ಬುಧವಾರ, 17 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

RCB vs PBKS: ಡುಪ್ಲೆಸಿ ಬಳಗಕ್ಕೆ ತವರಿನಂಗಳದಲ್ಲಿ ಜಯದ ಕನಸು

ರಾಯಲ್ ಚಾಲೆಂಜರ್ಸ್ ಬೆಂಗಳೂರು–ಪಂಜಾಬ್ ಕಿಂಗ್ಸ್‌ ಮುಖಾಮುಖಿ ಇಂದು: ಆತಿಥೇಯರಿಗೆ ಬೌಲಿಂಗ್ ಚಿಂತೆ
Published 24 ಮಾರ್ಚ್ 2024, 22:36 IST
Last Updated 25 ಮಾರ್ಚ್ 2024, 13:48 IST
ಅಕ್ಷರ ಗಾತ್ರ

ಬೆಂಗಳೂರು: ಕ್ರಿಕೆಟ್‌ ಅಭಿಮಾನಿಗಳ ’ಕಣ್ಮಣಿ‘ ವಿರಾಟ್ ಕೊಹ್ಲಿ ಮತ್ತು ನಾಯಕ ಫಫ್‌ ಡುಪ್ಲೆಸಿ ಭಾನುವಾರ ಸಂಜೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಬಹಳ ಹೊತ್ತು ಸಮಾಲೋಚನೆಯಲ್ಲಿ ತೊಡಗಿದ್ದರು. ವ್ಯಾಯಾಮಗಳನ್ನು  ಮಾಡುವಾಗಲೂ ಪರಸ್ಪರ ಮಾತನಾಡುತ್ತಿದ್ದರು. ಅವರ ಮುಖದಲ್ಲಿ ಗಂಭೀರ ಭಾವ ಮನೆ ಮಾಡಿತ್ತು. 

ನೆಟ್ಸ್‌ ಅಭ್ಯಾಸದಲ್ಲಿ ವಿರಾಟ್ ಹೆಚ್ಚಾಗಿ ಸಹಆಟಗಾರರೊಂದಿಗೆ ಕೀಟಲೆ ಮಾಡುತ್ತ, ನಗುತ್ತ, ನಗಿಸುತ್ತ ಇರುವುದು ರೂಢಿ. ಆದರೆ ಇಲ್ಲಿ ಸ್ವಲ್ಪ ಭಿನ್ನವಾಗಿದ್ದರು. ಈ ಬಾರಿಯ ಐಪಿಎಲ್ ಟೂರ್ನಿಯ ಮೊದಲ ಪಂದ್ಯದಲ್ಲಿಯೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು  ಚೆನ್ನೈ ಸೂಪರ್ ಕಿಂಗ್ಸ್‌ ಎದುರು ಸೋತಿದ್ದು ಹಾಗೂ ಬೌಲಿಂಗ್ ವಿಭಾಗದ ದೌರ್ಬಲ್ಯಗಳು ಅವರ ಗಂಭೀರ ಚರ್ಚೆಗೆ ಗ್ರಾಸವಾದಂತೆ ಭಾಸವಾಯಿತು. 

ಸೋಮವಾರ ಇಲ್ಲಿ ನಡೆಯಲಿರುವ ಪಂದ್ಯದಲ್ಲಿ  ಬೆಂಗಳೂರು ತಂಡವು ಶಿಖರ್ ಧವನ್ ನಾಯಕತ್ವದ ಪಂಜಾಬ್ ಕಿಂಗ್ಸ್‌ ತಂಡವನ್ನು ಎದುರಿಸಲಿದೆ. ಶಿಖರ್ ಬಳಗವು ಶನಿವಾರ ರಾತ್ರಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಗೆದ್ದು ಶುಭಾರಂಭ ಮಾಡಿತ್ತು. ಅದರಿಂದಾಗಿ ಅಪಾರ ಆತ್ಮವಿಶ್ವಾಸದೊಂದಿಗೆ ಇಲ್ಲಿಗೆ ಬಂದಿಳಿದಿದೆ. ಇಂಗ್ಲೆಂಡ್ ಆಲ್‌ರೌಂಡರ್ ಸ್ಯಾಮ್ ಕರನ್ ಅವರ ಭರ್ಜರಿ ಅರ್ಧಶತಕ ಮತ್ತು ಲಿಯಾಮ್ ಲಿವಿಂಗ್‌ಸ್ಟೋನ್ ಅವರ ಫಿನಿಷಿಂಗ್ ಕೌಶಲವು ತಂಡದ ಜಯದಲ್ಲಿ ಪ್ರಮುಖ ಪಾತ್ರವಹಿಸಿತ್ತು. 

ಕೆಲ ವರ್ಷಗಳ ಹಿಂದೆ ಆರ್‌ಸಿಬಿಯ ಪ್ರಮುಖ ಬೌಲರ್‌ ಆಗಿದ್ದ ಹರ್ಷಲ್ ಪಟೇಲ್ ಪಂಜಾಬ್ ತಂಡದಲ್ಲಿದ್ದಾರೆ. ಅವರು ಮತ್ತು ಎಡಗೈ ವೇಗಿ ಆರ್ಷದೀಪ್ ಸಿಂಗ್ ಅವರು ಡೆಲ್ಲಿ ತಂಡದ ಎದುರು ಮಿಂಚಿದ್ದರು. ಬೆಂಗಳೂರು ಪಿಚ್‌ ಮರ್ಮವನ್ನು ಚೆನ್ನಾಗಿ ಅರಿತಿರುವ ಹರ್ಷಲ್ ಅವರು ಆತಿಥೇಯರಿಗೆ ಕಠಿಣ  ‘ಚಾಲೆಂಜ್‌’  ಒಡ್ಡಬಹುದು. ಕಗಿಸೊ ರಬಾಡ ಡೆತ್‌ ಓವರ್‌ಗಳಲ್ಲಿ ಪರಿಣಾಮಕಾರಿಯಾಗಬಲ್ಲರು. 

ಈ ಬೌಲರ್‌ಗಳ ಮುಂದೆ ಆರ್‌ಸಿಬಿಯ ರನ್‌ ಯಂತ್ರ ವಿರಾಟ್, ಸ್ಪೋಟಕ ಶೈಲಿಯ ಬ್ಯಾಟರ್‌ಗಳಾದ ಡುಪ್ಲೆಸಿ, ಗ್ಲೆನ್ ಮ್ಯಾಕ್ಸ್‌ವೆಲ್ ಅವರು ಮಿಂಚಿದರೆ ಪಂದ್ಯ ರೋಚಕವಾಗಬಹುದು. ಚೆನ್ನೈನ ಆಟ ಇಲ್ಲಿಯೂ ಮರುಕಳಿಸಿದರೆ ಮತ್ತೆ ಅನುಭವಿ ದಿನೇಶ್ ಕಾರ್ತಿಕ್ ಹಾಗೂ ಯುವ ಆಟಗಾರರಾದ ಅನುಜ್ ರಾವತ್, ಕ್ಯಾಮರಾನ್ ಗ್ರೀನ್ ಅವರ ಮೇಲೆ ಇನಿಂಗ್ಸ್‌ಗೆ ಬಲ ತುಂಬುವ ಹೊಣೆ ಬೀಳುವುದು ಖಚಿತ. ಆ ಪಂದ್ಯದಲ್ಲಿ ಅನುಜ್ 48 ರನ್‌ ಗಳಿಸಿದ್ದರು. 

ಆತಿಥೇಯ ತಂಡದ ಬ್ಯಾಟಿಂಗ್ ಮೇಲ್ನೋಟಕ್ಕೆ ಬಲಿಷ್ಠವಾಗಿಯೇ ಇದೆ. ಆದರೆ ಬೌಲಿಂಗ್ ವಿಭಾಗದ ಬಗ್ಗೆ ಇಂತಹ ವಿಶ್ವಾಸ ಮೂಡುವುದು ಕಷ್ಟ. ಏಕೆಂದರೆ, ಮೊಹಮ್ಮದ್ ಸಿರಾಜ್ ಅವರ ಅನುಭವ ಹಾಗೂ ಗ್ರೀನ್ ಅವರ ಪ್ರತಿಭೆಯ ಮೇಲೆ ಹೆಚ್ಚು ಭರವಸೆ ಇಡಬೇಕಿದೆ. ಆದರೆ ಚೆನ್ನೈನಲ್ಲಿ ಸಿರಾಜ್ (4–0–38–0) ಪ್ರಭಾವಿಯಾಗಿರಲಿಲ್ಲ. ಹೊಸಬ ಅಲ್ಝರಿ ಜೋಸೆಫ್ ಕೂಡ ದುಬಾರಿಯಾಗಿದ್ದರು. ಗ್ರೀನ್, ಯಶ್ ದಯಾಳ್ ಹಾಗೂ ಕರ್ಣ ಶರ್ಮಾ ವಿಕೆಟ್ ಗಳಿಸುವಲ್ಲಿ ಯಶಸ್ವಿಯಾಗಿದ್ದರು.

ಒಂದೊಮ್ಮೆ ಬೆಂಗಳೂರು ಬ್ಯಾಟರ್‌ಗಳು ಸಾಧಾರಣ ಮೊತ್ತದ ಗುರಿಯನ್ನು ಎದುರಾಳಿ ತಂಡಕ್ಕೆ ಒಡ್ಡಿದರೆ, ಬೌಲರ್‌ಗಳು ಗೆಲುವಿನ ಕಾಣಿಕೆ ನೀಡುವ ಕಠಿಣ ಸವಾಲು ಎದುರಿಸಬೇಕಾಗಬಹುದು. ಅಲ್ಲದೇ ಪಂಜಾಬ್ ತಂಡವು ಮೊದಲು ಬ್ಯಾಟಿಂಗ್ ಮಾಡಿದರೆ ಸಾಧಾರಣ ಮೊತ್ತಕ್ಕೆ ಕಟ್ಟಿಹಾಕುವಲ್ಲಿಯೂ ಈ ಬೌಲರ್‌ಗಳು ತಮ್ಮ ಸಾಮರ್ಥ್ಯ ಮೆರೆಯುವುದು ಅನಿವಾರ್ಯವಾಗಲಿದೆ.  

ಪಂಜಾಬ್ ಕಿಂಗ್ಸ್ ತಂಡದ ನಾಯಕ ಶಿಖರ್ ಧವನ್  –ಪಿಟಿಐ ಚಿತ್ರ
ಪಂಜಾಬ್ ಕಿಂಗ್ಸ್ ತಂಡದ ನಾಯಕ ಶಿಖರ್ ಧವನ್  –ಪಿಟಿಐ ಚಿತ್ರ

Highlights - ಸ್ಥಳೀಯ ವೈಶಾಖ ವಿಜಯಕುಮಾರ್‌ ಕಣಕ್ಕಿಳಿಯುವ ಸಾಧ್ಯತೆ ವಿರಾಟ್ ಕೊಹ್ಲಿಗೆ ಲಯಕ್ಕೆ ಮರಳುವ ಛಲ ಮೊಹಮ್ಮದ್ ಸಿರಾಜ್, ಕ್ಯಾಮರಾನ್ ಗ್ರೀನ್ ಮೇಲೆ ನಿರೀಕ್ಷೆಯ ಭಾರ

ಕೆಳಕ್ರಮಾಂಕದಲ್ಲಿ ಬ್ಯಾಟಿಂಗ್ ಯಾವ ರೀತಿ ಮಾಡಬೇಕು ಎಂಬುದರ ಬಗ್ಗೆ ತಂಡದ ಮ್ಯಾನೇಜ್‌ಮೆಂಟ್ ಸ್ಪಷ್ಟ ಸೂಚನೆಯನ್ನು ನನಗೆ ನೀಡಿದೆ. ವಿಕೆಟ್‌ಕೀಪಿಂಗ್ ಹೊಣೆ ಇಲ್ಲದ ಸಂದರ್ಭದಲ್ಲಿ ಕೆಳಕಕ್ರಮಾಂಕದಲ್ಲಿ ರನ್‌ ಗಳಿಸುವುದು ನನ್ನ ಪ್ರಮುಖ ಗುರಿ.
–ಅನುಜ್ ರಾವತ್ ಆರ್‌ಸಿಬಿ ಆಟಗಾರ

ತಂಡಗಳು

ರಾಯಲ್ ಚಾಲೆಂಜರ್ಸ್ ಬೆಂಗಳೂರು:  ಫಫ್ ಡುಪ್ಲೆಸಿ (ನಾಯಕ) ವಿರಾಟ್ ಕೊಹ್ಲಿ ರಜತ್ ಪಾಟೀದಾರ್ ದಿನೇಶ್ ಕಾರ್ತಿಕ್ ಕ್ಯಾಮರಾನ್ ಗ್ರೀನ್ ಗ್ಲೆನ್ ಮ್ಯಾಕ್ಸ್‌ವೆಲ್ ಅನುಜ್ ರಾವತ್ ಸುಯಶ್ ಪ್ರಭುದೇಸಾಯಿ ಮಯಂಕ್ ದಾಗರ್ ಮಹಿಪಾಲ್ ಲೊಮ್ರೊರ್ ಟಾಮ್ ಕರನ್ ವೈಶಾಖ ವಿಜಯಕುಮಾರ್ ಅಲ್ಝರಿ ಜೋಸೆಫ್ ರೀಸ್ ಟಾಪ್ಲಿಮೊಹಮ್ಮದ್ ಸಿರಾಜ್ ಯಶ್ ದಯಾಳ್ ಕರ್ಣ ಶರ್ಮಾ ಸ್ವಪ್ನಿಲ್ ಸಿಂಗ್ ವಿಲ್ ಜ್ಯಾಕ್ಸ್. 

ಪಂಜಾಬ್ ಕಿಂಗ್ಸ್: ಶಿಖರ್ ಧವನ್ (ನಾಯಕ) ಲಿಯಾಮ್ ಲಿವಿಂಗ್‌ಸ್ಟೋನ್ ರೀಲಿ ರೊಸೊ ಹರಪ್ರೀತ್ ಭಾಟಿಯಾ ಜಿತೇಶ್ ಶರ್ಮಾ ಜಾನಿ ಬೆಸ್ಟೊ ಸಿಮ್ರನ್ ಸಿಂಗ್ (ವಿಕೆಟ್‌ಕೀಪರ್) ಸ್ಯಾಮ್ ಕರನ್ ಅಥರ್ವ್ ತೈಡೆ ಶಶಾಂಕ್ ಸಿಂಗ್ ತನಯ್ ತ್ಯಾಗರಾಜನ್ ಹರಪ್ರೀತ್ ಬ್ರಾರ್ರಿಷಿ ಧವನ್ ಕಗಿಸೊ ರಬಾಡ ಹರ್ಷಲ್ ಪಟೇಲ್ ಆರ್ಷದೀಪ್ ಸಿಂಗ್ ಕ್ರಿಸ್ ವೋಕ್ಸ್ ರಾಹುಲ್ ಚಾಹರ್ ನೇಥನ್ ಎಲಿಸ್ ವಿದ್ವತ್ ಕಾವೇರಪ್ಪ.  ಪಂದ್ಯ ಆರಂಭ: ರಾತ್ರಿ 7.30 ನೇರಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌ ಜಿಯೊ ಸಿನಿಮಾ ಆ್ಯಪ್.  –– ಪಿಚ್ ಹೇಗಿದೆ? ಕಳೆದ ವರ್ಷದಂತೆ ಈ ಬಾರಿಯೂ ಸ್ಪರ್ಧಾತ್ಮಕ ಪಿಚ್‌ ಸಿದ್ಧಪಡಿಸಲಾಗಿದೆ. ಹೆಚ್ಚು ರನ್‌ಗಳು ಹರಿಯುವ ನಿರೀಕ್ಷೆ ಇದೆ. ಹೋದ ವರ್ಷ ಇಲ್ಲಿ ಬ್ಯಾಟರ್‌ಗಳು ಮಿಂಚಿದ್ದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT