ಶನಿವಾರ, ಜನವರಿ 23, 2021
21 °C

ಒಳನೋಟ: ಕೈಗಾರಿಕಾ ಕಾರಿಡಾರ್‌ ಸೇರಿದರೂ ಹರಿಹರ ಮಾರ್ಗಕ್ಕಿಲ್ಲ ಯೋಗ

ಚಂದ್ರಹಾಸ ಹಿರೇಮಳಲಿ Updated:

ಅಕ್ಷರ ಗಾತ್ರ : | |

ಶಿವಮೊಗ್ಗ: ಹುಬ್ಬಳ್ಳಿ–ದಾವಣಗೆರೆ ರೈಲು ಮಾರ್ಗದ ಜತೆ ಶಿವಮೊಗ್ಗ ಜಿಲ್ಲೆಯನ್ನು ಸಂಪರ್ಕಿಸುವ ಹರಿಹರ–ಶಿವಮೊಗ್ಗ ರೈಲು ಮಾರ್ಗ ನಿರ್ಮಾಣ ಕಾಮಗಾರಿ ದಶಕಗಳಿಂದ ನನೆಗುದಿಗೆ ಬಿದ್ದಿದೆ.

ಬೆಂಗಳೂರು– ಮುಂಬೈ ಕೈಗಾರಿಕಾ ಕಾರಿಡಾರ್‌ಗೆ ಶಿವಮೊಗ್ಗ ವಲಯವನ್ನೂ ಸೇರಿಸಲಾಗಿದೆ. ಉತ್ಪಾದನಾ ವಲಯ ದೇಶದ ಆರ್ಥಿಕ ಅಭಿವೃದ್ಧಿಯ ಪ್ರಮುಖ ಚಾಲನಾ ಶಕ್ತಿ. ಕೈಗಾರಿಕೀಕರಣ ಮತ್ತು ಯೋಜಿತ ನಗರೀಕರಣ ವೃದ್ಧಿಗಾಗಿ ದೇಶದಾದ್ಯಂತ ಕೈಗಾರಿಕಾ ಕಾರಿಡಾರ್‌ಗಳನ್ನು ಅಭಿವೃದ್ಧಿಪಡಿಸುವ ಉದ್ದೇಶದಿಂದ ಕೇಂದ್ರ ಸರ್ಕಾರವು ರಾಷ್ಟ್ರೀಯ ಕೈಗಾರಿಕಾ ಕಾರಿಡಾರ್ ಅಭಿವೃದ್ಧಿ ಯೋಜನೆ ಜಾರಿಗೆ ತಂದಿದೆ. ಬೆಂಗಳೂರು–ಮುಂಬೈ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ–4ರಿಂದ 80 ಕಿ.ಮೀ ದೂರದಲ್ಲಿರುವ ಶಿವಮೊಗ್ಗ– ಭದ್ರಾವತಿ ಪ್ರದೇಶಗಳನ್ನೂ ಪರಿಗಣಿಸಲಾಗಿದೆ.

ಕೇಂದ್ರ ಅಂಗೀಕರಿಸಿದ ಐದು ಕೈಗಾರಿಕಾ ಕಾರಿಡಾರ್ ಯೋಜನೆಗಳಲ್ಲಿ ಬೆಂಗಳೂರು–ಮುಂಬೈ ಕೈಗಾರಿಕಾ ಕಾರಿಡಾರ್‌ ಸಹ ಒಂದು. ವಿಶ್ವ ದರ್ಜೆಯ ಸಂಪರ್ಕ ಮಾರ್ಗಗಳನ್ನು ರೂಪಿಸಿ, ಯೋಜಿತ ಮತ್ತು ಸಂಪನ್ಮೂಲ ಸಹಿತ ಕೈಗಾರಿಕಾ ನೆಲೆಯ ಅಭಿವೃದ್ಧಿ ಯೋಜನೆಯ ಉದ್ದೇಶ. ಆದರೆ, ಶಿವಮೊಗ್ಗ–ಹರಿಹರ ರೈಲು ಮಾರ್ಗ ಪೂರ್ಣಗೊಳ್ಳದೇ ಕೈಗಾರಿಕಾ ಉತ್ಪನ್ನಗಳ ಸಾಗಣೆಗೆ ಅಡ್ಡಿಯಾಗುತ್ತದೆ. 

ದಶಕದ ಹಿಂದೆಯೇ ಹರಿಹರ ಮಾರ್ಗದ ಭೂಸ್ವಾಧೀನಕ್ಕೆ ರೈಲ್ವೆ ಬಜೆಟ್‌ನಲ್ಲಿ ₹ 10 ಕೋಟಿ ಮೀಸಲಿಡಲಾಗಿತ್ತು. ಎರಡು ವರ್ಷ ರೈಲು ಮಾರ್ಗದ ಘೋಷಣೆ, ಭೂ ಸ್ವಾಧೀನದ ಸಿದ್ಧತೆಗಳು ನಡೆದಿದ್ದವು. ಆದರೆ, ಇದುವರೆಗೂ ಭೂಸ್ವಾಧೀನ ಪ್ರಕ್ರಿಯೆಯೂ ಆರಂಭವಾಗಿಲ್ಲ.

ಭದ್ರಾವತಿಯಲ್ಲಿ ಕಬ್ಬಿಣ ಮತ್ತು ಕಾಗದ ಕಾರ್ಖಾನೆ, ಶಿವಮೊಗ್ಗದ ಮಧ್ಯಮ ಮತ್ತು ಬೃಹತ್ ಫೌಂಡ್ರಿಗಳು, ಜಿಲ್ಲೆಯ ಶ್ರೀಗಂಧ ಮರದ ಕೆತ್ತನೆ, ತೇಗ ಮತ್ತು ಬೀಟೆ ಮರದ ಪೀಠೋಪಕರಣ, ಆಹಾರ ಸಂಸ್ಕರಣೆ, ಮಾಹಿತಿ–ತಂತ್ರಜ್ಞಾನ ಮತ್ತು ಜವಳಿ ಉದ್ಯಮಗಳು ಸರಕು ಸಾಗಣೆಗೆ ಚಿಕ್ಕಮಗಳೂರು ಜಿಲ್ಲೆಯ ಬೀರೂರಿಗೆ ತೆರಳಿ, ಅಲ್ಲಿಂದ ಚಿತ್ರದುರ್ಗ ಜಿಲ್ಲೆ ಚಿಕ್ಕಜಾಜೂರು ಮಾರ್ಗವಾಗಿ ದಾವಣಗೆರೆ, ಹರಿಹರ, ಹುಬ್ಬಳ್ಳಿ ನಂತರ ಉತ್ತರ ಭಾರತದ ಕಡೆ ಸಾಗಿಸಬೇಕಿದೆ. ಹರಿಹರ ಮಾರ್ಗ ಪೂರ್ಣಗೊಂಡಿದ್ದರೆ ನೇರವಾಗಿ 80 ಕಿ.ಮೀ. ಅಂತರದಲ್ಲೇ ಹರಿಹರ ತಲುಪಬಹುದಿತ್ತು.

ಶಿಕಾರಿಪುರ– ರಾಣೆಬೆನ್ನೂರು ಮಾರ್ಗದತ್ತ ಚಿತ್ತ
ಬಿ.ಎಸ್. ಯಡಿಯೂರಪ್ಪ 2008ರಲ್ಲಿ ಮುಖ್ಯಮಂತ್ರಿಯಾದ ನಂತರ ಶಿಕಾರಿಪುರದ ಮೂಲಕ ರಾಣೆಬೆನ್ನೂರಿನ ಬಳಿ ದಾವಣಗೆರೆ–ಹುಬ್ಬಳ್ಳಿ ಮಾರ್ಗಕ್ಕೆ ಸಂಪರ್ಕ ಕಲ್ಪಿಸಲು ಯೋಜನೆ ರೂಪಿಸಿದ್ದರು. ವರ್ಷದ ಹಿಂದೆ ಮತ್ತೆ ಮುಖ್ಯಮಂತ್ರಿಯಾದ ನಂತರ ಭೂಸ್ವಾಧೀನ ಪ್ರಕ್ರಿಯೆಗೆ ಚಾಲನೆ ನೀಡಿದ್ದಾರೆ. ಅದಕ್ಕಾಗಿ ₹ 245 ಕೋಟಿ ಮೀಸಲಿಡಲಾಗಿದೆ. ಒಟ್ಟು ₹ 994 ಕೋಟಿ ವೆಚ್ಚದಲ್ಲಿ ಹೊಸ ರೈಲು ಯೋಜನೆ ಅನುಷ್ಠಾನಕ್ಕೆ ರಾಜ್ಯ ಸರ್ಕಾರವೇ ಭೂಮಿ ಒದಗಿಸುತ್ತಿದೆ. ರಾಜ್ಯ ಸರ್ಕಾರದಿಂದ ಶೇ 50ರಷ್ಟು ಯೋಜನಾ ವೆಚ್ಚ ಭರಿಸುವ ಭರವಸೆಯನ್ನೂ ನೀಡಲಾಗಿದೆ. ಇತ್ತ ಹಳೆಯ ಯೋಜನೆ ಹರಿಹರ–ಶಿವಮೊಗ್ಗ ಮಾರ್ಗದ ಕನಸು ಈಡೇರಲೇ ಇಲ್ಲ. ಈ ಮಾರ್ಗದ ಕಾಮಗಾರಿ ಅನುಷ್ಠಾನವಾಗಿದ್ದರೆ ಕೊಟ್ಟೂರು–ಹರಿಹರಕ್ಕೂ ಸಹಜವಾಗಿ ಸಂಪರ್ಕ
ಲಭ್ಯವಾಗುತ್ತಿತ್ತು.

ಕುಂಟುತ್ತಾ ಸಾಗಿದ ದ್ವಿಪಥ ಮಾರ್ಗ
ಬೀರೂರು–ಶಿವಮೊಗ್ಗ ದ್ವಿಪಥ ಮಾರ್ಗವೂ ಕುಂಟುತ್ತಾ ಸಾಗಿದೆ. ಕೊಂಕಣ ರೈಲ್ವೆ ಸಂಪರ್ಕಿಸುವ ತಾಳಗುಪ್ಪ–ಸಿದ್ದಾಪುರ ಹಾಗೂ ಶಿವಮೊಗ್ಗದಿಂದ ಶೃಂಗೇರಿ ಮಾರ್ಗವಾಗಿ ಮಂಗಳೂರಿಗೆ ಸಂಪರ್ಕ ಕಲ್ಪಿಸುವ ಯೋಜನೆಗಳು ಕಾರ್ಯರೂಪಕ್ಕೆ ಬರಬೇಕಿವೆ. ಶಿವಮೊಗ್ಗ ನಗರದ ಉಷಾ ನರ್ಸಿಂಗ್ ಹೋಂ ಬಳಿ ಇರುವ ಸವಳಂಗ ರಸ್ತೆಯ ರೈಲ್ವೆ ಮೇಲು ಸೇತುವೆಗೆ ₹ 60.76 ಕೋಟಿ, ಭದ್ರಾವತಿಯ ಕಡದಕಟ್ಟೆ ಬಳಿ ₹ 25.92 ಕೋಟಿ, ಕಾಶೀಪುರದ ಬಳಿ ₹ 29.63 ಕೋಟಿ, ವಿದ್ಯಾನಗರದ ಬಳಿಯ ಮೇಲುಸೇತುವೆಗೆ ₹ 43.89 ಕೋಟಿ ಮಂಜೂರಾಗಿದ್ದರೂ ಕಾಮಗಾರಿಗಳು ಆರಂಭವಾಗದ ಕಾರಣ ನಗರದೊಳಗೆ ಹಾಗೂ ಹೊರಗಿನ ಸುಗಮ ಸಂಚಾರ ಸಾಧ್ಯವಾಗಿಲ್ಲ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು