ಗುರುವಾರ , ಡಿಸೆಂಬರ್ 3, 2020
23 °C

ಮಹೇಂದ್ರಸಿಂಗ್ ಧೋನಿ ಬರೆದ ದಾಖಲೆಗಳ ಪಟ್ಟಿ ಇದು...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಮಹೇಂದ್ರಸಿಂಗ್‌ ಧೋನಿ ಅವರು ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಮಾಡಿದ ಸಾಧನೆಗಳು ಹಲವು. ಅವರು ನಿರ್ಮಿಸಿದ ದಾಖಲೆಗಳ ಅಂಕಿ ಸಂಖ್ಯೆಗಳ ಮೇಲೆ ಒಂದು ನೋಟ ಇಲ್ಲಿದೆ.

1.ಅಂತರರಾಷ್ಟ್ರೀಯ ಕ್ರಿಕೆಟ್‌ ಕೌನ್ಸಿಲ್‌ನ (ಐಸಿಸಿ) ಮೂರು ವಿಭಿನ್ನ ಟ್ರೋಫಿಗಳನ್ನು ಗೆದ್ದ ಏಕೈಕ ನಾಯಕ ಧೋನಿ. 2007ರಲ್ಲಿ ವಿಶ್ವ ಟ್ವೆಂಟಿ–20, 2011ರಲ್ಲಿ ಏಕದಿನ ವಿಶ್ವಕಪ್‌ ಹಾಗೂ 2013ರಲ್ಲಿ ಐಸಿಸಿ ಚಾಂಪಿಯನ್ಸ್‌ ಟ್ರೋಫಿಗಳು ಅವರ ನೇತೃತ್ವದಲ್ಲಿ ಭಾರತಕ್ಕೆ ಒಲಿದಿವೆ. ಒಟ್ಟಾರೆ, ಮೂರಕ್ಕಿಂತ ಹೆಚ್ಚು ಟ್ರೋಫಿಗಳನ್ನು ಗೆದ್ದ ದಾಖಲೆ ಆಸ್ಟ್ರೇಲಿಯಾದ ರಿಕಿ ಪಾಂಟಿಂಗ್‌ (4) ಹೆಸರಿನಲ್ಲಿದೆ. ಅವರ ನಾಯಕತ್ವದಲ್ಲಿ 2003 ಹಾಗೂ 2007ರ ಏಕದಿನ ವಿಶ್ವಕಪ್‌ ಹಾಗೂ ಎರಡು ಚಾಂಪಿಯನ್ಸ್‌ ಟ್ರೋಫಿಗಳನ್ನು (2006 ಹಾಗೂ 2009) ಆಸ್ಟ್ರೇಲಿಯಾ ತಂಡ ಗೆದ್ದಿದೆ. 

2. ಏಕದಿನ ಮಾದರಿಯಲ್ಲಿ 100ಕ್ಕಿಂತ ಹೆಚ್ಚು (123) ಸ್ಟಂಪಿಂಗ್ಸ್‌ ಮಾಡಿದ ವಿಶ್ವದ ಏಕೈಕ ವಿಕೆಟ್‌ ಕೀಪರ್‌. ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಮಾಡಿರುವ ಒಟ್ಟಾರೆ 195 ಸ್ಟಂಪಿಂಗ್ಸ್‌ ಕೂಡ ವಿಶ್ವದಾಖಲೆಯೇ.

3. ಏಕದಿನ ಮಾದರಿಯಲ್ಲಿ ಏಳನೇ ಅಥವಾ ಅದಕ್ಕಿಂತ ಕೆಳಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಇಳಿದು ಎರಡಕ್ಕಿಂತ ಹೆಚ್ಚು ಶತಕಗಳನ್ನು ದಾಖಲಿಸಿದ ವಿಶ್ವದ ಏಕೈಕ ಆಟಗಾರ. ಐದನೇ ಅಥವಾ ಅದಕ್ಕಿಂತ ಕೆಳಕ್ರಮಾಂಕದಲ್ಲಿ ಆಡಿ ಏಳು ಶತಕಗಳನ್ನು ಹೊಡೆಯುವ ಮೂಲಕ ಭಾರತದ ಯುವರಾಜ್‌ ಸಿಂಗ್‌ ಹಾಗೂ ಇಂಗ್ಲೆಂಡ್‌ನ ಜೋಸ್‌ ಬಟ್ಲರ್‌ ಅವರೊಂದಿಗೆ ಜಂಟಿ ಅಗ್ರಸ್ಥಾನದಲ್ಲಿದ್ದಾರೆ ಧೋನಿ.

4. ಧೋನಿ ನಾಯಕತ್ವದಲ್ಲಿ ಭಾರತ ಸ್ವದೇಶದಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆದ ಎಂಟು ಟೆಸ್ಟ್‌ ಪಂದ್ಯಗಳನ್ನು ಗೆದ್ದುಕೊಂಡಿದೆ. ಯಾವುದೇ ತಂಡದ ನಾಯಕನೊಬ್ಬ ಎದುರಾಳಿ ತಂಡದ ವಿರುದ್ಧ ತವರಿನಲ್ಲಿ ಗೆದ್ದ ಶೇಕಡಾವಾರು ದಾಖಲೆ ಇದಾಗಿದೆ.

5. ಧೋನಿ ಅವರು ಅಂತರರಾಷ್ಟ್ರೀಯ ಕ್ರಿಕೆಟ್‌ನ 13 ಯಶಸ್ವಿ ಚೇಸ್‌ಗಳನ್ನು‌ ಸಿಕ್ಸರ್ ಮೂಲಕ ಮುಗಿಸಿದ್ದಾರೆ. ಅವುಗಳಲ್ಲಿ ಒಂಬತ್ತು ಏಕದಿನ ಪಂದ್ಯಗಳು. ಲಭ್ಯವಿರುವ ದತ್ತಾಂಶದ ಪ್ರಕಾರ ಇದು ಕೂಡ ದಾಖಲೆಯಾಗಿದೆ. ಮೂರು ಟೆಸ್ಟ್‌ ಪಂದ್ಯಗಳು ಹಾಗೂ ಒಂದು ಟ್ವೆಂಟಿ–20 ಪಂದ್ಯಗಳನ್ನು ಅವರು ಸಿಕ್ಸರ್ ಮೂಲಕ ಕೊನೆಗೊಳಿಸಿದ್ದಾರೆ.

6. ಸ್ವದೇಶದಲ್ಲಿ ಅತಿ ಹೆಚ್ಚು (21) ಟೆಸ್ಟ್‌ ಪಂದ್ಯಗಳನ್ನು ಗೆದ್ದುಕೊಟ್ಟ ಭಾರತ ತಂಡದ ನಾಯಕ. ಏಕದಿನ ಪಂದ್ಯಗಳಲ್ಲೂ ಅವರದ್ದೇ ಹಿರಿಮೆ ಇದೆ. ಸ್ವದೇಶದಲ್ಲಿ 74 ಪಂದ್ಯಗಳಲ್ಲಿ ಅವರು ಭಾರತ ತಂಡವನ್ನು ಗೆಲುವಿನ ದಡ ಸೇರಿಸಿದ್ದಾರೆ.

7. ಧೋನಿ ಅವರು ಭಾರತ ತಂಡದ ನಾಯಕನಾಗಿ ಕೊನೆಯ ಏಕದಿನ ಪಂದ್ಯವಾಡಿದ್ದು ತಮ್ಮ 37ನೇ ವಯಸ್ಸಿನಲ್ಲಿ (37 ವರ್ಷ 80 ದಿನಗಳು). ಇದು ಅವರನ್ನು ಭಾರತ ತಂಡದ ಅತ್ಯಂತ ಹಿರಿಯ ನಾಯಕ ಎನಿಸಿಕೊಳ್ಳುವಂತೆ ಮಾಡಿದೆ. ಪ್ರಾಸಂಗಿಕವಾಗಿ ಇದು ಅವರ 200ನೇ ಏಕದಿನ ಪಂದ್ಯವಾಗಿತ್ತು. 200 ಪಂದ್ಯಗಳಲ್ಲಿ ಆಡಿದ ಭಾರತದ ಏಕೈಕ ನಾಯಕ ಹಾಗೂ ವಿಶ್ವದಲ್ಲಿ ಮೂರನೆಯವರಾಗಿ ಧೋನಿ ಗುರುತಿಸಿಕೊಂಡರು. ಅತಿ ಹೆಚ್ಚು ಏಕದಿನ ಪಂದ್ಯಗಳನ್ನು (110) ಗೆದ್ದುಕೊಟ್ಟ ನಾಯಕರಲ್ಲಿ ಧೋನಿ ಎರಡನೇ ಸ್ಥಾನದಲ್ಲಿದ್ದಾರೆ. ಆಸ್ಟ್ರೇಲಿಯಾದ ರಿಕಿ ಪಾಂಟಿಂಗ್‌ (169) ಮೊದಲ ಸ್ಥಾನದಲ್ಲಿದ್ದಾರೆ.

8. ಅಂತರರಾಷ್ಟ್ರೀಯ ಕ್ರಿಕೆಟ್‌ನ 43 ಚೇಸಿಂಗ್‌ಗಳಲ್ಲಿ ಧೋನಿ ಅವರು ಗೆಲುವಿನ ರನ್‌ ಹೊಡೆದಿದ್ದಾರೆ. ಅದರಲ್ಲಿ 30 ಏಕದಿನ ಪಂದ್ಯಗಳು, 10 ಟ್ವೆಂಟಿ ಹಾಗೂ ಮೂರು ಟೆಸ್ಟ್‌ ಪಂದ್ಯಗಳಾಗಿವೆ.

9. 47 ಯಶಸ್ವಿ ಚೇಸಿಂಗ್‌ಗಳಲ್ಲಿ ಧೋನಿ ಔಟಾಗದೇ ಉಳಿದಿದ್ದಾರೆ. ಇದು ಕೂಡ ದಾಖಲೆಯಾಗಿದೆ. ಟ್ವೆಂಟಿ–20 ಮಾದರಿಯಲ್ಲಿ 15 ಬಾರಿ ಅವರು ಔಟಾಗಿಲ್ಲ. ಪಾಕಿಸ್ತಾನದ ಶೋಯಬ್‌ ಮಲಿಕ್‌ ಅವರು 17 ಬಾರಿ ಔಟಾಗದೇ ಉಳಿದಿದ್ದು, ಈ ವಿಭಾಗದಲ್ಲಿ ಮೊದಲ ಸ್ಥಾನದಲ್ಲಿದ್ದರೆ, ಧೋನಿಗೆ ಎರಡನೇ ಸ್ಥಾನ. ಟೆಸ್ಟ್‌ ಕ್ರಿಕೆಟ್‌ನ ನಾಲ್ಕನೇ ಇನಿಂಗ್ಸ್‌ನ‌ ಚೇಸಿಂಗ್‌ ವೇಳೆ ಧೋನಿ ನಾಲ್ಕು ಬಾರಿ ಔಟಾಗದೆ ಉಳಿದಿದ್ದಾರೆ.

10. ವಿಕೆಟ್‌ಕೀಪರ್‌ ಆಗಿ ಟಿ20 ಕ್ರಿಕೆಟ್‌ನಲ್ಲಿ 91 ಬಲಿ ಪಡೆದಿದ್ದು, ವಿಕೆಟ್‌ಕೀಪರ್‌ನೊಬ್ಬನ ಶ್ರೇಷ್ಠ ಸಾಧನೆಯಾಗಿದೆ. ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಒಟ್ಟಾರೆ 829 ಹಾಗೂ ಏಕದಿನ ಮಾದರಿಯಲ್ಲಿ 444 ವಿಕೆಟ್‌ ಗಳಿಸಿದ್ದು ಅವರನ್ನು ಈ ವಿಭಾಗದಲ್ಲಿ ಮೂರನೇ ಸ್ಥಾನದಲ್ಲಿ ನಿಲ್ಲಿಸಿದೆ.

11. ಧೋನಿ ತಾವು ಆಡಿರುವ ಎಲ್ಲ 98 ಅಂತರರಾಷ್ಟ್ರೀಯ ಟ್ವೆಂಟಿ–20 ಪಂದ್ಯಗಳಲ್ಲಿ ವಿಕೆಟ್‌ ಕೀಪರ್‌ ಆಗಿ ಕಾರ್ಯನಿರ್ವಹಿಸಿದ್ದಾರೆ. ಇದರಿಂದ ಅವರು ಅತಿ ಹೆಚ್ಚು ಟಿ20 ಪಂದ್ಯಗಳನ್ನು ಆಡಿದ ಕೀಪರ್‌ ಎನಿಸಿಕೊಂಡಿದ್ದಾರೆ. ಈ ಮಾದರಿಯ 72 ಪಂದ್ಯಗಳಲ್ಲಿ ಅವರು ನಾಯಕತ್ವವನ್ನು ನಿಭಾಯಿಸಿ, ಭಾರತದ ಪರ ಅತಿ ಹೆಚ್ಚು ಟಿ20 ಪಂದ್ಯಗಳಿಗೆ ನಾಯಕತ್ವ ವಹಿಸಿದ ಆಟಗಾರ ಎನಿಸಿಕೊಂಡಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು