T20 WC: ವಿರಾಟ್ ಹುಟ್ಟುಹಬ್ಬ; ದೀಪಾವಳಿ ಹಬ್ಬಕ್ಕೆ ಭಾರತ ಗೆಲುವಿನ ಉಡುಗೊರೆ

ದುಬೈ: ಐಸಿಸಿ ಟ್ವೆಂಟಿ-20 ವಿಶ್ವಕಪ್ ಟೂರ್ನಿಯಲ್ಲಿ ಶುಕ್ರವಾರ ಸ್ಕಾಟ್ಲೆಂಡ್ ವಿರುದ್ಧ ನಡೆದ ಸೂಪರ್-12 ಹಂತದ ಎರಡನೇ ಗುಂಪಿನ ಪಂದ್ಯದಲ್ಲಿ ಭಾರತ ತಂಡವು ಎಂಟು ವಿಕೆಟ್ ಅಂತರದ ಭರ್ಜರಿ ಗೆಲುವು ದಾಖಲಿಸಿದೆ.
ಈ ಮೂಲಕ ದೀಪಾವಳಿ ಹಬ್ಬವನ್ನು ಆಚರಿಸುತ್ತಿರುವ ಭಾರತೀಯ ಅಭಿಮಾನಿಗಳಿಗೆ ಭರ್ಜರಿ ಉಡುಗೊರೆಯನ್ನು ನೀಡಿದೆ. ಅಲ್ಲದೆ ವಿರಾಟ್ ಕೊಹ್ಲಿ ತಮ್ಮ ಹುಟ್ಟುಹಬ್ಬವನ್ನು ಸ್ಮರಣೀಯವಾಗಿಸಿದ್ದಾರೆ.
ಅಷ್ಟೇ ಅಲ್ಲದೆ ಭಾರತವು ಸೆಮಿಫೈನಲ್ ಪ್ರವೇಶದ ಕನಸನ್ನು ಜೀವಂತವಾಗಿರಿಸಿದೆ. ಈಗ ಎಲ್ಲರ ಕಣ್ಣು ಭಾನುವಾರ ನಡೆಯಲಿರುವ ಅಫ್ಗಾನಿಸ್ತಾನ ಹಾಗೂ ನ್ಯೂಜಿಲೆಂಡ್ ಪಂದ್ಯದ ಮೇಲೆ ನೆಟ್ಟಿದೆ.
ಇದನ್ನೂ ಓದಿ: T20 WC: ನಮೀಬಿಯಾ ವಿರುದ್ಧ ಕಿವೀಸ್ಗೆ 52 ರನ್ ಗೆಲುವು
ಹಾಗೊಂದು ವೇಳೆ ನ್ಯೂಜಿಲೆಂಡ್ ವಿರುದ್ಧ ಅಫ್ಗಾನಿಸ್ತಾನ ಗೆದ್ದರೆ ಭಾರತದ ಸೆಮಿಫೈನಲ್ ಪ್ರವೇಶದ ಕನಸು ಚಿಗುರೊಡೆಯಲಿದೆ. ಅಲ್ಲದೆ ಸೋಮವಾರ ನಮೀಬಿಯಾ ವಿರುದ್ಧ ನಡೆಯಲಿರುವ ಪಂದ್ಯದಲ್ಲಿ ಮಗದೊಂದು ಅಧಿಕಾರಯುತ ಗೆಲುವು ದಾಖಲಿಸಿದರೆ ಅಂತಿಮ ನಾಲ್ಕರ ಘಟ್ಟವನ್ನು ಪ್ರವೇಶಿಸಲಿದೆ.
ಸತತ ಎರಡನೇ ಗೆಲುವು ದಾಖಲಿಸಿರುವ ಭಾರತ ನಾಲ್ಕು ಅಂಕಗಳೊಂದಿಗೆ ಮೂರನೇ ಸ್ಥಾನಕ್ಕೆ ನೆಗೆದಿದೆ. ಇವೆಲ್ಲಕ್ಕಿಂತಲೂ ಮಿಗಿಲಾಗಿ ಅಫ್ಗಾನಿಸ್ತಾನ ಹಾಗೂ ನ್ಯೂಜಿಲೆಂಡ್‌ಗಿಂತಲೂ ಉತ್ತಮ ರನ್‌ರೇಟ್ ಕಾಯ್ದುಕೊಳ್ಳಲು ಯಶಸ್ವಿಯಾಗಿದೆ ಎಂಬುದು ಗಮನಾರ್ಹವೆನಿಸುತ್ತದೆ.
ಎಲ್ಲವೂ ಭಾರತದ ಯೋಜನೆಯಂತೆ ನಡೆಯಿತು. ಹುಟ್ಟುಹಬ್ಬದ ಸಂಭ್ರಮದಲ್ಲಿದ್ದ ನಾಯಕ ವಿರಾಟ್ ಕೊಹ್ಲಿ ಟಾಸ್ ಗೆದ್ದು ಮೊದಲು ಫೀಲ್ಡಿಂಗ್ ಆಯ್ದುಕೊಂಡರು. ರವೀಂದ್ರ ಜಡೇಜ (15ಕ್ಕೆ 3), ಮೊಹಮ್ಮದ್ ಶಮಿ (15ಕ್ಕೆ 3) ಸೇರಿದಂತೆ ಭಾರತೀಯ ಬೌಲರ್‌ಗಳ ಸಾಂಘಿಕ ದಾಳಿಗೆ ತತ್ತರಿಸಿರುವ ಸ್ಕಾಟ್ಲೆಂಡ್, 17.4 ಓವರ್‌ಗಳಲ್ಲಿ 85 ರನ್ನಿಗೆ ತನ್ನೆಲ್ಲ ವಿಕೆಟ್‌ಗಳನ್ನು ಕಳೆದುಕೊಂಡಿದೆ.
ಬಳಿಕ ಗುರಿ ಬೆನ್ನತ್ತಿದ ಭಾರತ ಕೆ.ಎಲ್. ರಾಹುಲ್ ಬಿರುಸಿನ ಅರ್ಧಶತಕದ (50) ನೆರವಿನಿಂದ ಕೇವಲ 6.3 ಓವರ್‌ಗಳಲ್ಲಿ ಎರಡು ವಿಕೆಟ್ ನಷ್ಟಕ್ಕೆ ಗುರಿ ತಲುಪಿತು.
ರಾಹುಲ್ ಕೇವಲ 18 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದರು. 19ನೇ ಎಸೆತದಲ್ಲಿ ಔಟ್ ಆದ ರಾಹುಲ್ ಇನ್ನಿಂಗ್ಸ್‌ನಲ್ಲಿ ಆರು ಬೌಂಡರಿ ಹಾಗೂ ಮೂರು ಸಿಕ್ಸರ್ ಸೇರಿದ್ದವು. ಅಲ್ಲದೆ ರೋಹಿತ್ ಜೊತೆಗೆ ಮೊದಲ ವಿಕೆಟ್‌ಗೆ 29 ಎಸೆತಗಳಲ್ಲಿ 70 ರನ್‌ಗಳ ಜೊತೆಯಾಟ ಕಟ್ಟಿದರು.
16 ಎಸೆತಗಳನ್ನು ಎದುರಿಸಿದ ರೋಹಿತ್ ಐದು ಬೌಂಡರಿ ಹಾಗೂ ಒಂದು ಸಿಕ್ಸರ್ ನೆರವಿನಿಂದ 30 ರನ್ ಗಳಿಸಿದರು. ಇನ್ನುಳಿದಂತೆ ಸೂರ್ಯಕುಮಾರ್ ಯಾದವ್ (6*) ಹಾಗೂ ನಾಯಕ ವಿರಾಟ್ ಕೊಹ್ಲಿ (2*) ರನ್ ಗಳಿಸಿ ತಂಡದ ಗೆಲುವನ್ನು ಸುಲಭಗೊಳಿಸಿದರು.
ಈ ಮೊದಲು ಭಾರತೀಯ ಬೌಲರ್‌ಗಳ ನಿಖರ ದಾಳಿಯ ಎದುರು ಸ್ಕಾಟ್ಲೆಂಡ್ ಬ್ಯಾಟರ್‌ಗಳು ಪರದಾಡಿದರು. ಜಾರ್ಜ್ ಮುನ್ಸೆ (24) ಹಾಗೂ ಮೈಕೆಲ್ ಲೀಸ್ಕ್ (21) ಹೋರಾಟವನ್ನು ಹೊರತುಪಡಿಸಿದರೆ ಇತರೆ ಯಾವ ಬ್ಯಾಟರ್‌ಗಳಿಂದ ಉತ್ತಮ ಪ್ರದರ್ಶನ ಮೂಡಿ ಬರಲಿಲ್ಲ.
ಭಾರತದ ಪರ ರವೀಂದ್ರ ಜಡೇಜ ಹಾಗೂ ಮೊಹಮ್ಮದ್ ಶಮಿ ತಲಾ ಮೂರು ವಿಕೆಟ್ ಹಾಗೂ ಜಸ್‌ಪ್ರೀತ್ ಬೂಮ್ರಾ ಎರಡು ವಿಕೆಟ್ ಕಿತ್ತು ಮಿಂಚಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.