ಸೋಮವಾರ, 17 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

T20 WC: ವೈಸ್ ಆಲ್‌ರೌಂಡ್ ಆಟ; ಒಮನ್ ಎದುರು ಸೂಪರ್‌ ಓವರ್‌ನಲ್ಲಿ ಗೆದ್ದ ನಮೀಬಿಯಾ

Published 3 ಜೂನ್ 2024, 4:42 IST
Last Updated 3 ಜೂನ್ 2024, 4:42 IST
ಅಕ್ಷರ ಗಾತ್ರ

ಬ್ರಿಜ್‌ಟೌನ್ (ಬಾರ್ಬಡೊಸ್): ಟಿ20 ವಿಶ್ವಕಪ್‌ ಕ್ರಿಕೆಟ್ ಟೂರ್ನಿಯ ಪಂದ್ಯದಲ್ಲಿ ಅನುಭವಿ ಆಟಗಾರ ಡೇವಿಡ್‌ ವೈಸ್‌ ತೋರಿದ ಆಲ್‌ರೌಂಡ್‌ ಪ್ರದರ್ಶನದ ಬಲದಿಂದ ನಮೀಬಿಯಾ ತಂಡವು ಒಮನ್‌ ಎದುರು ಸೂಪರ್‌ ಓವರ್‌ನಲ್ಲಿ ಗೆದ್ದು ಬೀಗಿತು.

ಟೈ ಆದ ಪಂದ್ಯದಲ್ಲಿ ಮೂರು ವಿಕೆಟ್‌ ಪಡೆದು ಮಿಂಚಿದ್ದ ವೈಸ್‌, ಸೂಪರ್‌ ಓವರ್‌ನಲ್ಲೂ ಬ್ಯಾಟಿಂಗ್‌ ಹಾಗೂ ಬೌಲಿಂಗ್‌ನಲ್ಲಿ ಅಮೋಘ ಪ್ರದರ್ಶನ ತೋರಿದರು.

ಇಲ್ಲಿನ ಕಿಂಗ್ಸ್‌ಟನ್‌ ಓವಲ್‌ ಕ್ರೀಡಾಂಗಣದಲ್ಲಿ ನಡೆದ ಪಂದ್ಯ ಟೈ ಆಯಿತು. ಹೀಗಾಗಿ ಈ ವಿಶ್ವಕಪ್‌ ಟೂರ್ನಿಯ ಮೊದಲ ಸೂಪರ್‌ ಓವರ್‌ಗೆ ಉಭಯ ತಂಡಗಳು ಸಾಕ್ಷಿಯಾದವು. ಮೊದಲು ಬ್ಯಾಟಿಂಗ್ ಮಾಡಿದ ನಮೀಬಿಯಾ 21 ರನ್ ಗಳಿಸಿತು. ಸ್ಫೋಟಕ ಬ್ಯಾಟಿಂಗ್‌ ನಡೆಸಿದ ವೈಸ್‌, ತಲಾ ಒಂದು ಬೌಂಡರಿ ಮತ್ತು ಸಿಕ್ಸರ್‌ ಸಹಿತ 13 ರನ್‌ ಬಾರಿಸಿದರು. ನಾಯಕ ಗೆರಾರ್ಡ್ ಎರಸ್ಮಸ್ ಎರಡು ಬೌಂಡರಿ ಸಹಿತ 8 ರನ್‌ ಗಳಿಸಿದರು.

ಈ ಗುರಿ ಬೆನ್ನತ್ತಿದ ಒಮನ್‌ ತಂಡ 1 ವಿಕೆಟ್ ನಷ್ಟಕ್ಕೆ 10 ರನ್‌ ಗಳಿಸಲಷ್ಟೇ ಶಕ್ತವಾದರು.

ನಮೀಬಿಯಾ ಪರ 'ನಿರ್ಣಾಯಕ' ಓವರ್‌ ಎಸೆಯುವ ಹೊಣೆಯನ್ನೂ ಹೊತ್ತ ವೈಸ್‌, ಒಮನ್‌ ತಂಡವನ್ನು 10 ರನ್‌ಗೆ ನಿಯಂತ್ರಿಸಿ ಒಂದು ವಿಕೆಟ್‌ ಅನ್ನೂ ಪಡೆದರು.

ಬೌಲರ್‌ಗಳ ಪ್ರಾಬಲ್ಯ

ಪಂದ್ಯದಲ್ಲಿ ಉಭಯ ತಂಡಗಳ ಬೌಲರ್‌ಗಳು ಪ್ರಾಬಲ್ಯ ಮೆರೆದರು. ಎರಡೂ ತಂಡದ ಬ್ಯಾಟರ್‌ಗಳು 39.4 ಓವರ್‌ ಬ್ಯಾಟಿಂಗ್‌ ಮಾಡಿದರೂ ಗಳಿಸಿದ್ದು 208 ರನ್‌ ಮಾತ್ರ. ಇದಕ್ಕಾಗಿ 16 ವಿಕೆಟ್‌ಗಳು ಪತನಗೊಂಡವು.

ಮೊದಲು ಬ್ಯಾಟಿಂಗ್‌ ಮಾಡಿದ ಒಮನ್‌ ತಂಡವನ್ನು ನಮೀಬಿಯಾ ಬೌಲರ್‌ಗಳು ಇನ್ನಿಲ್ಲದಂತೆ ಕಾಡಿದರು. ಸಂಘಟಿತ ಬೌಲಿಂಗ್‌ ಪ್ರದರ್ಶನದ ಮೂಲಕ 19.4 ಓವರ್‌ಗಳಲ್ಲಿ ಕೇವಲ 109 ರನ್‌ಗಳಿಗೆ ಕಟ್ಟಿಹಾಕಿದರು.

ರುಬೇನ್‌ ಟ್ರಂಪೆಲ್‌ಮನ್‌ 4 ಓವರ್‌ಗಳಲ್ಲಿ 21 ರನ್‌ ನೀಡಿ ನಾಲ್ಕು ವಿಕೆಟ್‌ ಉರುಳಿಸಿದರೆ, ವೈಸ್‌ 28 ರನ್‌ಗೆ ಮೂರು ವಿಕೆಟ್‌ ಪಡೆದರು. ಉಳಿದ ಮೂರು ವಿಕೆಟ್‌ಗಳನ್ನು ಎರಸ್ಮಸ್ (2) ಹಾಗೂ ಬೆರ್ನಾರ್ಡ್‌ ಸ್ಕಾಲ್ಟ್ಜ್‌ (1) ಹಂಚಿಕೊಂಡರು.

ಇದಕ್ಕುತ್ತರವಾಗಿ ಬ್ಯಾಟಿಂಗ್ ಆರಂಭಿಸಿದ ನಮೀಬಿಯಾ ಸಹ ದಿಟ್ಟ ಆಟವಾಡಲು ಸಾಧ್ಯವಾಗಲಿಲ್ಲ. ಒಮನ್‌ ತಂಡದ ನಾಯಕ ಎಂಟು ಬೌಲರ್‌ಗಳನ್ನು ಇಳಿಸಿ, ಗುರಿ ಮುಟ್ಟದಂತೆ ನೋಡಿಕೊಂಡರು. ನಮೀಬಿಯಾ 6 ವಿಕೆಟ್‌ಗಳನ್ನಷ್ಟೇ ಕಳೆದುಕೊಂಡರೂ 20 ಓವರ್‌ಗಳಲ್ಲಿ 109 ರನ್‌ ಮಾತ್ರ ಗಳಿಸಿತು. ಹೀಗಾಗಿ ಪಂದ್ಯ ಸೂಪರ್ ಓವರ್‌ಗೆ ಸಾಗಿತು.

ನಮೀಬಿಯಾ ಬ್ಯಾಟರ್‌ ಜಾನ್‌ಫ್ರಿಲಿಂಕ್‌ 45 ರನ್ ಗಳಿಸಿದ್ದು ಪಂದ್ಯದ ಗರಿಷ್ಠ ಮೊತ್ತವೆನಿಸಿತು.

ಒಮನ್‌ ಪರ ಮೆಹ್ರಾನ್‌ ಖಾನ್‌ 3 ಓವರ್‌ಗಳಲ್ಲಿ ಕೇವಲ 7 ರನ್ ನೀಡಿ 3 ವಿಕೆಟ್‌ ಪಡೆದು ಮಿಂಚಿದರು. ಬಿಲಾಲ್‌ ಖಾನ್‌, ಅಕೀಬ್ ಅಲಿಯಾಸ್ ಮತ್ತು ಅಯಾನ್‌ ಖಾನ್‌ ಅವರು ತಲಾ ಒಂದೊಂದು ವಿಕೆಟ್‌ ಪಡೆಯುವ ಮೂಲಕ ಮೆಹ್ರಾನ್‌ಗೆ ಉತ್ತಮ ಸಹಕಾರ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT