ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ: ಪ್ರಸಾದ ತಯಾರಿಕೆ, ವಿತರಣೆ: ಶುಚಿತ್ವ ಪಾಲನೆ ಆದ್ಯತೆಯಾಗಲಿ

Last Updated 30 ಅಕ್ಟೋಬರ್ 2020, 1:36 IST
ಅಕ್ಷರ ಗಾತ್ರ

ಮಂಡ್ಯ ಜಿಲ್ಲೆಯ ಹಲಗೂರು ಸಮೀಪದ ಲಿಂಗಪಟ್ಟಣ ಗ್ರಾಮದಲ್ಲಿರುವ ಮಾರಮ್ಮನ ದೇವಸ್ಥಾನದಲ್ಲಿ ಪ್ರಸಾದ ಸೇವಿಸಿದ ಎಪ್ಪತ್ತು ಮಂದಿ ಅಸ್ವಸ್ಥರಾಗಿದ್ದಾರೆ. ನೂರಾರು ಭಕ್ತರು ಇಲ್ಲಿ ಪ್ರಸಾದವಾಗಿ ಪುಳಿಯೋಗರೆ ಸೇವಿಸಿದ್ದಾರೆ. ಅವರಲ್ಲಿ ಕೆಲವರಿಗೆ ವಾಂತಿ–ಭೇದಿ ಕಾಣಿಸಿಕೊಂಡಿದೆ. ಅಸ್ವಸ್ಥತೆಗೆ ಒಳಗಾದವರಲ್ಲಿ ಕೆಲವರು ಹಲಗೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಉಳಿದವರಿಗೆ ಲಿಂಗಪಟ್ಟಣದ ಸರ್ಕಾರಿ ಶಾಲೆಯ ಆವರಣದಲ್ಲೇ ಚಿಕಿತ್ಸೆ ನೀಡಲಾಗಿದೆ. ಆ ಬಳಿಕ ಕೆಲವರನ್ನು ತಾಲ್ಲೂಕು ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಅದೃಷ್ಟವಶಾತ್‌ ಜೀವಹಾನಿ ಸಂಭವಿಸಿಲ್ಲ ಎಂಬುದು ಸಮಾಧಾನದ ಸಂಗತಿ. ಸುದ್ದಿ ತಿಳಿಯುತ್ತಲೇ ಮಳವಳ್ಳಿ ತಾಲ್ಲೂಕು ವೈದ್ಯಾಧಿಕಾರಿ ಡಾ. ವೀರಭದ್ರಪ್ಪ ನೇತೃತ್ವದ ತಂಡ ಗ್ರಾಮಕ್ಕೆ ತೆರಳಿ ಚಿಕಿತ್ಸೆಗೆ ವ್ಯವಸ್ಥೆ ಮಾಡಿರುವುದು ಮೆಚ್ಚತಕ್ಕ ಸ್ಪಂದನ. ಪ್ರಸಾದ ಸೇವನೆಯಿಂದ ಭಕ್ತರು ಅಸ್ವಸ್ಥರಾಗುವ ಪ್ರಸಂಗಗಳು ನಮಗೆ ಹೊಸತೇನಲ್ಲ. ಹಲವು ಸಂದರ್ಭಗಳಲ್ಲಿ ಪ್ರಸಾದ ಸಿದ್ಧಪಡಿಸಲು ಬಳಸುವ ನೀರಿನ ಶುದ್ಧತೆಯ ಕೊರತೆಯಿಂದಾಗಿ ಇಲ್ಲವೇ ಪಾತ್ರೆಗಳಲ್ಲಿನ ಕಿಲುಬು ನಂಜಾಗಿ ಪರಿಣಮಿಸುವುದರಿಂದ ಎಡವಟ್ಟಾಗುವ ಸಾಧ್ಯತೆ ಇರುತ್ತದೆ. ಶುಚಿತ್ವದ ಕೊರತೆಯಿಂದ ಸಂಭವಿಸುವ ಅನಾಹುತಗಳು ಪ್ರಸಾದ ಸೇವಿಸಿದ ಭಕ್ತರಲ್ಲಿ ವಾಂತಿ–ಭೇದಿಗೆ ಕಾರಣವಾಗಬಹುದು. ದೇವರ ಪ್ರಸಾದವನ್ನು ಪವಿತ್ರವೆಂದು ನಂಬಿ ಹಲವರು ಅದನ್ನು ಕಣ್ಮುಚ್ಚಿ ಸೇವಿಸುತ್ತಾರೆ. ಭಕ್ತರ ನಂಬಿಕೆಯನ್ನು ಇಂತಹ ಅವಘಡಗಳು ಗಾಸಿಗೊಳಿಸುತ್ತವೆ. ಪ್ರಸಾದ ಎನ್ನುವುದು ದೇವರ ನೈವೇದ್ಯದ ರೂಪ ಮಾತ್ರವಲ್ಲದೆ, ಅನೇಕ ಬಡವರ ಪಾಲಿಗೆ ಒಂದು ಹೊತ್ತಿನ ಹಸಿವು ನೀಗಿಸುವ ಮಾರ್ಗವೂ ಆಗಿದೆ. ಯಾತ್ರಾಸ್ಥಳಗಳಲ್ಲಿ ನಡೆಯುವ ಅನ್ನದಾನದ ಚಟುವಟಿಕೆಗಳಲ್ಲಿ ಧಾರ್ಮಿಕ ಸ್ವರೂಪದ ಜೊತೆಗೆ ಹಸಿವನ್ನು ತಣಿಸುವ ಸಾಮಾಜಿಕ ಕಾಳಜಿಯ ಆಯಾಮವೂ ಇರುತ್ತದೆ. ಪ್ರಸಾದವನ್ನು ಸಾಮೂಹಿಕವಾಗಿ ನೂರಾರು ಜನ, ಕೆಲವೊಮ್ಮೆ ಸಾವಿರಾರು ಜನ ಸೇವಿಸುತ್ತಾರೆ. ಹಾಗಾಗಿ, ಪ್ರಸಾದ ತಯಾರಿಕೆಯಲ್ಲಿ ಹೆಚ್ಚಿನ ಮುತುವರ್ಜಿ ವಹಿಸುವುದು ಅಗತ್ಯ. ಅಂತೆಯೇ ಗುಣಮಟ್ಟ ಕಾಪಾಡಿಕೊಳ್ಳುವುದನ್ನು ಆದ್ಯತೆಯಾಗಿ ಪರಿಗಣಿಸಬೇಕು.

ಅಷ್ಟಕ್ಕೂ ಈಗಿನ ಸಂದರ್ಭ ಎಂದಿನಂತಲ್ಲ. ಕೋವಿಡ್‌ ಸಾಂಕ್ರಾಮಿಕವು ದೊಡ್ಡ ಪಿಡುಗಾಗಿ ನಮ್ಮ ನಡುವೆ ಇದೆ. ಹಾಗಾಗಿ,ಹೆಚ್ಚು ಜನರು ಸೇರುವ ಸ್ಥಳಗಳಲ್ಲಿ ಕಟ್ಟುನಿಟ್ಟಿನ ಕ್ರಮಗಳನ್ನು ಅನುಸರಿಸಲೇಬೇಕಾಗಿದೆ. ಲಾಕ್‌ಡೌನ್‌ನಿಂದ ತಿಂಗಳಾನುಗಟ್ಟಲೆ ಮುಚ್ಚಿದ್ದ ದೇವಸ್ಥಾನಗಳನ್ನು ಜೂನ್‌ನಲ್ಲಷ್ಟೇ ಭಕ್ತರ ಪ್ರವೇಶಕ್ಕೆ ತೆರೆಯಲಾಗಿದೆ. ಈ ಸಂದರ್ಭದಲ್ಲಿ ಸರ್ಕಾರ ಹೊರಡಿಸಿದ ಮಾರ್ಗಸೂಚಿಯಲ್ಲಿ ಪ್ರಸಾದ– ನೈವೇದ್ಯ ವಿತರಿಸಬಾರದು ಎಂಬುದೂ ಸೇರಿದೆ. ಅಷ್ಟಾದರೂ ಮಾರಮ್ಮನ ದೇವಸ್ಥಾನದಲ್ಲಿ ಪ್ರಸಾದ ವಿತರಣೆ ನಡೆದಿರುವುದು ಕೋವಿಡ್‌ ಮಾರ್ಗಸೂಚಿಯ ಸ್ಪಷ್ಟ ಉಲ್ಲಂಘನೆಯೇ ಸರಿ. ಅದರಲ್ಲೂ ಇಲ್ಲಿ ಅನ್ನಸಂತರ್ಪಣೆ ಏರ್ಪಡಿಸಿದ್ದುದು ವೈದ್ಯರೊಬ್ಬರ ಕುಟುಂಬ ಎಂಬುದು ಚೋದ್ಯದ ಸಂಗತಿ. ಕೋವಿಡ್‌ ಇನ್ನೂ ಪೂರ್ತಿ ನಿಯಂತ್ರಣಕ್ಕೆ ಬಂದಿಲ್ಲ, ಈ ಅಪಾಯಕಾರಿ ಸೋಂಕಿನ ಜೊತೆಗೇ ಬದುಕು ಸಾಗಿದೆ ಎಂಬ ಕಟುವಾಸ್ತವ ಇನ್ನೂ ಬಹಳಷ್ಟು ಜನರಿಗೆ ಮನದಟ್ಟಾಗಿಲ್ಲ ಎಂಬುದಕ್ಕೆ ಈ ಪ್ರಕರಣ ಸ್ಪಷ್ಟ ನಿದರ್ಶನ. ಯಾರ ಕಡೆಯಿಂದ ತಪ್ಪಾಗಿದ್ದರೂ ಇದು ಸಾರ್ವಜನಿಕ ಆರೋಗ್ಯದ ಪ್ರಶ್ನೆಯಾದ್ದರಿಂದ ಗಂಭೀರವಾಗಿಯೇ ಪರಿಗಣಿಸಬೇಕಾಗುತ್ತದೆ. ಎಲ್ಲೆಡೆ ಹೆಚ್ಚಿನ ಆಸ್ಪತ್ರೆಗಳು ಕೋವಿಡ್‌ ರೋಗಿಗಳ ಆರೈಕೆಯಲ್ಲಿ ತೊಡಗಿವೆ. ಇತರ ಗಂಭೀರ ಕಾಯಿಲೆಗಳಿಗೆ ಚಿಕಿತ್ಸೆ ದೊರೆಯುವುದೇ ದುಸ್ತರ ಎಂಬಂತಹ ಸಂಕಷ್ಟದ ಸಮಯ ಇದು. ಇನ್ನು ಪ್ರಸಾದ ತಿಂದು ಸಾಮೂಹಿಕವಾಗಿ ಜನ ಅಸ್ವಸ್ಥರಾದರೆ ಅವರಿಗೆ ಚಿಕಿತ್ಸೆ ನೀಡುವುದು ಸ್ಥಳೀಯ ಆಸ್ಪತ್ರೆಗಳಿಗೆ ಸವಾಲೇ ಸರಿ. 2018ರ ಡಿಸೆಂಬರ್‌ನಲ್ಲಿ ಚಾಮರಾಜನಗರ ಜಿಲ್ಲೆ, ಹನೂರು ತಾಲ್ಲೂಕಿನ ಸುಳ್ವಾಡಿಯ ಕಿಚ್ಚುಗತ್ತಿ ಮಾರಮ್ಮ ದೇವಾಲಯದಲ್ಲಿ ನಡೆದ ವಿಷಪ್ರಾಶನದ ಪ್ರಕರಣವಂತೂ ಪ್ರಸಾದ ವಿತರಣೆಗೆ ಸಂಬಂಧಿಸಿದಂತೆ ಸಾರ್ವಜನಿಕವಾಗಿ ಬಹಳಷ್ಟು ಚರ್ಚೆಗಳನ್ನೇ ಹುಟ್ಟುಹಾಕಿತ್ತು. ಈ ಪ್ರಕರಣಕ್ಕೆ ದೇವಾಲಯದ ಆಡಳಿತ ಮಂಡಳಿಯ ಆಂತರಿಕ ಸಂಘರ್ಷ ಕಾರಣವಾಗಿದ್ದರೂ ದೇವಾಲಯಗಳಲ್ಲಿ ಪ್ರಸಾದ ವಿತರಣೆ ಹಾಗೂ ಅನ್ನ ಸಂತರ್ಪಣೆಯ ವಿಷಯದಲ್ಲಿ ಸರ್ಕಾರ ಕಟ್ಟುನಿಟ್ಟಿನ ಮಾರ್ಗಸೂಚಿ ಸಿದ್ಧಪಡಿಸಬೇಕೆಂಬ ಆಗ್ರಹ ಆಗ ಬಲವಾಗಿ ಕೇಳಿಬಂದಿತ್ತು. ಇಂತಹ ವಿಷಯಗಳಲ್ಲಿ ಕಾನೂನಿಗಿಂತ ಹೆಚ್ಚಾಗಿ ಭಕ್ತರ ಭಾವನೆಗಳೇ ಮೇಲುಗೈ ಸಾಧಿಸುತ್ತವೆ. ಹೀಗಾಗಿ, ಆಯಾ ದೇವಸ್ಥಾನದ ಆಡಳಿತ ಮಂಡಳಿಗಳ ಹೊಣೆಗಾರಿಕೆ ಇಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಆಡಳಿತ ಮಂಡಳಿಗಳು ಅದನ್ನು ಸಮರ್ಥವಾಗಿ ನಿಭಾಯಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT