಣ್ಣ ಕಕ್ಕುತ್ತದೆ. ಬೇರಿಯಂ ಮತ್ತು ತಾಮ್ರವನ್ನು ಸೇರಿಸಿದರೆ ಹಸಿರು ಹಾಗೂ ಟರ್ಕ್ವೈಸ್‌ ಬಣ್ಣದ ಜ್ವಾಲೆಗಳೇಳುತ್ತವೆ.

ಪಟಾಕಿಗಳಲ್ಲಿ ಸೋಡಿಯಂ ಸ್ಯಾಲಿಸಿಲಿಕೇಟ್ ಮತ್ತು ಪೊಟಾಶಿಯಂ ಪರ್‌ಕ್ಲೋರೇಟ್‍ನ ಸಾವಯವ ಲವಣಗಳ ಪದರಗಳಿದ್ದರೆ, ಪ್ರತಿ ಪದರ ಒಂದರ ಹಿಂದೊಂದರಂತೆ ಅನಿಲವನ್ನು ಹೊರಬಿಡುತ್ತ ತೀಕ್ಷ್ಣವಾದ ವಿಶಲ್ ಸದ್ದು ಹೊರಡಿಸುತ್ತದೆ. ಅಲ್ಯೂಮಿನಿಯಂ ತುಂಡುಗಳಿದ್ದರೆ ಹಾವು ಬುಸುಗುಡುವ ರೀತಿಯಲ್ಲಿ ಸದ್ದು ಕೇಳಿಸುತ್ತದೆ. ಟೈಟಾನಿಯಂ ಪೌಡರ್ ಬಿಳಿಕಿಡಿ ಹೊಮ್ಮಿಸಿ ಕಿವಿ ಗಡಚಿಕ್ಕುವಂತಹ ಸದ್ದು ಮಾಡುತ್ತದೆ.

ಹಿಂದಿನ ವರ್ಷ ಮಾರುಕಟ್ಟೆಗೆ ಬಂದ ಹಸಿರು ಪಟಾಕಿಯ ಪ್ರಮಾಣ ಶೇ 40ರಷ್ಟಿತ್ತು. ಜನರಿಗೆ ಸ್ಪಷ್ಟ ತಿಳಿವಳಿಕೆ ಇಲ್ಲದ್ದರಿಂದ ಮಾರಾಟದಲ್ಲಿ ಬಹಳಷ್ಟು ನಷ್ಟವಾಗಿತ್ತು ಎನ್ನುವ ಪಟಾಕಿ ಮಾರಾಟಗಾರರು, ಜನರಿಗೆ ಹಸಿರು ಪಟಾಕಿಗಳ ಬಗ್ಗೆ ಅರಿವು ಮೂಡಿಸುವಲ್ಲಿ ಸರ್ಕಾರ ವಿಫಲವಾಗಿದೆ ಎನ್ನುತ್ತಾರೆ. ಎರಡು ವರ್ಷದ ಹಿಂದೆ ‘ಹಸಿರು ಪಟಾಕಿ’ ಹೆಸರಿನಲ್ಲಿ ಮಾರಾಟವಾಗಿದ್ದ ನಕಲಿ ಪಟಾಕಿಗಳನ್ನು ಮಹಾರಾಷ್ಟ್ರದ ಆವಾಸ್ ಫೌಂಡೇಷನ್ ಪತ್ತೆಹಚ್ಚಿತ್ತು.

ಹಸಿರು ಪಟಾಕಿ ಎಂದರೆ ಠುಸ್ ಪಟಾಕಿ, ಢಂ ಎಂದು ಪಟಾಕಿ ಹೊಡೆದರೆ ಸೊಳ್ಳೆಗಳು ನಾಶವಾಗುತ್ತವೆ ಎನ್ನುವವರು ಬಹಳಷ್ಟು ಮಂದಿ ಇದ್ದಾರೆ. ಪಟಾಕಿಗಳ ಕರ್ಕಶ ಸದ್ದಿನಿಂದ ಹಕ್ಕಿಗಳು ದಿಕ್ಕಾಪಾಲಾಗುತ್ತವೆ. ಎಳೆಯ ಮಕ್ಕಳು ಹಾಗೂ ಹಿರಿಯರ ಕರ್ಣಪಟಲದ ಮೇಲೆ ಭಾರಿ ಒತ್ತಡ ಬೀಳುತ್ತದೆ. ಗಾಳಿಯಲ್ಲಿ ಲೋಹದ ತೇಲುಕಣಗಳ ಪ್ರಮಾಣ ಹೆಚ್ಚಾಗಿ ಉಸಿರಾಟಕ್ಕೆ ತೊಂದರೆಯಾಗುತ್ತದೆ. ದೀಪಾವಳಿಯು ಬೆಳಕಿನ ಹಬ್ಬ ಎಂದು ಗೊತ್ತಿದ್ದರೂ ಬೆಳಕನ್ನು ಮೀರಿ ಸದ್ದು ಮಾಡುವ ಹುಮ್ಮಸ್ಸೇ ಜಾಸ್ತಿ ಕಾಣಿಸುತ್ತದೆ. ಅದು ಕೊನೆಯಾಗಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT