ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೈನಿಕರ ವಾಪಸಾತಿ: ಭಾರತ ಪಟ್ಟು

ಸೇನೆಯ ಹಿರಿಯ ಕಮಾಂಡರ್‌ಗಳ ಮಟ್ಟದ ಐದನೇ ಸುತ್ತಿನ ಸಭೆ
Last Updated 2 ಆಗಸ್ಟ್ 2020, 20:43 IST
ಅಕ್ಷರ ಗಾತ್ರ

ನವದೆಹಲಿ: ಗಡಿಯಲ್ಲಿ ಬೀಡುಬಿಟ್ಟಿರುವ ಸೇನೆಯನ್ನು ವಾಪಸ್‌ ಕರೆಸಿಕೊಳ್ಳುವ ಕುರಿತು ಚರ್ಚಿಸಲು ಭಾರತ ಮತ್ತು ಚೀನಾ ಸೇನೆಯ ಹಿರಿಯ ಕಮಾಂಡರ್‌ಗಳ ಮಟ್ಟದಐದನೇ ಸುತ್ತಿನ ಸಭೆ ಭಾನುವಾರ ನಡೆಯಿತು.

ಗಡಿ ಸಮೀಪದ ಮೊಲ್ಡೊದಲ್ಲಿ ನಡೆದ ಸಭೆಯಲ್ಲಿ ಭಾರತೀಯ ಸೇನೆಯ ಪರವಾಗಿ 14 ಕೋರ್‌ನ‌ ಜನರಲ್‌ ಆಫೀಸರ್‌ ಕಮಾಂಡಿಂಗ್‌ನ ಲೆಫ್ಟಿನೆಂಟ್‌ ಜನರಲ್ ಹರಿಂದರ್‌ ಸಿಂಗ್‌ ಮತ್ತು ಚೀನಾ ಸೇನೆಯ ಮೇಜರ್‌ ಜನರಲ್‌ ಲಿಯೂ ಲಿನ್‌ ಭಾಗವಹಿಸಿದ್ದರು.

ಗೋಗ್ರ ಪೋಸ್ಟ್, ದೆಪ್ಸಂಗ್‌ ವೈ ಜಂಕ್ಷನ್‌ ಹಾಗೂ ವಾಸ್ತವ ಗಡಿ ನಿಯಂತ್ರಣ ರೇಖೆಯ (ಎಲ್‌ಎಸಿ) ಇತರ ಕಡೆ ಬೀಡುಬಿಟ್ಟಿರುವ ಚೀನಾದ ಸೇನೆಯನ್ನುಸಂಪೂರ್ಣವಾಗಿ ಹಿಂದಕ್ಕೆ‌ ಕರೆಸಿಕೊಳ್ಳುವಂತೆ ಭಾರತವು ಮಾತುಕತೆಯ ವೇಳೆ ಪಟ್ಟು ಹಿಡಿಯಿತು. ಸೇನೆಯನ್ನು ವಾಪಸ್‌ ಕರೆಸಿಕೊಳ್ಳಲು ಎರಡೂ ಕಡೆಯ ಅಧಿಕಾರಿಗಳು ಸಮ್ಮತಿ ಸೂಚಿಸಿದರು ಎಂದು ಎಂದು ಸೇನಾ ಮೂಲಗಳು ತಿಳಿಸಿವೆ.

ಭಾರತ ಹಾಗೂ ಚೀನಾದ ಸೇನೆಗಳು ಮೇ ತಿಂಗಳಿನಿಂದ ವಾಸ್ತವಿಕ ನಿಯಂತ್ರಣ ರೇಖೆಯಲ್ಲಿ ಬೀಡುಬಿಟ್ಟಿವೆ. ಜೂನ್‌ 15 ರಂದು ಗಾಲ್ವನ್‌ ಕಣಿವೆಯಲ್ಲಿ ನಡೆದ ಸಂಘರ್ಷದ ಬಳಿಕ ಗಡಿಯುದ್ದಕ್ಕೂ ಉದ್ವಿಗ್ನತೆ ಉಲ್ಬಣಗೊಂಡಿದೆ. ಈ ಬಿಕ್ಕಟ್ಟನ್ನು ಪರಿಹರಿಸಲು ಉಭಯ ದೇಶಗಳು ಹಲವು ಬಾರಿ ಸೇನೆ ಮತ್ತು ರಾಜತಾಂತ್ರಿಕ ಮಾತುಕತೆ ನಡೆಸಿವೆ.

ಕಳೆದ ತಿಂಗಳಿನ ಆರಂಭದಿಂದಲೇ ಹಿರಿಯ ಸೇನಾಧಿಕಾರಿಗಳಮಧ್ಯೆ ಮಾತುಕತೆ ಆರಂಭವಾಗಿದ್ದವು. ಇಲ್ಲಿಯವರೆಗೆ ನಾಲ್ಕು ಸುತ್ತಿನ ಮಾತುಕತೆನಡೆದಿದ್ದುಸೇನೆಯನ್ನುಸಂಪೂರ್ಣವಾಗಿ ಹಿಂಪಡೆಯುವಂತೆ ಭಾರತ ಬಿಗಿ ಪಟ್ಟು ಹಿಡಿದಿದೆ. ಆದರೆ, ಇದಕ್ಕೆ ನಿರಾಕರಿಸಿದ್ದ ಚೀನಾ ಹಂತ, ಹಂತವಾಗಿ ಸೇನೆಯನ್ನು ಮರಳಿ ಕರೆಸಿಕೊಳ್ಳುವುದಾಗಿ ಹೇಳಿತ್ತು. ಹಾಗಾಗಿ ಕೆಲವು ವಾರಗಳಿಂದ ಮಾತುಕತೆ ಸ್ಥಗಿತಗೊಂಡಿತ್ತು.

ಈ ಹಿಂದೆ ನಡೆದ ಸಭೆಗಳ ಬಳಿಕ ಪಾಂಗಾಂಗ್ ಸರೋವರ, ಗಾಲ್ವನ್ ನದಿ ಕಣಿವೆಯ ಕೆಲವು ಪ್ರದೇಶದಿಂದ ಚೀನಾ ತನ್ನ ಸೇನೆಯನ್ನು ಹಿಂಪಡೆದುಕೊಂಡಿತ್ತು. ಇಂದಿನ ಸಭೆಯಲ್ಲಿ ಫಿಂಗರ್ ಪ್ರದೇಶದಲ್ಲಿ ನಿಯೋಜಿಸಲಾದ ಸೇನೆಯನ್ನು ಹಿಂದಕ್ಕೆ ಕರೆಸಿಕೊಳ್ಳುವ ಕುರಿತು ಉಭಯ ಸೇನೆಯ ಹಿರಿಯ ಅಧಿಕಾರಿಗಳು ಮಾತುಕತೆ ನಡೆಸಿದ್ದಾರೆ ಎಂದು ಹೇಳಲಾಗಿದೆ. ಭಾನುವಾರ ಬೆಳಿಗ್ಗೆಯಿಂದ ಆರಂಭವಾದ ಮಾತುಕತೆ ಸಂಜೆಯವರೆಗೂ ಮುಂದುವರಿದಿತ್ತು.

ಸಾಮಾನ್ಯವಾಗಿ ಚಳಿಗಾಲದಲ್ಲಿ ಲಡಾಖ್ ಗಡಿಯಿಂದ ಉಭಯ ಸೇನೆಗಳೂ ಹಿಂದೆ ಸರಿಯುವುದು ವಾಡಿಕೆ. ಹಾಗಾಗಿಭಾರತ-ಚೀನಾ ನಡುವಿನ ಐದನೇ ಸುತ್ತಿನ ಮಾತುಕತೆ ಅತ್ಯಂತ ಮಹತ್ವ ಪಡೆದುಕೊಂಡಿದೆ.

ಹಿಡಿತ ಬಿಡದ ಚೀನಾ

ಇತ್ತೀಚೆಗೆ ಅತಿಕ್ರಮಣ ಮಾಡಿದ ಪಾಂಗಾಂಗ್‌ ಸರೋವರದ ಉತ್ತರ ದಂಡೆಯ ಕೆಲವು ಪ್ರದೇಶಗಳ ಮೇಲೆ ಚೀನಾ ಹಕ್ಕು ಸಾಧನೆ ಮುಂದುವರಿಸಿದೆ. ಈ ಪ್ರದೇಶ ವಿವಾದಾತ್ಮಕ ಎಂದು ಒಪ್ಪಿಕೊಳ್ಳಲು ಕೂಡ ಚೀನಾ ಹಿಂದೇಟು ಹಾಕುತ್ತಿದೆ. ಆದರೆ, ಈ ಪ್ರದೇಶದ ಬಿಕ್ಕಟ್ಟನ್ನು ಮಾತುಕತೆ ಮೂಲಕ ಬಗೆಹರಿಸಿಕೊಳ್ಳಬೇಕು ಎಂದು ಭಾರತ ಹೇಳುತ್ತಿದೆ.ಸರೋವರದ ದಂಡೆಯ ಫಿಂಗರ್‌ 4 ಪ್ರದೇಶದಿಂದ ಸೈನಿಕರನ್ನು ಚೀನಾ ಹಿಂದಕ್ಕೆ ಕರೆಸಿಕೊಂಡಿತ್ತು. ಆದರೆ, ಫಿಂಗರ್‌ 5ರಿಂದ ಫಿಂಗರ್‌ 8 ವರೆಗಿನ ಸುಮಾರು ಎಂಟು ಕಿ.ಮೀ. ಪ್ರದೇಶದಿಂದ ಸೈನಿಕರನ್ನು ಹಿಂದಕ್ಕೆ ಕರೆಸಿಕೊಂಡಿಲ್ಲ. ಮೇ ಆರಂಭದಲ್ಲಿ ಈ ಪ‍್ರದೇಶದ ಮೇಲೆ ಚೀನಾ ಅತಿಕ್ರಮಣ ಮಾಡಿತ್ತು.ಈ ಪ್ರದೇಶದ ಮೇಲಿನ ಹಿಡಿತವು ಈಗ ಹೊಸ ಸಮಸ್ಯೆ ಸೃಷ್ಟಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT