ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರಿಕೆಟ್‌: ಆಟ ಇನ್ನೂ ಬಾಕಿ ಇದೆ..

ಮಳೆಯಿಂದಾಗಿ ಅರ್ಧ ನಡೆದ ಪಂದ್ಯ; ಇಂದು ಮುಂದುವರಿಯಲಿದೆ; ಅರ್ಧಶತಕ ದಾಖಲಿಸಿದ ಟೇಲರ್‌-, ಕೇನ್‌
Last Updated 10 ಜುಲೈ 2019, 6:34 IST
ಅಕ್ಷರ ಗಾತ್ರ

ಮ್ಯಾಂಚೆಸ್ಟರ್: ಮಂಗಳವಾರ ವಿಶ್ವಕಪ್ ಕ್ರಿಕೆಟ್‌ ಟೂರ್ನಿಯ ಸೆಮಿಫೈನಲ್ ಪಂದ್ಯವನ್ನು ಇಡಿಯಾಗಿ ಕಣ್ತುಂಬಿಕೊಳ್ಳಲು ತುದಿಗಾಲಿನಲ್ಲಿ ನಿಂತಿದ್ದ ಅಭಿಮಾನಿಗಳ ಆಸೆ ಅರ್ಧ ಮಾತ್ರ ಈಡೇರಿತು. ಫಲಿತಾಂಶಕ್ಕಾಗಿ ಬುಧವಾರ ಸಂಜೆಯವರೆಗೂ ಕಾಯಬೇಕು!

ಮ್ಯಾಂಚೆಸ್ಟರ್‌ನಲ್ಲಿ ಸುರಿದ ಮಳೆ ಯಿಂದಾಗಿ ಭಾರತ ಮತ್ತು ನ್ಯೂಜಿಲೆಂಡ್ ತಂಡಗಳ ನಡುವಣ ಸೆಮಿಫೈನಲ್ ಪಂದ್ಯವು ಎರಡು ಕಂತುಗಳಲ್ಲಿ ನಡೆ ಯುವಂತಾಯಿತು. ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಕಿವೀಸ್ ತಂಡವು 46.1 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 211 ರನ್‌ ಗಳಿಸಿದ್ದ ಸಂದರ್ಭದಲ್ಲಿ ಮಳೆ ಆರಂಭವಾಯಿತು.

ಮೊದಲು ಸ್ವಲ್ಪ ಹೊತ್ತು ಜೋರಾಗಿ ಸುರಿಯಿತು. ನಂತರ ಮೆಲ್ಲಗೆ ಹನಿಯಲಾರಂಭಿಸಿತು. ಸಂಪೂರ್ಣವಾಗಿ ಮಳೆ ಸ್ಥಗಿತವಾಗದ ಕಾರಣ ಅಂಪೈರ್‌ಗಳಿಗೆ ಪಿಚ್ ಪರಿಶೀಲಿಸುವ ಅವಕಾಶವೂ ಸಿಗಲಿಲ್ಲ. ರಾತ್ರಿ 11ಕ್ಕೆ (ಭಾರತೀಯ ಕಾಲಮಾನ) ಅಂಪೈರ್‌ಗಳು ಪಂದ್ಯ ವನ್ನು ಮುಂದೂಡಲಾಗಿದೆಯೆಂದು ಘೋಷಿಸಿದರು. ಕಾಯ್ದಿಟ್ಟ ದಿನವಾದ ಬುಧವಾರ ಮಧ್ಯಾಹ್ನ 3ಕ್ಕೆ ಪಂದ್ಯ ಆರಂಭವಾಗಲಿದ್ದು, ಕಿವೀಸ್ ತನ್ನ ಇನಿಂಗ್ಸ್‌ ಮುಂದುವರಿಸಲಿದೆ.

ಹವಾಮಾನ ಇಲಾಖೆಯ ಮಾಹಿತಿಯ ಪ್ರಕಾರ ಬುಧವಾರವೂ ಬೆಳಿಗ್ಗೆ ಮಳೆ ಸುರಿಯುವ ಸಾಧ್ಯತೆ ದಟ್ಟವಾಗಿದೆ. ಮಳೆಯಿಂದಾಗಿ ಪಂದ್ಯ ಅರ್ಧ ಆದರೆ ಡಕ್ವರ್ಥ್ ಲೂಯಿಸ್ ನಿಯಮ ಅನ್ವಯವಾಗಲಿದೆ.

ಮಳೆಯಿಂದಾಗಿ ಆಟ ನಿಂತಾಗ ಭಾರತ ತಂಡದ ಆಟಗಾರರು ಡ್ರೆಸಿಂಗ್‌ ಕೊಠಡಿಯತ್ತ ಹೆಜ್ಜೆ ಹಾಕಿದರು –ರಾಯಿಟರ್ಸ್‌ ಚಿತ್ರ
ಮಳೆಯಿಂದಾಗಿ ಆಟ ನಿಂತಾಗ ಭಾರತ ತಂಡದ ಆಟಗಾರರು ಡ್ರೆಸಿಂಗ್‌ ಕೊಠಡಿಯತ್ತ ಹೆಜ್ಜೆ ಹಾಕಿದರು –ರಾಯಿಟರ್ಸ್‌ ಚಿತ್ರ

ಒಂದೊಮ್ಮೆ ಮಳೆಯಿಂದಾಗಿ ದಿನದ ಆಟವೇ ಸಂಪೂರ್ಣ ರದ್ದಾದರೆ ಭಾರತವು ಫೈನಲ್ ತಲುಪುವುದು ಖಚಿತ. ರೌಂಡ್‌ ರಾಬಿನ್ ಲೀಗ್‌ನಲ್ಲಿ 15 ಪಾಯಿಂಟ್ಸ್‌ ಗಳಿಸಿರುವ ಭಾರತ ಅಗ್ರಸ್ಥಾನದಲ್ಲಿತ್ತು. 11 ಅಂಕ ಗಳಿಸಿರುವ ಕಿವೀಸ್ ನಾಲ್ಕನೇ ಸ್ಥಾನದಲ್ಲಿತ್ತು. ಆದ್ದ ರಿಂದ ಭಾರತಕ್ಕೇ ಅನುಕೂಲ ಹೆಚ್ಚು.

ಬೌಲರ್‌ಗಳ ಆಟ: ಮಳೆಗೂ ಮುನ್ನ ನ್ಯೂಜಿಲೆಂಡ್ ತಂಡದ ಬ್ಯಾಟ್ಸ್‌ಮನ್‌ ಗಳು ಭಾರತದ ಬೌಲರ್‌ಗಳ
ಮುಂದೆ ಪರದಾಡಿದರು.

ಜಸ್‌ಪ್ರೀತ್ ಬೂಮ್ರಾ ಆರಂಭ ದಲ್ಲಿಯೇ ಕೊಟ್ಟ ಪೆಟ್ಟಿಗೆ ಕಿವೀಸ್ ಬಳಗವು ಥರಗುಟ್ಟಿತು. ನಾಯಕ ಕೇನ್ ವಿಲಿಯಮ್ಸನ್ (67; 95 ಎಸೆತ) ಮತ್ತು ರಾಸ್ ಟೇಲರ್ (ಬ್ಯಾಟಿಂಗ್‌ 67; 85 ಎಸೆತ) ಅವರು ತಮ್ಮ ತಾಳ್ಮೆಯ ಅರ್ಧಶತಕದ ಬಲದಿಂದ ತಂಡದ ಹೋರಾಟಕ್ಕೆ ಜೀವ ತುಂಬಿದರು. ಬೂಮ್ರಾ ತಮ್ಮ ಮೊದಲ ಸ್ಪೆಲ್‌ನಲ್ಲಿ (4–1–10–1) ಬಿಗಿ ದಾಳಿ ನಡೆಸಿದರು. ಇದರಿಂದಾಗಿ ಕಿವೀಸ್ ತಂಡವು ಮೊದಲ ಹತ್ತು ಓವರ್‌ಗಳಲ್ಲಿ ಕೇವಲ 27 ರನ್ ಗಳಿಸಿತು. ಟೂರ್ನಿಯಲ್ಲಿ ಇದು ಅತ್ಯಂತ ಕನಿಷ್ಠ ಗಳಿಕೆಯಾಗಿದೆ.

ಭುವನೇಶ್ವರ್ ಕುಮಾರ್ ಅವರುಇನಿಂಗ್ಸ್‌ನ ಮೊದಲ ಎಸೆತದಲ್ಲಿಯೇ ಮಾರ್ಟಿನ್ ಗಪ್ಟಿಲ್ ಅವರು ಎಲ್‌ಬಿಡಬ್ಲ್ಯು ಎಂದು ಅಪೀಲ್ ಮಾಡಿದ ಭಾರತ ತಂಡ ಯುಡಿ ಆರ್‌ಎಸ್ ಬಳಸಿಕೊಂಡಿತು. ಆದರೆ ಫಲ ನೀಡಲಿಲ್ಲ.

ಆದರೆ ಈ ಅವಕಾಶವನ್ನು ಗಪ್ಟಿಲ್ ಬಳಸಿಕೊಳ್ಳಲಿಲ್ಲ. ಹೊಸಚೆಂಡಿನ ಹೊಳಪಿಗೆ ಅವರು ಕುದುರಿಕೊಳ್ಳಲಿಲ್ಲ. ನಾಲ್ಕನೇ ಓವರ್‌ನಲ್ಲಿ ಬೂಮ್ರಾ ಎಸೆತದಲ್ಲಿ ಅವರು ವಿರಾಟ್ ಕೊಹ್ಲಿಗೆ ಕ್ಯಾಚಿತ್ತರು. ಇದರಿಂದಾಗಿ ಭಾರತ ಬಳಗದಲ್ಲಿ ಸಂಭ್ರಮ ಪುಟಿದೆದ್ದಿತು.

ಇನ್ನೊಬ್ಬ ಆರಂಭಿಕ ಬ್ಯಾಟ್ಸ್‌ಮನ್ ಹೆನ್ರಿ ನಿಕೊಲ್ಸ್‌ ಜೊತೆಗೂಡಿದ ಕೇನ್ ವಿಲಿಯಮ್ಸನ್ ತಾಳ್ಮೆಯ ಆಟವಾಡಿದರು. ಇವರಿಬ್ಬರು ಎರಡನೇ ವಿಕೆಟ್‌ಗೆ 68 ರನ್‌ ಸೇರಿಸಿದರು. ಎಡಗೈ ಸ್ಪಿನ್ನರ್ ರವೀಂದ್ರ ಜಡೇಜ 19ನೇ ಓವರ್‌ನಲ್ಲಿ ನಿಕೊಲ್ಸ್‌ ಅವರನ್ನು ಕ್ಲೀನ್‌ಬೌಲ್ಡ್ ಮಾಡಿದರು.

ಈ ಹಂತದಲ್ಲಿ ಜೊತೆಗೂಡಿದ ಕೇನ್ ಮತ್ತು ರಾಸ್ ಟೇಲರ್‌ ಕೂಡ ಆಕ್ರಮಣಕಾರಿ ಆಟವಾಡಲಿಲ್ಲ. ಚೆಂಡು ನಿಧಾನವಾಗಿ ಪುಟಿದೆದ್ದು ಬರುತ್ತಿದ್ದ ಪಿಚ್‌ನಲ್ಲಿ ಬ್ಯಾಟಿಂಗ್ ಸುಲಭವಾಗಿರಲಿಲ್ಲ. ಔಟ್‌ಫೀಲ್ಡ್‌ ಕೂಡ ದೊಡ್ಡದಾದ ಕಾರಣ ಬೌಂಡರಿ, ಸಿಕ್ಸರ್‌ಗಳು ಸುಲಭ ವಾಗಿ ದಕ್ಕಲಿಲ್ಲ.‌ ಮೂರನೇ ವಿಕೆಟ್ ಜೊತೆಯಾಟದಲ್ಲಿ ಕೇನ್‌– ಟೇಲರ್‌ 65 ರನ್‌ ಸೇರಿಸಿದರು.

ಕೇನ್ ಲಯಕ್ಕೆ ಮರಳಿದ್ದು ಭಾರತಕ್ಕೆ ತಲೆನೋವಾಗುವ ಸಾಧ್ಯತೆಯಿತ್ತು. ಈ ಜೊತೆಯಾಟವನ್ನು ಯಜುವೇಂದ್ರ ಚಾಹಲ್ ಮುರಿದರು. ನಂತರ ಬಂದ ಜೇಮ್ಸ್‌ ನಿಶಾಮ್ ಮತ್ತು ಕಾಲಿನ್ ಡಿ ಗ್ರ್ಯಾಂಡ್‌ಹೋಮ್ ಅವರು ಹೆಚ್ಚು ಹೊತ್ತು ನಿಲ್ಲದಂತೆ ಹಾರ್ದಿಕ್ ಪಾಂಡ್ಯ ಮತ್ತು ಭುವನೇಶ್ವರ್ ಕುಮಾರ್‌ ನೋಡಿಕೊಂಡರು. ಆದರೆ ರಾಸ್ ಟೇಲರ್ ಮಾತ್ರ ದಿಟ್ಟವಾಗಿ ಆಡಿದರು.

ಭಾರತ ತಂಡವು ಈ ಪಂದ್ಯದಲ್ಲಿ ಮಧ್ಯಮವೇಗಿ ಮೊಹಮ್ಮದ್ ಶಮಿ ಅವರಿಗೆ ಅವಕಾಶ ನೀಡಲಿಲ್ಲ. ಈ ವಿಷಯವು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಗ್ರಾಸವಾಯಿತು. ಅವರು ನಾಲ್ಕು ಪಂದ್ಯಗಳಿಂದ 14 ವಿಕೆಟ್ ಗಳಿಸಿದ್ದಾರೆ. ಕುಲದೀಪ್ ಯಾದವ್ ಅವರಿಗೆ ವಿಶ್ರಾಂತಿ ನೀಡಿ ಚಾಹಲ್‌ಗೆ ಅವಕಾಶ ನೀಡಲಾಯಿತು.

ಪ್ರೇಕ್ಷಕರು ವಶಕ್ಕೆ
ಮ್ಯಾಂಚೆಸ್ಟರ್‌ (ಎಎಫ್‌ಪಿ):
ಭಾರತ– ನ್ಯೂಜಿಲೆಂಡ್‌ ನಡುವಣ ಸೆಮಿಫೈನಲ್‌ ಪಂದ್ಯದ ವೇಳೆ ‘ರಾಜಕೀಯ ಪ್ರತಿಭಟನೆ’ ಮಾಡುತ್ತಿದ್ದ ನಾಲ್ವರು ಪ್ರೇಕ್ಷಕರನ್ನು ಓಲ್ಡ್‌ ಟ್ರಾಫರ್ಡ್‌ ಕ್ರೀಡಾಂಗಣದಿಂದ ಬೇಡಿ ಹಾಕಿ ಕರೆದೊಯ್ಯಲಾಯಿತು.

ಇವರು ಸಿಖ್‌ ಪ್ರತ್ಯೇಕತಾವಾದಿ ಗುಂಪಿಗೆ ಸೇರಿದ್ದು, ಭಾರತದಲ್ಲಿ ಸಿಖ್ಖರಿಗೆ ಪ್ರತ್ಯೇಕ ದೇಶ ಕಲ್ಪಿಸಬೇಕು ಎಂದು ಒತ್ತಾಯಿಸುವ ಟೀ ಶರ್ಟ್‌ ಧರಿಸಿದ್ದು, ಬ್ಯಾನರ್‌ಗಳನ್ನು ಪ್ರದರ್ಶಿಸಿದರು.

‘ಈ ಅಭಿಮಾನಿಗಳಿದ್ದ ಸ್ಟ್ಯಾಂಡ್‌ಗೆ ತೆರಳಿದ ಭದ್ರತಾ ಸಿಬ್ಬಂದಿ ಅವರನ್ನು ಕ್ರೀಡಾಂಗಣದಿಂದ ಹೊರದಬ್ಬಿ ಪೊಲೀಸರಿಗೆ ಒಪ್ಪಿಸಿದರು. ಈ ಸಂದರ್ಭದಲ್ಲಿ ಹೆಚ್ಚಿನ ಪ್ರತಿರೋಧ ಎದುರಾಗಲಿಲ್ಲ. ಯುವಕರು ರಾಜಕೀಯ ಘೋಷಣೆಗಳಿ ರುವ ಟೀ ಷರ್ಟ್‌ ಧರಿಸಿದ್ದರು. ಇದಕ್ಕೆ ಅವಕಾಶವಿರಲಿಲ್ಲ’ ಎಂದು ಪೊಲೀಸ್‌ ಸಿಬ್ಬಂದಿಯೊಬ್ಬರು ತಿಳಿಸಿದರು.ಈ ವಿಶ್ವಕಪ್‌ ಪಂದ್ಯಗಳ ಸಂದರ್ಭ ದಲ್ಲಿ ಇತರೆ ಕೆಲವು ರಾಜಕೀಯ ಪ್ರತಿಭಟನೆಗಳು ನಡೆದಿದ್ದವು. ಆದರೆ ಐಸಿಸಿ ಇದರಿಂದ ಅಂತರ ಕಾಯ್ದುಕೊಂಡಿತ್ತು.

ಫೈನಲ್‌ನಲ್ಲಿ ಮಳೆ ಸುರಿದರೆ..?
ಇಂಗ್ಲೆಂಡ್‌ನಲ್ಲಿ ಮಳೆಯಿಂದಾಗಿ ವಿಶ್ವಕಪ್ ಟೂರ್ನಿಯ ರೌಂಡ್‌ ರಾಬಿನ್ ಲೀಗ್ ಹಂತದಲ್ಲಿ ನಾಲ್ಕು ಪಂದ್ಯಗಳು ರದ್ದಾಗಿದ್ದವು. ಆದರೆ, ಆ ಪಂದ್ಯಗಳಿಗೆ ಒಂದು ಕಾಯ್ದಿಟ್ಟ ದಿನವನ್ನು ನಿಗದಿಪಡಿಸಿರಲಿಲ್ಲ.ನಾಕೌಟ್ ಹಂತದ ಪಂದ್ಯಗಳಿಗೆ ಮಾತ್ರ ಕಾಯ್ದಿಟ್ಟ ದಿನವನ್ನು ನಿಗದಿಪಡಿಸಲಾಗಿದೆ.

ಸೆಮಿಫೈನಲ್‌ ದಿನ ಮಳೆ ಬಂದರೆ ಮರುದಿನ ಕಾಯ್ದಿಟ್ಟದಿನವಾಗಿದೆ. ಆದರೆ ಆ ದಿನವೂ ಮಳೆ ಬಂದರೆ. ಪಂದ್ಯವನ್ನು ರದ್ದುಗೊಳಿಸಲಾಗುತ್ತದೆ. ಉಭಯ ತಂಡಗಳ ಪೈಕಿ ರೌಂಡ್ ರಾಬಿನ್ ಲೀಗ್‌ನಲ್ಲಿ ಹೆಚ್ಚು ಅಂಕ ಗಳಿಸಿರುವ ತಂಡವನ್ನು ಫೈನಲ್‌ಗೆ ಅರ್ಹತೆ ಪಡೆಯುತ್ತದೆ.

ಫೈನಲ್‌ ಪಂದ್ಯಕ್ಕೂ ಒಂದು ಹೆಚ್ಚುವರಿ ಕಾಯ್ದಿಟ್ಟ ದಿನವನ್ನು ನಿಗದಿಗೊಳಿಸಲಾಗಿದೆ. ಆದರೆ ಒಂದೊಮ್ಮೆ ಎರಡೂ ದಿನ ಮಳೆ ಬಂದು ಪಂದ್ಯ ರದ್ದಾದರೆ, ಉಭಯ ತಂಡಗಳಿಗೂ ಪ್ರಶಸ್ತಿ ಹಂಚಲಾಗುತ್ತದೆ. ಜಂಟಿ ಚಾಂಪಿಯನ್ ಎಂದು ಘೋಷಿಸಲಾಗುತ್ತದೆ ಎಂದು ಐಸಿಸಿಯ ನಿಯಮದಲ್ಲಿ ಉಲ್ಲೇಖಿಸಲಾಗಿದೆ.

ನ್ಯೂಜಿಲೆಂಡ್‌ ಎದುರಿನ ಪಂದ್ಯದಲ್ಲಿ ಭಾರತ ತಂಡವನ್ನು ಪ್ರೋತ್ಸಾಹಿಸಿದ ಅಭಿಮಾನಿಗಳು –ಎಎಫ್‌ಪಿ ಚಿತ್ರ
ನ್ಯೂಜಿಲೆಂಡ್‌ ಎದುರಿನ ಪಂದ್ಯದಲ್ಲಿ ಭಾರತ ತಂಡವನ್ನು ಪ್ರೋತ್ಸಾಹಿಸಿದ ಅಭಿಮಾನಿಗಳು –ಎಎಫ್‌ಪಿ ಚಿತ್ರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT