ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Tokyo Olympics ಟೆನಿಸ್ | ಸಿಂಗಲ್ಸ್‌ನಿಂದ ಸುಮಿತ್ ನಗಾಲ್ ಹೊರಕ್ಕೆ

ಅಕ್ಷರ ಗಾತ್ರ

ಟೋಕಿಯೊ: ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಐತಿಹಾಸಿಕ ಸಾಧನೆ ಮಾಡಿರುವ ಭಾರತದ ಸುಮಿತ್ ನಗಾಲ್ ಅವರಿಗೆ ಮತ್ತದೇ ಶ್ರೇಷ್ಠ ಪ್ರದರ್ಶನ ಮುಂದುವರಿಸಲುಸಾಧ್ಯವಾಗಲಿಲ್ಲ. ಪರಿಣಾಮ ಎರಡನೇ ಸುತ್ತಿನಲ್ಲಿ ಸೋತು ತಮ್ಮ ಅಭಿಯಾನವನ್ನು ಕೊನೆಗೊಳಿಸಿದ್ದಾರೆ.

ಸೋಮವಾರ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ನಡೆದ ಎರಡನೇ ಸುತ್ತಿನ ಹಣಾಹಣಿಯಲ್ಲಿ ನಗಾಲ್ ಅವರು ವಿಶ್ವ ನಂ. 2 ರ‍್ಯಾಂಕ್‌ನ ರಷ್ಯಾದ ಡೇನಿಯಲ್ ಮಡ್ವೆಡೆವ್ ವಿರುದ್ಧ 6-2 6-1ರ ಅಂತರದಲ್ಲಿ ಸೋಲು ಅನುಭವಿಸಿದರು.

ವಿಶ್ವ ರ‍್ಯಾಂಕಿಂಗ್‌ನಲ್ಲಿ 169ನೇ ಸ್ಥಾನದಲ್ಲಿರುವ ನಗಾಲ್ ಅವರಿಗೆ ಪಂದ್ಯದ ಯಾವ ಹಂತದಲ್ಲೂ ಲಯ ಕಂಡುಕೊಳ್ಳಲು ಸಾಧ್ಯವಾಗಲಿಲ್ಲ. ಮಡ್ವೆಡೆವ್ ಬಿರುಸಿನ ಆಟದ ಎದುರು ಕೇವಲ 66 ನಿಮಿಷಗಳ ಅಂತರದಲ್ಲಿ ಪರಾಭವಗೊಂಡರು.

ಈ ಮೊದಲು ಪುರುಷರ ಸಿಂಗಲ್ಸ್ ವಿಭಾಗದ ಮೊದಲ ಸುತ್ತಿನಲ್ಲಿ ಜಯ ಸಾಧಿಸುವುದರೊಂದಿಗೆ ಸುಮಿತ್ ನಗಾಲ್, ಒಲಿಂಪಿಕ್ಸ್‌ನಲ್ಲಿ ಈ ಶ್ರೇಯ ಗಳಿಸಿದ ಭಾರತದ ಮೂರನೇ ಆಟಗಾರ ಎನಿಸಿಕೊಂಡಿದ್ದರು.

1988ರಲ್ಲಿ ಜೀಶನ್ ಅಲಿ ಮೊದಲ ಸುತ್ತು ದಾಟಿದ್ದರು. ಬಳಿಕ 1996ರ ಅಟ್ಲಾಂಟ ಒಲಿಂಪಿಕ್ಸ್‌ನಲ್ಲಿ ಲಿಯಾಂಡರ್‌ ಪೇಸ್ ಕಂಚಿನ ಪದಕ ಗೆದ್ದಿದ್ದರು.

ಉಜ್ಬೆಕಿಸ್ತಾನದ ಡೆನಿಸ್ ಇಸ್ತೊಮಿನ್ ಅವರ ಸವಾಲು ಮೀರಿದ ನಗಾಲ್, 25 ವರ್ಷಗಳ ಬಳಿಕ ಒಲಿಂಪಿಕ್ಸ್ ಸಿಂಗಲ್ಸ್ ವಿಭಾಗದಲ್ಲಿ ಮೊದಲ ಸುತ್ತಿನ ತಡೆ ದಾಟಿದ ಮೊದಲ ಭಾರತೀಯ ಎಂಬ ಶ್ರೇಯಕ್ಕೆ ಪಾತ್ರರಾದರು.

ಭಾರತದ ಅಗ್ರ ಶ್ರೇಯಾಂಕಿತ ಆಟಗಾರ ಸುಮಿತ್ ನಗಾಲ್, 2019ರಲ್ಲಿ ತಮ್ಮ ಚೊಚ್ಚಲ ಗ್ರ್ಯಾನ್‌ಸ್ಲಾಮ್ ಟೂರ್ನಿ ಅಮೆರಿಕನ್ ಓಪನ್‌ನಲ್ಲಿ ದಿಗ್ಗಜ ರೋಜರ್ ಫೆಡರರ್ ವಿರುದ್ಧ ಸೆಟ್ ಗೆದ್ದ ಸಾಧನೆ ಮಾಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT