ಶನಿವಾರ, ಜನವರಿ 25, 2020
22 °C
ಮುತ್ತಿನ ನಗರಿ ಹೈದರಾಬಾದ್‌ನಲ್ಲಿ ಭಾರತ–ವೆಸ್ಟ್ ಇಂಡೀಸ್ ನಡುವಣ ಮೊದಲ ಟ್ವೆಂಟಿ–20 ಪಂದ್ಯ ಇಂದು; ಕೊಹ್ಲಿ ಮೇಲೆ ಕಣ್ಣು

IND VS WI T20: ಜಯಕ್ಕೆ ಮುತ್ತಿಡಲು ಭಾರತದ ತವಕ

ಪಿಟಿಐ Updated:

ಅಕ್ಷರ ಗಾತ್ರ : | |

ಹೈದರಾಬಾದ್: ಹೋದ ಭಾನುವಾರ ಸೂರತ್ ಅಂಗಳದಲ್ಲಿ ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಗೆದ್ದ ಕರ್ನಾಟಕ ತಂಡದ ನಾಯಕ ಮನೀಷ್ ಪಾಂಡೆ ಮತ್ತು ಆರಂಭಿಕ ಬ್ಯಾಟ್ಸ್‌ಮನ್ ಕೆ.ಎಲ್. ರಾಹುಲ್ ಈಗ ಮುಂದಿನ ವರ್ಷದ ವಿಶ್ವ ಟ್ವೆಂಟಿ–20 ಟೂರ್ನಿಯಲ್ಲಿ ಆಡುವ ಕನಸು ಕಾಣುತ್ತಿದ್ದಾರೆ.

ಅದಕ್ಕಾಗಿ ತಮ್ಮ ಸಾಬೀತುಪಡಿಸಿಕೊಳ್ಳುವ ಅವಕಾಶ ಅವರಿಗೆ ಶುಕ್ರವಾರದಿಂದ ಲಭಿಸಲಿದೆ. ‘ಮುತ್ತಿನ ನಗರಿ’ಯ ರಾಜೀವಗಾಂಧಿ ಕ್ರೀಡಾಂಗಣದಲ್ಲಿ ನಡೆಯಲಿರುವ ವೆಸ್ಟ್ ಇಂಡೀಸ್ ವಿರುದ್ಧದ ಸರಣಿಯ ಮೊದಲ ಟ್ವೆಂಟಿ–20 ಪಂದ್ಯದಲ್ಲಿ ಅವರು ಕಣಕ್ಕಿಳಿಯುವುದು ಖಚಿತವಾಗಿದೆ.

ಶಿಖರ್ ಧವನ್ ಗಾಯಗೊಂಡು ಬೆಂಗಳೂರಿನ ಎನ್‌ಸಿಎದಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ. ಆದ್ದರಿಂದ  ರೋಹಿತ್ ಶರ್ಮಾ ಜೊತೆಗೆ ರಾಹುಲ್ ಇನಿಂಗ್ಸ್‌ ಆರಂಭಿಸಲಿದ್ಧಾರೆ. ಆದರೆ ಈ ಸಲ ಅವರು ತಮ್ಮ ಬ್ಯಾಟಿಂಗ್ ಸಾಮರ್ಥ್ಯವನ್ನು ಪಣಕ್ಕೊಡಲೇಬೇಕು. ಇಲ್ಲದಿದ್ದರೆ ಆಯ್ಕೆಗಾರರನ್ನು ಸೆಳೆಯುವುದು ಕಷ್ಟವಾಗ ಲಿದೆ.  ಮನೀಷ್ ಕೂಡ ದೇಶಿ ಕ್ರಿಕೆಟ್‌ನಲ್ಲಿ ಅಮೋಘ ಸಾಧನೆ ಮಾಡಿದ್ದಾರೆ. 

ಆದರೆ, ಮಧ್ಯಮಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವ ಅವರು ತಮ್ಮ ಸಾಮರ್ಥ್ಯವನ್ನು ಕೆಲವೇ ಎಸೆತಗಳಲ್ಲಿ ಸಾಬೀತು ಮಾಡುವ ಸವಾಲು ಕೂಡ ಇದೆ. ಆದರೆ, ‘ಫಿನಿಷರ್‌’ ಆಗುವ ಅವಕಾಶ ಲಭಿಸಿದರೆ ಅವರು ಮಿಂಚಬಹುದು. ಹಾರ್ದಿಕ್ ಪಾಂಡ್ಯ ಬದಲಿಗೆ ಸ್ಥಾನ ಪಡೆದಿರುವ ಶಿವಂ ದುಬೆ ಅವರಿಗೂ ಇದು ತಮ್ಮ ಭುಜಬಲ ಪರಾಕ್ರಮ ಮೆರೆಯುಲು ಸುಸಂಧಿ.  ಬಾಂಗ್ಲಾದೇಶದ ಎದುರು ನಡೆದ ಸರಣಿಯಲ್ಲಿ ಭರ್ಜರಿ ಆಟವಾಡಿದ್ದ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಅವರನ್ನು ಕಟ್ಟಿಹಾಕುವುದೇ ಕೆರೆಬಿಯನ್‌ ಬೌಲರ್‌ಗಳಿಗೆ ದೊಡ್ಡ ಸವಾಲು. ಅವರಿಬ್ಬರೂ ವೈಫಲ್ಯ ಅನುಭವಿಸಿದರೂ ಮಧ್ಯಮ ಕ್ರಮಾಂಕವು ಬಲಿಷ್ಠವಾಗಿದೆ.  ಶ್ರೇಯಸ್ ಅಯ್ಯರ್, ರವೀಂದ್ರ ಜಡೇಜ ಕೂಡ ರನ್‌ಗಳ ಕೊಡುಗೆ ನೀಡುತ್ತಾರೆ.

ರಿಷಭ್ ಪಂತ್ ಮೇಲೆ ಕಣ್ಣು: ಈ ಸರಣಿಯು ರಿಷಭ್ ಪಂತ್ ಅವರಿಗೆ ಅತ್ಯಂತ ಮಹತ್ವದ್ದಾಗಿದೆ. ಅವರು ಈ ಸರಣಿಯಲ್ಲಿ ಮಿಂಚದಿದ್ದರೆ, ಟಿ20 ವಿಶ್ವಕಪ್‌ನಲ್ಲಿ ಆಡುವ ಅವಕಾಶ ಕಳೆದುಕೊಳ್ಳಬಹುದು. ಏಕೆಂದರೆ, ಈಗಾಗಲೇ ಕೇರಳದ ಸಂಜು ಸ್ಯಾಮ್ಸನ್ ತಂಡದಲ್ಲಿದ್ದಾರೆ. ಅಲ್ಲದೇ ಅನುಭವಿ ಮಹೇಂದ್ರಸಿಂಗ್ ಧೋನಿ ಅವರು ಜನವರಿಯಲ್ಲಿ ಕ್ರಿಕೆಟ್‌ಗೆ ಮರಳುವ ಸಾಧ್ಯತೆಯೂ ದಟ್ಟವಾಗಿದೆ. ಆದ್ದರಿಂದ ರಿಷಭ್, ಕೀಪಿಂಗ್ ಮತ್ತು ಬ್ಯಾಟಿಂಗ್‌ನಲ್ಲಿ ತಮ್ಮ ನೈಜ ಸಾಮರ್ಥ್ಯ ಸಾಬೀತು ಮಾಡಬೇಕಿದೆ.

ವಿಂಡೀಸ್ ತಂಡದಲ್ಲಿ ಶೆಲ್ಡನ್ ಕಾಟ್ರೆಲ್, ಫ್ಯಾಬಿಯನ್ ಅಲೆನ್ ಭಾರತದ ಬ್ಯಾಟಿಂಗ್ ಪಡೆಗೆ ಸವಾಲು ಒಡ್ಡಬಲ್ಲ ಸಮರ್ಥರಾಗಿದ್ದಾರೆ. ಆದರೆ, ಬ್ಯಾಟಿಂಗ್‌ನಲ್ಲಿ ಅವರು ಕೀರನ್ ಪೊಲಾರ್ಡ್‌ ಮತ್ತು ಶಿಮ್ರೊನ್ ಹೆಟ್ಮೆಯರ್ ಅವರನ್ನೇ ಹೆಚ್ಚು ನೆಚ್ಚಿಕೊಳ್ಳುವ ಪರಿಸ್ಥಿತಿ ಇದೆ. ಕ್ರಿಸ್‌ ಗೇಲ್ ವಿಶ್ರಾಂತಿ ಪಡೆದಿದ್ದಾರೆ. ಆ್ಯಂಡ್ರೆ ರಸೆಲ್ ಅಲಭ್ಯರಾಗಿದ್ದಾರೆ. ನಿಕೊಲಸ್ ಪೂರನ್ ಅಮಾನತು ಶಿಕ್ಷೆ ಅನುಭವಿಸುತ್ತಿದ್ದಾರೆ. ಆದ್ದರಿಂದ ಬ್ಯಾಟಿಂಗ್ ವಿಭಾಗ ದುರ್ಬಲವಾಗಿದೆ. ಭುವನೇಶ್ವರ್ ಕುಮಾರ್ ಮರಳಿರುವುದರಿಂದ ಬಲ ಹೆಚ್ಚಿಸಿಕೊಂಡಿರುವ ಭಾರತ ತಂಡದ ಬೌಲಿಂಗ್ ದಾಳಿಯನ್ನು ಎದುರಿಸುವುದು  ಬ್ಯಾಟ್ಸ್‌ಮನ್‌ಗಳಿಗೆ ಕಷ್ಟವಾಗುವ ಸಾಧ್ಯತೆ ಇದೆ.

ಹೋದ ತಿಂಗಳು ಲಖನೌನಲ್ಲಿ  ನಡೆದಿದ್ದ  ಅಫ್ಗಾನಿಸ್ತಾನ ವಿರುದ್ಧದ ಟ್ವೆಂಟಿ–20 ಟೂರ್ನಿಯಲ್ಲಿ ವೆಸ್ಟ್ ಇಂಡೀಸ್ ತಂಡವು 1–2 ರಿಂದ ಸೋತಿತ್ತು. ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅಂಬೆಗಾಲಿಡುತ್ತಿರುವ ಅಫ್ಗನ್ ತಂಡದ ಎದುರು ಕಳಪೆ ಆಟವಾಡಿ ಸೋತ ವಿಂಡೀಸ್ ಭಾರತದ ಎದುರು ಚೇತರಿಸಿಕೊಳ್ಳುವ ಛಲದಲ್ಲಿದೆ.

 

400 ಸಿಕ್ಸರ್‌ಗಳ ಹೊಸ್ತಿಲಲ್ಲಿ ರೋಹಿತ್

ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಸಿಕ್ಸರ್‌ಗಳನ್ನು ಗಳಿಸಿದ ದಾಖಲೆಯೊಂದನ್ನು ಬರೆಯಲು ಭಾರತದ ‘ಹಿಟ್‌ಮ್ಯಾನ್‌’ ರೋಹಿತ್ ಶರ್ಮಾ ಸಿದ್ಧರಾಗಿದ್ದಾರೆ.

ಅವರು ಇನ್ನೊಂದು ಸಿಕ್ಸರ್‌ ಹೊಡೆದರೆ ಒಟ್ಟು 400 ಸಿಕ್ಸ್‌ರಗಳನ್ನು ಗಳಿಸಿದ ವಿಶ್ವದ ಮೂರನೇ ಬ್ಯಾಟ್ಸ್‌ಮನ್ ಹಾಗೂ ಭಾರತದ ಮೊದಲ ಆಟಗಾರನಾಗಲಿದ್ಧಾರೆ. ಅವರು ಟೆಸ್ಟ್ ಕ್ರಿಕೆಟ್‌ನಲ್ಲಿ 52, ಏಕದಿನ ಪಂದ್ಯಗಳಲ್ಲಿ 232 ಮತ್ತು ಟಿ20ಯಲ್ಲಿ 115 ಸಿಕ್ಸರ್‌ಗಳನ್ನು ಸಿಡಿಸಿದ್ದಾರೆ. ಶುಕ್ರವಾರ ನಡೆಯಲಿರುವ ಟಿ20 ಪಂದ್ಯದಲ್ಲಿ ಅವರು ಒಂದು ಸಿಕ್ಸರ್ ಸಿಡಿಸಿ ದಾಖಲೆ ಬರೆಯುವ ನಿರೀಕ್ಷೆ ಇದೆ.

ವಿರಾಟ್ ಕೊಹ್ಲಿ ಇದುವರೆಗೆ ಒಟ್ಟು199 ಸಿಕ್ಸರ್‌ ದಾಖಲಿಸಿದ್ಧಾರೆ. ಇನ್ನೊಂದು ಹೊಡೆದರೆ ಸಿಕ್ಸರ್‌ಗಳ ದ್ವಿಶತಕ ಅವರದ್ದಾಗಲಿದೆ. ಸಚಿನ್ ತೆಂಡೂಲ್ಕರ್ (264), ಸೌರವ್ ಗಂಗೂಲಿ (247), ವೀರೇಂದ್ರ ಸೆಹ್ವಾಗ್ (243) ಮತ್ತು ಯುವರಾಜ್ ಸಿಂಗ್ (251) ಅವರ ನಂತರ ಇನ್ನೂರು ದಾಟಿದ ಭಾರತೀಯ ಬ್ಯಾಟ್ಸ್‌ಮನ್ ಆಗಲಿದ್ದಾರೆ.

ಈ ಪಟ್ಟಿಯ ಮೊದಲ ಸ್ಥಾನದಲ್ಲಿ ವಿಂಡೀಸ್‌ನ ಕ್ರಿಸ್‌ ಗೇಲ್ (534) ಮತ್ತು ಎರಡನೇ ಸ್ಥಾನದಲ್ಲಿ ಶಾಹೀದ್ ಆಫ್ರಿದಿ (476) ಇದ್ದಾರೆ.

ಈ ಪಂದ್ಯದಲ್ಲಿ ನೋಬಾಲ್ ಅಂಪೈರ್!

ಹೈದರಾಬಾದ್ ಪಂದ್ಯವು ‘ನೋಬಾಲ್ ಅಂಪೈರ್‌’ ಪ್ರಯೋಗಕ್ಕೆ ವೇದಿಕೆಯಾಗಲಿದೆ. ಅಂತರರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ) ಅಳವಡಿಸಿಕೊಂಡಿರುವ ನೂತನ ತಂತ್ರಜ್ಞಾನದ ಮೂಲಕ ಮೂರನೇ ಅಂಪೈರ್ ಅಗಿರುವವರೇ ನೋಬಾಲ್ ನಿರ್ಧಾರಗಳನ್ನು ನೀಡಲಿದ್ದಾರೆ.

ಬೌಲರ್‌ಗಳ ಓವರ್ ಸ್ಟೆಪ್‌ಗಳ ಮೇಲೆ ನಿಗಾ ಇಡಲಿರುವ ಮೂರನೇ ಅಂಪೈರ್ ನಿರ್ಧಾರವೇ ಅಂತಿಮವಾಗಲಿದೆ. ಆನ್‌ಫೀಲ್ಡ್‌ ಅಂಪೈರ್ ಕೂಡ ಮೂರನೇ ಅಂಪೈರ್‌ ಅವರನ್ನು ಸಂಪರ್ಕಿಸಿ ತೀರ್ಪು ನೀಡಬೇಕು ಎಂಬ ನಿಯಮ ಇದೆ.

ಅಫ್ಗನ್ ತಂಡದ ಎದುರು ಸರಣಿ ಸೋತಿದ್ದ ವೆಸ್ಟ್ ಇಂಡೀಸ್

ಕ್ರಿಸ್ ಗೇಲ್, ನಿಕೋಲಸ್ ಪೂರನ್ ಅಲಭ್ಯ

ಸರಣಿಯಲ್ಲಿ ನಡೆಯಲಿರುವ ಮೂರು ಟಿ20 ಪಂದ್ಯಗಳು

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು