ಮಂಗಳವಾರ, ಆಗಸ್ಟ್ 9, 2022
20 °C

ಒಳನೋಟ: ಗಗನದತ್ತ ಖಾದ್ಯ ತೈಲದ ಬೆಲೆ ತಿಂಗಳ ಬಜೆಟ್‌ ಏರುಪೇರು

ಪ್ರಜಾವಾಣಿ ವಿಶೇಷ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ/ಮಂಡ್ಯ: ಫೆಬ್ರುವರಿಯಿಂದ ಈಚೆಗೆ ಖಾದ್ಯ ತೈಲದ ಬೆಲೆ ಶೇ 80ರಿಂದ ಶೇ 100ರಷ್ಟು ಹೆಚ್ಚಳವಾಗಿದೆ. ಇದರಿಂದಾಗಿ ಮಧ್ಯಮ–ಕೆಳಮಧ್ಯಮ ವರ್ಗದವರ ತಿಂಗಳ ದಿನಸಿ ಖರೀದಿ ಬಜೆಟ್‌ ಏರುಪೇರಾಗಿದೆ.

ಲಾಕ್‌ಡೌನ್‌ನಿಂದಾಗಿ ಕೆಲಸ ಕಳೆದುಕೊಂಡವರು ಹಾಗೂ ವೇತನ ಕಡಿತವಾದವರಿಗೆ ಅಡುಗೆ ಎಣ್ಣೆ ಬೆಲೆ ಏರಿಕೆ ಆಘಾತ ನೀಡಿದೆ. 2020ರ ಸೆಪ್ಟೆಂಬರ್‌ ಬಳಿಕ ತಾಳೆಎಣ್ಣೆ, ಸೂರ್ಯಕಾಂತಿ, ಶೇಂಗಾ ಎಣ್ಣೆಯ ಬೆಲೆ ಏರುಗತಿಯಲ್ಲಿ ಸಾಗಿದೆ. ಪ್ರತಿ ಲೀಟರ್‌ಗೆ ₹ 65ಕ್ಕೆ ದೊರೆಯುತ್ತಿದ್ದ ತಾಳೆಎಣ್ಣೆ ಈಗ ₹ 160ಕ್ಕೆ ಏರಿದೆ. ಸೂರ್ಯಕಾಂತಿ ಎಣ್ಣೆ ₹ 90ರಿಂದ ₹ 198ಕ್ಕೆ ಜಿಗಿತ ಕಂಡಿದೆ.

ಭಾರಿ ಏರಿಕೆಯಿಂದ ಕಂಗಾಲಾದ ಗ್ರಾಹಕರು ಸೂರ್ಯಕಾಂತಿ, ಶೇಂಗಾಎಣ್ಣೆ ಬಳಕೆಯನ್ನು ಕಡಿಮೆ ಮಾಡಿ ತಾಳೆಎಣ್ಣೆಯನ್ನು ಬಳಸುತ್ತಿದ್ದಾರೆ. ಹೋಟೆಲ್‌ಗಳಲ್ಲಿಯೂ ಕರಿದ ತಿಂಡಿಗಳ ಬೆಲೆ ಏರಿಕೆ ಮಾಡಲಾಗಿದೆ. ಖಾದ್ಯ ತೈಲದ ಬೆಲೆ ಹೆಚ್ಚಳದ ಕುರಿತು ಪ್ರತಿಕ್ರಿಯಿಸಿದ ಕಿರಾಣಿ ವರ್ತಕರ ಸಂಘದ ಕಲಬುರ್ಗಿ ಜಿಲ್ಲಾ ಘಟಕದ ಅಧ್ಯಕ್ಷ ರವೀಂದ್ರ ಮಾದಮಶೆಟ್ಟಿ, ‘ದುಬಾರಿ ಬೆಲೆಯ ಅಡುಗೆ ಎಣ್ಣೆಯನ್ನು ಖರೀದಿಸುವವರ ಪ್ರಮಾಣ ಇಳಿಮುಖವಾಗಿದೆ’ ಎಂದರು.

‘ತೈಲ ಬೆಲೆ ಹೆಚ್ಚಳವಾದ ಬಳಿಕ ಪೂರಿ, ಮಿರ್ಚಿ ಭಜಿ ತಯಾರಿಸುವುದನ್ನೇ ಬಿಟ್ಟಿದ್ದೇವೆ. ವಡೆ ಮಾತ್ರ ಮಾಡುತ್ತಿದ್ದೇವೆ. ಇದರ ಬೆಲೆಯನ್ನೂ ಹೆಚ್ಚಿಸಿದರೆ ಗ್ರಾಹಕರು ದುಬಾರಿಯಾಯಿತು ಎಂದು ತಕರಾರು ತೆಗೆಯುತ್ತಾರೆ’ ಎನ್ನುತ್ತಾರೆ ಕಲಬುರ್ಗಿಯ ಹೋಟೆಲ್ ಉದ್ಯಮಿ ನರಸಿಂಹ ಮೆಂಡನ್. 

‘ಮೊದಲು ನಾವು ತಾಳೆಎಣ್ಣೆಯನ್ನು ದೀಪಕ್ಕೆ ಮಾತ್ರ ಬಳಸುತ್ತಿದ್ದೆವು. ಆದರೆ ಸೂರ್ಯಕಾಂತಿ ಎಣ್ಣೆ ಬೆಲೆ ದ್ವಿಗುಣವಾಗಿರುವ ಕಾರಣ ತಾಳೆಎಣ್ಣೆಯನ್ನೇ ಅಡುಗೆಗೆ ಬಳಸುತ್ತಿದ್ದೇವೆ’ ಎಂದು ಮಂಡ್ಯದ ದರ್ಜಿ ಶಿವಮೂರ್ತಿ ಹೇಳಿದರು.

ಶ್ರೀರಂಗಪಟ್ಟಣ, ಕೆ.ಆರ್‌.ಪೇಟೆ ಭಾಗದಲ್ಲಿ ಗಾಣದಿಂದ ತೆಗೆದ ಶುದ್ಧ ಎಣ್ಣೆಯನ್ನು ಅಡುಗೆಗೆ ಬಳಸುತ್ತಿದ್ದರು. ಈಗ ಗಾಣದ ಎಣ್ಣೆ ಬೆಲೆಯೂ ಹೆಚ್ಚಳವಾಗಿದೆ. ಲೀಟರ್‌ ಸೂರ್ಯಕಾಂತಿ ಎಣ್ಣೆ ದರವನ್ನು ₹ 350ರಿಂದ ₹ 500ಕ್ಕೆ ಏರಿಸಿದ್ಧಾರೆ. ಇದರಿಂದ ಮಧ್ಯಮ ವರ್ಗದ ಜನರಿಗೆ ಗಾಣದ ಎಣ್ಣೆ ಕೈಗೆಟುಕದಂತಾಗಿದೆ.

ಮಾಹಿತಿ: ಮನೋಜಕುಮಾರ್ ಗುದ್ದಿ, ಎಂ.ಎನ್. ಯೋಗೇಶ್

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು