ಸೋಮವಾರ, ನವೆಂಬರ್ 30, 2020
24 °C
ಭವಿಷ್ಯದ ಕ್ರಿಕೆಟ್‌ಗೆ ದಿಕ್ಸೂಚಿ

ಆಳ-ಅಗಲ| ‘ಬಯೋ ಬಬಲ್’ನಲ್ಲಿ ಗೆದ್ದ ಕ್ರಿಕೆಟ್

ಗಿರೀಶ ದೊಡ್ಡಮನಿ Updated:

ಅಕ್ಷರ ಗಾತ್ರ : | |

Prajavani

ಕೊರೊನಾ ಕಾಲದಲ್ಲಿ ನಡೆಯುತ್ತಿರುವ ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿಯ ಲೀಗ್ ಹಂತ ಮುಗಿದಿದೆ. ಗುರುವಾರದಿಂದ ಪ್ಲೇ ಆಫ್ ಆರಂಭವಾಗಲಿದೆ. ಕಳೆದ ಒಂದೂವರೆ ತಿಂಗಳಲ್ಲಿ 56 ಪಂದ್ಯಗಳು ನಡೆದಿವೆ. ಪ್ರತಿ ದಿನವೂ ವಿಶ್ವದಾದ್ಯಂತ ಒಂದು ಕೋಟಿಗೂ ಹೆಚ್ಚು ಜನರು ವೀಕ್ಷಿಸುತ್ತಿದ್ದಾರೆಂದು ಅಧಿಕೃತ ಪ್ರಸಾರಕರ ಸಮೀಕ್ಷೆ ಹೇಳಿದೆ. ಖಾಲಿ ಕ್ರೀಡಾಂಗಣ ಮತ್ತು ಬಯೋ ಬಬಲ್‌ ನಲ್ಲಿ ನಡೆಯುತ್ತಿರುವ ಈ ಟೂರ್ನಿ ಯಶಸ್ಸು ಭವಿಷ್ಯದ ಕ್ರಿಕೆಟ್‌ಗೆ ದಿಕ್ಸೂಚಿ ಆಗಲಿದೆಯೇ?

ಅಬುಧಾಬಿಯ ಶೇಖ್ ಝಯೇದ್ ಕ್ರೀಡಾಂಗಣದಲ್ಲಿ ನಲ್ವತ್ತಾರು ದಿನಗಳ ಹಿಂದೆ ಬಿಳಿ ಚೆಂಡು ಪುಟಿದಾಗ ಕ್ರಿಕೆಟ್ ವಲಯದಲ್ಲಿ ಹಲವು ಆತಂಕಗಳು ಇದ್ದವು. ಆದರೆ ದಿನಗಳೆದಂತೆ ಇಂಡಿಯನ್ ಪ್ರೀಮಿಯರ್ ಲೀಗ್‌ ಕ್ರಿಕೆಟ್‌ ಟೂರ್ನಿಯ ರಂಗು ಮೇಲುಗೈ ಸಾಧಿಸಿತು. ಬ್ಯಾಟ್ಸ್‌ಮನ್‌ಗಳು ಸಿಡಿಸಿದ ಸಿಕ್ಸರ್‌ಗಳ ಜೊತೆಗೆ ಆತಂಕಗಳೂ ಬೌಂಡರಿಯಾಚೆಗೆ ಹೋಗಿ ಬಿದ್ದವು. 

‘ಬಯೋ ಬಬಲ್ (ಜೀವ ಸುರಕ್ಷಾ ವ್ಯವಸ್ಥೆ) ಎಂಬ ಕಣ್ಣಿಗೆ ಕಾಣದ ಪಾರದರ್ಶಕ ಪುಗ್ಗೆಯೊಳಗೆ ನಡೆಯುತ್ತಿರುವ ಈ ಮೊಟ್ಟಮೊದಲ ಟೂರ್ನಿಯಲ್ಲಿ ಕೆಲವು ಆಟಗಾರರು ಸಫಲತೆಯ ಉತ್ತುಂಗ ಮುಟ್ಟಿದರೆ, ಇನ್ನೂ ಕೆಲವರು ಅಲ್ಪಸ್ವಲ್ಪ ಯಶಸ್ಸು ಕಂಡರು, ಕೆಲವರು ನೆಲಕಚ್ಚಿದರು. ಆದರೆ, ಕ್ರಿಕೆಟ್‌ ಗೆದ್ದಿತು. ಮನರಂಜನೆಯ ಮಹಾಪೂರ ಹರಿಸಿತು. ಭಾರತ ಮತ್ತು ವಿಶ್ವದ ಭವಿಷ್ಯದ ಕ್ರಿಕೆಟ್‌ ಗೆ ದಿಕ್ಸೂಚಿಯಾಯಿತು. 

ಕೊರೊನಾ ಬಿಕ್ಕಟ್ಟಿನಲ್ಲಿ ವಿಶ್ವವೇ ನಲುಗಿರುವ ಸಂದರ್ಭದಲ್ಲಿ ಕಟ್ಟುನಿಟ್ಟಿನ ಮಾರ್ಗಸೂಚಿಯನ್ನು ಪಾಲಿಸುತ್ತಲೇ ಆಟದ ಮೇಲೆ ಹಿಡಿತ ಸಾಧಿಸುವ ಕಲೆಯನ್ನು ಕರಗತಗೊಳಿಸಿಕೊಳ್ಳುವ ಅವಕಾಶವನ್ನು ಈ ಟೂರ್ನಿ ನೀಡಿತು. ಅಬುಧಾಬಿ, ದುಬೈ ಮತ್ತು ಶಾರ್ಜಾ ಕ್ರೀಡಾಂಗಣಗಳಲ್ಲಿ ಈವರೆಗೆ ನಡೆದ 56 ಪಂದ್ಯಗಳೂ ಒಂದಕ್ಕಿಂತ ಒಂದು ವಿಭಿನ್ನವಾದವು. ಪ್ಲೇ ಆಫ್‌ ಹಾದಿಯು ಯಾವ ತಂಡಕ್ಕೂ ಸುಗಮವಾಗಿರಲಿಲ್ಲ. ಕೊನೆಯ ಪಂದ್ಯದವರೆಗೂ ನಾಲ್ಕರ ಘಟ್ಟದಲ್ಲಿ ಆಡುವ ತಂಡಗಳ ನಿರ್ಧಾರವಾಗಿರಲಿಲ್ಲವೆಂದರೆ ಟೂರ್ನಿಯ ರೋಚಕತೆ ಯಾವ ಮಟ್ಟದಲ್ಲಿತ್ತು ಎಂಬುದನ್ನು ಅರ್ಥ ಮಾಡಿಕೊಳ್ಳಬಹುದು. ಆದರೆ ಟೂರ್ನಿಯ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ನಾಲ್ಕರ ಘಟ್ಟ ಪ್ರವೇಶಿಸದೇ ಹೊರಬಿದ್ದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಹಣೆಬರಹ ಈ ರೀತಿ ನಿರ್ಧಾರವಾಗಿದ್ದು ಸೋಜಿಗದ ಸಂಗತಿ. ಇದೆಲ್ಲದರ ನಡುವೆಯೂ ಹತ್ತಾರು ಭರವಸೆಗಳು ಮೂಡಿದ್ದು ಸುಳ್ಳಲ್ಲ.

ಆಸ್ಟ್ರೇಲಿಯಾದಲ್ಲಿ ಮೂಡಿದ ಉತ್ಸಾಹ

ಐರೋಪ್ಯ ದೇಶಗಳಲ್ಲಿ ಕೊರೊನಾ ವೈರಸ್‌ನ ಎರಡನೇ ಅಲೆಯ ಹೊಡೆತ ತಡೆಯಲು ಮತ್ತೆ ಲಾಕ್‌ಡೌನ್ ವಿಧಿಸಲಾಗುತ್ತಿದೆ. ಅದೇ ಅತ್ತ ಆಸ್ಟ್ರೇಲಿಯಾದಲ್ಲಿ ಕ್ರಿಕೆಟ್ ಸರಣಿಯನ್ನು ಆಯೋಜಿಸುವ ಸಿದ್ಧತೆ ನಡೆಯುತ್ತಿದೆ. ಅದಕ್ಕೆ ಕಾರಣ ವಾಗಿದ್ದು ಐಪಿಎಲ್‌ ಯಶಸ್ಸು. ಅಕ್ಟೋಬರ್‌ನಲ್ಲಿ  ನಡೆಯಬೇಕಿದ್ದ ಟಿ20 ವಿಶ್ವಕಪ್ ಟೂರ್ನಿಯನ್ನು ಮುಂದೂಡಿದ್ದ ಆಸ್ಟ್ರೇಲಿಯಾ ಈಗ ಭಾರತ ತಂಡದ ಎದುರು ಟೆಸ್ಟ್, ಏಕದಿನ ಮತ್ತು ಟ್ವೆಂಟಿ–20 ಸರಣಿಗಳನ್ನು ನಡೆಸಲು ಸಿದ್ಧತೆ ಮಾಡಿಕೊಂಡಿದೆ. ಆ ಮೂಲಕ ಕೊರೊನಾದಿಂದಾಗಿ ಅನುಭವಿಸಿದ ಆರ್ಥಿಕ ನಷ್ಟವನ್ನು ಸರಿದೂಗಿಸಿಕೊಳ್ಳುವತ್ತ ಕ್ರಿಕೆಟ್ ಆಸ್ಟ್ರೇಲಿಯಾ ಮಂಡಳಿ ಚಿತ್ತ ಹರಿಸುತ್ತಿದೆ.

ಐಪಿಎಲ್‌ಗಿಂತ ಮುನ್ನ ಇಂಗ್ಲೆಂಡ್‌ನಲ್ಲಿ ಜೀವ ಸುರಕ್ಷಾ ವಾತಾವರಣದಲ್ಲಿ ಕ್ರಿಕೆಟ್ ಸರಣಿಗಳನ್ನು ನಡೆಸಲಾಗಿತ್ತು. ಅದರಲ್ಲಿ ಆಡಿದ್ದ ಜೋಫ್ರಾ ಆರ್ಚರ್, ಜಾನಿ ಬೆಸ್ಟೊ, ಜೋಸ್ ಬಟ್ಲರ್, ಬೆನ್ ಸ್ಟೋಕ್ಸ್‌, ವೆಸ್ಟ್ ಇಂಡೀಸ್‌ನ ಜೇಸನ್ ಹೋಲ್ಡರ್, ಆಸ್ಟ್ರೇಲಿಯಾದ ಡೇವಿಡ್ ವಾರ್ನರ್ ಸೇರಿದಂತೆ ಇನ್ನೂ ಕೆಲವು ಆಟಗಾರರಿಗೆ ಯುಎಇಯಲ್ಲಿ ಹೆಚ್ಚು ತೊಂದರೆಯಾಗಲಿಲ್ಲ. ಆದರೆ ನ್ಯೂಜಿಲೆಂಡ್, ಶ್ರೀಲಂಕಾ ಮತ್ತು ಭಾರತದ ಆಟಗಾರರಿಗೆ ಇದು ಸವಾಲಾಗಿತ್ತು. ಅದರಲ್ಲಿ ಅವರೆಲ್ಲರೂ ಬಹುತೇಕ ಗೆಲುವು ಸಾಧಿಸಿದ್ದಾರೆ. ಅದರಿಂದಾಗಿಯೇ ವಿರಾಟ್ ಕೊಹ್ಲಿ ಬಳಗವು ಆಸ್ಟ್ರೇಲಿಯಾದಲ್ಲಿ ಕಣಕ್ಕಿಳಿಯುವ ಆತ್ಮವಿಶ್ವಾಸ ಬೆಳೆಸಿಕೊಂಡಿದೆ. ಅಲ್ಲಿ ಒಟ್ಟು 87 ದಿನಗಳ ಜೀವ ಸುರಕ್ಷಾ ವಾತಾವರಣದಲ್ಲಿ ಇದ್ದು ಆಡುವ ಸವಾಲು ಅವರ ಮುಂದಿದೆ. 

ಯುಎಇಯಲ್ಲಿ ಮೂರು ಕ್ರೀಡಾಂಗಣಗಳ ನಡುವೆ ಪ್ರಯಾಣದ ಅನುಭವ ಬೇರೆಯೇ ಇತ್ತು. ಆದರೆ, ಆಸ್ಟ್ರೇಲಿಯಾದಲ್ಲಿ ಟೆಸ್ಟ್ ಪಂದ್ಯ ನಡೆಯುವ ತಾಣಗಳಲ್ಲಿ ಸುಮಾರು 10 ರಿಂದ 15 ದಿನ ಕಾಲ ಕಳೆಯಬೇಕು. ಆ ಸವಾಲನ್ನು ನಿಭಾಯಿಸುವಲ್ಲಿ ಐಪಿಎಲ್‌ ಅನುಭವ ಯಾವ ರೀತಿ ಅನುಕೂಲವಾಗಲಿದೆ ಎಂಬುದೇ ಕುತೂಹಲದ ವಿಷಯ.

ಕುಟುಂಬದ ಸಖ್ಯ

ದೀರ್ಘ ಕಾಲದ ಪ್ರವಾಸ ಮತ್ತು ಮಾರ್ಗಸೂಚಿಗಳ ನಡುವೆ ಆಟಗಾರರು ಕುಟುಂಬದಿಂದ ದೂರ ಉಳಿಯಬೇಕಾದ ಅನಿವಾರ್ಯತೆ ಇತ್ತು. ಇಂಗ್ಲೆಂಡ್‌ನಲ್ಲಿ ನಡೆದ ಸರಣಿಗಳಲ್ಲಿ ಆಟಗಾರರ ಕುಟುಂಬದ ಸದಸ್ಯರಿಗೆ ನಿರ್ಬಂಧ ಹೇರಲಾಗಿತ್ತು. ಆದರೆ ಐಪಿಎಲ್‌  ಆಡಳಿತವು ಕುಟುಂಬದ ಸದಸ್ಯರೊಂದಿಗೆ ಪ್ರಯಾಣಿಸುವ ಅವಕಾಶ ನೀಡಿತು. ಅದರಿಂದಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ವಿರಾಟ್ ಕೊಹ್ಲಿ ತಮ್ಮ ಗರ್ಭಿಣಿ ಪತ್ನಿ ಅನುಷ್ಕಾ ಶರ್ಮಾ ಅವರೊಂದಿಗೆ ಇದ್ದಾರೆ. ಮುಂಬೈ ತಂಡದ ನಾಯಕ ರೋಹಿತ್ ಶರ್ಮಾ ತಮ್ಮ ಪತ್ನಿ ಮತ್ತು ಮಗಳನ್ನು ಕರೆದೊಯ್ದಿದ್ದಾರೆ.

ಸ್ಪಿನ್ನರ್ ಯಜುವೇಂದ್ರ ಚಾಹಲ್ ತಮ್ಮ ಭಾವಿ ಪತ್ನಿಯನ್ನೂ, ಧವಳ್ ಕುಲಕರ್ಣಿ, ಟ್ರೆಂಟ್ ಬೌಲ್ಟ್‌,  ಕೃಣಾಲ್ ಪಾಂಡ್ಯ ಅವರು ಕೂಡ ಕುಟುಂಬದ ಸದಸ್ಯರೊಂದಿಗೆ ಬೀಡು ಬಿಟ್ಟಿದ್ದಾರೆ.

ಇವೆಲ್ಲದರ ನಡುವೆ, ಸೆಪ್ಟೆಂಬರ್ 19ರಿಂದ ಇಲ್ಲಿಯವರೆಗೆ ಕೊರೊನಾ ಸೋಂಕಿನ ಯಾವುದೇ ಪ್ರಕರಣಗಳು ದಾಖಲಾಗದಿರುವುದು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯು ನಿಟ್ಟುಸಿರು ಬಿಡುವಂತಾಗಿದೆ. ಆಸ್ಟ್ರೇಲಿಯಾ ಪ್ರವಾಸಕ್ಕೂ ಕುಟುಂಬದ ಸದಸ್ಯರೊಂದಿಗೆ ತೆರಳಲು ಅವಕಾಶ ಕೊಟ್ಟಿದೆ.

ಜನವರಿಯಲ್ಲಿ ಅನುಷ್ಕಾ ಶರ್ಮಾ ಮಗುವಿಗೆ ಜನ್ಮ ನೀಡಲಿದ್ದಾರೆ. ಪತಿ ವಿರಾಟ್ ಕೊಹ್ಲಿ ಅವರು ಆ ಹೊತ್ತಿಗೆ ಆಸ್ಟೇಲಿಯಾದಲ್ಲಿರುತ್ತಾರೆ. ಅವರು ತಮ್ಮ ಚೊಚ್ಚಲ ಮಗುವನ್ನು ನೋಡಲು ಜೀವ ಸುರಕ್ಷಾ ವಲಯದಿಂದ ಹೊರಬರಬೇಕು. ಆ ಪರಿಸ್ಥಿತಿಯನ್ನು ಅವರು ಹೇಗೆ ನಿಭಾಯಿಸುತ್ತಾರೆ ಎಂಬ ಬಗ್ಗೆಯೂ ಈಗ ಕ್ರಿಕೆಟ್ ವಲಯದಲ್ಲಿ ಕೆಲವರು ಮಾತನಾಡಿಕೊಳ್ಳುತ್ತಿದ್ದಾರೆ. ಇಂತಹ ಹತ್ತಾರು ಮಾನವೀಯ ತಾಕಲಾಟಗಳನ್ನು ಕೊರೊನಾ ಕಾಲ ತಂದೊಡ್ಡಿದೆ. ಕೌಟುಂಬಿಕ ಕಾರಣಗಳಿಗಾಗಿಯೇ ಅಲ್ಲವೇ ಸುರೇಶ್ ರೈನಾ, ಹರಭಜನ್ ಸಿಂಗ್ ಅವರು ಈ ಬಾರಿಯ ಐಪಿಎಲ್ ತಪ್ಪಿಸಿಕೊಂಡಿದ್ದು.

ಕೈ ಹಿಡಿದ ‘ದೇವ’; ಬೆಳಗಿದ ರವಿ

‘ಯುವ ಆಟಗಾರರನ್ನು ಪರಿಗಣಿಸದೇ ಅನುಭವಿಗಳನ್ನೇ ನೆಚ್ಚಿಕೊಂಡದ್ದು ಚೆನ್ನೈ ಸೂಪರ್ ಕಿಂಗ್ಸ್ ತಂಡದ ಈ ಬಾರಿಯ ನೀರಸ ಪ್ರದರ್ಶನಕ್ಕೆ ಕಾರಣ...’ ಐಪಿಎಲ್‌ನಲ್ಲಿ ಇದೇ ಮೊದಲ ಬಾರಿ ಪ್ಲೇ ಆಫ್ ಹಂತಕ್ಕೆ ಏರದೇ ಹೊರಬಿದ್ದ ಸಿಎಸ್‌ಕೆ ಕುರಿತು ವೆಸ್ಟ್ ಇಂಡೀಸ್‌ನ ದಿಗ್ಗಜ ಕ್ರಿಕೆಟಿಗ, ವೀಕ್ಷಕ ವಿವರಣೆಗಾರ ಬ್ರಯನ್ ಲಾರಾ ಆಡಿದ ಮಾತು ಇದು. 


ಆರ್‌ಸಿಬಿ ಆಟಗಾರ ದೇವದತ್ತ ಪಡಿಕ್ಕಲ್‌ ಆಟದ ಸೊಬಗು 

ಈ ಹೇಳಿಕೆ ವಾಸ್ತವಕ್ಕೆ ಎಷ್ಟು ಸನಿಹ ಇದೆ ಎಂಬುದರ ಬಗ್ಗೆ ಚರ್ಚಿಸುವ ಮುನ್ನ ಈ ಬಾರಿ ಐಪಿಎಲ್‌ನಲ್ಲಿ ಯುವ ಆಟಗಾರರು, ಅದರಲ್ಲೂ ಇದೇ ಮೊದಲ ಬಾರಿ ಕಣಕ್ಕೆ ಇಳಿದವರು ಮಾಡಿರುವ ಸಾಧನೆ ಮೇಲೆ ಕಣ್ಣೋಡಿಸಿದರೆ ಅವರು ಕ್ರಿಕೆಟ್ ಲೋಕದ ಗಮನ ಸೆಳೆದದ್ದು ಕಂಡುಬರುತ್ತದೆ. ಬೆಂಗಳೂರು ತಂಡದ ದೇವದತ್ತ ಪಡಿಕ್ಕಲ್, ಜೋಶ್ ಫಿಲಿಪ್, ರಾಜಸ್ಥಾನ ರಾಯಲ್ಸ್‌ನ ರಿಯಾನ್ ಪರಾಗ್, ಯಶಸ್ವಿ ಜೈಸ್ವಾಲ್, ಚೆನ್ನೈನ ಋತುರಾಜ್ ಗಾಯಕವಾಡ್, ನಾರಾಯಣ ಜಗದೀಶನ್, ಡೆಲ್ಲಿಯ ತುಷಾರ್ ದೇಶಪಾಂಡೆ, ಪಂಜಾಬ್‌ನ ರವಿ ಬಿಷ್ಣೋಯಿ, ಹೈದರಾಬಾದ್‌ನ ಪ್ರಿಯಂ ಗರ್ಗ್, ಕೋಲ್ಕತ್ತದ ಶಿವಂ ಮಾವಿ, ಕಮಲೇಶ್ ನಾಗರಕೋಟಿ, ಶುಭಮನ್ ಗಿಲ್ ಮುಂತಾದವರು ತಂಡಗಳ ಆಡಳಿತದ ನಿರೀಕ್ಷೆಗೆ ತಕ್ಕಂತೆ ಬೆಳಗಿದ್ದಾರೆ.

ದೇವದತ್ತ ಪಡಿಕ್ಕಲ್‌ಗೆ ಇದು ಚೊಚ್ಚಲ ಟೂರ್ನಿ. 20 ವರ್ಷದ ಬೆಂಗಳೂರಿನ ಈ ಹುಡುಗ ಎಲ್ಲ 14 ಪಂದ್ಯಗಳಲ್ಲೂ ಇನಿಂಗ್ಸ್ ಆರಂಭಿಸುವ ಜವಾಬ್ದಾರಿ ನಿಭಾಯಿಸಿದ್ದಾರೆ. ಐದು ಪಂದ್ಯಗಳಲ್ಲಿ ಅರ್ಧಶತಕ ಸಿಡಿಸಿದ್ದು 33.71ರ ಸರಾಸರಿಯಲ್ಲಿ ಅವರು ಕಲೆ ಹಾಕಿರುವ ಒಟ್ಟು ರನ್ 472.

23 ವರ್ಷದ ಋತುರಾಜ್ ಗಾಯಕವಾಡ್ ಕೂಡ ಇದೇ ಮೊದಲ ಬಾರಿ ಐಪಿಎಲ್‌ನಲ್ಲಿ ಕಣಕ್ಕೆ ಇಳಿದಿದ್ದರು. ಆರು ಪಂದ್ಯಗಳಲ್ಲಿ ಮೂರು ಅರ್ಧಶತಕಗಳೊಂದಿಗೆ ಅವರು ಗಳಿಸಿದ ಒಟ್ಟು ರನ್ 204. ಚೊಚ್ಚಲ ಐಪಿಎಲ್ ಆಡಿದ 25 ವರ್ಷದ ಮಧ್ಯಮ ವೇಗಿ ತುಷಾರ್ ದೇಶಪಾಂಡೆ ಐದು ಪಂದ್ಯಗಳಲ್ಲಿ ಗಳಿಸಿದ್ದು ಮೂರೇ ವಿಕೆಟ್ ಆಗಿದ್ದರೂ ಭರವಸೆ ಮೂಡಿಸಿದ್ದಾರೆ. 20 ವರ್ಷದ ರವಿ ಬಿಷ್ಣೋಯಿ ಅವರ ಲೆಗ್ ಸ್ಪಿನ್ ಮೋಡಿಯು ಅವರಿಗೆ ಎಲ್ಲ 14 ಪಂದ್ಯಗಳಲ್ಲೂ ಅವಕಾಶ ಸಿಗುವಂತೆ ಮಾಡಿತು. 12 ವಿಕೆಟ್‌ಗಳನ್ನು ಗಳಿಸಿರುವ ಅವರು ಹೆಚ್ಚು ವಿಕೆಟ್ ಪಡೆದಿರುವ ಸ್ಪಿನ್ನರ್‌ಗಳ ಪಟ್ಟಿಯ ಐದನೇ ಸ್ಥಾನದಲ್ಲಿದ್ದಾರೆ.

20 ವರ್ಷದ ಕಮಲೇಶ್ ನಾಗರಕೋಟಿ, 21 ವರ್ಷದ ಶುಭಮನ್ ಗಿಲ್ ಮತ್ತು 22 ವರ್ಷದ ಶಿವಂ ಮಾವಿ ಈ ಬಾರಿ ಮಿಂಚಿದ್ದಾರೆ. 20 ವರ್ಷದ ರಾಹುಲ್ ಚಾಹರ್ ಮತ್ತು 23 ವರ್ಷದ ಇಶಾನ್ ಕಿಶನ್ ಮುಂಬೈ ಇಂಡಿಯನ್ಸ್‌ನ ಯಶಸ್ಸಿನಲ್ಲಿ ಗಳಿಸಿರುವ ಪಾತ್ರ ಗಮನಾರ್ಹ. ಕಿಶನ್ 12 ಪಂದ್ಯಗಳಲ್ಲಿ 428 ರನ್ ಗಳಿಸಿದ್ದರೆ 14 ಪಂದ್ಯಗಳಲ್ಲಿ 15 ವಿಕೆಟ್ ಉರುಳಿಸಿದ್ದಾರೆ. ಗೆಲುವಿನ ಸಂಭ್ರಮದಲ್ಲಿ ‘ಬಿಹು’ ನೃತ್ಯ ಮಾಡುವ 19 ವರ್ಷದ ಅಸ್ಸಾಂನ ಹುಡುಗ ರಿಯಾನ್ ಪರಾಗ್, ಅದೇ ವಯಸ್ಸಿನ ಯಶಸ್ವಿ ಜೈಸ್ವಾಲ್, ಆ್ಯರನ್ ಫಿಂಚ್ ಜಾಗ ತುಂಬಿದ ಆಸ್ಟ್ರೇಲಿಯಾದ ಜೋಶ್ ಫಿಲಿಪ್ ಬೆಂಗಳೂರು ತಂಡದ ಪ್ಲೇ ಆಫ್‌ ಹಾದಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. 19 ವರ್ಷದ ಅಬ್ದುಲ್ ಸಮದ್ ಮತ್ತು 20 ವರ್ಷದ ಪ್ರಿಯಂ ಗರ್ಗ್ ಅವರು ಸನ್‌ರೈಸರ್ಸ್ ಪರವಾಗಿ ಮಿಂಚಿದ್ದನ್ನೂ ಮರೆಯುವಂತಿಲ್ಲ.

ದಾಖಲೆಗಳು

*ಕೋಲ್ಕತ್ತ ವಿರುದ್ಧ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ಮೊಹಮ್ಮದ್‌ ಸಿರಾಜ್‌ ಎರಡು ಓವರ್‌ ಮೇಡನ್‌ ಮಾಡುವ ಮೂಲಕ ಪಂದ್ಯವೊಂದರಲ್ಲಿ ಈ ಸಾಧನೆ ಮಾಡಿದ ಮೊದಲ ಬೌಲರ್‌ ಎನಿಸಿಕೊಂಡರು.

* ಸನ್‌ರೈಸರ್ಸ್‌ ಹೈದರಾಬಾದ್‌ ತಂಡದ ರಶೀದ್‌ ಖಾನ್‌ ಶ್ರೇಷ್ಠ ಎಕಾನಮಿ ರೇಟ್‌ನಲ್ಲಿ (6.25) ಬೌಲ್‌ ಮಾಡಿದ ದಾಖಲೆ ಬರೆದಿದ್ದಾರೆ.

*ಶಾರ್ಜಾದಲ್ಲಿ ನಡೆದ ಮುಂಬೈ ವಿರುದ್ಧದ ಪಂದ್ಯದಲ್ಲಿ ಚೆನ್ನೈ ತಂಡದ ಸ್ಯಾಮ್‌ ಕರನ್‌–ಇಮ್ರಾನ್ ತಾಹೀರ್‌ 9ನೇ ವಿಕೆಟ್‌ ಜೊತೆಯಾಟದಲ್ಲಿ 43 ರನ್ ಸೇರಿಸಿದ್ದು ದಾಖಲೆ.

* ಅತಿ ಹೆಚ್ಚು ಪಂದ್ಯಗಳನ್ನು(198) ಆಡಿದ ಎರಡನೇ ಆಟಗಾರ ಎನಿಸಿಕೊಂಡ ರೋಹಿತ್‌ ಶರ್ಮಾ. ಮಹೇಂದ್ರ ಸಿಂಗ್‌ ಧೋನಿ (204) ಅವರಿಗೆ ಈ ಪಟ್ಟಿಯಲ್ಲಿ ಮೊದಲ ಸ್ಥಾನ.

* ಐಪಿಎಲ್‌ನಲ್ಲಿ ಅತಿ ಹೆಚ್ಚು ಅರ್ಧಶತಕ (48) ಗಳಿಸಿದ ಡೇವಿಡ್‌ ವಾರ್ನರ್‌.

***

ಇನ್ನು ಕೆಲವೇ ದಿನಗಳಲ್ಲಿ ಕೊರೊನಾ ತಡೆಗೆ ಲಸಿಕೆ ಬರುವ ನಿರೀಕ್ಷೆ ಇದೆ. ಹಾಗೇನಾದರೂ ಆದರೆ, ಮುಂದಿನ ಐಪಿಎಲ್ ಭಾರತದಲ್ಲಿ ನಡೆಯುವುದು. ಅದಕ್ಕೂ ಮುನ್ನ ಹರಾಜು ಪ್ರಕ್ರಿಯೆ ನಡೆಯಲಿದೆ. ಯುಎಇಯ ಐಪಿಎಲ್ ಅಭೂತಪೂರ್ವವಾಗಿ ಸಫಲವಾಗಿದೆ.

–ಸೌರವ್ ಗಂಗೂಲಿ

***

ವರದಿ: ಗಿರೀಶ ದೊಡ್ಡಮನಿ, ವಿಕ್ರಂ ಕಾಂತಿಕೆರೆ, ಬಸವರಾಜ ದಳವಾಯಿ

ಚಿತ್ರಗಳು: ಪಿಟಿಐ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು