ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IPL-2020: ‘ಇಲ್ಲಿಂದಾಚೆಗೆ ದೇವರ ಆಟ’; ಪ್ಲೇ ಆಫ್ ಸ್ಥಾನದ ಬಗ್ಗೆ ಮಾರ್ಗನ್ ಹೇಳಿಕೆ

Last Updated 2 ನವೆಂಬರ್ 2020, 12:14 IST
ಅಕ್ಷರ ಗಾತ್ರ

ದುಬೈ: ಕೋಲ್ಕತ್ತ ನೈಟ್‌ರೈಡರ್ಸ್‌ ತಂಡ ಲೀಗ್‌ ಹಂತದಲ್ಲಿ ಆಡಿರುವ 14 ಪಂದ್ಯಗಳಿಂದ 7 ಜಯ ಸಾಧಿಸಿ ಪಾಯಿಂಟ್ಸ್‌ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿ ಉಳಿದಿದೆ. 9 ಪಂದ್ಯಗಳಲ್ಲಿ ಗೆದ್ದು 18 ಅಂಕಗಳನ್ನು ಹೊಂದಿರುವ ಮುಂಬೈ ಇಂಡಿಯನ್ಸ್‌ ಅಗ್ರಸ್ಥಾನದಲ್ಲಿದ್ದು, ಕೆಕೆಆರ್‌ನಂತೆಯೇ 7 ಪಂದ್ಯಗಳಲ್ಲಿ ಗೆಲುವು ಸಾಧಿಸಿರುವ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (14 ಅಂಕ) ಮತ್ತು ಡೆಲ್ಲಿ ಕ್ಯಾಪಿಟಲ್ಸ್ (14 ಅಂಕ) ತಂಡಗಳು ರನ್‌ರೇಟ್ ಆಧಾರದಲ್ಲಿ ಕ್ರಮವಾಗಿ 2, 3ನೇ ಸ್ಥಾನಗಳಲ್ಲಿವೆ.

ಸನ್‌ರೈಸರ್ಸ್‌ ಹೈದರಾಬಾದ್‌ ತಂಡ ಕೇವಲ 6 ಜಯಗಳೊಂದಿಗೆ 5ನೇ ಸ್ಥಾನದಲ್ಲಿದೆಯಾದರೂ ಈ ತಂಡದ ರನ್‌ ರೇಟ್‌, ಆರ್‌ಸಿಬಿ, ಡಿಸಿ ಮತ್ತು ಕೆಕೆಆರ್‌ಗಿಂತ ಉತ್ತಮವಾಗಿದೆ.

ಇಂದು ಕ್ಯಾಪಿಟಲ್ಸ್ ಮತ್ತು ಆರ್‌ಸಿಬಿ ಮುಖಾಮುಖಿಯಾಗಲಿದ್ದು, ಗೆಲ್ಲುವ ತಂಡ ಪಾಯಿಂಟ್ಸ್‌ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರಲಿದೆ. ಸೋಲುವ ತಂಡ ಕಡಿಮೆ ಅಂತರದಿಂದ ಸೋತರೂ ಪ್ಲೇ ಆಫ್‌ ಸ್ಥಾನವನ್ನು ಖಚಿತಪಡಿಸಿಕೊಳ್ಳಲಿದೆ. ಒಂದುವೇಳೆ ಡೆಲ್ಲಿ ಅಥವಾ ಆರ್‌ಸಿಬಿ ದೊಡ್ಡ ಅಂತರದ ಸೋಲು ಕಂಡರೆ, ಮಂಗಳವಾರ ನಡೆಯುವ ಪಂದ್ಯದ ಫಲಿತಾಂಶ ಮುಖ್ಯವಾಗುತ್ತದೆ. ಮುಂಬೈ ವಿರುದ್ಧದ ಆ ಪಂದ್ಯದಲ್ಲಿ ಸನ್‌ರೈಸರ್ಸ್‌ ಗೆಲುವು ಸಾಧಿಸಿದರೆ, ಇಂದಿನ ಪಂದ್ಯದ ನಂತರ ಪಾಯಿಂಟ್ಸ್ ಪಟ್ಟಿಯಲ್ಲಿ 4ನೇ ಸ್ಥಾನದಲ್ಲಿ ಉಳಿಯುವ ತಂಡ ಟೂರ್ನಿಯಿಂದ ಹೊರಬೀಳಬೇಕಾಗುತ್ತದೆ.

ಕೆಕೆಆರ್‌ ತಂಡದ ನಾಯಕ ಎಯಾನ್ ಮಾರ್ಗನ್‌ ಈ ಲೆಕ್ಕಾಚಾರದ ಬಗ್ಗೆ ಮಾತನಾಡಿದ್ದು, ಇಲ್ಲಿಂದಾಚೆಗೆ ಏನೇಆದರೂ ಅದು ದೇವರಿಗೆ ಸೇರಿದ್ದು ಎಂದಿದ್ದಾರೆ.

ಭಾನುವಾರ ಕೆಕೆಆರ್ ತಂಡ ರಾಜಸ್ಥಾನ ರಾಯಲ್ಸ್‌ ವಿರುದ್ಧ 60 ರನ್ ಅಂತರದ ಜಯ ಸಾಧಿಸಿತ್ತು, ಮೊದಲು ಬ್ಯಾಟಿಂಗ್‌ ಮಾಡಿದ್ದ ಕೆಕೆಆರ್ 191 ರನ್‌ಗಳ ಸವಾಲಿನ ಮೊತ್ತ ಕಲೆಹಾಕಿತ್ತು. ಈ ಗುರಿ ಎದುರು ರಾಯಲ್ಸ್‌ 9 ವಿಕೆಟ್‌ಗಳನ್ನು ಕಳೆದುಕೊಂಡು ಕೇವಲ 131 ರನ್‌ ಗಳಿಸಲಷ್ಟೇ ಶಕ್ತವಾಯಿತು. ಒಂದುವೇಳೆ ಈ ಪಂದ್ಯದಲ್ಲಿ ರಾಯಲ್ಸ್‌ ಪಡೆಯನ್ನು 110 ರನ್‌ಗಳಿಗೆ ನಿಯಂತ್ರಿಸಿದ್ದರೆ, ಪಾಯಿಂಟ್ಸ್‌ ಪಟ್ಟಿಯಲ್ಲಿ ರನ್‌ರೇಟ್‌ ಆಧಾರದಲ್ಲಿ 2ನೇ ಸ್ಥಾನಕ್ಕೇರುವ ಮೂಲಕ ಪ್ಲೇ ಆಫ್‌ ಸ್ಥಾನ ಖಚಿತಪಡಿಸಿಕೊಳ್ಳುವ ಅವಕಾಶ ಕೆಕೆಆರ್‌ಗೆ ಇತ್ತು. ಆದರೆ ಅದು ಸಾಧ್ಯವಾಗಲಿಲ್ಲ.

ಈ ಕುರಿತು ಪಂದ್ಯದ ಬಳಿಕ ಮಾತನಾಡಿದ ಮಾರ್ಗನ್‌, ‘ಹೌದು. ನನಗೆ ರನ್‌ರೇಟ್ ಬಗ್ಗೆ ಅರಿವಿತ್ತು. ಆದರೆ, ಮೊದಲು ನಾವು ನಮ್ಮ ತಂಡವನ್ನು ಗೆಲ್ಲುವ ಸ್ಥಿತಿಗೆ ತಂದು ನಿಲ್ಲಿಸಬೇಕಿತ್ತು. ನಾವು ಈ ದಿನ ಇದಕ್ಕಿಂತಲೂ ಹೆಚ್ಚಿನದನ್ನು ಮಾಡಲು ಸಾಧ್ಯವಿತ್ತು ಎಂದು ನನಗನಿಸುತ್ತಿಲ್ಲ. ಇಲ್ಲಿಂದಾಚೆಗೆ ಏನೇ ಆದರೂ ಅದು ದೇವರಿಗೆ ಬಿಟ್ಟದ್ದು’ ಎಂದು ತಿಳಿಸಿದ್ದಾರೆ.

ಮಾರ್ಗನ್‌ ಈ ಪಂದ್ಯದಲ್ಲಿ ಕೇವಲ 35 ಎಸೆತಗಳನ್ನು ಎದುರಿಸಿ 5 ಬೌಂಡರಿ ಮತ್ತು 6 ಸಿಕ್ಸರ್ ಸಹಿತ ಅಜೇಯ 68 ರನ್ ಬಾರಿಸಿದ್ದರು.

‘ನಾವು ಇದು ಸಾಧಾರಣ ಪಿಚ್‌ ಎಂದು ಭಾವಿಸಿದ್ದೆವು. ಆದರೆ, ಔಟಾಗಿ ಬಂದ ಪ್ರತಿಯೊಬ್ಬ ಬ್ಯಾಟ್ಸ್‌ಮನ್‌,ಪಿಚ್‌ ರನ್‌ ಗಳಿಸಲು ಉತ್ತಮವಾಗಿದೆ ಎಂದು ಹೇಳಿದ್ದರು. ನಾವು 10–15 ಓವರ್‌ಗಳಲ್ಲಿ ವಿಕೆಟ್‌ಗಳನ್ನು ಕಳೆದುಕೊಂಡರೂ ಮುಕ್ತಾಯ ಮಾಡಿದ ರೀತಿ ತುಂಬಾ ಚೆನ್ನಾಗಿತ್ತು’ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT