ಉದ್ಯೋಗಿಗಳ ಭವಿಷ್ಯ ನಿಧಿ ಸಂಘಟನೆ (ಇಪಿಎಫ್ಒ) ಹಾಗೂ ರಾಷ್ಟ್ರೀಯ ಪಿಂಚಣಿ ಯೋಜನೆಯನ್ನು (ಎನ್ಪಿಎಸ್) ನಿರ್ವಹಿಸುವ ‘ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ’ವು (ಪಿಎಫ್ಆರ್ಡಿಎ) ‘ಸುಧಾರಣೆ’ಗಳ ಹೆಸರಿನಲ್ಲಿ ಕೆಲವು ಕ್ರಮಗಳನ್ನು ಜಾರಿಗೆ ತರಲು ಮುಂದಾಗಿದೆ.

ಮೊದಲನೆಯದು, ಪಿ.ಎಫ್ ನಿಧಿಯಲ್ಲಿ ಇರುವ ಮೊತ್ತ ಹಿಂಪಡೆಯಲು ಹೆಚ್ಚಿನ ಅವಕಾಶಗಳನ್ನು ಕಲ್ಪಿಸುವುದು, ಹಿಂಪಡೆಯಲು ಹೆಚ್ಚು ಮೊತ್ತ ಸಿಗುವಂತೆ ಮಾಡುವುದು ಹಾಗೂ ಹಿಂಪಡೆಯುವ ವ್ಯಕ್ತಿಗೆ ಕಡಿಮೆ ಪ್ರಶ್ನೆಗಳನ್ನು ಕೇಳಿ ಹಣ ಹಿಂಪಡೆಯುವ ಪ್ರಕ್ರಿಯೆಯು ಸುಲಭವಾಗುವಂತೆ ಮಾಡುವುದು. ಪಿ.ಎಫ್ ಚಂದಾದಾರರು ತಮ್ಮ ಖಾತೆಯಲ್ಲಿ ಕನಿಷ್ಠ ಶೇ 25ರಷ್ಟು ಮೊತ್ತವನ್ನು ಕಾಯ್ದುಕೊಳ್ಳಬೇಕು. ಇದು ಅವರಿಗೆ ನಿವೃತ್ತಿಯ ಸಂದರ್ಭದಲ್ಲಿ ಇಡುಗಂಟಾಗಿ ಸಿಗುತ್ತದೆ, ನಿವೃತ್ತಿಯವರೆಗೆ ಹೆಚ್ಚಿನ ಪ್ರಮಾಣದ ಬಡ್ಡಿ (ಈಗ ಶೇ 8.25ರಷ್ಟು) ತಂದುಕೊಡುತ್ತಿರುತ್ತದೆ. ಇನ್ನುಳಿದ ‘ಅಷ್ಟೂ ಮೊತ್ತವನ್ನು’ ಹಿಂದಕ್ಕೆ ಪಡೆದುಕೊಳ್ಳಲು ಪಿ.ಎಫ್ ಚಂದಾದಾರರಿಗೆ ಅವಕಾಶ ಇರಲಿದೆ. ಇಷ್ಟೇ ಅಲ್ಲ, ಇನ್ನು ಮುಂದೆ 12 ತಿಂಗಳು ಕೆಲಸ ಮಾಡಿದ ನಂತರದಲ್ಲಿ ಪಿ.ಎಫ್ ಖಾತೆಯಿಂದ ಭಾಗಶಃ ಮೊತ್ತವನ್ನು ಪಡೆದುಕೊಳ್ಳಲು ಅವಕಾಶ ಸಿಗಲಿದೆ.

ಇನ್ನೊಂದಿಷ್ಟು ‘ಸುಧಾರಣೆ’ಗಳು ಪಿಎಫ್ಆರ್ಡಿಎ ಕಡೆಯಿಂದ ಎನ್ಪಿಎಸ್ ವ್ಯವಸ್ಥೆಯಲ್ಲಿ ಆಗಲಿವೆ. ಈ ಸುಧಾರಣೆಗಳ ಪ್ರಕಾರ, ಎನ್ಪಿಎಸ್ನಲ್ಲಿ ಹೂಡಿಕೆ ಮಾಡುವವರಿಗೆ ಈಕ್ವಿಟಿ ಮೇಲೆ ಶೇ 100ರಷ್ಟು ಹಣ ತೊಡಗಿಸಲು ಅವಕಾಶ ಸಿಗಲಿದೆ. ಇದುವರೆಗೆ ಈಕ್ವಿಟಿಗಳ ಮೇಲಿನ ಹೂಡಿಕೆಗೆ ಶೇ 75ರ ಮಿತಿಯನ್ನು ವಿಧಿಸಲಾಗಿತ್ತು. ಈ ಮಿತಿಯನ್ನು ತೆಗೆಯುವುದರಿಂದ ಯುವಜನರಿಗೆ, ಹೂಡಿಕೆಗೆ ಹೆಚ್ಚು ಕಾಲಾವಕಾಶ ಇರುವವರಿಗೆ, ಹೆಚ್ಚಿನ ಮೊತ್ತವನ್ನು ಷೇರುಗಳಲ್ಲಿ ತೊಡಗಿಸಿ ಹೆಚ್ಚಿನ ಲಾಭ ಪಡೆಯಲು ಅವಕಾಶ ಕಲ್ಪಿಸಿದಂತೆ ಆಗುತ್ತದೆ. ಆದರೆ, ಈ ‘ಸುಧಾರಣೆ’ಗಳಲ್ಲಿ ಇನ್ನೊಂದು ಅಂಶ ಇದೆ. ಅದು, ಎನ್ಪಿಎಸ್ ಯೋಜನೆಯ ಅವಧಿಯನ್ನು ಪೂರ್ಣಗೊಳಿಸಿ, ಅದರಿಂದ ಹೊರಬರುವಾಗ ಸಿಗುವ ಮೊತ್ತದಲ್ಲಿ ಶೇ 20ರಷ್ಟನ್ನು ಮಾತ್ರ ಆ್ಯನ್ಯುಟಿ ಯೋಜನೆಗಳಲ್ಲಿ ತೊಡಗಿಸಿದರೆ ಸಾಕು ಎಂದು ಹೇಳುತ್ತದೆ. ಈಗ ಇರುವ ನಿಯಮಗಳ ಪ್ರಕಾರ, ಎನ್ಪಿಎಸ್ ಯೋಜನೆಯ ಅವಧಿ ಪೂರ್ಣಗೊಂಡ ನಂತರದಲ್ಲಿ ಸಿಗುವ ಮೊತ್ತದಲ್ಲಿ ಶೇ 40ರಷ್ಟನ್ನು ಆ್ಯನ್ಯುಟಿ ಯೋಜನೆಯಲ್ಲಿ ಕಡ್ಡಾಯವಾಗಿ ತೊಡಗಿಸಬೇಕು. ಆ್ಯನ್ಯುಟಿ ಯೋಜನೆಯಲ್ಲಿ ಇನ್ನೂ ಹೆಚ್ಚು ಮೊತ್ತ ತೊಡಗಿಸಲು ಅಡ್ಡಿಯಿಲ್ಲ. ಆದರೆ, ಶೇ 40ರಷ್ಟು ಕನಿಷ್ಠ ಪ್ರಮಾಣ. ಆ್ಯನ್ಯುಟಿ ಯೋಜನೆಗಳಲ್ಲಿ ಹೆಚ್ಚು ಮೊತ್ತ ತೊಡಗಿಸಿದಂತೆಲ್ಲ ಪಿಂಚಣಿಯ ರೂಪದಲ್ಲಿ ಸಿಗುವ ಮೊತ್ತವೂ ಹೆಚ್ಚು, ಕಡಿಮೆ ಹಣ ತೊಡಗಿಸಿದರೆ ಪಿಂಚಣಿಯಾಗಿ ಸಿಗುವ ಮೊತ್ತ ಕಡಿಮೆ.

ಇಪಿಎಫ್ಒಗೆ ಸಂಬಂಧಿಸಿದ ಕ್ರಮಗಳು ಜಾರಿಗೆ ಬರಲು ಅಣಿ ಯಾಗಿವೆ. ಎನ್ಪಿಎಸ್ನಲ್ಲಿ ತರಲು ಉದ್ದೇಶಿಸಿರುವ ಬದಲಾವಣೆಗಳ ವಿಚಾರವಾಗಿ ಕರಡು ಅಧಿಸೂಚನೆ ಮಾತ್ರ ಪ್ರಕಟವಾಗಿದೆ. ಆದರೆ, ಈ ಎರಡೂ ಕ್ರಮಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ, ಸರ್ಕಾರವು ತನ್ನ ಹೊಣೆಗಾರಿಕೆಯಿಂದ ಹಿಂದೆ ಸರಿಯುತ್ತಿದೆ ಹಾಗೂ ಇದನ್ನು ‘ಸುಧಾರಣೆ’ ಎಂದು ಬಿಂಬಿಸಲು ಪ್ರಯತ್ನಿಸುತ್ತಿದೆ ಅನ್ನಿಸುತ್ತದೆ.

ಪಿ.ಎಫ್ ಹಾಗೂ ಎನ್ಪಿಎಸ್ ಯೋಜನೆಗಳು ಇರುವುದು ನಿವೃತ್ತಿಯ ನಂತರದಲ್ಲಿ ವ್ಯಕ್ತಿಯು ಘನತೆಯ ಬದುಕು ನಡೆಸಲು ಅಗತ್ಯವಾದ ಮೊತ್ತವನ್ನು ಒಗ್ಗೂಡಿಸುವ ನೆರವು ನೀಡಲು. ಅವು ಬೇಕಾದಾಗ ಹಣ ಹಿಂಪಡೆಯಲು ಅವಕಾಶ ನೀಡುವ ಉಳಿತಾಯ ಖಾತೆಗಳಲ್ಲ. ಇಪಿಎಸ್–95 (ನೌಕರರ ಪಿಂಚಣಿ ಯೋಜನೆ) ಹೊರತುಪಡಿಸಿ ಬೇರೆ ಯಾವುದೇ ಖಾತರಿ ಪಿಂಚಣಿಯ ಸೌಲಭ್ಯವು ಖಾಸಗಿ ವಲಯದ ನೌಕರರಿಗೆ ಇಲ್ಲ. ಪಿ.ಎಫ್ ಹಾಗೂ ಎನ್ಪಿಎಸ್ ಮೂಲಕ ಸಿಗುವ ಇಡುಗಂಟು ಸಂಧ್ಯಾಕಾಲದಲ್ಲಿ ನೆರವಿಗೆ ಬರಬೇಕು. ಹೀಗಿರುವಾಗ, ಈ ಎರಡು ಹೂಡಿಕೆ/ಉಳಿತಾಯ ಯೋಜನೆಗಳಲ್ಲಿನ ಹಣವನ್ನು ಹೆಚ್ಚಿನ ಪ್ರಮಾಣದಲ್ಲಿ ಹಿಂಪಡೆಯಲು ಅವಕಾಶ ನೀಡಿದರೆ, ಸಂಧ್ಯಾಕಾಲದಲ್ಲಿ ಅವರು ಯಾವ ಯೋಜನೆಯ ಆಶ್ರಯ ಪಡೆಯಬೇಕು?

ಜನ ತಮ್ಮ ಪಿ.ಎಫ್ ಹಾಗೂ ಎನ್ಪಿಎಸ್ ಖಾತೆಗಳಲ್ಲಿನ ಹಣವನ್ನು, ಅಲ್ಲಿಯೇ ಹೆಚ್ಚಿನ ಅವಧಿಗೆ ತೊಡಗಿಸಿ, ನಿವೃತ್ತಿಯ ನಂತರದಲ್ಲಿ ಅವುಗಳನ್ನು ನೆಚ್ಚಿಕೊಳ್ಳುವ ವ್ಯವಸ್ಥೆಯನ್ನು ಸರ್ಕಾರ ರೂಪಿಸಿದರೆ ಅದು ‘ಸುಧಾರಣೆ’ ಆಗಬಹುದೇ ವಿನಾ, ಈಗಿನ ಕ್ರಮಗಳು ಹಿಮ್ಮುಖ ಚಲನೆಯಂತೆ ಕಾಣುತ್ತಿವೆ. ನಿವೃತ್ತಿಯವರೆಗಿನ ವಿವಿಧ ಅಗತ್ಯಗಳಿಗೆ ಜನರು ಬೇರೆ ಹೂಡಿಕೆ ಉತ್ಪನ್ನಗಳಲ್ಲಿ ಹಣ ತೊಡಗಿಸುವಂತೆ ಸರ್ಕಾರವೇ ಉತ್ತೇಜಿಸುವುದು ಹೆಚ್ಚು ವಿವೇಕದ ನಡೆಯಾಗಬಹುದು.

ಆದಾಯ ತೆರಿಗೆ ಲೆಕ್ಕಹಾಕಲು ಹೊಸ ತೆರಿಗೆ ಪದ್ಧತಿಯನ್ನು ಜಾರಿಗೆ ತಂದ ಕೇಂದ್ರ ಸರ್ಕಾರವು, ಹೊಸ ಪದ್ಧತಿಯಲ್ಲಿ ಹೂಡಿಕೆಗಳಿಗೂ ತೆರಿಗೆ ವಿನಾಯಿತಿಗಳಿಗೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿತು. ಇದು ಉಳಿತಾಯ/ ಹೂಡಿಕೆಗಳನ್ನು ನಿರುತ್ತೇಜಿಸುವ ಕ್ರಮ. ಸರ್ಕಾರವು ಈ ನೀತಿಯನ್ನು ಬಿಟ್ಟು, ಈಕ್ವಿಟಿ ಆಧಾರಿತ ಹೂಡಿಕೆ ಸೇರಿದಂತೆ, ವಿವಿಧ ಬಗೆಯ ಹೂಡಿಕೆಗಳನ್ನು ಉತ್ತೇಜಿಸುವ ಕ್ರಮಕ್ಕೆ ಮತ್ತೆ ಮುಂದಾಗಬೇಕು. ಆಗ ದೇಶದ ಬಂಡವಾಳ ಮಾರುಕಟ್ಟೆಗಳಿಗೆ ಇನ್ನಷ್ಟು ಹಣ ಸಿಗುತ್ತದೆ; ಜನರಿಗೆ ಮುಪ್ಪಿನ ಕಾಲಕ್ಕೆ ಒಂದು ರಕ್ಷಾಕವಚವನ್ನು ಕಟ್ಟಿಕೊಳ್ಳಲು ಅನುವಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.