ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತದ ಭರಾಟೆಗೆ ಆಸ್ಟ್ರೇಲಿಯಾ ಶರಣು

‘ಗಬ್ಬರ್‌’ ಅಬ್ಬರ; ರನ್‌ಗಳ ‘ಶಿಖರ; ಧೋನಿ ವಿಕೆಟ್ ಕೀಪಿಂಗ್ ಕೈಗವಸಿನಿಂದ ಮುದ್ರೆ ಮಾಯ
Last Updated 13 ಜೂನ್ 2019, 14:50 IST
ಅಕ್ಷರ ಗಾತ್ರ

ಲಂಡನ್: ವಿರಾಟ್ ಕೊಹ್ಲಿ ಬಳಗವು ಭಾನುವಾರ ‘ಹಾಲಿ ಚಾಂಪಿಯನ್’ ಆಸ್ಟ್ರೇಲಿಯಾಕ್ಕೆ ಸೋಲಿನ ಆಘಾತ ನೀಡಿತು.

ಶಿಖರ್ ಧವನ್ ಶತಕದ ಅಬ್ಬರ, ಭಾರತದ ವೇಗದ ಜೋಡಿಯ ಭರಾಟೆಯಲ್ಲಿ ಆ್ಯರನ್‌ ಫಿಂಚ್ ಬಳಗವು ಸೋಲಿನ ಕಹಿ ಅನುಭವಿಸಿತು. 36 ರನ್‌ಗಳಿಂದ ಗೆದ್ದ ವಿರಾಟ್ ಬಳಗವು ಟೂರ್ನಿಯಲ್ಲಿ ಸತತ ಎರಡನೇ ಜಯ ದಾಖಲಿಸಿತು. ಮೊದಲ ಎರಡೂ ಪಂದ್ಯಗಳಲ್ಲಿ ಭರ್ಜರಿ ಗೆಲುವು ಸಾಧಿಸಿದ್ದ ಆಸ್ಟ್ರೇಲಿಯಾ, ಈ ಪಂದ್ಯದಲ್ಲಿ ಭಾರತದ ಆಟಗಾರ ಗಟ್ಟಿ ಮನೋಬಲದ ಆಟ ಮತ್ತು ಸಂಘಟಿತ ಹೋರಾಟದ ಮುಂದೆ ಬಸವಳಿಯಿತು.

ಟಾಸ್ ಗೆದ್ದ ಭಾರತ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ದೆಹಲಿಯ ಎಡಗೈ ಬ್ಯಾಟ್ಡ್‌ಮನ್ ಶಿಖರ್ ಧವನ್ (117; 109ಎಸೆತ, 16ಬೌಂಡರಿ) ಅವರ ಅಮೋಘ ಶತಕದ ಬಲದಿಂದ ಭಾರತ ತಂಡವು 50 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 352 ರನ್‌ ಗಳಿಸಿತು. ರೋಹಿತ್ ಶರ್ಮಾ (57; 70ಎಸೆತ, 3ಬೌಂಡರಿ, 1ಸಿಕ್ಸರ್), ನಾಯಕ ವಿರಾಟ್ ಕೊಹ್ಲಿ (82; 77ಎಸೆತ, 4ಬೌಂಡರಿ, 2ಸಿಕ್ಸರ್) ಅವರಿಬ್ಬರೂ ಅಬ್ಬರದ ಅರ್ಧಶತಕ ಸಿಡಿಸಿದರು. ಬ್ಯಾಟಿಂಗ್ ಕ್ರಮಾಂಕದಲ್ಲಿ ಬಡ್ತಿ ಪಡೆದ ಹಾರ್ದಿಕ್ ಪಾಂಡ್ಯ (48; 27ಎಸೆತ, 4ಬೌಂಡರಿ, 3ಸಿಕ್ಸರ್) ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದರು.

ಗುರಿ ಬೆನ್ನತ್ತಿದ ಆಸ್ಟ್ರೇಲಿಯಾ 50ನೇ ಓವರ್‌ನ ಕೊನೆಯ ಎಸೆತದಲ್ಲಿ 316 ರನ್ ಗಳಿಸಿ ಆಲೌಟ್ ಆಯಿತು. ಭುವನೇಶ್ವರ್ ಕುಮಾರ್ (50ಕ್ಕೆ3) ಮತ್ತು ಜಸ್‌ಪ್ರೀತ್ ಬೂಮ್ರಾ (61ಕ್ಕೆ3) ಆಸ್ಟ್ರೇಲಿಯಾದ ಬ್ಯಾಟಿಂಗ್ ಬೆನ್ನೆಲುಬನ್ನು ಮುರಿದರು.

ಭುವಿ ಕೊಟ್ಟ ತಿರುವು: ಆಸ್ಟ್ರೇಲಿಯಾದ ಉತ್ತಮ ಬ್ಯಾಟಿಂಗ್ ಲೈನ್ಅಪ್‌ಗೆ 352 ರನ್‌ಗಳ ಗುರಿ ಅಸಾಧ್ಯವೇನಾಗಿರಲಿಲ್ಲ. ಸ್ಫೋಟಕ ಬ್ಯಾಟ್ಸ್‌ಮನ್ ಡೇವಿಡ್ ವಾರ್ನರ್ (56 ರನ್), ಸ್ಟೀವನ್ ಸ್ಮಿತ್ (69 ರನ್) ಮತ್ತು ಅಲೆಕ್ಸ್‌ ಕ್ಯಾರಿ (ಔಟಾಗದೆ 55 ರನ್) ಅವರು ಹೊಡೆದ ಅರ್ಧಶತಕಗಳು ಕೂಡ ಭಾರತಕ್ಕೆ ಆತಂಕ ಒಡ್ಡಿದ್ದು ನಿಜ. ಆದರೆ, ಪ್ರಮುಖ ಹಂತದಲ್ಲಿ ದೊಡ್ಡ ಜೊತೆಯಾಟಗಳು ಬೆಳೆಯದಂತೆ ನೋಡಿಕೊಳ್ಳುವಲ್ಲಿ ಭಾರತ ತಂಡವು ಯಶಸ್ವಿಯಾಯಿತು.

ಉತ್ತಮ ಆರಂಭ ನೀಡುವಲ್ಲಿ ಸಫಲರಾದ ಆ್ಯರನ್ ಫಿಂಚ್ (36 ರನ್) ಅವರನ್ನು ರನೌಟ್‌ ಮಾಡಿ ಜಾಧವ್ ಮತ್ತು ಪಾಂಡ್ಯ ವಿಕೆಟ್ ಬೇಟೆಗೆ ಮುನ್ನುಡಿ ಬರೆದರು. ವಾರ್ನರ್ ಮತ್ತು ಸ್ಮಿತ್ ಅವರ ಜೊತೆಯಾಟವನ್ನು ಮುರಿಯುವಲ್ಲಿ ಯಜುವೇಂದ್ರ ಚಾಹಲ್ ಯಶಸ್ವಿಯಾದರು. ಇದರಿಂದಾಗಿ ರನ್‌ ಗಳಿಕೆಯ ಅಂತರ ಹೆಚ್ಚುತ್ತ ಹೋಯಿತು.

ಆದರೆ, ಭುವನೇಶ್ವರ್ 40ನೇ ಓವರ್‌ನಲ್ಲಿ ಉರುಳಿಸಿದ ಎರಡು ವಿಕೆಟ್‌ಗಳು ಭಾರತದ ಗೆಲುವಿನ ಸಾಧ್ಯತೆಯನ್ನು ಹೆಚ್ಚಿಸಿದವು. ಒಂದೇ ಓವರ್‌ನಲ್ಲಿ ಸ್ಮಿತ್ ಮತ್ತು ಮಾರ್ಕಸ್‌ ಸ್ಟೊಯಿನಿಸ್ ವಿಕೆಟ್‌ಗಳನ್ನು ಅವರು ಕಬಳಿಸಿದರು.

ಆರಂಭದಲ್ಲಿ ಜೊತೆಗೂಡಿದ ಅದೃಷ್ಟ: ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಭಾರತ ತಂಡದ ಅದೃಷ್ಟ ಗಟ್ಟಿಯಾಗಿತ್ತು. ಎರಡನೇ ಓವರ್‌ನಲ್ಲಿ ಮಿಷೆಲ್ ಸ್ಟಾರ್ಕ್‌ ಎಸೆತದಲ್ಲಿ ನೇಥನ್ ಕಾಲ್ಟರ್‌ನೈಲ್ ಅವರು ರೋಹಿತ್ ಶರ್ಮಾಗೆ ಜೀವದಾನ ನೀಡಿದರು. ಇದು ಆಸ್ಟ್ರೇಲಿಯಾಕ್ಕೆ ದುಬಾರಿಯಾಯಿತು. ಶಿಖರ್ ಮತ್ತು ರೋಹಿತ್ ಎಲ್ಲ ಬೌಲರ್‌ಗಳನ್ನು ಕಾಡಿದರು. ಇವರಿಬ್ಬರು ಮೊದಲ ವಿಕೆಟ್‌ ಜೊತೆಯಾಟದಲ್ಲಿ 127 ರನ್‌ಗಳನ್ನು ಸೇರಿಸಿದರು. ದಕ್ಷಿಣ ಆಫ್ರಿಕಾ ಎದುರಿನ ಪಂದ್ಯದಲ್ಲಿ ವೈಫಲ್ಯ ಅನುಭವಿಸಿದ್ದ ಶಿಖರ್ ಇಲ್ಲಿ 53 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಆ ಪಂದ್ಯದಲ್ಲಿ ಶತಕ ಬಾರಿಸಿದ್ದ ರೋಹಿತ್ ಇಲ್ಲಿ 61 ಎಸೆತಗಳಲ್ಲಿ ಅರ್ಧಶತಕ ಹೊಡೆದರು. 23ನೇ ಓವರ್‌ನಲ್ಲಿ ಶರ್ಮಾ ನಿರ್ಗಮಿಸಿದರು.

ಶಿಖರ್ ಜೊತೆಗೂಡಿದ ಕೊಹ್ಲಿ ಇನಿಂಗ್ಸ್‌ ಬೆಳೆಸಿದರು. 33ನೇ ಓವರ್‌ನಲ್ಲಿ ಶಿಖರ್ ಶತಕದ ಗಡಿ ಮುಟ್ಟಿದರು. ಈ ಕ್ರೀಡಾಂಗಣದಲ್ಲಿ ಇದು ಅವರ ಮೂರನೇ ಶತಕ. ಏಕದಿನ ಕ್ರಿಕೆಟ್‌ನಲ್ಲಿ 17ನೇಯದ್ದು. ಅವರು ಕೊಹ್ಲಿಯೊಂದಿಗೆ ಎರಡನೇ ವಿಕೆಟ್‌ಗೆ 93 ರನ್ ಸೇರಿಸಿದರು.

ಧವನ್ ನಿರ್ಗಮಿಸಿದ ಮೇಲೆ ವಿರಾಟ್ ಮತ್ತು ಹಾರ್ದಿಕ್ ರನ್‌ ಗಳಿಕೆಯ ವೇಗ ಹೆಚ್ಚಿಸಿದರು. ಎದುರಿಸಿದ ಎರಡನೇ ಎಸೆತದಲ್ಲೇ ಜೀವದಾನ ಪಡೆದ ಹಾರ್ದಿಕ್ ಎದುರಾಳಿ ಬೌಲರ್‌ಗಳಿಗೆ ತಲೆನೋವಾದರು. ಆಕ್ರಮಣಕಾರಿ ಆಟವಾಡಿದ ಇಬ್ಬರೂ ಮೊತ್ತವನ್ನು 300ರ ಗಡಿ ಮುಟ್ಟಿಸಿದರು. ಪಾಂಡ್ಯ ನಂತರ ಬಂದ ಮಹೇಂದ್ರಸಿಂಗ್ ಧೋನಿ ಕೂಡ ಮಿಂಚಿದರು.

ವಿರಾಟ್‌ ಕೊಹ್ಲಿ
ವಿರಾಟ್‌ ಕೊಹ್ಲಿ

ವಾರ್ನರ್‌ ಬ್ಯಾಟ್‌ಗೆ ‘ಸೆನ್ಸರ್’
ಆಸ್ಟ್ರೇಲಿಯಾ ತಂಡದ ಬ್ಯಾಟ್ಸ್‌ಮನ್ ಡೇವಿಡ್ ವಾರ್ನರ್ ಅವರು ತಮ್ಮ ಬ್ಯಾಟ್‌ಗೆ ಆಧುನಿಕ ತಂತ್ರಜ್ಞಾನದ ‘ಸಂವೇದಕ’ವನ್ನು ಅಳವಡಿಸಿದ್ದಾರೆ.

ಅವರ ಬ್ಯಾಟ್‌ ಹಿಡಿಕೆಯ ಮೇಲ್ಭಾಗದಲ್ಲಿ ಅಳವಡಿಸಲಾಗಿರುವ ಮೆಮೊರಿ ಚಿಪ್‌ ಅನ್ನು ಮೊಬೈಲ್‌ ಆ್ಯಪ್‌ಗೆ ಸಂಪರ್ಕ ನೀಡಲಾಗಿದೆ. ಅವರು ಬ್ಯಾಟಿಂಗ್ ಮಾಡುವಾಗ ಚೆಂಡನ್ನು ಹೊಡೆದ ವೇಗ, ಪ್ರಯೋಗಿಸಿದ ಶಕ್ತಿ, ಆ್ಯಂಗಲ್, ಮಣಿಕಟ್ಟಿನ ಚಲನೆಯ ಶೈಲಿ, ಡಿಗ್ರಿಗಳನ್ನು ದಾಖಲಿಸುತ್ತದೆ. ಅದರ ಅಧಾರದ ಮೇಲೆ ಆಟದಲ್ಲಿ ಸುಧಾರಣೆ ಕಂಡುಕೊಳ್ಳಲು ಸಾಧ್ಯವಾಗಲಿದೆ.

2017ರಲ್ಲಿ ಈ ರೀತಿಯ ಬ್ಯಾಟ್‌ ಬಳಸಲು ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಅನುಮತಿ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT