ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IPL 2024: ಚೊಚ್ಚಲ ಪಂದ್ಯದಲ್ಲೇ ಮೆಕ್‌ಗುರ್ಕ್ ಫಿಫ್ಟಿ; ಕುಲದೀಪ್, ಪಂತ್ ಮಿಂಚು

Published 13 ಏಪ್ರಿಲ್ 2024, 2:34 IST
Last Updated 13 ಏಪ್ರಿಲ್ 2024, 2:34 IST
ಅಕ್ಷರ ಗಾತ್ರ

ಲಖನೌ: ಕುಲದೀಪ್ ಯಾದವ್ ಕೈಚಳಕ (20ಕ್ಕೆ 3 ವಿಕೆಟ್) ಹಾಗೂ ಚೊಚ್ಚಲ ಪಂದ್ಯ ಆಡಿದ ಜೇಕ್‌ ಫ್ರೇಸರ್‌ ಮೆಕ್‌ಗುರ್ಕ್ ಬಿರುಸಿನ ಅರ್ಧಶತಕದ (55) ನೆರವಿನಿಂದ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಶುಕ್ರವಾರ ನಡೆದ ಐಪಿಎಲ್ ಪಂದ್ಯದಲ್ಲಿ ಲಖನೌ ಸೂಪರ್ ಜೈಂಟ್ಸ್ ವಿರುದ್ಧ ಆರು ವಿಕೆಟ್ ಅಂತರದ ಗೆಲುವು ಸಾಧಿಸಿತು.

ನಾಯಕ ರಿಷಬ್ ಪಂತ್ ಸಹ 41 ರನ್‌ಗಳ ಉಪಯುಕ್ತ ಕಾಣಿಕೆ ನೀಡಿದರು. 168 ರನ್‌ಗಳ ಗುರಿ ಬೆನ್ನಟ್ಟಿದ ಡೆಲ್ಲಿ ಇನ್ನೂ 11 ಎಸೆತಗಳು ಬಾಕಿ ಉಳಿದಿರುವಂತೆಯೇ ನಾಲ್ಕು ವಿಕೆಟ್ ನಷ್ಟಕ್ಕೆ ಗುರಿ ತಲುಪಿತು. ಇದರೊಂದಿಗೆ ಆಯುಷ್‌ ಬಡೋನಿ (55*) ಹೋರಾಟವು ವ್ಯರ್ಥವೆನಿಸಿತು.

ಲಖನೌದ ಏಕನಾ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದ ಹೈಲೈಟ್ಸ್ ಇಲ್ಲಿದೆ...

ಚೊಚ್ಚಲ ಪಂದ್ಯದಲ್ಲಿ ಮೆಕ್‌ಗುರ್ಕ್ ಮಿಂಚು...

ಚೊಚ್ಚಲ ಐಪಿಎಲ್ ಪಂದ್ಯವನ್ನು ಆಡಿದ ಆಸ್ಟ್ರೇಲಿಯಾ ಮೂಲದ 22 ವರ್ಷದ ಯುವ ಬ್ಯಾಟರ್ ಜೇಕ್‌ ಫ್ರೇಸರ್‌ ಮೆಕ್‌ಗುರ್ಕ್ ಕೇವಲ 31 ಎಸೆತಗಳಲ್ಲಿ ಅರ್ಧಶತಕದ ಸಾಧನೆ ಮಾಡಿದರು. ಐದು ಸಿಕ್ಸರ್‌ ಹಾಗೂ ಎರಡು ಬೌಂಡರಿ ಸಿಡಿಸಿದ ಮೆಕ್‌ಗುರ್ಕ್ ಅಂತಿಮವಾಗಿ 35 ಎಸೆತಗಳಲ್ಲಿ 55 ರನ್ ಗಳಿಸಿ ಔಟ್ ಆದರು.

ಪಂತ್ ನಾಯಕನ ಆಟ, ಪೃಥ್ವಿ ಶಾ ಸ್ಫೋಟಕ ಆರಂಭ...

ಡೇವಿಡ್ ವಾರ್ನರ್ (8) ವೈಫಲ್ಯ ಅನುಭವಿಸಿದರೂ ಮತ್ತೊಂದು ತುದಿಯಿಂದ ಪೃಥ್ವಿ ಶಾ (32 ರನ್, 22 ಎಸೆತ) ಬಿರುಸಿನ ಆಟವಾಡುವ ಮೂಲಕ ಗಮನ ಸೆಳೆದರು. ನಾಲ್ಕನೇ ಕ್ರಮಾಂಕದಲ್ಲಿ ಕ್ರೀಸಿಗಿಳಿದ ನಾಯಕ ರಿಷಭ್ ಪಂತ್, 24 ಎಸೆತಗಳಲ್ಲಿ 41 ರನ್ (4 ಬೌಂಡರಿ, 2 ಸಿಕ್ಸರ್) ಗಳಿಸಿದರು. ಅಲ್ಲದೆ ಮೆಕ್‌ಗುರ್ಕ್ ಜೊತೆ ಮೂರನೇ ವಿಕೆಟ್‌ಗೆ 77 ರನ್‌ಗಳ ಜೊತೆಯಾಟದಲ್ಲಿ ಭಾಗಿಯಾದರು.

ಬಳಿಕ ಕ್ರೀಸಿಗಿಳಿದ ಟ್ರಿಸ್ಟನ್ ಸ್ಟಬ್ಸ್ (15*) ಹಾಗೂ ಶಾಯ್ ಹೋಪ್ (11*) ತಂಡದ ಗೆಲುವನ್ನು ಸುಲಭಗೊಳಿಸಿದರು. ಲಖನೌ ಪರ ರವಿ ಬಿಷ್ಣೋಯಿ ಎರಡು ವಿಕೆಟ್ ಗಳಿಸಿದರು.

ಬಡೋನಿ ಹೋರಾಟ ವ್ಯರ್ಥ, ಕುಲದೀಪ್‌ಗೆ ಮೂರು ವಿಕೆಟ್...

ಈ ಮೊದಲು ಲಖನೌ ಸೂಪರ್ ಜೈಂಟ್ಸ್ ನಾಯಕ ಕೆ.ಎಲ್. ರಾಹುಲ್ (39 ರನ್, 22 ಎಸೆತ) ಬಿರುಸಿನ ಆರಂಭವೊದಗಿಸಿದರು. ಇದರ ಪ್ರಯೋಜನ ಪಡೆಯಲು ಇತರೆ ಬ್ಯಾಟರ್‌ಗಳಿಗೆ ಸಾಧ್ಯವಾಗಲಿಲ್ಲ. ಕ್ವಿಂಟನ್ ಡಿ ಕಾಕ್ (19), ದೇವದತ್ತ ಪಡಿಕ್ಕಲ್ (3), ಮಾರ್ಕಸ್ ಸ್ಟೋಯಿನಿಸ್ (8), ನಿಕೋಲಸ್ ಪೂರನ್ (0) ಹಾಗೂ ದೀಪಕ್ ಹೂಡಾ ವೈಫಲ್ಯ ಅನುಭವಿಸಿದರು.

ಈ ಹಂತದಲ್ಲಿ ಏಳನೇ ಕ್ರಮಾಂಕದಲ್ಲಿ ಕ್ರೀಸಿಗಿಳಿದ ಬಡೋನಿ, 35 ಎಸೆತಗಳಲ್ಲಿ 55 ರನ್ ಗಳಿಸುವ ಮೂಲಕ ಲಖನೌ ತಂಡ ಸವಾಲಿನ ಮೊತ್ತ ಪೇರಿಸಲು ನೆರವಾದರು. ಬಡೋನಿ ಇನಿಂಗ್ಸ್‌ನಲ್ಲಿ ಐದು ಬೌಂಡರಿ ಹಾಗೂ ಒಂದು ಸಿಕ್ಸರ್ ಸೇರಿತ್ತು. ಲಖನೌ ಓಟಕ್ಕೆ ಕುಲದೀಪ್ ಯಾದವ್ ಕಡಿವಾಣ ಹಾಕಿದರು. ಕೇವಲ 20 ರನ್ ನೀಡಿ ಮೂರು ವಿಕೆಟ್ ಗಳಿಸಿ ಮಿಂಚಿದರು.

ಮೊದಲ ಬಾರಿ 160+ ಗಳಿಸಿಯೂ ಲಖನೌಗೆ ಸೋಲು...

ಇದರೊಂದಿಗೆ 160ಕ್ಕಿಂತ ಹೆಚ್ಚು ರನ್ ಗಳಿಸಿದಾಗಲೆಲ್ಲಾ ಆ ಮೊತ್ತವನ್ನು ರಕ್ಷಿಸುತ್ತಿದ್ದ ಲಖನೌ ತಂಡದ ದಾಖಲೆಯೂ ಕೊನೆಗೊಂಡಿತು. 14 ಪಂದ್ಯಗಳಲ್ಲಿ ಮೊದಲ ಬಾರಿ 160+ ಮೊತ್ತ ರಕ್ಷಿಸಲು ಕೆ.ಎಲ್‌.ರಾಹುಲ್ ಬಳಗ ವಿಫಲವಾಯಿತು.

ಡೆಲ್ಲಿಗೆ ಎರಡನೇ ಗೆಲುವು...

ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಆರು ಪಂದ್ಯಗಳಲ್ಲಿ ಎರಡನೇ ಗೆಲುವು ದಾಖಲಿಸಿರುವ ಡೆಲ್ಲಿ, ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಿಂದ 9ನೇ ಸ್ಥಾನಕ್ಕೇರಿತು. ಮತ್ತೊಂದೆಡೆ ಐದು ಪಂದ್ಯಗಳಲ್ಲಿ ಮೂರು ಜಯ ಗಳಿಸಿರುವ ಲಖನೌ, ನಾಲ್ಕನೇ ಸ್ಥಾನದಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT