ಶನಿವಾರ, ಜನವರಿ 28, 2023
15 °C

T20 World Cup | ಪಾಕ್ ವಿರುದ್ದ ರೋಚಕ ವಿಜಯದ ರೂವಾರಿ ವಿರಾಟ್

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

ಮೆಲ್ಬರ್ನ್: ವಿಶ್ವಕಪ್ ಕ್ರಿಕೆಟ್ ಟೂರ್ನಿಗಳಲ್ಲಿ ಭಾರತ ಹಾಗೂ ಪಾಕಿಸ್ತಾನ ತಂಡಗಳ ನಡುವಣ ಪಂದ್ಯಗಳಲ್ಲಿ ಏಕಪಕ್ಷೀಯ ಫಲಿತಾಂಶಗಳು ಬಂದಿರುವುದೇ ಹೆಚ್ಚು. ಆದರೆ ಭಾನುವಾರ ಈ ‘ಬದ್ಧ ‍ಪ್ರತಿಸ್ಪರ್ಧಿ’ಗಳ ಹೋರಾಟವು ಅತ್ಯಂತ ರೋಚಕ ಅಂತ್ಯ ಕಂಡಿತು. 

ಹೋದ ವರ್ಷ ದುಬೈನಲ್ಲಿ  ಭಾರತ ತಂಡವನ್ನು ಬಾಬರ್ ಆಜಂ ಬಳಗವು ಹತ್ತು ವಿಕೆಟ್‌ಗಳಿಂದ ಸೋಲಿಸಿದಾಗ ಪಂದ್ಯದಲ್ಲಿ ಇನ್ನೂ13 ಎಸೆತಗಳು ಬಾಕಿಯಿದ್ದವು. ಆದರೆ, ಮೆಲ್ಬರ್ನ್ ಕ್ರಿಕೆಟ್‌ ಅಂಗಳದಲ್ಲಿ ಕಿಕ್ಕಿರಿದು ಸೇರಿದ್ದ ಕ್ರಿಕೆಟ್‌ಪ್ರೇಮಿಗಳ ಸಮ್ಮುಖದಲ್ಲಿ ಕೊನೆಯ ಎಸೆತದವರೆಗೂ ಕುತೂಹಲ ಕೆರಳಿಸಿದ್ದ ಪಂದ್ಯದಲ್ಲಿ ಭಾರತ 4 ವಿಕೆಟ್‌ಗಳಿಂದ ಜಯಿಸಿತು.

ಏಷ್ಯಾ ಖಂಡದ ಎರಡು ದೊಡ್ಡ ಕ್ರಿಕೆಟ್‌ ಶಕ್ತಿಗಳ ಅಸಾಧಾರಣ ಹಣಾಹಣಿ ಇದಾಗಿತ್ತು. ಇಡೀ ಪಂದ್ಯದಲ್ಲಿ ಚಂಚಲವಾಗಿದ್ದ ‘ವಿಜಯ’ ಕೊನೆಗೂ ಭಾರತಕ್ಕೆ ಒಲಿಯಿತು. ವಿರಾಟ್ ಕೊಹ್ಲಿಯ ಅಜೇಯ ಇನಿಂಗ್ಸ್‌ಗೆ ಕ್ರಿಕೆಟ್‌ ಅಭಿಮಾನಿಗಳು ಮನಸೋತರು.

ಟಾಸ್ ಗೆದ್ದ ರೋಹಿತ್ ಶರ್ಮಾ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು. ಆರ್ಷದೀಪ್ ಸಿಂಗ್ ಹಾಗೂ ಹಾರ್ದಿಕ್ ಪಾಂಡ್ಯ ಅಮೋಘ ಬೌಲಿಂಗ್‌ ನಡುವೆಯೂ ಪಾಕ್ ತಂಡವು 20 ಓವರ್‌ಗಳಲ್ಲಿ 8 ವಿಕೆಟ್‌ಗಳಿಗೆ 159 ರನ್‌ ಗಳಿಸಿತು. ಮಿಂಚಿನಾಟವಾಡಿದ ಇಫ್ತಿಕಾರ್ ಅಹಮದ್ ತಂಡದ ಇನಿಂಗ್ಸ್‌ಗೆ ಬಲ ತುಂಬಿದರು. 

ಪಾಕ್ ತಂಡದ ಪ್ರತಿಭಾವಂತ ವೇಗದ ಬೌಲರ್‌ಗಳ ದಂಡು ತಮ್ಮ ನಾಯಕ ಬಾಬರ್ ಆಜಂ ನಿರೀಕ್ಷೆಯನ್ನು ಹುಸಿಗೊಳಿಸಲಿಲ್ಲ. ಗುರಿ ಬೆನ್ನಟ್ಟಿದ ಭಾರತಕ್ಕೆ ಆರಂಭದಲ್ಲಿಯೇ ಆಘಾತ ನೀಡಿದರು. ಬ್ಯಾಟಿಂಗ್‌ಸ್ನೇಹಿ ಪಿಚ್‌ನಲ್ಲಿ ಶಹೀನ್ ಶಾ ಆಫ್ರಿದಿ, ನಸೀಮ್ ಶಾ ಹಾಗೂ ಹ್ಯಾರಿಸ್ ರವೂಫ್ ದಾಳಿ ರಂಗೇರಿತು. ಇನಿಂಗ್ಸ್‌ನ 2ನೇ ಓವರ್‌ನಲ್ಲಿ ನಸೀಂ ಎಸೆತದಲ್ಲಿ ಕೆ.ಎಲ್. ರಾಹುಲ್ ಔಟಾದರೆ, ರವೂಫ್ ಓವರ್‌ಗಳಲ್ಲಿ ರೋಹಿತ್ ಹಾಗೂ  ಸೂರ್ಯಕುಮಾರ್ ಯಾದವ್ ವಿಕೆಟ್ ಒಪ್ಪಿಸಿದರು.

5ನೇ ಕ್ರಮಾಂಕಕ್ಕೆ ಬಡ್ತಿ ಪಡೆದು ಕ್ರೀಸ್‌ಗೆ ಬಂದ ಅಕ್ಷರ್ ಪಟೇಲ್ ರನೌಟ್ ಆದರು. ಭಾರತ 31 ರನ್‌ಗಳಿಗೆ ನಾಲ್ಕು ವಿಕೆಟ್ ಕಳೆದುಕೊಂಡಿತು. ಈ ಹಂತದಲ್ಲಿ ವಿರಾಟ್ 21 ಎಸೆತಗಳಲ್ಲಿ 12 ರನ್ ಗಳಿಸಿದ್ದರು. ಅನುಭವಿ ಆಟಗಾರ ಕೊಹ್ಲಿಯ ದೈಹಿಕ ಸಾಮರ್ಥ್ಯ ಹಾಗೂ ರನ್‌ ಚೇಸ್‌ಗಳ ಚಾಣಾಕ್ಷನ ಆಟ ಕಳೆಗಟ್ಟಲಿದೆ ಎಂಬುದು ಇನ್ನೂ ಯಾರಿಗೂ ಸ್ಪಷ್ಟವಾಗಿರಲಿಲ್ಲ.

ಬಹುಶಃ ಸ್ವತಃ ಕೊಹ್ಲಿ ಕೂಡ ಅಂದುಕೊಂಡಿರಲಿಲ್ಲವೆನೋ? ಇನಿಂಗ್ಸ್‌ನ 12ನೇ ಓವರ್‌ನಲ್ಲಿ ತಮ್ಮ ಆಟದ ವೇಗವನ್ನು ಅವರು ಬದಲಿಸಿದ್ದರು. ಇದು ಅವರ ಮುಂದಿನ ಅಬ್ಬರಕ್ಕೆ ಮೊದಲ ಲಕ್ಷಣವಾಗಿತ್ತು. ಎಡಗೈ ಸ್ಪಿನ್ನರ್ ಮೊಹಮ್ಮದ್ ನವಾಜ್ ಎಸೆತವನ್ನು ಲಾಂಗ್‌ ಆನ್‌ಗೆ ಸಿಕ್ಸರ್ ಎತ್ತಿದರು.ಇನಿಂಗ್ಸ್‌ನಲ್ಲಿ ಚೆಂಡನ್ನು ಮೊದಲ ಬಾರಿಗೆ ಬೌಂಡರಿ ದಾಟಿಸಿದರು.

ಇನ್ನೊಂದು ಬದಿಯಲ್ಲಿದ್ದ ಹಾರ್ದಿಕ್ ಪಾಂಡ್ಯ ಬ್ಯಾಟಿಂಗ್‌ನಲ್ಲಿಯೂ ತಮ್ಮ ಕಾಣಿಕೆ ನೀಡಿದರು. ಅದೇ ಓವರ್‌ನಲ್ಲಿ ಹಾರ್ದಿಕ್ ಎರಡು ಸಿಕ್ಸರ್ ಎತ್ತಿದರು. ಒಟ್ಟು 20 ರನ್‌ಗಳು ಬಂದವು. ಅದುವರೆಗೂ ಮಂಕಾಗಿದ್ದ ಭಾರತದ ಅಭಿಮಾನಿಗಳಲ್ಲಿ ಮಿಂಚಿನ ಸಂಚಾರವಾಯಿತು.

ಕೊಹ್ಲಿ ಹಾಗೂ ಪಾಂಡ್ಯ ಜೋಡಿಯು 5ನೇ ವಿಕೆಟ್‌ಗೆ 113 ರನ್‌ ಜೊತೆಯಾಟವು ಪಾಕ್ ನಾಯಕ ಆಜಂ ಒತ್ತಡ ಹೆಚ್ಚಿಸಿದವು.  ಭಾರತಕ್ಕೆ ಕೊನೆಯ ಓವರ್‌ನಲ್ಲಿ ಗೆಲುವಿಗೆ 16 ರನ್‌ ಅಗತ್ಯವಿತ್ತು. ಈ ಒಂದು ಓವರ್‌ ದೊಡ್ಡ ಘಟನಾವಳಿಯೇ ಆಯಿತು. ಸ್ಪಿನ್ನರ್ ಮೊಹಮ್ಮದ್ ನವಾಜ್ ಹಾಕಿದ ಈ ಓವರ್‌ನಲ್ಲಿ ಹಾರ್ದಿಕ್ ಹಾಗೂ ದಿನೇಶ್ ಕಾರ್ತಿಕ್ ವಿಕೆಟ್‌ಗಳು ಪತನ ವಾದವು. ಸೊಂಟದೆತ್ತರದ ಫುಲ್‌ಟಾಸ್‌ ಸಿಕ್ಸರ್‌ಗೆತ್ತುವಲ್ಲಿ ಕೊಹ್ಲಿ ಯಶಸ್ವಿಯಾದರು. ಅಂಪೈರ್ ನೋಬಾಲ್ ಸೂಚನೆ ಕೊಟ್ಟರು. ಫ್ರೀಹಿಟ್‌ ಅವಕಾಶದ ಎಸೆತದಲ್ಲಿ ಚೆಂಡು ಸ್ಟಂಪ್‌ಗೆ ಬಡಿದು ಹಿಂದೆ ಧಾವಿಸಿತು. 3 ಬೈ ರನ್‌ ಖಾತೆ ಸೇರಿದವು. ಕೊನೆಯ ಎಸೆತದಲ್ಲಿ 1 ರನ್‌ ಬೇಕಿತ್ತು. ಕ್ರೀಸ್‌ನಲ್ಲಿದ್ದ ಆರ್. ಆಶ್ವಿನ್ ವಿಜಯದ ರನ್‌ ಗಳಿಸಿದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು