ಶನಿವಾರ, ಸೆಪ್ಟೆಂಬರ್ 25, 2021
22 °C

ಒಳನೋಟ: ನ್ಯಾ. ಎನ್‌.ಕೆ. ಪಾಟೀಲ ವರದಿಯೂ ಮೂಲೆಗುಂಪು

ವಿಜಯಕುಮಾರ್ ಎಸ್‌.ಕೆ. Updated:

ಅಕ್ಷರ ಗಾತ್ರ : | |

ಬೆಂಗಳೂರು: ರಾಜ್ಯದಲ್ಲಿ ಅಪೌಷ್ಟಿಕತೆ ನಿರ್ಮೂಲನೆ ಮಾಡಲು ಮಾರ್ಗೋಪಾಯಗಳನ್ನು ಸೂಚಿಸಿ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಎನ್.ಕೆ. ಪಾಟೀಲ ನೇತೃತ್ವದ ಸಮಿತಿ ನೀಡಿದ್ದ ವರದಿಯೂ ಪೂರ್ಣವಾಗಿ ಅನುಷ್ಠಾನವಾಗದೇ ದೂಳು ಹಿಡಿಯುತ್ತಿದೆ.

ಅಂಗನವಾಡಿಗಳಲ್ಲಿ ವಿದ್ಯುತ್ ಸಂಪರ್ಕ ಮತ್ತು ಶೌಚಾಲಯಗಳು ಇಂದಿಗೂ ಇಲ್ಲದಿರುವುದು, ವರದಿ ಮೂಲೆಗುಂಪಾಗಿರುವುದಕ್ಕೆ ಜ್ವಲಂತ ನಿದರ್ಶನ.

ರಾಜ್ಯದಲ್ಲಿ ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳ ಸಂಖ್ಯೆ ಹೆಚ್ಚಾಗಿರುವುದನ್ನು ಗಮನಿಸಿದ್ದ ಹೈಕೋರ್ಟ್‌, ಸಮಗ್ರ ವರದಿಯನ್ನು ಸಲ್ಲಿಸುವಂತೆ ನ್ಯಾಯಮೂರ್ತಿ ಎನ್‌.ಕೆ. ಪಾಟೀಲ ನೇತೃತ್ವದ ಸಮಿತಿಯನ್ನು ಸ್ವಯಂಪ್ರೇರಿತವಾಗಿ ರಚಿಸಿತ್ತು. ಈ ಸಮಿತಿಯು 2012ರಲ್ಲಿ ವರದಿ ಸಲ್ಲಿಸಿತ್ತು.

‘ಶೇ 57ರಷ್ಟು ಅಂಗನವಾಡಿಗಳು ಮಾತ್ರ ಸ್ವಂತ ಕಟ್ಟಡ ಹೊಂದಿವೆ. ಶೇ 27ರಷ್ಟು ಮರದ ಕೆಳಗೆ, ದೇವಾಲಯಗಳ ಆವರಣ, ಗೋದಾಮುಗಳಲ್ಲಿ ನಡೆಯುತ್ತಿವೆ. ಶೇ 55ರಷ್ಟು ಅಂಗನವಾಡಿಗಳಲ್ಲಿ ಕುಡಿಯುವ ನೀರು ಮತ್ತು ಶೇ 42ರಷ್ಟು ಕೇಂದ್ರಗಳಲ್ಲಿ ಶೌಚಾಲಯ ಸೌಲಭ್ಯವೂ ಇಲ್ಲ.
6 ವರ್ಷದ ಒಳಗಿನ ಹೆಚ್ಚು
ಮಕ್ಕಳು ಅತಿಸಾರ ಸಮಸ್ಯೆ ಎದುರಿಸುತ್ತಿವೆ’ ಎಂದು ವರದಿಯಲ್ಲಿ ತಿಳಿಸಲಾಗಿತ್ತು.

‘ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳ ಸಂಖ್ಯೆ ಕಡಿಮೆಯಾಗಬೇಕೆಂದರೆ, ಅವರಿಗೆ ಗುಣಮಟ್ಟದ ಬಿಸಿಯೂಟ ಸಿಗಬೇಕು. ಕುಡಿಯಲು ಶುದ್ಧವಾದ ಮತ್ತು ಬಿಸಿ ನೀರು ಒದಗಿಸಬೇಕು. ಅಂಗನವಾಡಿಗಳಿಗೆ ಮೂಲ ಸೌಕರ್ಯ ಒದಗಿಸಬೇಕು. ಎರಡು–ಮೂರು ತಿಂಗಳಿಗೊಮ್ಮೆ ಅವರ ಆರೋಗ್ಯ ತಪಾಸಣೆ ಕಡ್ಡಾಯವಾಗಿ ನಡೆಸಬೇಕು’ ಎಂಬುದೂ ಸೇರಿದಂತೆ ಒಟ್ಟಾರೆ 112 ಶಿಫಾರಸುಗಳನ್ನು ಈ ಸಮಿತಿ ಮಾಡಿತ್ತು.

‘ಅಂಗನವಾಡಿಗಳಲ್ಲಿ ಮೂಲಸೌಕರ್ಯ ಕೊರತೆ ಬಗ್ಗೆ ಹೈಕೋರ್ಟ್‌ ಇತ್ತೀಚೆಗೆ ವಿಚಾರಣೆ ಆರಂಭಿಸಿದೆ. ರಾಜ್ಯದಲ್ಲಿ ಒಟ್ಟಾರೆ ಇರುವ 65,911 ಅಂಗನವಾಡಿಗಳಲ್ಲಿ 14,948 ಕೇಂದ್ರಗಳಲ್ಲಿ ವಿದ್ಯುತ್ ಸಂಪರ್ಕ ಇಲ್ಲ. 18,974 ಕೇಂದ್ರಗಳಲ್ಲಿ ಫ್ಯಾನ್‌ಗಳಿಲ್ಲ, 13,690 ಕೇಂದ್ರಗಳಲ್ಲಿ ಶೌಚಾಲಯಗಳೇ ಇಲ್ಲ ಎಂಬುದನ್ನು ಸರ್ಕಾರವೇ ಒಪ್ಪಿಕೊಂಡಿದೆ. ಇದನ್ನು ಗಮನಿಸಿದರೆ ಎನ್‌.ಕೆ. ಪಾಟೀಲ ಅವರ ವರದಿಯು ಎಷ್ಟರ ಮಟ್ಟಿಗೆ ಅನುಷ್ಠಾನ ಆಗಿದೆ ಎಂಬುದು ಅರ್ಥವಾ
ಗುತ್ತದೆ’ ಎಂದು ಮಕ್ಕಳ ಹಕ್ಕುಗಳ ಹೋರಾಟಗಾರರು ಹೇಳುತ್ತಾರೆ.

‘ಜಿಲ್ಲಾ ಮತ್ತು ತಾಲ್ಲೂಕು ಆಸ್ಪತ್ರೆಗಳಲ್ಲಿ ಅಪೌಷ್ಟಿಕ ಮಕ್ಕಳ ಪುನರ್ವಸತಿ ಕೇಂದ್ರಗಳು ಕೂಡ ಇರಬೇಕು ಎಂದೂ ಸಮಿತಿ ತಿಳಿಸಿತ್ತು. ಕೆಲವು ಆಸ್ಪತ್ರೆಗಳಲ್ಲಿ ತೆರೆದಿದ್ದ ಪುನರ್ವಸತಿ ಕೇಂದ್ರಗಳೂ ಈಗ ಮುಚ್ಚಿ ಹೋಗಿವೆ. ಬಹುತೇಕ ಕಡೆಗಳಲ್ಲಿ ಆರಂಭವೇ ಆಗಲಿಲ್ಲ. ಮಕ್ಕಳ ಆರೋಗ್ಯ ತಪಾಸಣಾ ಶಿಬಿರಗಳೂ ನಡೆಯುತ್ತಿಲ್ಲ. ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳ ಸಂಖ್ಯೆ ಬಗ್ಗೆ ಅಧಿಕಾರಿಗಳು ಸುಳ್ಳು ಲೆಕ್ಕ ಕೊಟ್ಟು ಸರ್ಕಾರದ ಮತ್ತು ನ್ಯಾಯಾಲಯದ ದಾರಿ ತಪ್ಪಿಸುತ್ತಿದ್ದಾರೆ. ಎನ್‌.ಕೆ. ಪಾಟೀಲ ಸಮಿತಿ ವರದಿಯನ್ನು ಅವರು ಗಂಭಿರವಾಗಿ ಪರಿಗಣಿಸಿಯೇ ಇಲ್ಲ’ ಎಂದು ಸಾಮಾಜಿಕ ಪರಿವರ್ತನಾ ಜನಾಂದೋಲನದ ಪ್ರಧಾನ ಕಾರ್ಯದರ್ಶಿ ವೈ.ಮರಿಸ್ವಾಮಿ ಬೇಸರ ವ್ಯಕ್ತಪಡಿಸುತ್ತಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು