ಮುಂಬೈ: ಐದು ವಿಕೆಟ್ ಗಳಿಸಿದ ಮಧ್ಯಮವೇಗಿ ಮೆರಿಜಾನೆ ಕೆಪ್ ಹಾಗೂ ಐದು ಸಿಕ್ಸರ್ ಹೊಡೆದ ಶಫಾಲಿ ವರ್ಮಾ ಅವರ ಬ್ಯಾಟಿಂಗ್ ಬಲದಿಂದ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಮಹಿಳಾ ಪ್ರೀಮಿಯರ್ ಲೀಗ್ (ಡಬ್ಲ್ಯುಪಿಎಲ್) ಟಿ20 ಕ್ರಿಕೆಟ್ ಟೂರ್ನಿಯ ಪಂದ್ಯದಲ್ಲಿ ಜಯಿಸಿತು.
ಡಿವೈ ಪಾಟೀಲ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಹಣಾಹಣಿಯಲ್ಲಿ ಡೆಲ್ಲಿ ತಂಡವು 10 ವಿಕೆಟ್‌ಗಳಿಂದ ಗುಜರಾತ್ ಜೈಂಟ್ಸ್ ತಂಡವನ್ನು ಸೋಲಿಸಿತು. ಟಾಸ್ ಗೆದ್ದ ಗುಜರಾತ್ ತಂಡವು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಆದರೆ, ಡೆಲ್ಲಿ ತಂಡದ ಬೌಲರ್‌ಗಳು ಶಿಸ್ತಿನ ದಾಳಿ ನಡೆಸಿದರು. ಮೆರಿಜಾನೆ 15 ರನ್‌ಗಳಿಗೆ ಐದು ವಿಕೆಟ್ ಗೊಂಚಲು ಗಳಿಸಿದ ಸಾಧನೆ ಮಾಡಿದರು. ಅವರೊಂದಿಗೆ ಶಿಖಾ ಪಾಂಡೆ (26ಕ್ಕೆ3) ಕೂಡ ಮಿಂಚಿದರು. ಇದರಿಂದಾಗಿ ಗುಜರಾತ್ ತಂಡವು 20 ಓವರ್‌ಗಳಲ್ಲಿ 9 ವಿಕೆಟ್‌ಗಳಿಗೆ 105 ರನ್ ಗಳಿಸಿತು.
ಅದಕ್ಕುತ್ತರವಾಗಿ ಡೆಲ್ಲಿ ತಂಡವು 7.1 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೇ 107 ರನ್ ಗಳಿಸಿತು. ನಾಯಕಿ ಮೆಗ್ ಲ್ಯಾನಿಂಗ್ (ಔಟಾಗದೆ 21; 15 ಎಸೆತ) ಹಾಗೂ ಶಫಾಲಿ (ಔಟಾಗದೆ 76; 28ಎ, 4X10, 6X5) ಮಿಂಚಿದರು.
ಮೆರಿಜಾನೆ ಮಿಂಚು: ಗುಜರಾತ್ ತಂಡದ ಬ್ಯಾಟರ್‌ಗಳು ವೈಫಲ್ಯ ಅನುಭವಿಸಲು ಮೆರಿಜಾನೆ ಕಾರಣವಾದರು. ಮೊದಲ ಓವರ್‌ನ ಎರಡನೇ ಎಸೆತದಲ್ಲಿಯೇ ಮೆರಿಜಾನೆ ಅವರು ಸಬ್ಬಿನೆನಿ ಮೇಘನಾ ಅವರನ್ನು ಕ್ಲೀನ್‌ಬೌಲ್ಡ್ ಮಾಡಿದರು. ತಮ್ಮ ಇನ್ನೊಂದು ಓವರ್‌ನಲ್ಲಿ ವೋಲ್ವರ್ಡೆತ್‌ಗೂ ಪೆವಿಲಿಯನ್ ದಾರಿ ತೋರಿಸಿದರು. ಭರವಸೆಯ ಆಟಗಾರ್ತಿ ಹರ್ಲಿನ್ ಡಿಯೊಲ್ (20; 14ಎ, 4X4) ಅವರ ವಿಕೆಟ್ ಕೂಡ ಮೆರಿಜಾನೆ ಪಾಲಾಯಿತು. ಮತ್ತೊಂದು ಬದಿಯಿಂದ ರಾಧಾ ಯಾದವ್ ಹಾಗೂ ಶಿಖಾ ಪಾಂಡೆಯವರು ಬ್ಯಾಟರ್‌ಗಳನ್ನು ಕಾಡಿದರು.
ಆದರೆ, ಏಳನೇ ಕ್ರಮಾಂಕದಲ್ಲಿ ಕ್ರೀಸ್‌ಗೆ ಬಂದ ಕಿಮ್ ಗಾರ್ಥ್ ( ಔಟಾಗದೆ 32; 37ಎ, 4X3) ಬೌಲರ್‌ಗಳಿಗೆ ದಿಟ್ಟ ಉತ್ತರ ನೀಡಿದರು.
ಸಂಕ್ಷಿಪ್ತ ಸ್ಕೋರು: ಗುಜರಾತ್ ಜೈಂಟ್ಸ್: 20 ಓವರ್‌ಗಳಲ್ಲಿ 9 ವಿಕೆಟ್‌ಗಳಿಗೆ 105 (ಹರ್ಲಿನ್ ಡಿಯೊಲ್ 20, ಜಾರ್ಜಿಯಾ ವರೆಹಂ 22, ಕಿಮ್ ಗಾರ್ಥ್ ಔಟಾಗದೆ 32, ಮೆರಿಜಾನೆ ಕೆಪ್ 15ಕ್ಕೆ5, ಶಿಖಾ ಪಾಂಡೆ 26ಕ್ಕೆ3) ಡೆಲ್ಲಿ ಕ್ಯಾಪಿಟಲ್ಸ್: 7.1 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೇ 107 (ಮೆಗ್ ಲ್ಯಾನಿಂಗ್ ಔಟಾಗದೆ 21, ಶಫಾಲಿ ವರ್ಮಾ ಔಟಾಗದೆ 76) ಫಲಿತಾಂಶ: ಡೆಲ್ಲಿಗೆ 10 ವಿಕೆಟ್ ಜಯ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.