ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಣಜಿ ಟ್ರೋಫಿ ಕ್ರಿಕೆಟ್| ಫೈನಲ್‌ಗೆ ಮಧ್ಯಪ್ರದೇಶ, ಮುಂಬೈ

ರಣಜಿ ಟ್ರೋಫಿ ಕ್ರಿಕೆಟ್: ಸೆಮಿಫೈನಲ್‌ನಲ್ಲಿ ಮಣಿದ ಬಂಗಾಳ, ಸುಸ್ತಾದ ಉತ್ತರಪ್ರದೇಶ
Last Updated 18 ಜೂನ್ 2022, 11:05 IST
ಅಕ್ಷರ ಗಾತ್ರ

ಬೆಂಗಳೂರು: ನಲ್ವತ್ತೊಂದು ಸಲದ ಚಾಂಪಿಯನ್ ಮುಂಬೈ ಮತ್ತು ಒಂದು ಬಾರಿಯ ರನ್ನರ್ಸ್ ಅಪ್ ಮಧ್ಯಪ್ರದೇಶ ತಂಡಗಳು ಈ ಬಾರಿಯ ರಣಜಿ ಟ್ರೋಫಿ ಟೂರ್ನಿಯ ಫೈನಲ್‌ನಲ್ಲಿ ಮುಖಾಮುಖಿಯಾಗಲಿವೆ.

ಆಲೂರು ಕ್ರೀಡಾಂಗಣದಲ್ಲಿ ಶನಿವಾರ ಮುಕ್ತಾಯವಾದ ಸೆಮಿಫೈನಲ್ ಪಂದ್ಯದಲ್ಲಿ ಮಧ್ಯಪ್ರದೇಶ ತಂಡವು 174 ರನ್‌ಗಳಿಂದ ಬಂಗಾಳ ತಂಡವನ್ನು ಮಣಿಸಿತು. 350 ರನ್‌ಗಳ ಗೆಲುವಿನ ಗುರಿ ಬೆನ್ನಟ್ಟಿದ್ದ ಬಂಗಾಳ ತಂಡವು ಶುಕ್ರವಾರ ದಿನದಾಟದ ಮುಕ್ತಾಯಕ್ಕೆ ನಾಲ್ಕು ವಿಕೆಟ್‌ ಕಳೆದುಕೊಂಡಿತ್ತು. ಕ್ರೀಸ್‌ನಲ್ಲಿ ಉಳಿದಿದ್ದ ನಾಯಕ ಅಭಿಮನ್ಯು ಈಶ್ವರನ್ ಐದನೇ ದಿನದಾಟದಲ್ಲಿಯೂ ತುಸು ಹೋರಾಟ ತೋರಿದರು. ಆದರೆ, ಕುಮಾರ್ ಕಾರ್ತಿಕೇಯ ಸಿಂಗ್ (67ಕ್ಕೆ5) ಮತ್ತು ಗೌರವ್ ಜೈನ್ (19ಕ್ಕೆ3) ಅವರ ಉತ್ತಮ ಬೌಲಿಂಗ್ ಮುಂದೆ ಬಂಗಾಳ ತಂಡವು 175 ರನ್‌ಗಳ ಮೊತ್ತಕ್ಕೆ ಆಲೌಟ್ ಆಯಿತು.

1944 ರಿಂದ 1955ರವರೆಗೂ ಹೋಳ್ಕರ್ ನಾಲ್ಕು ಬಾರಿ ಚಾಂಪಿಯನ್ ಮತ್ತು ಆರು ಸಲ ರನ್ನರ್ಸ್ ಅಪ್ ಆಗಿತ್ತು. ತದನಂತರ ಈ ತಂಡವನ್ನು ಮಧ್ಯಪ್ರದೇಶವೆಂದು ಮರುನಾಮಕರಣ ಮಾಡಲಾಯಿತು. ಆಗಿನಿಂದ ಒಂದು ಬಾರಿ ಮಾತ್ರ ತಂಡವು ಫೈನಲ್ ತಲುಪಿತ್ತು.

ಮುಂಬೈ ಪಾರಮ್ಯ:ಜಸ್ಟ್‌ ಕ್ರಿಕೆಟ್ ಮೈದಾನದಲ್ಲಿ ನಡೆದ ಇನ್ನೊಂದು ಸೆಮಿಫೈನಲ್‌ನಲ್ಲಿ ರನ್‌ಗಳ ಹೊಳೆ ಹರಿಸಿದ ಮುಂಬೈ ತಂಡವು ಉತ್ತರ ಪ್ರದೇಶ ಎದುರಿನ ಪಂದ್ಯದಲ್ಲಿ ಡ್ರಾ ಮಾಡಿಕೊಂಡಿತು. ಮೊದಲ ಇನಿಂಗ್ಸ್ ಮುನ್ನಡೆ ಆಧಾರದಲ್ಲಿ ಫೈನಲ್ ಪ್ರವೇಶಿಸಿತು. ಎರಡನೇ ಇನಿಂಗ್ಸ್‌ನಲ್ಲಿ ಮುಂಬೈ ತಂಡವು 156 ಓವರ್‌ಗಲ್ಲಿ 4ಕ್ಕೆ533 ರನ್‌ ಗಳಿಸಿತು. ಕೊನೆಯ ದಿನ ಮಧ್ಯಾಹ್ನ ಡಿಕ್ಲೇರ್ ಮಾಡಿಕೊಂಡಿತು. ಆದರೆ, ಉತ್ತರ ಪ್ರದೇಶ ತಂಡವು ಬ್ಯಾಟಿಂಗ್‌ಗೆ ಬರದೇ ಡ್ರಾಗೆ ಸಮ್ಮತಿಸಿತು.

ಮುಂಬೈ ತಂಡವು ಐದು ವರ್ಷಗಳ ನಂತರ ಫೈನಲ್ ಪ್ರವೇಶಿಸಿತು. 2016–17ರಲ್ಲಿ ರನ್ನರ್ಸ್ ಅಪ್ ಆಗಿತ್ತು. ರಣಜಿ ಇತಿಹಾಸದಲ್ಲಿ ಮುಂಬೈ ತಂಡವು 41 ಬಾರಿ ಚಾಂಪಿಯನ್ ಮತ್ತು ಐದು ಸಲ ರನ್ನರ್ ಅಪ್ ಆಗಿದೆ.

ಶುಕ್ರವಾರ ರಾತ್ರಿ ಸುರಿದ ಮಳೆಯಿಂದಾಗಿ ಮೈದಾನಗಳು ಒದ್ದೆಯಾಗಿದ್ದರಿಂದ ಎರಡೂ ಪಂದ್ಯಗಳ ಐದನೇ ದಿನದಾಟವು ವಿಳಂಬವಾಗಿ ಆರಂಭವಾದವು.

ಸಂಕ್ಷಿಪ್ತ ಸ್ಕೋರು: ಆಲೂರು ಕ್ರೀಡಾಂಗಣ–ಮೊದಲ ಇನಿಂಗ್ಸ್: ಮಧ್ಯಪ್ರದೇಶ 341, ಬಂಗಾಳ: 273, ಎರಡನೇ ಇನಿಂಗ್ಸ್: ಮಧ್ಯಪ್ರದೇಶ: 281, ಬಂಗಾಳ: 65.2 ಓವರ್‌ಗಳಲ್ಲಿ 175 (ಅಭಿಮನ್ಯು ಈಶ್ವರನ್ 78, ಶಾಬಾಜ್ ಔಟಾಗದೆ 22, ಆಕಾಶದೀಪ್ 20, ಕುಮಾರ್ ಕಾರ್ತಿಕೇಯ ಸಿಂಗ್ 67ಕ್ಕೆ5, ಸಾರಾಂಶ್ ಜೈನ್ 69ಕ್ಕೆ2, ಗೌರವ್‌ ಯಾದವ್ 19ಕ್ಕೆ3) ಫಲಿತಾಂಶ: ಮಧ್ಯಪ್ರದೇಶಕ್ಕೆ174 ರನ್‌ಗಳ ಜಯ.

ಜಸ್ಟ್ ಕ್ರಿಕೆಟ್ ಮೈದಾನ: ಮೊದಲ ಇನಿಂಗ್ಸ್– ಮುಂಬೈ: 393, ಉತ್ತರಪ್ರದೇಶ: 180, ಮುಂಬೈ: 156 ಓವರ್‌ಗಳಲ್ಲಿ 4ಕ್ಕೆ533 (ಶಮ್ಸ್ ಮುಲಾನಿ ಔಟಾಗದೆ 51, ಸರ್ಫರಾಜ್ ಖಾನ್ ಔಟಾಗದೆ 59, ಪ್ರಿನ್ಸ್ ಯಾದವ್ 92ಕ್ಕೆ2) ಫಲಿತಾಂಶ: ಡ್ರಾ. ಮೊದಲ ಇನಿಂಗ್ಸ್ ಮುನ್ನಡೆಯಿಂದ ಮುಂಬೈ ಫೈನಲ್‌ಗೆ.

ಫೈನಲ್: ಜೂನ್ 22 ರಿಂದ 26

ಸ್ಥಳ: ಎಂ. ಚಿನ್ನಸ್ವಾಮಿ ಕ್ರೀಡಾಂಗಣ, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT