ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PV Web Exclusive: ಕರುಣ್ ನಾಯರ್ ತಲೆ ಮೇಲೆ ತೂಗುಗತ್ತಿ

ನಾಯಕತ್ವ ಮತ್ತು ಬ್ಯಾಟಿಂಗ್‌ನಲ್ಲಿ ಸತತ ವೈಫಲ್ಯ ಅನುಭವಿಸಿದ ಕರ್ನಾಟಕ ಕ್ರಿಕೆಟ್ ತಂಡದ ನಾಯಕ
Last Updated 27 ಜನವರಿ 2021, 10:28 IST
ಅಕ್ಷರ ಗಾತ್ರ

ಅಹಮದಾಬಾದಿನಲ್ಲಿ ನಡೆಯುತ್ತಿರುವ ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಟಿ20 ಕ್ರಿಕೆಟ್ ಟೂರ್ನಿಯಿಂದ ಕರ್ನಾಟಕ ತಂಡ ಮಂಗಳವಾರ ಹೊರಬಿದ್ದಿದೆ. ಸತತ ಎರಡು ವರ್ಷ ಚಾಂಪಿಯನ್ ಆಗಿದ್ದ ತಂಡವು ಈ ಬಾರಿ ಹ್ಯಾಟ್ರಿಕ್ ಸಾಧನೆಯ ಕನಸು ಕಾಣುತ್ತಿತ್ತು.

ಆದರೆ, ಕ್ವಾರ್ಟರ್‌ಫೈನಲ್ ಹಂತದಲ್ಲಿ ಪಂಜಾಬ್ ಎದುರು 9 ವಿಕೆಟ್‌ಗಳಿಂದ ಸೋತು ನಿರ್ಗಮಿಸಿದೆ. ಎಲೀಟ್ ಎ ಗುಂಪಿನಲ್ಲಿಯೂ ಇದೇ ಪಂಜಾಬ್ ಎದುರು ಸೋತಿತ್ತು. ಆದರೆ ನೆಟ್‌ ರನ್‌ರೇಟ್ ಆಧಾರದಲ್ಲಿ ಎಂಟರ ಘಟ್ಟಕ್ಕೆ ಪ್ರವೇಶಿಸಿತ್ತು. ಸೋಲು –ಗೆಲುವು ಆಟದಲ್ಲಿ ಇರುವುದು ಸಾಮಾನ್ಯ. ಆದರೆ, ದಿಟ್ಟ ಹೋರಾಟ ಮಾಡದೆಯೇ ಶರಣಾಗುವುದು ಕರ್ನಾಟಕ ತಂಡದ ಜಾಯಮಾನವಲ್ಲ. ತಂಡದಲ್ಲಿ ಗೆಲುವಿನ ಉತ್ಕಟವಾದ ತುಡಿತ ಎದ್ದು ಕಾಣಲಿಲ್ಲ. ಈ ಸಲದ ಟೂರ್ನಿಯಲ್ಲಿ ಒಬ್ಬಿಬ್ಬರು ಬಿಟ್ಟರೆ ಉಳಿದವರಿಂದ ನಿರೀಕ್ಷಿತಮಟ್ಟದ ಪ್ರದರ್ಶನ ಮೂಡಿಬರಲಿಲ್ಲ. ಆದ್ದರಿಂದಲೇ ಈಗ ನಾಯಕ ಕರುಣ್ ನಾಯರ್ ಅವರ ಬ್ಯಾಟಿಂಗ್ ವೈಫಲ್ಯ ಮತ್ತು ನಾಯಕತ್ವದ ಕುರಿತ ಚರ್ಚೆ ಮುನ್ನೆಲೆಗೆ ಬಂದಿದೆ.

ಸತತ ಮೂರು ಋತುಗಳಲ್ಲಿಯೂ ಬ್ಯಾಟಿಂಗ್ ವೈಫಲ್ಯ ಅನುಭವಿಸಿರುವ ಕರುಣ್ ನಾಯರ್‌ಗೆ ಈ ಸಲ ಕರ್ನಾಟಕ ತಂಡದ ನಾಯಕತ್ವದ ಹೊಣೆ ನೀಡಿದಾಗಲೇ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯೊಳಗಿನ ಕೆಲವರ ಹುಬ್ಬೇರಿದ್ದವು. ಆದರೆ ಯಾರೂ ಜೋರುಧ್ವನಿಯಲ್ಲಿ ಇದನ್ನು ಪ್ರಶ್ನಿಸಲಿಲ್ಲ ಎನ್ನುವುದು ಬೇರೆ ಮಾತು.

ಮನೀಷ್ ಪಾಂಡೆ ಗಾಯಗೊಂಡ ಕಾರಣ ನಾಯರ್‌ಗೆ ಸಾರಥ್ಯ ವಹಿಸಲಾಗಿತ್ತು. ಕೊರೊನಾ ಕಾಲಘಟ್ಟದಲ್ಲಿ ನಡೆದ ಮೊದಲ ದೇಶಿ ಟೂರ್ನಿಯಲ್ಲಿ ತಂಡವನ್ನು ಸಮರ್ಥವಾಗಿ ನಡೆಸುವ ಅವಕಾಶ ಕರುಣ್‌ಗೆ ಇತ್ತು. 2016ರಲ್ಲಿ ಭಾರತ ತಂಡದಲ್ಲಿ ಆಡುವ ಅವಕಾಶ ಸಿಕ್ಕಾಗ ಇಂಗ್ಲೆಂಡ್ ಎದುರು ತ್ರಿಶತಕ ಬಾರಿಸಿದ್ದ ಕರುಣ್‌, ನಂತರ ಆಡಿದ ಟೆಸ್ಟ್‌ ಮತ್ತು ಏಕದಿನ ಪಂದ್ಯಗಳಲ್ಲಿ ಸ್ಥಿರ ಪ್ರದರ್ಶನ ನೀಡಲಿಲ್ಲ. ಅದರಿಂದಾಗಿ ರಾಷ್ಟ್ರೀಯ ತಂಡದ ಕದ ಅವರ ಪಾಲಿಗೆ ಬಹುತೇಕ ಮುಚ್ಚಿತು. ಅವರು ಕರ್ನಾಟಕ ತಂಡದಲ್ಲಿ ಆಡಿದ ಪಂದ್ಯಗಳಲ್ಲಿ ದೊಡ್ಡ ಮೊತ್ತ ಗಳಿಸಿ ಮತ್ತೆ ಭಾರತ ತಂಡದ ಬಾಗಿಲು ತಟ್ಟಬಹುದಿತ್ತು. ಆದರೆ ಅಂತಹ ಗಂಭೀರವಾದ ಪ್ರಯತ್ನ ಮತ್ತು ತುಡಿತಗಳು ಅವರಿಂದ ಕಾಣಲಿಲ್ಲ. ಹತಾಶೆಯಿಂದ ಹೊರಬರದೇ ಫಾರ್ಮ್‌ ಕಂಡುಕೊಳ್ಳಲು ಸಾಧ್ಯವಾಗಲಿಲ್ಲ. ಕೆ.ಎಲ್. ರಾಹುಲ್, ಮಯಂಕ್ ಅಗರವಾಲ್, ರೋಹಿತ್ ಶರ್ಮಾ, ಶಿಖರ್ ಧವನ್, ರವೀಂದ್ರ ಜಡೇಜ ಸೇರಿದಂತೆ ಬಹಳಷ್ಟು ಆಟಗಾರರು ಇಂತಹ ಸನ್ನಿವೇಶ ಎದುರಿಸಿದ್ದಾರೆ. ಆಗೆಲ್ಲ ದೇಶಿ ಕ್ರಿಕೆಟ್‌ ಮತ್ತು ಐಪಿಎಲ್ ಟೂರ್ನಿಗಳಲ್ಲಿ ತಮ್ಮ ಸಾಮರ್ಥ್ಯ ಸಾಬೀತು ಮಾಡಿ ಮತ್ತೆ ಭಾರತ ತಂಡ ಸೇರಿದ್ದಾರೆ. ಇದು ಬಹುತೇಕ ಎಲ್ಲ ಕ್ರಿಕೆಟಿಗರ ಜೀವನದಲ್ಲಿಯೂ ಆಗುವಂತಹದ್ದೇ.

ಆದರೆ ಕರುಣ್ ವೃತ್ತಿಜೀವನದಲ್ಲಿ ಲಯ ಕಳೆದುಕೊಂಡಿದ್ದು ಅಸಹಜವೇನಲ್ಲ. ಆದರೆ ಅವರು ದೇಶಿ ಟೂರ್ನಿಗಳಲ್ಲಿ ತಮ್ಮ ಬ್ಯಾಟಿಂಗ್ ಸಾಮರ್ಥ್ಯ ಸಾಬೀತುಪಡಿಸುವ ಗಂಭೀರ ಪ್ರಯತ್ನ ಮಾಡಲಿಲ್ಲ. 2008–09ರ ರಣಜಿ ಕ್ರಿಕೆಟ್ ಋತುವಿನಲ್ಲಿ ಅವರು ಆಡಿದ 5 ಪಂದ್ಯಗಳಿಂದ ಗಳಿಸಿದ್ದು 223, ವಿಜಯ್ ಹಜಾರೆ ಏಕದಿನ ಟೂರ್ನಿಯಲ್ಲಿ ನಾಲ್ಕು ಪಂದ್ಯಗಳಿಂದ 100 ಮತ್ತು ಸೈಯದ್ ಮುಷ್ತಾಕ್ ಅಲಿ ಟೂರ್ನಿಯಲ್ಲಿ 12 ಪಂದ್ಯಗಳಿಂದ 245 ರನ್ ಕಲೆಹಾಕಿದ್ದರು. ಆದರೆ ನಂತರದ ಋತುವಿನಲ್ಲಿ ಇದು ಮತ್ತಷ್ಟು ಇಳಿಮುಖ ಕಂಡಿತು. ಈ ವರ್ಷದ ಟಿ20 ಟೂರ್ನಿಯಲ್ಲಿ ಆರು ಪಂದ್ಯಗಳಿಂದ ಕೇವಲ 93 ರನ್‌ಗಳನ್ನು ಮಾತ್ರ ಗಳಿಸಿದ್ದಾರೆ. ಅದರಲ್ಲಿ ಒಂದೂ ಅರ್ಧಶತಕವಿಲ್ಲ. ಕಳೆದ ಎರಡೂ ಋತುಗಳಲ್ಲಿ ಒಂದು ಶತಕ ಕೂಡ ಅವರ ಬ್ಯಾಟ್‌ನಿಂದ ಹೊರಹೊಮ್ಮಿಲ್ಲ.

ಈ ಟೂರ್ನಿಯಲ್ಲಿ ಅವರ ನಾಯಕತ್ವದ ಕುರಿತೂ ಆಕ್ಷೇಪಗಳು ವ್ಯಕ್ತವಾಗುತ್ತಿವೆ. ಅನುಭವಿ ಆಲ್‌ರೌಂಡರ್ ಮತ್ತು ಕಳೆದ ಋತುಗಳಲ್ಲಿ ತಂಡದ ಉಪನಾಯಕನಾಗಿದ್ದ ಶ್ರೇಯಸ್ ಗೋಪಾಲ್ ತಂಡದಲ್ಲಿದ್ದರು. ಆದರೆ ಆರಂಭದ ಮೂರು ಪಂದ್ಯಗಳಲ್ಲಿ ಅವರಿಗೆ ಆಡುವ ಅವಕಾಶವನ್ನೇ ಕೊಡಲಿಲ್ಲ. ಅಲ್ಲದೇ ಈ ಸಲ ಅವರು ಉಪನಾಯಕನೂ ಅಲ್ಲ. ಈ ನಡೆಯ ಹಿಂದೆ ಆಯ್ಕೆ ಸಮಿತಿಯ ಯೋಚನೆ ಏನಿತ್ತು ಎಂಬುದು ಸ್ಪಷ್ಟವಾಗಿಲ್ಲ.

ಬ್ಯಾಟಿಂಗ್ ಕ್ರಮಾಂಕ ನಿರ್ಧಾರದಲ್ಲಿಯೂ ಕರುಣ್ ಎಡವಿದ್ದು ಸ್ಪಷ್ಟ. ದೇವದತ್ತ ಪಡಿಕ್ಕಲ್ ಜೊತೆಗೆ ಮೊದಲೆರಡು ಪಂದ್ಯಗಳು ಮತ್ತು ಕ್ವಾರ್ಟರ್‌ಫೈನಲ್‌ನಲ್ಲಿ ಕರುಣ್ ಇನಿಂಗ್ಸ್ ಆರಂಭಿಸಿದ್ದರು. ಆದರೆ ಅಲ್ಲಿಯೂ ವಿಫಲರಾಗಿದ್ದರು. ಕಳೆದೆರಡು ಋತುಗಳಿಂದ ತಂಡದಲ್ಲಿರುವ ಬಿ.ಆರ್. ಶರತ್ ಅವರ ಬದಲಿಗೆ ಟೂರ್ನಿಯ ಮೊದಲ ಪಂದ್ಯದಲ್ಲಿ ಅವಕಾಶ ಪಡೆದ ಕೆ.ಎಲ್. ಶ್ರೀಜಿತ್ ಮಿಂಚಿದ್ದರು. ಆದರೆ ನಂತರದ ಪಂದ್ಯಗಳಲ್ಲಿ ಅವರು ವಿಫಲರಾಗಿದ್ದರು. ಶರತ್ ಅವರನ್ನು ಕ್ವಾರ್ಟರ್‌ಫೈನಲ್‌ನಲ್ಲಿ ಕಣಕ್ಕಿಳಿಸಲಾಯಿತು. ಆದರೆ ಪ್ರಯೋಜನವಾಗಲಿಲ್ಲ.

2019ರ ಋತುವಿನಲ್ಲಿ ಚೆನ್ನಾಗಿ ಆಡಿದ್ದ ಕೆ.ವಿ. ಸಿದ್ಧಾರ್ಥ್ ಈ ಬಾರಿ ಫಿಟ್‌ ಆಗಿ ಮರಳಿದ್ದರು. ಆದರೆ ಅವರಿಗೆ ಒಂದೂ ಪಂದ್ಯದಲ್ಲಿ ಆಡುವ ಅವಕಾಶ ಸಿಗಲಿಲ್ಲ. ಅನಿರುದ್ಧ ಜೋಶಿ ಈ ಬಾರಿ ಉತ್ತಮವಾಗಿ ಆಡಿದ್ದಾರೆ. ಆವರಿಗೆ ಕ್ರಮಾಂಕದಲ್ಲಿ ಬಡ್ತಿ ಕೊಡುವ ಮನಸ್ಸು ಮಾಡಿಲ್ಲ. ಎರಡು ವರ್ಷಗಳ ಹಿಂದೆ ಮುಷ್ತಾಕ್ ಅಲಿ ಟ್ರೋಫಿ ಗೆಲುವಿನ ರೂವಾರಿಯಾಗಿದ್ದ ರೋಹನ್ ಕದಂ ಅವರನ್ನೂ ಈ ಬಾರಿ ಸರಿಯಾಗಿ ನಿಯೋಜಿಸಲಿಲ್ಲ. ಅವರಿಗೆ ಪದೇ ಪದೇ ಕ್ರಮಾಂಕ ಬದಲಿಸಿ ಅವಕಾಶ ಕೊಡಲಾಯಿತು. ಈ ಪ್ರಯೋಗದಲ್ಲಿಯೂ ಒಂದೆರಡು ಒಳ್ಳೆಯ ಇನಿಂಗ್ಸ್‌ ಅವರಿಂದ ಮೂಡಿಬಂದವು.

ಬೌಲಿಂಗ್‌ನಲ್ಲಿ ಅನುಭವಿ ಮತ್ತು ಹೊಸ ತಲೆಮಾರಿನ ಬೌಲರ್‌ಗಳನ್ನು ದುಡಿಸಿಕೊಳ್ಳುವ ಕಲೆ ಕರುಣ್‌ಗೆ ಇನ್ನೂ ಕರಗತವಾದಂತೆ ಕಾಣಲಿಲ್ಲ. ಈ ವಿಷಯದಲ್ಲಿ ಹೋದ ವರ್ಷ ಮನೀಷ್ ಪಾಂಡೆ ಅನುಸರಿಸಿದ್ದ ತಂತ್ರಗಾರಿಕೆ ಫಲ ನೀಡಿತ್ತು. ಆರ್. ವಿನಯಕುಮಾರ್ ಮತ್ತು ಎಸ್. ಅರವಿಂದ್ ಅವರು ತಂಡದಿಂದ ಹೊರಬಿದ್ದ ನಂತರ ವಿ.ಕೌಶಿಕ್ ಮತ್ತು ಪ್ರಸಿದ್ಧಕೃಷ್ಣ ಅವರ ಮೇಲೆ ಹೆಚ್ಚು ನಿರೀಕ್ಷೆಗಳಿವೆ.

ಈ ಸಲದ ಐಪಿಎಲ್‌ನಲ್ಲಿಯೂ ಕರುಣ್ ನಾಯರ್‌ ಪಂಜಾಬ್ ತಂಡದಲ್ಲಿದ್ದರು. ಕೆ.ಎಲ್. ರಾಹುಲ್ ನಾಯಕತ್ವದ ಮತ್ತು ಅನಿಲ್ ಕುಂಬ್ಳೆ ಕೋಚ್ ಆಗಿರುವ ತಂಡದಲ್ಲಿ ಅವರಿದ್ದರು. ತಮಗೆ ಸಿಕ್ಕ ಅವಕಾಶಗಳಲ್ಲಿ ಲಯ ಕಂಡುಕೊಳ್ಳಲಿಲ್ಲ. ಹೀಗಾಗಿ ಟೂರ್ನಿಯ ಬಹಳಷ್ಟು ಪಂದ್ಯಗಳಲ್ಲಿ ಬೆಂಚ್‌ ಕಾಯಬೇಕಾಯಿತು. ರಾಹುಲ್ ದ್ರಾವಿಡ್, ವಾಸೀಂ ಜಾಫರ್ ಮತ್ತು ರವಿಶಾಸ್ತ್ರಿ ಅವರಂತಹ ದಿಗ್ಗಜರ ಸಲಹೆಗಳನ್ನು ಪಡೆದ ಮೇಲೂ ಕರುಣ್ ಆಟದಲ್ಲಿ ಅಮೂಲಾಗ್ರ ಸುಧಾರಣೆಗಳು ಕಂಡುಬರುತ್ತಿಲ್ಲ.ಈಗಂತೂ ಅವರ ಚಾಂಪಿಯನ್ ತಂಡವನ್ನು ದೇಶಿ ಟಿ20 ಟೂರ್ನಿಯಲ್ಲಿ ನಡೆಸಿಕೊಂಡ ರೀತಿ ಮತ್ತು ಅವರ ಬ್ಯಾಟಿಂಗ್ ವೈಫಲ್ಯಗಳೆರಡೂ ಚರ್ಚೆಗೆ ಗ್ರಾಸವಾಗಿವೆ. ಇದರಿಂದಾಗಿ ಮುಂಬರುವ ದೇಶಿ ಟೂರ್ನಿಗಳಲ್ಲಿ ಅವರ ಸ್ಥಾನಕ್ಕೆ ಸಂಚಕಾರ ಬಂದರೂ ಅಚ್ಚರಿಯೇನಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT