ಸೋಮವಾರ, 27 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ: ಬಿಸಿಯೂಟಕ್ಕೆ ಬೇಕು ತಾಯಿ ಮಮತೆ!

ತರತಮಗಳಿರುವ ಸಮಾಜದಲ್ಲಿ ಬಡ ಮಕ್ಕಳ ಪರವಾಗಿ ಸರ್ಕಾರ ಗಟ್ಟಿಯಾಗಿ ನಿಲ್ಲಬೇಕಾಗುತ್ತದೆ
Published 12 ಏಪ್ರಿಲ್ 2024, 23:30 IST
Last Updated 12 ಏಪ್ರಿಲ್ 2024, 23:30 IST
ಅಕ್ಷರ ಗಾತ್ರ

ರಾಜ್ಯದಲ್ಲಿ ತೀವ್ರ ಬರ ಆವರಿಸಿರುವುದರಿಂದ ಪ್ರಸಕ್ತ ಬೇಸಿಗೆ ರಜೆಯ ವೇಳೆ, 223 ಬರಪೀಡಿತ ತಾಲ್ಲೂಕುಗಳಲ್ಲಿರುವ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳ ವಿದ್ಯಾರ್ಥಿಗಳಿಗೆ ಇದೇ 11ರಿಂದ ಮೇ 28ರವರೆಗೆ, ಭಾನುವಾರ ಹೊರತುಪಡಿಸಿ ಉಳಿದೆಲ್ಲ ದಿನಗಳಲ್ಲಿ ಮಧ್ಯಾಹ್ನದ ಬಿಸಿಯೂಟ ಪೂರೈಸಲು ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ. ಬಿಸಿಯೂಟದ ಜೊತೆಗೆ ವಿದ್ಯಾರ್ಥಿಗಳಿಗೆ ಚಿತ್ರಕಲೆ, ಹಾಡು, ನೃತ್ಯ, ನಾಟಕದಂತಹ ಪಠ್ಯೇತರ ಚಟುವಟಿಕೆಗಳನ್ನೂ ಆಯೋಜಿಸಬೇಕೆಂದು ಇಲಾಖೆ ಸೂಚಿಸಿರುವುದು ಸೂಕ್ತವಾಗಿದೆ. ಆದರೆ ಕೆಲವು ಶಿಕ್ಷಕರು ಮತ್ತು ಆಡಳಿತ ಮಂಡಳಿಯವರು ಬೇಸಿಗೆ ರಜೆಯ ದಿನಗಳಲ್ಲಿ ಬಿಸಿಯೂಟ ಯೋಜನೆ ಆರಂಭಿಸಿರುವ ಬಗ್ಗೆ ಬೇಸರ ವ್ಯಕ್ತಪಡಿಸುತ್ತಿರುವುದುನೋವಿನ ಸಂಗತಿ. ಇವರಿಗೆ ಬಡ ವಿದ್ಯಾರ್ಥಿಗಳ ನೋವು, ಸಂಕಟ, ಸಾಮಾಜಿಕ ನ್ಯಾಯದ ಪರಿಕಲ್ಪನೆ ಗೊತ್ತಿಲ್ಲ ಎಂದು ಅನ್ನಿಸುತ್ತದೆ.

ಅಕ್ಷಯ ಪಾತ್ರ ಫೌಂಡೇಷನ್ 400 ಕೋಟಿ ಊಟಗಳನ್ನು ನೀಡಿರುವ ಸಾಧನೆಯ ಅಂಗವಾಗಿ, ವಿಶ್ವಸಂಸ್ಥೆಯಲ್ಲಿನ ಭಾರತದ ನಿಯೋಗವೊಂದು ‘ಆಹಾರ ಭದ್ರತೆಯಲ್ಲಿನ ಸಾಧನೆಗಳು: ಸುಸ್ಥಿರ ಅಭಿವೃದ್ಧಿ ಗುರಿಗಳತ್ತ ಭಾರತದ ದಾಪುಗಾಲು’ ವಿಷಯದ ಕುರಿತು ಇತ್ತೀಚೆಗೆ ಕಾರ್ಯಕ್ರಮವೊಂದನ್ನು ಹಮ್ಮಿಕೊಂಡಿತ್ತು. ಈ ಸಂದರ್ಭದಲ್ಲಿ ಭಾಷಣ ಮಾಡಿದ ಇನ್ಫೊಸಿಸ್ ಸಂಸ್ಥೆಯ ಸಹಸಂಸ್ಥಾಪಕ ಎನ್.ಆರ್.ನಾರಾಯಣಮೂರ್ತಿ ಅವರು ನೀಡಿದ ಎಚ್ಚರಿಕೆಯ ಮಾತುಗಳು ಲೋಕದ ಕಣ್ಣು ತೆರೆಸುವಂತಿವೆ.

ಭಾಷಣದ ಸಂಕ್ಷಿಪ್ತ ರೂಪ ಇಷ್ಟು: ‘ಆ ಪಟ್ಟಣದ ಹೆಸರು ನಿಶ್. ಬಲ್ಗೇರಿಯಾ ಹಾಗೂ ಸರ್ಬಿಯಾದ ಗಡಿ ಭಾಗದಲ್ಲಿದೆ. ನಾನು ಐವತ್ತು ವರ್ಷಗಳ ಹಿಂದೆ ಅಲ್ಲಿದ್ದೆ. ಅಲ್ಲಿನ ರಸ್ತೆಗಳಲ್ಲಿ ಅಪರಿಚಿತ ವಾಹನಗಳ ಸಹಾಯದಿಂದ ಪ್ರಯಾಣಿಸುತ್ತಿದ್ದಾಗ ಸತತ 120 ಗಂಟೆ ಕಾಲ ಹಸಿವಿನಿಂದ ಬಳಲಿದ್ದೆ. ನನಗೆ ಹಸಿವಿನ ನರಕದ ದರ್ಶನವಾಯಿತು. ಬಡ ಮಕ್ಕಳು ಸಮಾಜದ ಮೇಲೆ ನಂಬಿಕೆ ಹಾಗೂ ನಿರೀಕ್ಷೆ ಕಳೆದುಕೊಳ್ಳದಂತೆ ನೋಡಿಕೊಳ್ಳಬೇಕು. ಅವರೆಲ್ಲರೂ ಗುಣಮಟ್ಟದ ಶಿಕ್ಷಣ ಪಡೆಯಲು ನಾವು ಸಹಾಯಹಸ್ತ ಚಾಚಬೇಕು. ಒಂದು ವೇಳೆ ಅವರು ನಂಬಿಕೆ ಕಳೆದುಕೊಂಡರೆ ಸಮಾಜದಲ್ಲಿ ಸಂಘರ್ಷ ಸೃಷ್ಟಿಯಾಗುತ್ತದೆ’.

ಓದುವ ಮಕ್ಕಳಿಗೆ ಬರಗಾಲದ ಕಾರಣಕ್ಕೆ ಮಾತ್ರ ಅಲ್ಲ, ವರ್ಷದ ಎಲ್ಲ ದಿನಗಳಲ್ಲಿಯೂ ಉಪಾಹಾರ, ಊಟದ ಗ್ಯಾರಂಟಿ ಇರುವುದು ತೀರ ಅವಶ್ಯವಾಗಿದೆ. ಅನೇಕ ಮಕ್ಕಳಿಗೆ ನಿಶ್ಚಿತ ಉಪಾಹಾರ, ಊಟದ ವ್ಯವಸ್ಥೆ ಇರುವುದಿಲ್ಲ. ಬಡತನ, ಕೌಟುಂಬಿಕ ಕಲಹ, ತಂದೆ ಅಥವಾ ತಾಯಿಯ ಅಕಾಲಿಕ ಸಾವು, ಕುಟುಂಬದ ಒಳಗಿನ ಮತ್ಸರ ಮಕ್ಕಳನ್ನು ಬಹಳ ಕಾಡುತ್ತವೆ. ಬಾಲ್ಯ ಅನೇಕ ಮಕ್ಕಳಿಗೆ ಸಂಭ್ರಮವಾಗಿರುವುದಿಲ್ಲ. ಅವರಿಗೆ ಪ್ರತಿಭಟಿಸುವ, ನೋವನ್ನು ಬಿಚ್ಚಿ ಹೇಳುವ ಧೈರ್ಯ ಇರುವುದಿಲ್ಲ. ಅವರು ಒಳಗೇ ಕೊರಗುತ್ತಾರೆ. ಅದು ಹಿಂಸೆಯಾಗಿ, ಮಾನಸಿಕ ತೊಡಕಾಗಿ, ಕೀಳರಿಮೆಯಾಗಿ ಬೆಳೆಯುತ್ತದೆ. ಇನ್ನು ಕೆಲವು ಮಕ್ಕಳು ರಜೆಯ ದಿನಗಳಲ್ಲಿ ಊಟ, ಉಪಾಹಾರಕ್ಕಾಗಿ ಹೋಟೆಲ್, ಬಾರ್‌ನಂತಹ ಕಡೆ ಕೆಲಸ ಮಾಡುತ್ತಾರೆ. ಅಲ್ಲಿ ಅವರು ಅನುಭವಿಸುವ ಹಿಂಸೆ ಅಷ್ಟಿಷ್ಟಲ್ಲ.

ಬಡ ವಿದ್ಯಾರ್ಥಿಗಳಿಗೆ ಗುಣಮಟ್ಟದ ಊಟ, ಉಪಾಹಾರ, ಒಳ್ಳೆಯ ಬಟ್ಟೆ, ಸರಿಯಾದ ವಸತಿ ವ್ಯವಸ್ಥೆ ದೊರಕಬೇಕು. ಇದನ್ನು ಸರ್ಕಾರ ಒಂದು ಗ್ಯಾರಂಟಿಯಾಗಿ ಪ್ರಕಟಿಸಬೇಕು. ತರತಮಗಳಿರುವ ಸಮಾಜದಲ್ಲಿ ಬಡ ಮಕ್ಕಳ ಪರವಾಗಿ ಸರ್ಕಾರ ಗಟ್ಟಿಯಾಗಿ ನಿಲ್ಲಬೇಕಾಗುತ್ತದೆ.

ಹಾಸ್ಟೆಲ್ ವ್ಯವಸ್ಥೆ ಇಲ್ಲದ ಕಾರಣಕ್ಕೆ ಕಾಲೇಜು ಮತ್ತು ಸ್ನಾತಕೋತ್ತರ ಪದವಿಯ ವ್ಯಾಸಂಗಕ್ಕೆ ಬಡ ವಿದ್ಯಾರ್ಥಿಗಳು ಹೆಚ್ಚಾಗಿ ಬರುತ್ತಿಲ್ಲ ಎಂಬ ಮಾತು ಕೇಳಿಬರುತ್ತಿದೆ. ಭವನಗಳನ್ನು, ಸಮಾಜ ಮಂದಿರಗಳನ್ನು, ಕಲಾಕೇಂದ್ರಗಳನ್ನು ಸರ್ಕಾರ ಎಲ್ಲಾ ನಗರ, ಪಟ್ಟಣಗಳಲ್ಲಿ ದೊಡ್ಡ ಸಂಖ್ಯೆಯಲ್ಲಿ ಕಟ್ಟಿದೆ. ಇವುಗಳಲ್ಲಿ ಅನೇಕ ಕಟ್ಟಡಗಳು ಉದ್ಘಾಟನೆಯ ನಂತರ ಬಾಗಿಲು ತೆರೆದಿಲ್ಲ. ಇಂಥವುಗಳನ್ನು ಗುರುತಿಸಿ
ವಿದ್ಯಾರ್ಥಿಗಳಿಗೆ ವಸತಿ ವ್ಯವಸ್ಥೆ ಕಲ್ಪಿಸಬೇಕು.

ಅನೇಕ ಪಾಲಕರು ಬರದ ಕಾರಣಕ್ಕೆ ಮಹಾರಾಷ್ಟ್ರ, ಗೋವಾ, ಆಂಧ್ರಪ್ರದೇಶದಂತಹ ರಾಜ್ಯಗಳಿಗೆ ಗುಳೆ ಹೋಗಿದ್ದಾರೆ. ಮಕ್ಕಳು ಊಟ ಇಲ್ಲ ಎನ್ನುವ ಕಾರಣಕ್ಕೆ ಪಾಲಕರ ಜೊತೆಯಲ್ಲಿ ಹೋಗಿ ಕೂಲಿ ಕೆಲಸದಲ್ಲಿ ತೊಡಗುತ್ತಾರೆ. ನಂತರ ಅವರು ಶಾಲೆಗೆ ವಾಪಸ್ ಬರುವುದೇ ಅನುಮಾನ.

ಸಂಪತ್ತು ಮತ್ತು ಅನುಕೂಲಗಳು ಕೆಲವೇ ಜನರ ಪಾಲಾಗಿವೆ. ಉಳ್ಳವರು ಹಾಗೂ ಬಡವರ ನಡುವಿನ ಅಂತರ ಹೆಚ್ಚಾಗಿದೆ. ಬಹಳಷ್ಟು ಕುಟುಂಬಗಳು ಸರ್ಕಾರಿ ಸೌಲಭ್ಯಗಳನ್ನು ನೆಚ್ಚಿಕೊಂಡು ಬದುಕುತ್ತಿವೆ. ವಿದ್ಯಾರ್ಥಿಗಳಿಗೆ ಕೊಡುವ ಬಿಸಿಯೂಟವು ಬಸವಾದಿ ಶರಣರ ದಾಸೋಹ ಪರಿಕಲ್ಪನೆಯನ್ನು ಒಳಗೊಂಡಿದೆ. ಬಿಸಿಯೂಟದ ಸೌಲಭ್ಯದಿಂದ ಶಾಲೆಗೆ ಬರುವ ಮಕ್ಕಳ ಸಂಖ್ಯೆ ಹೆಚ್ಚಾಗಿದೆ ಎಂದು ಅಧ್ಯಯನ ವರದಿಗಳು ಹೇಳಿರುವುದನ್ನು ಗಮನಿಸಬಹುದು.

ಕೆಲವು ಶಿಕ್ಷಕರು ಮತ್ತು ಪಾಲಕರು ಶಾಲೆಯಲ್ಲಿ ಪಾಠ ಮಾಡುವುದೇ ಮುಖ್ಯ ಎಂದು ಭಾವಿಸಿದ್ದಾರೆ. ಮಗುವಿನ ಸರ್ವಾಂಗೀಣ ಬೆಳವಣಿಗೆಗೆ ಪೂರಕವಾಗುವಂತೆ ಸೌಲಭ್ಯ ಕಲ್ಪಿಸುವುದು ಕೂಡ ಶಿಕ್ಷಣದ ಭಾಗವೇ ಆಗಿದೆ.

ನಮ್ಮ ಮೊಮ್ಮಗ ಭಾನುವಾರ ಸ್ನಾನ ಮಾಡುವುದಿಲ್ಲ ಎಂದು ಹಟ ಹಿಡಿದು ಕುಳಿತ. ಸ್ನಾನ ಮಾಡದಿದ್ದರೆ ಉಪಾಹಾರ ಇಲ್ಲ ಎಂದು ಅವನ ತಾಯಿ ಹೇಳಿದಳು. ಉಪಾಹಾರ ಇಲ್ಲದೆ ಆಟ ಆಡಲು ಹೊರಟದ್ದನ್ನು ಗಮನಿಸಿದ ಅವನ ತಾಯಿ ತಕ್ಷಣ ಉಪಾಹಾರದ ತಟ್ಟೆ ತಂದು ಮುಂದಿಟ್ಟು, ಗಲ್ಲ ತಟ್ಟಿ, ಆಟ ಆಡಿ ಬಂದು ಸ್ನಾನ ಮಾಡು ಎಂದಳು. ಎಲ್ಲ ವಿದ್ಯಾರ್ಥಿಗಳ ಊಟ, ಉಪಾಹಾರದ ಗ್ಯಾರಂಟಿಗೆ ಸರ್ಕಾರ ಮತ್ತು ಸಮಾಜ ತಾಯಿಯ ಮಮತೆ ತೋರಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT