ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಡಳಿತ ದುರುಪಯೋಗ | ನಗರಾಭಿವೃದ್ಧಿ ಪ್ರಾಧಿಕಾರ: ಅಕ್ರಮ ಅಪಾರ

ಒಳನೋಟ
Last Updated 4 ಡಿಸೆಂಬರ್ 2021, 19:31 IST
ಅಕ್ಷರ ಗಾತ್ರ

ಬೆಂಗಳೂರು: ಸೂರಿಲ್ಲದ ಜನರಿಗೆ ಬೆಚ್ಚನೆಯ ಮನೆಯೊಂದನ್ನು ನಿರ್ಮಿಸಿಕೊಳ್ಳುವ ಕನಸು ಸದಾ ಕಾಡುತ್ತಿರುತ್ತದೆ. ಖಾಸಗಿ ಬಿಲ್ಡರ್‌ಗಳ ದುಬಾರಿ ದರದ ನಿವೇಶನವನ್ನು ಕೊಳ್ಳಲಾಗದೇ, ಆಸರೆಗೆ ಬೇಕಾದ ಗೂಡೊಂದನ್ನು ಕಟ್ಟಿಕೊಳ್ಳಲಾಗದೇ ಪರಿತಪಿಸುವುದು ಇಂದಿಗೂ ನಡೆದಿದೆ.

ನಗರ ಪ್ರದೇಶದ ಮಧ್ಯಮವರ್ಗ ದವರ ಆಸೆಯನ್ನು ಈಡೇರಿಸಲು ಸರ್ಕಾರ ಸ್ಥಾಪಿಸಿದ ನಗರಾಭಿವೃದ್ಧಿ ಪ್ರಾಧಿಕಾರಗಳು ಅಕ್ರಮದ ತಾಣಗಳಾಗಿ ಮಾರ್ಪಟ್ಟಿವೆ. ರಾಜ್ಯದಲ್ಲಿ ಆಡಳಿತ ನಡೆಸುವ ಪಕ್ಷದ ಸ್ಥಳೀಯ ‘ನಾಯಕ’ರಿಗೆ ಗಂಜಿ ಕೇಂದ್ರಗಳಾಗಿ ಪರಿವರ್ತನೆಗೊಂಡಿರುವ ಈ ಪ್ರಾಧಿಕಾರಗಳು ಲಂಚ ರುಷುವತ್ತಿನ ಆಗರವಾಗಿವೆ. ಚುನಾಯಿತ ಪ್ರತಿನಿಧಿಗಳು, ನಾಮನಿರ್ದೇಶನಗೊಳ್ಳುವ ಅಧ್ಯಕ್ಷ–ಸದಸ್ಯರು, ಅಧಿಕಾರಿಗಳು, ದಲ್ಲಾಳಿಗಳ ಅಪವಿತ್ರ ಭ್ರಷ್ಟಕೂಟ ನಡೆಸುತ್ತಿರುವ ಹಗರಣಗಳ ಭಾರಕ್ಕೆ ಬಹುತೇಕ ನಗರಾಭಿವೃದ್ಧಿ ಪ್ರಾಧಿಕಾರಗಳ ಆಡಳಿತ ಕುಸಿದುಬಿದ್ದಿವೆ. ಮೇಯುವವರಿಗೆ ಹುಲುಸಾದ ಹುಲ್ಲುಗಾವಲಾಗಿರುವ ಈ ಪ್ರಾಧಿಕಾರಗಳು, ಅಡ್ಡಕಸುಬು ವ್ಯವಹಾರ ಮಾಡುತ್ತಾ ಕೆಲವೇ ಮಂದಿಯ ದುಡ್ಡು ಮಾಡುವ ಕೇಂದ್ರಗಳಾಗಿ ಬದಲಾಗಿವೆ.

ರಾಜ್ಯದಲ್ಲಿ ಸದ್ಯ 31 ನಗರಾಭಿವೃದ್ಧಿ ಪ್ರಾಧಿಕಾರಗಳಿವೆ. ಅಲ್ಲಿನ ಭ್ರಷ್ಟಾಚಾರ, ದುರಾಡಳಿತದ ರುದ್ರನರ್ತನಕ್ಕೆ ಸಿಲುಕಿ ಬಡವರ ಸ್ವಂತ ಸೂರಿನ ಕನಸುಗಳು ಮಣ್ಣುಪಾಲಾಗುತ್ತಿವೆ. ಇನ್ನೊಂದೆಡೆ ವಸತಿ ಬಡಾವಣೆಗಳ ನಿರ್ಮಾಣಕ್ಕೆ ಜಮೀನು ಬಿಟ್ಟುಕೊಟ್ಟ ಭೂಮಾಲೀಕರು ಪರಿಹಾರಕ್ಕಾಗಿ ಅಲೆದೂ ಅಲೆದೂ ಹೈರಾಣಾಗುತ್ತಿದ್ದಾರೆ. ಸ್ವಂತ ನಿವೇಶನ ಹೊಂದಿದ್ದು ಸೂರು ಕಟ್ಟಿಕೊಳ್ಳಲು ಮುಂದಡಿ ಇಡುವವರಿಗೆ ‘ನಕ್ಷೆ ಅನುಮೋದನೆ’ ಎಂಬುದು ಯುದ್ಧ ವನ್ನೇ ಗೆದ್ದಂತಹ ಅನುಭವ ನೀಡುತ್ತಿದೆ. ಕೆಲವೆಡೆ ಸಣ್ಣ ಕೆಲಸಗಳಿಗೂ ಅಲೆದಾಟ ತಪ್ಪಿದ್ದಲ್ಲ ಎಂಬ ಸ್ಥಿತಿ ಇದೆ.

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ಕಚೇರಿಗಳಲ್ಲಿ ನವೆಂಬರ್‌ 19ರಿಂದ ಮೂರು ದಿನಗಳ ಕಾಲ ಶೋಧ ನಡೆಸಿದ್ದ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ), ಪ್ರಾಧಿಕಾರದಲ್ಲಿ ದುರಾಡಳಿತ ಮನೆ ಮಾಡಿರುವುದನ್ನು ಪತ್ತೆಮಾಡಿದೆ. ಭ್ರಷ್ಟಾಚಾರ, ವಂಚನೆ, ನಕಲಿ ದಾಖಲೆ ಸೃಷ್ಟಿಸಿ ನಿವೇಶನ ಮತ್ತು ಪರಿಹಾರ ಲಪಟಾಯಿಸಿರುವ ಹಲವು ಪ್ರಕರಣಗಳನ್ನು ತನಿಖಾ ತಂಡ ಬಯಲಿಗೆ ತಂದಿದೆ. ಬಿಡಿಎ ಪ್ರತಿವರ್ಷವೂ ಬಡಾವಣೆ ನಿರ್ಮಾಣ, ಮೂಲಸೌಕರ್ಯ ಅಭಿವೃದ್ಧಿ ಯೋಜನೆಗಳಿಗೆ ಸಾವಿರಾರು ಕೋಟಿ ರೂಪಾಯಿ ಅನುದಾನಕ್ಕೆ ರಾಜ್ಯ ಸರ್ಕಾರದ ಮುಂದೆ ಬೇಡಿಕೆ ಇಡುತ್ತದೆ. ಆದರೆ, ಪ್ರಾಧಿಕಾರದ ಬೊಕ್ಕಸಕ್ಕೆ ಕಂಡ ಕಂಡಲ್ಲಿ ರಂಧ್ರ ಕೊರೆದಿರುವ ಅಧಿಕಾರಿಗಳು, ದಲ್ಲಾಳಿಗಳ ‘ಮಿತ್ರಕೂಟ’, ಸಹಸ್ರಾರು ಕೋಟಿ ರೂಪಾಯಿಗಳನ್ನು ಕೊಳ್ಳೆ ಹೊಡೆಯುತ್ತಿರುವುದು ಮೇಲ್ನೋಟಕ್ಕೆ ಸಾಬೀತಾಗಿದೆ.

ಈ ಸ್ಥಿತಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಕ್ಕೆ ಸೀಮಿತವಲ್ಲ. ಮೈಸೂರು, ಮಂಡ್ಯ, ರಾಮನಗರ– ಚನ್ನಪಟ್ಟಣ, ಶಿವಮೊಗ್ಗ, ದಾವಣಗೆರೆ, ಮಂಗಳೂರು ಸೇರಿದಂತೆ ಹಲವು ನಗರಾಭಿವೃದ್ಧಿ ಪ್ರಾಧಿಕಾರಗಳು ಬಡಾವಣೆ ನಿರ್ಮಾಣ ಮತ್ತು ನಿವೇಶನ ಹಂಚಿಕೆಗೆ ಸಂಬಂಧಿಸಿದ ಅಕ್ರಮಗಳಿಂದ ಜರ್ಝರಿತವಾಗಿವೆ. ಕೆಲವೆಡೆ ನಗರಾಭಿವೃದ್ಧಿ ಪ್ರಾಧಿಕಾರದ ಖಾತೆಗಳಲ್ಲಿದ್ದ ಕೋಟ್ಯಂತರ ರೂಪಾಯಿ ಮೊತ್ತ ಸದ್ದಿಲ್ಲದೇ ‘ಕಣ್ಮರೆ’ಯಾಗಿದ್ದು, ಲಾಭದಲ್ಲಿದ್ದ ಸಂಸ್ಥೆಗಳು ನಷ್ಟದ ಸುಳಿಗೆ ಸಿಲುಕಿವೆ.

ಸಾಲು ಸಾಲು ಹಗರಣ:1976ರಲ್ಲಿ ಅಸ್ತಿತ್ವಕ್ಕೆ ಬಂದಿರುವ ಬಿಡಿಎ ಹಲವು ಬಡಾವಣೆಗಳನ್ನು ನಿರ್ಮಿಸಿ, 75,000ಕ್ಕೂ ಹೆಚ್ಚು ನಿವೇಶನಗಳನ್ನು ಜನರಿಗೆ ಹಂಚಿಕೆ ಮಾಡಿದೆ. ಅರ್ಕಾವತಿ, ಕೆಂಪೇಗೌಡ ಮತ್ತು ಸರ್‌.ಎಂ. ವಿಶ್ವೇಶ್ವರಯ್ಯ ಬಡಾವಣೆಗಳು ನಿರ್ಮಾಣ ಹಂತದಲ್ಲಿವೆ. 35 ವರ್ಷಗಳ ಅವಧಿಯಲ್ಲಿ ಬಿಡಿಎ ನಿರ್ಮಿಸಿದ ಬಹುಪಾಲು ಬಡಾವಣೆಗಳು ವಿವಾದಕ್ಕೆ ಸಿಲುಕಿವೆ. ಭೂಸ್ವಾಧೀನ, ಪರಿಹಾರ ವಿತರಣೆ, ನಿವೇಶನಗಳ ಹಂಚಿಕೆ ಸೇರಿದಂತೆ ಬಿಡಿಎ ಬಡಾವಣೆಗಳ ನಿರ್ಮಾಣದಲ್ಲಿನ ಪ್ರಕ್ರಿಯೆಗಳಿಗೂ ‘ಅಕ್ರಮ’ಕ್ಕೂ ಬಿಡ
ಲಾರದ ನಂಟು ಎಂಬ ಪರಿಸ್ಥಿತಿ ಇದೆ.

ಮಂಡ್ಯ ನಗರಾಭಿವೃದ್ಧಿ ಪ್ರಾಧಿಕಾರವು 2009ರಲ್ಲಿ ನಿರ್ಮಿಸಿದ ವಿವೇಕಾನಂದ ಬಡಾವಣೆಯಲ್ಲಿನ 107 ನಿವೇಶನಗಳ ಹಂಚಿಕೆಯಲ್ಲಿ ಅಕ್ರಮ ಬಯಲಾಗಿತ್ತು. ಪ್ರಕರಣದ ಕುರಿತು ಸಿಬಿಐ ತನಿಖೆ ನಡೆದಿದ್ದು, ಆಗ ಶಾಸಕರಾಗಿದ್ದ ಸಿ.ಎಸ್‌. ಪುಟ್ಟರಾಜು (ಹಾಲಿ ಶಾಸಕ), ರಮೇಶ್‌ ಬಂಡಿಸಿದ್ದೇಗೌಡ, ಎಂ. ಶ್ರೀನಿವಾಸ್‌ ಸೇರಿದಂತೆ 24 ಮಂದಿಯ ವಿರುದ್ಧ ಆರೋಪಪಟ್ಟಿ ಸಲ್ಲಿಕೆಯಾಗಿದೆ.

ಶಿವಮೊಗ್ಗ ನಗರಾಭಿವೃದ್ಧಿ ಪ್ರಾಧಿಕಾರ 2008–12ರ ಅವಧಿಯಲ್ಲಿ ನಿರ್ಮಿಸಿದ ವಾಜಪೇಯಿ ಬಡಾವಣೆಯಲ್ಲಿನ 1,305 ನಿವೇಶನಗಳ ಹಂಚಿಕೆಯಲ್ಲಿ ಅಕ್ರಮ ನಡೆದಿರುವುದು ಲೋಕಾಯುಕ್ತ ತನಿಖೆಯಲ್ಲಿ ದೃಢಪಟ್ಟಿದೆ.

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರೇ ಭೂ ಅಕ್ರಮಗಳಲ್ಲಿ ಭಾಗಿಯಾಗಿದ್ದಾರೆ ಎಂದು ಹಿಂದಿನ ಜಿಲ್ಲಾಧಿಕಾರಿ ಆರೋಪಿಸಿದ್ದರು. ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ ಅಲ್ಲಿನ ಚೇಳ್ಯಾರು ಬಳಿ ಬಡಾವಣೆ ನಿರ್ಮಾಣಕ್ಕೆ ರೂಪಿಸಿದ ಯೋಜನೆ ಭೂಸ್ವಾಧೀನ ಪ್ರಕ್ರಿಯೆಯಲ್ಲಿನ ಅಕ್ರಮದಿಂದಾಗಿ ನನೆಗುದಿಗೆ ಬಿದ್ದಿದೆ. ಬಡಾವಣೆ, ವಸತಿ ಸಮುಚ್ಚಯಗಳ ನಿರ್ಮಾಣ ಯೋಜನೆ ಕೈಗೆತ್ತಿಕೊಂಡ ಎಲ್ಲ ಪ್ರಾಧಿಕಾರಗಳಲ್ಲೂ ಇಂತಹ ಒಂದಲ್ಲ ಒಂದು ಪ್ರಕರಣ ಕಣ್ಣಿಗೆ ಬೀಳುತ್ತದೆ.

‘ಮಹಾ ಯೋಜನೆ’ಗಳಲ್ಲಿ ಕೈಚಳಕ!

ನಗರಾಭಿವೃದ್ಧಿ ಪ್ರಾಧಿಕಾರಗಳು ತಮ್ಮ ವ್ಯಾಪ್ತಿಯಲ್ಲಿ ಲಭ್ಯವಿರುವ ಜಮೀನನ್ನು ನಿರ್ದಿಷ್ಟ ಉದ್ದೇಶಕ್ಕೆ ಕಾಯ್ದಿರಿಸುವ ‘ಮಹಾ ಯೋಜನೆ’ಗಳನ್ನು ರೂಪಿಸುವ ಅಧಿಕಾರ ಹೊಂದಿವೆ. ಬಿಡಿಎ ಹೊರತಾಗಿ ಬಹುತೇಕ ನಗರಾಭಿವೃದ್ಧಿ ಪ್ರಾಧಿಕಾರಗಳು ಬಡಾವಣೆ ನಿರ್ಮಾಣ, ನಿವೇಶನ ಹಂಚಿಕೆಯಿಂದ ದೂರ ಉಳಿದಿವೆ. ‘ಮಹಾ ಯೋಜನೆ’ ರೂಪಿಸುವುದನ್ನೇ ಆದ್ಯತೆಯ ಕೆಲಸವಾಗಿ ಮಾಡುತ್ತಿವೆ.

ರಾಜ್ಯದಲ್ಲಿ ಆಡಳಿತ ಪಕ್ಷಗಳು ಬದಲಾದಾಗ, ನಗರಾಭಿವೃದ್ಧಿ ಪ್ರಾಧಿಕಾರಗಳ ಅಧ್ಯಕ್ಷರು ಬದಲಾವಣೆ ಆದ ಬಹುತೇಕ ಸಂದರ್ಭಗಳಲ್ಲಿ ‘ಮಹಾ ಯೋಜನೆ’ ಪರಿಷ್ಕರಣೆಗೆ ಪ್ರಕ್ರಿಯೆ ಆರಂಭಿಸುವುದು ವಾಡಿಕೆಯೇ ಆಗಿದೆ. ಹಣ, ರಾಜಕೀಯ ಪ್ರಭಾವ ಈ ಪ್ರಕ್ರಿಯೆಯಲ್ಲಿ ಹೆಚ್ಚು ಕೆಲಸ ಮಾಡುತ್ತದೆ ಎಂಬ ಆರೋಪ ದೀರ್ಘ ಕಾಲದಿಂದಲೂ ಇದೆ.

ದುಬಾರಿಯಾದ ‘ಅನುಮೋದನೆ’ಯ ಮೊಹರು

ಯಾವುದೇ ನಗರದಲ್ಲಿ ಸ್ಥಳೀಯ ನಗರಾಭಿವೃದ್ಧಿ ಪ್ರಾಧಿಕಾರದ ಅನುಮೋದನೆ ಇಲ್ಲದೆ ಖಾಸಗಿ ಬಡಾವಣೆ ನಿರ್ಮಿಸುವಂತಿಲ್ಲ. ಬಿಡಿ ನಿವೇಶನಗಳಲ್ಲಿ ಕಟ್ಟಡ ನಿರ್ಮಿಸುವುದಕ್ಕೂ ಕಟ್ಟಡ ನಕ್ಷೆಗೆ ‘ಅನುಮೋದನೆ’ಯ ಮೊಹರು ಬೀಳಲೇಬೇಕು.

ಮಧ್ಯವರ್ತಿಗಳ ‘ನೆರವು’ ಇಲ್ಲದೆ ಬಡಾವಣೆ, ಕಟ್ಟಡಗಳ ನಕ್ಷೆಗೆ ‘ಅನುಮೋದನೆ’ಯ ಮೊಹರು ಬೀಳುವ ಪ್ರಾಧಿಕಾರಗಳ ಸಂಖ್ಯೆ ವಿರಳ. ಮಧ್ಯವರ್ತಿಗಳ ಕೈಗೆ ದುಬಾರಿ ಮೊತ್ತದ ‘ಕಾಣಿಕೆ’ ನೀಡಿದರಷ್ಟೆ ಮೊಹರು ಸಲೀಸಾಗಿ ಬೀಳುತ್ತದೆ ಎಂಬ ದೂರು ಎಲ್ಲ ನಗರಗಳಲ್ಲೂ ಇದೆ.

ಕಾಂಚಾಣದ ಸದ್ದಿಗೆ ಕಡತಗಳು ಪ್ರತ್ಯಕ್ಷ!

ನಗರಾಭಿವೃದ್ಧಿ ಪ್ರಾಧಿಕಾರಗಳಲ್ಲಿ ಬಡಾವಣೆ ನಿರ್ಮಾಣಕ್ಕೆ ಭೂಸ್ವಾಧೀನ ಮತ್ತು ನಿವೇಶನ ಹಂಚಿಕೆಗೆ ಸಂಬಂಧಿಸಿದ ಕಡತಗಳು ಕಚೇರಿಗಳಿಂದಲೇ ಕಣ್ಮರೆಯಾಗುತ್ತಿವೆ. ಜಮೀನು ಮಾಲೀಕರು ಪರಿಹಾರ ಪಡೆಯುವುದಕ್ಕೋ, ನಿವೇಶನ ಮಂಜೂರಾದ ವ್ಯಕ್ತಿಗಳು ಖಾತೆ ಬದಲಾವಣೆಗಾಗಿಯೋ ಹೋದರೆ ಅಲ್ಲಿ ಕಡತಗಳೇ ಇರುವುದಿಲ್ಲ. ಲಕ್ಷಗಳ ಲೆಕ್ಕದಲ್ಲಿ ‘ಕಾಂಚಾಣ ಸದ್ದು’ ಮಾಡುತ್ತಿದ್ದಂತೆಯೇ ಈ ಕಡತಗಳು ದಿಢೀರ್‌ ಪ್ರತ್ಯಕ್ಷವಾಗುವಂತಹ ವ್ಯವಸ್ಥೆಯೊಂದು ಬೃಹತ್ತಾಗಿ ಬೆಳೆದು ನಿಂತಿದೆ.

* ಯಾವುದೇ ಅಧಿಕಾರಿ, ಸಿಬ್ಬಂದಿ ಅಕ್ರಮದಲ್ಲಿ ಭಾಗಿಯಾದರೆ ಕಠಿಣ ಕ್ರಮ ನಿಶ್ಚಿತ. ಸಾರ್ವಜನಿಕರು ನೇರವಾಗಿ ನನಗೆ ದೂರು ನೀಡಬಹುದು.

–ಬಿ.ಎ. ಬಸವರಾಜ (ಬೈರತಿ), ನಗರಾಭಿವೃದ್ಧಿ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT