ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IPL-2022 | ನಿಯಮ ಉಲ್ಲಂಘನೆ: ನಿತೀಶ್‌ಗೆ ದಂಡ, ಬೂಮ್ರಾಗೆ ಎಚ್ಚರಿಕೆ

Last Updated 7 ಏಪ್ರಿಲ್ 2022, 16:11 IST
ಅಕ್ಷರ ಗಾತ್ರ

ಕೋಲ್ಕತ್ತ ನೈಟ್‌ರೈಡರ್ಸ್‌ ತಂಡದ ಪ್ರಮುಖ ಬ್ಯಾಟರ್ ನಿತೀಶ್ ರಾಣಾ ಮತ್ತು ಮುಂಬೈ ಇಂಡಿಯನ್ಸ್‌ನ ಪ್ರಮುಖ ವೇಗಿ ಜಸ್‌ಪ್ರೀತ್‌ ಬೂಮ್ರಾ ಅವರು ಐಪಿಎಲ್‌–2022 ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ. ರಾಣಾ ಅವರಿಗೆ ದಂಡ ವಿಧಿಸಲಾಗಿದ್ದು, ಬೂಮ್ರಾಗೆ ಎಚ್ಚರಿಕೆ ನೀಡಲಾಗಿದೆ ಎಂದು ವರದಿಯಾಗಿದೆ.

ಪುಣೆಯಲ್ಲಿರುವ ಮಹಾರಾಷ್ಟ್ರ ಕ್ರಿಕೆಟ್‌ ಸಂಸ್ಥೆ ಕ್ರೀಡಾಂಗಣದಲ್ಲಿ ಕೋಲ್ಕತ್ತ ಮತ್ತು ಮುಂಬೈ ತಂಡಗಳು ಬುಧವಾರ ಸೆಣಸಾಟ ನಡೆಸಿದ್ದವು. ಪಂದ್ಯದ ವೇಳೆ ಉಭಯ ತಂಡಗಳ ಈ ಆಟಗಾರರು ನಿಯಮ ಉಲ್ಲಂಘಿಸಿದ್ದರು. ರಾಣಾ ಅವರಿಗೆ ದಂಡ ವಿಧಿಸಿರುವುದು ಮತ್ತು ಬೂಮ್ರಾಗೆ ಎಚ್ಚರಿಕೆ ನೀಡಿರುವ ಬಗ್ಗೆ ಐಪಿಎಲ್‌ ಅಧಿಕೃತ ಹೇಳಿಕೆ ಪ್ರಕಟಿಸಿದೆ. ಆದರೆ, ನಿರ್ದಿಷ್ಟವಾಗಿ 'ದೋಷ' ಏನು ಎಂಬುದನ್ನು ಬಹಿರಂಗಪಡಿಸಿಲ್ಲ.

'ಕೋಲ್ಕತ್ತ ನೈಟ್‌ರೈಡರ್ಸ್‌ ತಂಡದ ನಿತೀಶ್ ರಾಣಾ ಮುಂಬೈ ಇಂಡಿಯನ್ಸ್‌ ವಿರುದ್ಧ ಪುಣೆಯಲ್ಲಿ ನಡೆದ ಪಂದ್ಯದ ವೇಳೆಟಾಟಾ ಐಪಿಎಲ್‌ ನೀತಿ ಸಂಹಿತೆ ಉಲ್ಲಂಘಿಸಿದ್ದರು. ಇದಕ್ಕಾಗಿ ಅವರಿಗೆ ಛೀಮಾರಿ ಹಾಕಲಾಗಿದ್ದು, ಪಂದ್ಯ ಶುಲ್ಕದ ಶೇ 10ರಷ್ಟು ದಂಡ ವಿಧಿಸಲಾಗಿದೆ. ರಾಣಾ 'ಲೆವಲ್‌–1' ಅಪರಾಧವೆಸಗಿದ್ದು, ಶಿಕ್ಷೆಯನ್ನು ಒಪ್ಪಿಕೊಂಡಿದ್ದಾರೆ' ಎಂದು ತಿಳಿಸಿದೆ.

'ನೀತಿ ಸಂಹಿತೆ ಉಲ್ಲಂಘಿಸಿದ ಮುಂಬೈ ಇಂಡಿಯನ್ಸ್‌ ಆಟಗಾರ ಜಸ್‌ಪ್ರೀತ್‌ ಬೂಮ್ರಾಗೆ ಛೀಮಾರಿ ಹಾಕಲಾಗಿದೆ' ಎಂದೂ ಹೇಳಿದೆ.

ನಿಯಮ ಉಲ್ಲಂಘಿಸುವ ಆಟಗಾರರ ವಿಚಾರವಾಗಿ ಪಂದ್ಯದ ರೆಫ್ರಿ ಕೈಗೊಳ್ಳುವ ತೀರ್ಮಾನ ಅಂತಿಮವಾಗಿರುತ್ತದೆ.

ರೈಡರ್ಸ್‌ಗೆ ಜಯ
ಪಂದ್ಯದಲ್ಲಿಟಾಸ್‌ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಮುಂಬೈ, ಸೂರ್ಯಕುಮಾರ್‌ ಯಾದವ್‌ (52) ಗಳಿಸಿದ ಅರ್ಧಶತಕದ ಬಲದಿಂದ ನಿಗದಿತ 20 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು 161ರನ್‌ ಗಳಿಸಿತ್ತು.

ಗುರಿ ಬೆನ್ನತ್ತಿದ ರೈಡರ್ಸ್‌ಗೆ ಆರಂಭಿಕ ಬ್ಯಾಟರ್‌ ವೆಂಕಟೇಶ್ ಅಯ್ಯರ್‌ ಹಾಗೂ ಆಲ್ರೌಂಡರ್‌ ಪ್ಯಾಟ್ ಕಮಿನ್ಸ್‌ ಅರ್ಧಶತಕ ಸಿಡಿಸಿ ನೆರವಾಗಿದ್ದರು.41 ಎಸೆತ ಎದುರಿಸಿದ್ದ ಅಯ್ಯರ್ 50 ರನ್ ಬಾರಿಸಿದರೆ,ಕಮಿನ್ಸ್‌ ಕೇವಲ 15 ಎಸೆತಗಳಲ್ಲಿ 6 ಸಿಕ್ಸರ್ ಮತ್ತು 4 ಬೌಂಡರಿ ಸಹಿತ 56 ರನ್‌ ಚಚ್ಚಿದ್ದರು.

ತಂಡದ ಮೊತ್ತ 101 ರನ್ ಆಗಿದ್ದಾಗ ಜೊತೆಯಾದ ಈ ಇಬ್ಬರು, ಮುರಿಯದ 6ನೇ ವಿಕೆಟ್‌ ಪಾಲುದಾರಿಕೆಯಲ್ಲಿ ಕೇವಲ 17 ಎಸೆತಗಳಲ್ಲಿ 61 ರನ್‌ ಕಲೆಹಾಕಿದ್ದರು. ಹೀಗಾಗಿ ರೈಡರ್ಸ್‌ ತಂಡ ಇನ್ನೂ 4 ಓವರ್‌ಗಳು ಬಾಕಿ ಇರುವಂತೆಯೇ ಜಯದ ನಗೆ ಬೀರಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT