ಶನಿವಾರ, ಅಕ್ಟೋಬರ್ 24, 2020
26 °C

PV Web Exclusive: ನಿಬ್ಬೆರಗಾಗಿಸುವ ನಿಪ್ಲಿ ಫಾಲ್ಸ್‌

ಕೃಷ್ಣಿ ಶಿರೂರ Updated:

ಅಕ್ಷರ ಗಾತ್ರ : | |

ಮೂರು ವರ್ಷಗಳ ಹಿಂದಿನವರೆಗೂ ನಿಪ್ಲಿ ಫಾಲ್ಸ್‌ ನಮ್ಮದೇ ಆದ ಸಿದ್ದಾಪುರ ತಾಲ್ಲೂಕಿನಲ್ಲಿತ್ತು ಎಂಬ ಅರಿವು ನನಗಿರಲಿಲ್ಲ. ಎರಡು ವರ್ಷಗಳ ಹಿಂದೆ ಅದೂ ಮಳೆ ಜೋರಾಗಿ ಸುರಿಯುವ ಸಮಯದಲ್ಲಿ ನನ್ನ ಫೇಸ್‌ಬುಕ್‌ ಸ್ನೇಹಿತರ ವಾಲ್‌ ಮೇಲೆ ನಿಪ್ಲಿ ಫಾಲ್ಸ್‌ ಹರಿದಿದ್ದು ಕಂಡಿದ್ದೆ. ಆಗ ನನಗೆ ಆ ಹೆಸರೇ ವಿಚಿತ್ರವೆನಿಸಿದ್ದು ಸುಳ್ಳಲ್ಲ. ಜಲಪಾತಗಳಿಗೆ ನಮ್ಮ ಉತ್ತರ ಕನ್ನಡ ಜಿಲ್ಲೆ ಫೇಮಸ್ಸು. ಹೆಚ್ಚು ಕಮ್ಮಿ ನಮ್ಮ ಜಿಲ್ಲೆಯ ಎಲ್ಲ ಜಲಪಾತಗಳ ಪರಿಚಯ ನನಗಿದೆ. ಆದರೆ ಈ  ನಿಪ್ಲಿ ಫಾಲ್ಸ್‌ ಹೆಸರೇ ಕೇಳಿಲ್ವಲ್ಲ, ಇದ್ಯಾವ ಫಾಲ್ಸ್‌ ಎಂದು ಕೆದಕಿದರೆ ನಮ್ಮ ಮನೆಯಿಂದ ಕೇವಲ 30 ಕಿ.ಮೀ. ಅಷ್ಟೇ ದೂರದಲ್ಲಿದೆ. ಮುಂದಿನ ಮಳೆಗಾಲದಲ್ಲಾದರೂ ಹೋಗಿ ಬರಲೇ ಬೇಕು ಎಂದು ಕಳೆದ ವರ್ಷ ನಿರ್ಧರಿಸಿದ್ದೆ. 

ಈ ವರ್ಷ ಮಳೆ ಜೋರಾದಾಗ ಮತ್ತೆ ಫೇಸ್‌ಬುಕ್‌ ವಾಲ್‌ನಲ್ಲಿ ಮತ್ತೆ ನಿಪ್ಲಿ ಫಾಲ್ಸ್‌ ಗಮನ ಸೆಳೆಯಿತು. ನಾನು ನೋಡಿದ ಎಷ್ಟೋ ಜಲಪಾತಗಳಿಗೆ ನಿಪ್ಲಿ ಫಾಲ್ಸ್‌ ವಿಭಿನ್ನ ಎನಿಸಿತು. ನೋಡುವ ತವಕ ಹೆಚ್ಚಾಯಿತು. ಕೊರೊನಾ ಕಾರಣ ತವರಿನ ಕಡೆಗೆ ತಲೆಹಾಕದೆ ಎಂಟು ತಿಂಗಳುಗಳೇ ಕಳೆದಿತ್ತು. ಕಚೇರಿಯ ನೈಟ್‌ಶಿಫ್ಟ್‌ ಮುಗಿಸಿ, ಎರಡು ದಿನ ರಜೆ ಹಾಕಿ ಒಟ್ಟು ನಾಲ್ಕು ದಿನ ಬಿಡುವು ಮಾಡಿಕೊಂಡು ತವರು ಮನೆ ಕಾನಸೂರಿಗೆ ಕಡೆ ಹೊರಟೆ. ನನ್ನ ಮಗನಿಗೆ ಜೋಗ ಜಲಪಾತ ನೋಡೊ ಕಾತರವಾದರೆ ನನಗೋ ನಿಪ್ಲಿ ಸುಂದರಿ ನೋಡುವ ಕೌತುಕ.

ನಮ್ಮ ಮನೆಯಿಂದ (ಕಾನಸೂರಿನಿಂದ) ಜೋಗ 42 ಕಿ.ಮೀ. ದೂರ.  ಸಿದ್ದಾಪುರ–ಮಾವಿನಗುಂಡಿ ರಸ್ತೆಯಲ್ಲಿ ಸಾಗಿ ಜೋಗಕ್ಕೆ ಮೊದಲ ಭೇಟಿ ನೀಡಿ ಮಗನ ಆಸೆ ಪೂರೈಸಿದೆ. ಜೋಗಕ್ಕೆ ಮೊದಲು 12 ಕಿ.ಮೀ ಹಿಂದೆಯೇ ನಿಪ್ಲಿ ಊರು ಇದೆ. ಅಲ್ಲಿಯೇ ಈ ರಮಣೀಯ ಫಾಲ್ಸ್‌ ಇರೋದು. ಜೋಗ ನೋಡಿದ ಮೇಲೆ ನಮ್ಮ ವಾಹನ ನಿಪ್ಲಿ ರಸ್ತೆಯಲ್ಲಿ ಸಾಗಿತ್ತು. ಮಳೆಯೂ ಸಾಥ್‌ ಕೊಟ್ಟಿದ್ದರಿಂದ ರಸ್ತೆ ಪಕ್ಕದ ಹಸಿರು ಹೊದ್ದ ಗಿಡ–ಮರ, ಹೊಲ, ಗುಡ್ಡ, ಬಯಲುಗಳು ಮನಸ್ಸಿಗೆ ಇನ್ನಿಲ್ಲವೆಂಬಷ್ಟು ಮುದ ಕೊಟ್ಟವು. ಸಿದ್ದಾಪುರ–ಮಾವಿನಗುಂಡಿ ಮಾರ್ಗದಿಂದ 3 ಕಿ.ಮೀ. ಒಳಗೆ ಪಯಣಿಸಿದರೆ ರಸ್ತೆಯಂಚಿನಲ್ಲೇ ನಿಪ್ಲಿ ಜಲಪಾತ ತೆರೆದುಕೊಂಡಿತು.

ವಾಹನ ನಿಲ್ಲಿಸಿ 10 ಹೆಜ್ಜೆ ಇಟ್ಟರೆ ನಿಪ್ಲಿ ಸುಂದರಿ ವಿಶಾಲವಾದ ಬಯಲನ್ನು ಆವರಿಸಿ ತಡತಡಿಕೆಯಾಗಿ ಜುಳುಜಳು ನಾದ ಹೊಮ್ಮಿಸುತ್ತ ಹರಿಯುತ್ತಿದ್ದಳು. ಹೇಳಿದಂತೆ ಈ ಫಾಲ್ಸ್‌ ವಿಭಿನ್ನ. ಇಲ್ಲಿ ಎತ್ತರದಿಂದ ಜಲಧಾರೆ ಧುಮುಕದು. ನಿಂತ ಜಾಗದಿಂದ ಬಲಕ್ಕೆ ನೋಡಿದರೆ ಕೊಂಚ ಏರುಪ್ರದೇಶದಿಂದ ಹರಿಯುವ ನೀರು, ಮಧ್ಯ ಭಾಗದಲ್ಲಿ ಕೋಡಿ ಹರಿದು, ಎಡಭಾಗಕ್ಕೆ ಜಾರುತ್ತಾಳೆ. ಅಲ್ಲೇ ಮುಂದೆ ಹತ್ತಡಿಯಷ್ಟು ಎತ್ತರದಿಂದ ಧುಮುಕುವ ದೃಶ್ಯ ಸುಂದರ. ಅತಿ ಮಧುರ. 

ಸಿದ್ದಾಪುರ ತಾಲ್ಲೂಕಿನ ಹುಸೂರು ಆಣೆಕಟ್ಟಿನ ಹಿನ್ನೀರು ರಮಣೀಯ ನಿಪ್ಲಿ ಫಾಲ್ಸ್‌ ಉದ್ಭವಕ್ಕೆ ಕಾರಣ. ಮಳೆಗಾಲದಲ್ಲಿ; ಅದರಲ್ಲೂ ಜೋರು ಮಳೆ ಬಿದ್ದರೆ ಮಾತ್ರ ನಿಪ್ಲಿ ಫಾಲ್ಸ್‌ ರಮಣೀಯವಾಗಿ ಕಾಣುವುದು. ಇಲ್ಲಿ ಮಕ್ಕಳಿಂದ ಹಿರಿಯರೂ ಭಯವಿಲ್ಲದೆ, ಜಾರುವ ಆತಂಕವಿಲ್ಲದೆ ಓಡಾಡಬಹುದು. ಸುರಕ್ಷಿತಭಾವದೊಂದಿದೆ ಹರಿಯುವ ನೀರಿನಲ್ಲಿ ಸ್ವಚ್ಛಂದವಾಗಿ ವಿಹರಿಸಬಹುದು. ಮೊಣಕಾಲಿನವರೆಗೂ ಏರದ ನೀರಿನಲ್ಲಿ ಮಲಗಿ, ಕೂತು ಮಸ್ತಿ ಮಾಡಲು ಮಕ್ಕಳಿಗೆ ಸಂಭ್ರಮವೋ ಸಂಭ್ರಮ.

ನಿಪ್ಲಿ ಫಾಲ್ಸ್‌ನಲ್ಲಿ ಎಷ್ಟು ಸಮಯ ವ್ಯಯಿಸುತ್ತಿರೋ ಅಷ್ಟು ಸಮಯ ನಿಮ್ಮನ್ನು ನೀವು ಖಂಡಿತ ಮರೆತು ಬಿಡುತ್ತಿರಿ. ಜೋಗ ನೋಡಲು ಬರುವವರು ನಿಪ್ಲಿ ಫಾಲ್ಸ್‌ ನೋಡಬಹುದು. ಆದರೆ ಮಳೆಗಾಲದಲ್ಲಿ ಮಾತ್ರ ಈ ಫಾಲ್ಸ್‌ ಕಾಣಸಿಗಲಿದೆ. 

ನಿಪ್ಲಿ ಫಾಲ್ಸ್‌ಗೆ ಹೀಗೆ ಬನ್ನಿ...
ಹುಬ್ಬಳ್ಳಿ ಕಡೆಯಿಂದ ಪ್ರಯಾಣಿಸುವವರು ಶಿರಸಿ–ಸಿದ್ದಾಪುರ ಮಾರ್ಗದಲ್ಲಿ ಬಂದರೆ ಮುಂದೆ ಸಿದ್ದಾಪುರ–ಮಾವಿನಗುಂಡಿ ಮಾರ್ಗದಲ್ಲಿ ಆರು ಕಿ.ಮೀ. ಸಾಗಿದರೆ ಅಲ್ಲಿಂದ ಎಡಕ್ಕೆ ಮೂರು ಕಿ.ಮೀ ಸಾಗಿದರೆ ನಿಪ್ಲಿ ಫಾಲ್ಸ್‌ ತಲುಪಬಹುದು. (ನಿಪ್ಲಿಗೆ ಹುಬ್ಬಳ್ಳಿಯಿಂದ 164 ಕಿ.ಮೀ, ಸಿದ್ದಾಪುರದಿಂದ 10 ಕಿ.ಮೀ. ದೂರ, ಜೋಗ ಫಾಲ್ಸ್‌ನಿಂದ 12 ಕಿ.ಮೀ. ಅಂತರ)

ಬೆಂಗಳೂರು ಕಡೆಯಿಂದ ಬರುವವರು ತಾಳಗುಪ್ಪ–ಜೋಗ ಫಾಲ್ಸ್‌ (ಬೆಂಗಳೂರು–ಹೊನ್ನಾವರ ರಸ್ತೆ) ರಸ್ತೆಯಲ್ಲಿ ಪಯಣಿಸಬೇಕು. ಮಾವಿನಗುಂಡಿ–ಸಿದ್ದಾಪುರ ರಸ್ತೆಯಲ್ಲಿ 12 ಕಿ.ಮೀ ಸಾಗಿದರೆ ನಿಪ್ಲಿ ಫಾಲ್ಸ್‌ ತಲುಪಬಹುದು. ಬೆಂಗಳೂರು, ಮೈಸೂರಿನಿಂದ ತಾಳಗುಪ್ಪಕ್ಕೆ ರೈಲಿನಲ್ಲಿ ಬರುವ ಪ್ರವಾಸಿಗರಿಗೆ ನಿಪ್ಲಿ ತಾಳಗುಪ್ಪದಿಂದ 16 ಕಿ.ಮೀ ದೂರದಲ್ಲಿದೆ.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು