ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಕ್, ಚೀನಾ ವಾದಗಳನ್ನು ವಿಶ್ವ ವೇದಿಕೆಯಲ್ಲಿ ಮಣ್ಣು ಮುಕ್ಕಿಸಿದ ಅಕ್ಬರುದ್ದೀನ್

Last Updated 17 ಆಗಸ್ಟ್ 2019, 16:01 IST
ಅಕ್ಷರ ಗಾತ್ರ

‘ಪಾಕಿಸ್ತಾನದೊಂದಿಗೆ ಭಾರತ ಯಾವಾಗ ಮಾತುಕತೆ ಶುರು ಮಾಡುತ್ತೆ?’

‘ಅಯ್ಯೋ ಗೆಳೆಯ, ಇಲ್ಲೇ, ಈಗಲೇ. ನಿಮಗೆ ಶೇಕ್ ಹ್ಯಾಂಡ್‌ ಮಾಡಿ ಭಾರತವು ಪಾಕ್‌ ಜೊತೆಗೆ ಮಾತುಕತೆಶುರು ಮಾಡಿಬಿಡುತ್ತೆ’.

– ವಿಶ್ವಸಂಸ್ಥೆಯಲ್ಲಿರುವ ಭಾರತದ ಪ್ರತಿನಿಧಿ ಸೈಯದ್ ಅಕ್ಬರುದ್ದೀನ್ ಜಾಗತಿಕ ಮಾಧ್ಯಮ ಪ್ರತಿನಿಧಿಗಳಿದ್ದ ಪತ್ರಿಕಾಗೋಷ್ಠಿಯಲ್ಲಿ ಪಾಕ್ ಪತ್ರಕರ್ತರ ಪ್ರಶ್ನೆಯೊಂದನ್ನು ಎದುರಿಸಿದ ರೀತಿಯಿದು.

ವಿಶ್ವಸಂಸ್ಥೆಯಲ್ಲಿ ಶುಕ್ರವಾರ ಭದ್ರತಾ ಮಂಡಳಿಯ ಗೌಪ್ಯ ಸಮಾಲೋಚನಾ ಸಭೆಯ ನಂತರ ಚೀನಾ ಮತ್ತು ಪಾಕಿಸ್ತಾನದ ಪ್ರತಿನಿಧಿಗಳು ಮಾಧ್ಯಮಗಳಿಗೆ ತಮ್ಮ ಹೇಳಿಕೆ ನೀಡಿ ಹೊರನಡೆದರು. ಆದರೆ ಭಾರತದ ಪ್ರತಿನಿಧಿ ಮಾತ್ರ ತಮ್ಮ ದೇಶದ ನಿಲುವು ಸ್ಪಷ್ಟಪಡಿಸುವುದರ ಜೊತೆಗೆ ಆತ್ಮವಿಶ್ವಾಸದಿಂದ ಪತ್ರಕರ್ತರ ಪ್ರಶ್ನೆಗಳಿಗೆ ಮುಖಾಮುಖಿಯಾದರು.

ಸೈಯದ್ ಅಕ್ಬರುದ್ದೀನ್ ಅವರ ಮಾತಿನ ವೈಖರಿ ಇದೀಗ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ. ವಿಶ್ವಸಂಸ್ಥೆಯಲ್ಲಿ ಭಾರತದ ಪರ ಗಟ್ಟಿಯಾಗಿ ನಿಂತಿದ್ದ ಈಮಾಗಿದ ರಾಜತಾಂತ್ರಿಕ ಪಾಕ್ ಮತ್ತು ಇತರ ದೇಶಗಳಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸುವ ನೆವದಲ್ಲಿ ಕಾಶ್ಮೀರ ಕುರಿತಂತೆಪಾಕ್ ಮತ್ತು ಚೀನಾ ದೇಶಗಳ ನಿಲುವುಗಳಲ್ಲಿ ಇರುವ ಹುಳುಕುಗಳನ್ನೂ ಎತ್ತಿ ತೋರಿಸಿದರು. ಆತ್ಮವಿಶ್ವಾಸದಿಂದ ಮಾಧ್ಯಮಗೋಷ್ಠಿ ನಿರ್ವಹಿಸಿದರು.

ಆ ಮಾಧ್ಯಮಗೋಷ್ಠಿಯಲ್ಲಿ ಏನಾಯಿತು? ಪ್ರಶ್ನೋತ್ತರದ ವಿಡಿಯೊ ಮತ್ತು ಅಕ್ಷರ ರೂಪ ಇಲ್ಲಿದೆ ನೋಡಿ–ಓದಿ.

ನಮಸ್ಕಾರ ಗೆಳೆಯರೇ,

ನಾನು ಇಲ್ಲಿಗೆ ಹೊಸಬ. ಸ್ವಲ್ಪ ಸ್ವಾತಂತ್ರ್ಯ ಕೊಡಿ. ಇದೇಮೊದಲ ಸಲ ನಾನು ನಿಮ್ಮೊಡನೆ ಮಾತನಾಡ್ತಿದ್ದೀನಿ. ನಾನೊಬ್ಬ ರಾಜತಂತ್ರಜ್ಞ, ಉರಿಯುವಬೆಂಕಿಗೆ ತುಪ್ಪು ಸುರಿಯುವುದಕ್ಕಿಂತ ನನ್ನ ಪಾಡಿಗೆ ನನ್ನ ಕೆಲಸ ಮಾಡಿಕೊಂಡಿರುವುದೇ ನನಗೆ ಇಷ್ಟ.

ಭದ್ರತಾ ಮಂಡಳಿಯ ಗೌಪ್ಯ ಸಮಾಲೋಚನೆಯ ನಂತರ ಎರಡು ದೇಶಗಳು (ಚೀನಾ ಮತ್ತು ಪಾಕಿಸ್ತಾನ)ತಮ್ಮ ದೇಶಗಳ ಹೇಳಿಕೆಗಳನ್ನೇಅಂತರರಾಷ್ಟ್ರೀಯ ಸಮುದಾಯದ ಅಭಿಪ್ರಾಯ ಎಂಬಂತೆ ಬಿಂಬಿಸಲು ಯತ್ನಿಸುತ್ತಿವೆ.ಭದ್ರತಾ ಮಂಡಳಿ ಹೇಗೆ ಕಾರ್ಯನಿರ್ವಹಿಸುತ್ತೆ ಅನ್ನೋದು ನಿಮಗೆಲ್ಲರಿಗೂ ಗೊತ್ತು.ಅದನ್ನು ಮತ್ತೊಮ್ಮೆ ನಾನು ವಿವರಿಸುವ ಅಗತ್ಯ ಇಲ್ಲ ಎಂದುಕೊಳ್ಳುತ್ತೇನೆ. ಭದ್ರತಾ ಮಂಡಳಿಯು ವ್ಯವಸ್ಥಿತವಾಗಿ ಕೆಲಸ ಮಾಡುತ್ತೆ. ಅದರ ನಿರ್ಣಯಗಳನ್ನು ಮಂಡಳಿಯ ಅಧ್ಯಕ್ಷರು ಪ್ರಕಟಿಸುತ್ತಾರೆ.

ತಮ್ಮ ದೇಶಗಳ ಹೇಳಿಕೆಗಳನ್ನು ಜಾಗತಿಕ ಸಮುದಾಯದ ಅಭಿಪ್ರಾಯಗಳೆಂದು ಬಿಂಬಿಸಲು ಕೆಲ ರಾಷ್ಟ್ರಗಳು (ಚೀನಾ ಮತ್ತು ಪಾಕ್)ಪ್ರಯತ್ನ ಮಾಡುತ್ತಿರುವುದು ಗಮನಕ್ಕೆ ಬಂದ ನಂತರ ನಾನು (ಭಾರತದ ಪ್ರತಿನಿಧಿ) ನಿಮ್ಮೆದುರು ಬಂದು ನಮ್ಮ ದೇಶದ ನಿಲುವನ್ನು ಸ್ಪಷ್ಟಪಡಿಸಲು ನಿರ್ಧರಿಸಿದೆ.

ನಮ್ಮ ದೇಶದ ನಿಲುವು ಏನು?

ನಮ್ಮ ದೇಶದ ಸಂವಿಧಾನದ 370ನೇ ವಿಧಿಗೆ ಸಂಬಂಧಿಸಿದ ವಿಚಾರವನ್ನು ಕೆಲವರು ಪ್ರಸ್ತಾಪಿಸುತ್ತಿದ್ದಾರೆ. ಇದುಸಂಪೂರ್ಣವಾಗಿ ಭಾರತದ ಆಂತರಿಕ ವಿಚಾರ ಎನ್ನುವುದು ನಮ್ಮ ದೇಶದ ಈ ಹಿಂದಿನ ಮತ್ತು ಈಗಿನ ನಿಲುವು. ಆಂತರಿಕ ವಿಚಾರಗಳಲ್ಲಿ ಹೊರಗಿನವರ ಮಧ್ಯಪ್ರವೇಶವನ್ನು ನಾವು ಸಹಿಸುವುದಿಲ್ಲ.

ಜಮ್ಮು ಮತ್ತು ಕಾಶ್ಮೀರ, ಲಡಾಖ್‌ನಲ್ಲಿ ಆಡಳಿತ ಸುಧಾರಣೆ ಮತ್ತು ಸಾಮಾಜಿಕ ಆರ್ಥಿಕ ಅಭಿವೃದ್ಧಿಯನ್ನು ಗಮನದ್ಲಲಿಸಿಕೊಂಡುಭಾರತ ಸರ್ಕಾರ ಮತ್ತು ಸಂಸತ್ತುಈಚೆಗೆ ತೆಗೆದುಕೊಂಡ ನಿರ್ಧಾರಗಳು ನಿಮಗೆ ಗೊತ್ತಿರಬಹುದು. ಇಂದು ಮುಂಜಾನೆ ಜಮ್ಮು ಮತ್ತು ಕಾಶ್ಮೀರದ ಮುಖ್ಯ ಕಾರ್ಯದರ್ಶಿ ರಾಜ್ಯದಲ್ಲಿ ಸಾಮಾನ್ಯ ಸ್ಥಿತಿ ನೆಲೆಗೊಳಿಸಲು ಅಗತ್ಯವಿರುವ ಹಲವು ಕ್ರಮಗಳನ್ನು ಘೋಷಿಸಿದ್ದಾರೆ.

ಭದ್ರತಾ ಮಂಡಳಿಯು ತನ್ನ ಗೌಪ್ಯ ಸಮಾಲೋಚನೆಯಲ್ಲಿ ಈ ಕ್ರಮಗಳನ್ನು ಶ್ಲಾಘಿಸಿದೆ. ಈ ನಿಟ್ಟಿನಲ್ಲಿಯೇಜಾಗತಿಕ ಸಮುದಾಯ ಮುನ್ನಡೆಯಬೇಕು ಎಂದು ಅಭಿಪ್ರಾಯಪಟ್ಟಿದೆಎಂದು ತಿಳಿದುಬಂದಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ನಾವುಎಲ್ಲ ನಿರ್ಬಂಧಗಳನ್ನು ತೆಗೆದುಹಾಕಲು ಬದ್ಧರಾಗಿದ್ದೇವೆ ಎಂಬುದನ್ನು ಪುನರುಚ್ಚರಿಸುತ್ತೇನೆ. ಕಾಶ್ಮೀರಕ್ಕೆ ಸಂಬಂಧಿಸಿದಬದಲಾವಣೆಗಳು ಭಾರತದ ಆಂತರಿಕ ವಿಚಾರಗಳು. ನಮ್ಮ ವಿದೇಶಾಂಗ ನೀತಿಯಲ್ಲಿ ಯಾವುದೇ ಬದಲಾವಣೆಗಳಾಗಿಲ್ಲ. ಅಲ್ಲಿ ಶಾಂತಿ ನೆಲೆಸುವುಂತೆ ಮಾಡಲು ನಾವು ಬದ್ಧರಾಗಿದ್ದೇವೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಸಹಿ ಮಾಡಿರುವ ಎಲ್ಲ ಒಪ್ಪಂದಗಳಿಗೂ ನನ್ನ ದೇಶ ಬದ್ಧವಾಗಿದೆ.

‘ಕಾಶ್ಮೀರದಲ್ಲಿ ಏನೋ ಆಗಿಹೋಗಿದೆ’ ಎಂದು ಕೆಲವರು ಬಿಂಬಿಸಲು ಯತ್ನಿಸುತ್ತಿದ್ದಾರೆ. ಅದು ವಾಸ್ತವಕ್ಕೆ ದೂರವಾದುದು. ಒಂದು ದೇಶವು ಜಿಹಾದ್ ಎನ್ನುವ ಪದ ಬಳಸುವ ಮೂಲಕ ಭಾರತದಲ್ಲಿ ಹಿಂಸಾಚಾರ ನಡೆಸಲು ಯತ್ನಿಸುತ್ತಿದೆ. ಆ ದೇಶದ ನಾಯಕರು ಇದನ್ನು ಬೆಂಬಲಿಸುತ್ತಿದ್ದಾರೆ.

ನಾವು ಎದುರಿಸುತ್ತಿರುವ ಯಾವುದೇ ಸಮಸ್ಯೆಗೆ ಹಿಂಸಾಚಾರದಿಂದ ಪರಿಹಾರ ಸಿಗದು. ಭಾರತ ಮತ್ತು ಪಾಕಿಸ್ತಾನಅಥವಾ ಭಾರತದ ಜೊತೆಗೆ ಇರುವ ಯಾವುದೇ ದೇಶ ಹೊದಿರುವ ಯಾವುದೇ ವಿವಾದ ಅಥವಾ ತಕರಾರುಗಳನ್ನು ದ್ವಿಪಕ್ಷೀಯ ಮಾತುಕತೆ ಮೂಲಕ ಪರಿಹರಿಸಿಕೊಳ್ಳಬಹುದು. ಆದರೆ, ಜಿಹಾದ್‌ನ ಅಪಾಯಗಳ ಬಗ್ಗೆ ಚೆನ್ನಾಗಿ ಅರ್ಥ ಮಾಡಿಕೊಳ್ಳಬೇಕಿದ್ದವರೇ, ಅದನ್ನು ಮಾತನಾಡುತ್ತಿದ್ದಾರೆ. ಇದರಿಂದ ನನಗೆ ಬೇಸರವಾಗುತ್ತಿದೆ.

ಇಲ್ಲಿನ (ವಿಶ್ವಸಂಸ್ಥೆಯ)ಪರಿಸ್ಥಿತಿ ನಿಮಗೆ ಗೊತ್ತಿದೆ. ಗೌಪ್ಯ ಸಮಾಲೋಚನೆಯ ಫಲ ಏನಾಗಬಹುದು ಅಂತ ನಾನು ಪ್ರತ್ಯೇಕವಾಗಿ ಹೇಳಬೇಕಿಲ್ಲ.ಶಾಂತಿಯುತ ಪರಿಹಾರ ಕಂಡುಕೊಳ್ಳುವನಮ್ಮಪ್ರಯತ್ನಗಳನ್ನು ಮುಂದುವರಿಸುತ್ತೇವೆ. ಭಯ ಮತ್ತು ಹಿಂಸಾಚಾರ ಮುಕ್ತ ವಾತಾವರಣದಲ್ಲಿ ನಮ್ಮ ಎಲ್ಲ ಸವಾಲುಗಳನ್ನು ಪರಿಹರಿಸಿಕೊಳ್ಳಲು ಬದ್ಧರಾಗಿದ್ದೇವೆ.

ಈಗ ಪ್ರಶ್ನೆಗಳ ಸಮಯ. ನಾನುಐದು ಪ್ರಶ್ನೆಗಳನ್ನು ತೆಗೆದುಕೊಳ್ಳುತ್ತೇನೆ. ನನಗೆ ಮೊದಲು ಇಲ್ಲಿಗೆ ಬಂದವರಿಗಿಂತ (ಪಾಕ್ ಮತ್ತು ಚೀನಾ) ಇದು ಐದು ಪಟ್ಟು ಹೆಚ್ಚು ಎಂಬುದು ನಿಮಗೆ ಗೊತ್ತಿರಲಿ.

ಶಿಮ್ಲಾ ಒಪ್ಪಂದ ಉಲ್ಲಂಘನೆ

ಪ್ರಶ್ನೆ (ಪಾಕ್ ಪತ್ರಕರ್ತ):ವಿದಾದಿತ ಪ್ರದೇಶದ ಬಗ್ಗೆ ಈ ಹಿಂದೆಯೇ ಸಾಕಷ್ಟುನಿರ್ಣಯಗಳು ಇದ್ದವು. ಕಾಶ್ಮೀರ ಮತ್ತು ಸಂವಿಧಾನದ 370ನೇ ವಿಧಿ ನಿಮ್ಮ ಆಂತರಿಕ ವಿಚಾರವಾಗಿರಬಹುದು.1947, 50ರಲ್ಲಿ ಅಂಗೀಕಾರವಾಗಿರುವ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ನಿರ್ಣಯಗಳನ್ನು ಹೇಗೆ ನಿರ್ವಹಿಸುತ್ತೀರಿ? ದ್ವಿಪಕ್ಷೀಯ ಮಾತುಕತೆಯಿಂದ ಫಲಶ್ರುತಿಯಾಗಿದ್ದ ಶಿಮ್ಲಾ ಒಪ್ಪಂದವನ್ನು ನೀವು ಉಲ್ಲಂಘಿಸಿಲ್ಲವೇ?

ಉತ್ತರ:ಕಾಶ್ಮೀರ ಭಾರತದ ಆಂತರಿಕ ವಿಚಾರ ಎಂದು ಒಪ್ಪಿಕೊಂಡಿದ್ದಕ್ಕೆ ನಿಮಗೆ ಧನ್ಯವಾದಗಳು.

ನಿಮ್ಮ ಪ್ರಶ್ನೆ ನನಗೆ ಅರ್ಥವಾಗಿದೆ. ಭಾರತ ಮತ್ತು ಪಾಕಿಸ್ತಾನ ಸಹಿಹಾಕಿದ ಒಪ್ಪಂದಗಳ ಬಗ್ಗೆ ಗಮನ ಕೊಡೋಣ. ಅದು 1947ರವರೆಗೆಹೋಗುತ್ತೆ. ಪಾಕಿಸ್ತಾನವೂ ಹೀಗೆಯೇಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಯತ್ನಿಸಬೇಕು ಎಂದುಕೊಳ್ಳುತ್ತೇವೆ.ನಾವು ಇತಿಹಾಸದ ಪುಟಗಳನ್ನು ತೆರೆದರೆ ಹಲವು ವಿಚಾರಗಳು ಮತ್ತೆ ಮುನ್ನೆಲೆಗೆ ಬರಬಹುದು.ಆದರೆ ಪ್ರತಿ ಹೊಸ ಒಪ್ಪಂದವೂ ಹಳೆಯದನ್ನು ಪಕ್ಕಕ್ಕೆ ಸರಿಸುತ್ತದೆ ಎನ್ನುವುದನ್ನು ಗಮನದಲ್ಲಿರಿಸಿಕೊಳ್ಳೋಣ. ನಾವುಸಹಿಹಾಕಿರುವ ಎಲ್ಲ ಒಪ್ಪಂದಗಳಿಗೂ ಬದ್ಧರಾಗಿದ್ದೇವೆ.ಪಾಕಿಸ್ತಾನವೂ ಅದೇ ರೀತಿ ಬದ್ಧವಾಗಿರಬೇಕು ಎಂದು ಬಯಸುತ್ತೇವೆ.

ಪ್ರಶ್ನೆ (ಪಾಕ್ ಪತ್ರಕರ್ತ): ಭಾರತವು ಯಾವುದೇ ಮಾತುಕತೆ ನಡೆಸಲು ಹಲವು ವರ್ಷಗಳಿಂದ ನಿರಾಕರಿಸುತ್ತಿದೆ ಏಕೆ?

ಉತ್ತರ: ನಾವಿಬ್ಬರು ಯಾವಾಗ ಮಾತನಾಡ್ತೀವಿಅನ್ನೋದು ನಿಮ್ಮ ಪ್ರಶ್ನೆ. ನಾನು ಇಸ್ಲಾಮಾಬಾದ್‌ಗೆ ಹೋದ ಹಲವು ನಿಯೋಗಗಳ ಸದಸ್ಯನಾಗಿದ್ದೆ. ನಿಮಗೂ ಅದು ಗೊತ್ತಿರುತ್ತೆ. ನಾನು ಇಸ್ಲಾಮಾಬಾದ್‌ನಲ್ಲಿ ಭಾರತದ ರಾಜತಾಂತ್ರಿಕನಾಗಿ ಕೆಲಸ ಮಾಡಿದ್ದೆ. ಎರಡು ದೇಶಗಳ ಜೊತೆಗೆ ಹಲವು ಹಂತದ ರಾಜತಾಂತ್ರಿಕ ಕ್ರಮಗಳು ಚಾಲ್ತಿಯಲ್ಲಿವೆ. ನಾವುಅದಕ್ಕೆ ಬದ್ಧರಾಗಿಯೇ ಕೆಲಸಮಾಡಬೇಕು. ಹಿಂಸಾಚಾರ, ಭಯೋತ್ಪಾದನೆಯನ್ನು ನಿಮ್ಮ ಗುರಿ ಸಾಧಿಸಲು ಬಳಸಿಕೊಳ್ಳುತ್ತೀರಿ ಎನ್ನುವುದನ್ನು ಒಪ್ಪಲು ಸಾಧ್ಯವೇ ಇಲ್ಲ. ಯಾವುದೇ ಪ್ರಜಾತಂತ್ರ ದೇಶ ಇದನ್ನು ಒಪ್ಪುವುದಿಲ್ಲ. ಭಯೋತ್ಪಾದನೆ ನಿಲ್ಲಿಸಿ, ಮಾತುಕತೆ ಶುರುಮಾಡಿ

ಪ್ರಶ್ನೆ (ಪಾಕ್ ಪತ್ರಕರ್ತ): ನೀವು ಯಾವಾಗ ಪಾಕಿಸ್ತಾನದ ಜೊತೆಗೆ ಮಾತುಕತೆ ಶುರು ಮಾಡ್ತೀರಿ?

ಉತ್ತರ: ಈಗಲೇ ಶುರು ಮಾಡ್ತೀವಿ(ಅಕ್ಬರುದ್ದೀನ್ ಪಾಕ್ ಪತ್ರಕರ್ತನ ಹಸ್ತಲಾಘವ ಮಾಡಿದರು).ನಾವು ಶಿಮ್ಲಾ ಒಪ್ಪಂದಕ್ಕೆ ಬದ್ಧ ಎನ್ನುವ ಮೂಲಕ ಸ್ನೇಹಹಸ್ತ ಚಾಚದ್ದೇವೆ. ಅತ್ತ ಕಡೆಯಿಂದ ಏನು ಪ್ರತಿಕ್ರಿಯೆ ಬರುತ್ತೋ ಕಾದು ನೋಡಬೇಕು.

ನಾನು ಪಾಕ್ ಪತ್ರಕರ್ತರ ಮೂರು ಪ್ರಶ್ನೆಗಳಿಗೆ ಉತ್ತರಿಸಿದ್ದೇನೆ. ನಮ್ಮ ನಿಲುವಿನ ಬಗ್ಗೆ ಇನ್ನು ನಿಮ್ಮಲ್ಲಿ ಯಾವುದೇ ಗೊಂದಲ ಇರಲಾರದು ಎಂದುಕೊಳ್ಳುವೆ.

ಪ್ರಶ್ನೆ: ಭದ್ರತಾ ಮಂಡಳಿ ಸಭೆಯಲ್ಲಿ ಕಾಶ್ಮೀರ ವಿಚಾರ ಪ್ರಸ್ತಾಪವಾಗುವಮೂಲಕ ಕಾಶ್ಮೀರ ವಿವಾದವು ದ್ವಿಪಕ್ಷೀಯವಾಗಿ ಉಳಿದಿಲ್ಲ ಎಂದು ವಿಶ್ವವೇದಿಕೆ ಒಪ್ಪಿಕೊಂಡಂತೆ ಆಗಿದೆ ಎಂದು ಪಾಕಿಸ್ತಾನ ಹೇಳಿದೆ. ನೀವು ಏನು ಹೇಳ್ತೀರಿ?

ಉತ್ತರ: ನೀವು ಹಲವು ವರ್ಷಗಳಿಂದ ಭದ್ರತಾ ಮಂಡಳಿಯನ್ನು ಗಮನಿಸುತ್ತಿದ್ದೀರಿ.ಗೌಪ್ಯ ಸಮಾಲೋಚನೆಯಲ್ಲಿ ಯಾರು ಬೇಕಾದರೂ, ಮುಖ್ಯವಾಗಿ ವಿವಾದಕ್ಕೆ ಸಂಬಂಧಿಸಿದವರು ಯಾವುದೇ ವಿಷಯವನ್ನು ಭದ್ರತಾ ಮಂಡಳಿ ಸದಸ್ಯರ ಗಮನಕ್ಕೆ ತರಬಹುದು. ಆ ಸಭೆಯ ಫಲಶ್ರುತಿ ಏನು ಎಂಬುದು ನಿಮಗೂ ಗೊತ್ತು. ಅದನ್ನು ನಾನು ಮತ್ತೊಮ್ಮೆ ಹೇಳಲು ಇಚ್ಛಿಸುವುದಿಲ್ಲ. ನಾವು ಈ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಸಿದ್ಧರಿದ್ದೇವೆ. ಶಿಮ್ಲಾ ಒಪ್ಪಂದಕ್ಕೆ ಬದ್ಧ ಎಂದು ನಾನು ಹೇಳಿದ್ದೇನೆ. ಪಾಕಿಸ್ತಾನ ಭಯೋತ್ಪಾದನೆ ನಿಲ್ಲಿಸಬೇಕು, ಮಾತುಕತೆಗೆ ಮುಂದಾಗಬೇಕು.

ಪ್ರಶ್ನೆ: ರಷ್ಯಾ ಕೂಡ ಕಾಶ್ಮೀರ ದ್ವಿಪಕ್ಷೀಯ ಸಮಸ್ಯೆ ಅಂತ ಹೇಳಿದೆ. ಪಾಕಿಸ್ತಾನ ಇದನ್ನು ವಿಶ್ವಮಟ್ಟದ ಸಮಸ್ಯೆ ಎಂದು ಬಿಂಬಿಸಲು ಯತ್ನಿಸುತ್ತಿದೆ. ಏಕೆ ಈ ಗೊಂದಲ?

ಉತ್ತರ: ನನಗೆ ಮೊದಲು ಮಾತನಾಡಿದವರು (ಚೀನಾ ಮತ್ತು ಪಾಕ್)ಭದ್ರತಾ ಮಂಡಳಿಯಲ್ಲಿ ಏನು ನಿರ್ಣಯವಾಯಿತು ಅಂತ ಹೇಳಿದ್ದಾರೆ. ಅವರು ಹೇಳಿದ್ದನ್ನು ನಾನು ಸಮರ್ಥಿಸುವುದಿಲ್ಲ. ಭದ್ರತಾ ಮಂಡಳಿಯಲ್ಲಿ ಏನಾಯಿತು ಅಂತ ನಿಮಗೂ ಗೊತ್ತಿದೆ. ಕಾಶ್ಮೀರದ ಬಗ್ಗೆದ್ವಿಪಕ್ಷೀಯ ಮಾತುಕತೆಗೆ ಭಾರತ ಸಿದ್ಧವಿದೆ. ಜಗತ್ತು ಅದನ್ನು ಒಪ್ಪುತ್ತಿದೆ.

ಪ್ರಶ್ನೆ: ಕಾಶ್ಮೀರದಲ್ಲಿ ಅಷ್ಟೊಂದು ನಿರ್ಬಂಧವಿದೆ. ಅಲ್ಲಿನ ಜನರ ಆಶೋತ್ತರಗಳನ್ನು ನಿಜಕ್ಕೂ ಈಡೇರಿಸುವಿರಾ?

ಉತ್ತರ: ರೋಗ ಬರುವ ಮೊದಲೇ ಎಚ್ಚರದಿಂದ ಇರುವುದು ಒಳ್ಳೆಯದಲ್ಲವೇ? ಈಗ ನಾವು ತೆಗೆದುಕೊಂಡಿರುವುದು ಮುಂಜಾಗ್ರತ ಕ್ರಮಗಳು ಮಾತ್ರ. ಭಯೋತ್ಪಾದಕರು ನಮ್ಮ ದೇಶದ ಜನರ ರಕ್ತ ಹರಿಸುವುದನ್ನು ತಡೆಯಲು ಇಂಥ ಕ್ರಮಗಳು ಅನಿವಾರ್ಯವಾಗಿತ್ತು. ನೀವೂ ಗಮನಿಸಿರುತ್ತೀರಿ. ಕಳೆದ10 ದಿನಗಳಿಂದ ಕಾಶ್ಮೀರ ಕಣಿವೆಯಲ್ಲಿ ಒಂದೂ ಹಿಂಸಾಕೃತ್ಯ ನಡೆದಿಲ್ಲ. ಸಾವುನೋವು ಸಂಭವಿಸಿಲ್ಲ. ಕೆಲವೊಮ್ಮೆ ಇಂಥ ಕ್ರಮಗಳು ನಿರ್ಬಂಧಗಳಿಗೆ ಕಾರಣವಾಗುತ್ತವೆ. ನಾನು ಅದನ್ನು ಒಪ್ಪಿಕೊಳ್ಳುತ್ತೇನೆ. ನಮ್ಮದು ಮುಕ್ತ ಸಮಾಜ. ನಾವು ಅದನ್ನು ಒಪ್ಪಿಕೊಳ್ಳುತ್ತೇವೆ.

ನಿರ್ಬಂಧವನ್ನು ಯಾವಾಗ ಮತ್ತು ಎಷ್ಟು ಸಡಿಲಿಸಬೇಕು ಎನ್ನುವ ವಿಚಾರವನ್ನು ಅಲ್ಲಿರುವ ಆಡಳಿತಗಾರರು ತೆಗೆದುಕೊಳ್ಳಬೇಕು. ಇಲ್ಲಿರುವ (ವಿಶ್ವಸಂಸ್ಥೆಯ)ಪತ್ರಕರ್ತರು ಅಥವಾ ರಾಜತಾಂತ್ರಿಕರು ಅಲ್ಲ. ಅಧಿಕಾರಿಗಳು, ಜನಪ್ರತಿನಿಧಿಗಳಿಗೆ ಈ ಸಮಸ್ಯೆಗಳನ್ನು ಪರಿಹರಿಸಲು ಸಮಯ ಕೊಡಿ.

ವಿಶ್ವದ ಇತರೆಡೆ ಮತ್ತು ಈ ಹಿಂದೆ ಜಮ್ಮು ಮತ್ತು ಕಾಶ್ಮೀರದಲ್ಲಿಯೂ ಇಂಥ ಸಂದರ್ಭಗಳಲ್ಲಿ (370ನೇ ವಿಧಿ ರದ್ದತಿಯಂಥ ಮಹತ್ವದ ಘೋಷಣೆ ಪ್ರಕಟವಾದಾಗ)ದೊಡ್ಡ ಸಂಖ್ಯೆಯ ಸಾವುನೋವು ಸಂಭವಿಸುತ್ತಿತ್ತು. ಆದರೆ ಈ ಬಾರಿ ಹಾಗೇನೂ ಆಗಿಲ್ಲವಲ್ಲ. ನಾವು ನಮ್ಮ ಸಮಸ್ಯೆಯನ್ನು ಪ್ರಜಾತಾಂತ್ರಿಕವಾಗಿ ಪರಿಹರಿಸಲು ಯತ್ನಿಸುತ್ತಿದ್ದೇವೆ.

ಪ್ರಶ್ನೆ: ಪಾಕಿಸ್ತಾನವು ಭಯೋತ್ಪಾದನೆಯನ್ನು ಪ್ರೋತ್ಸಾಹಿಸುತ್ತಿದೆ ಎಂದು ನೀವು ಹೇಳುತ್ತೀರಿ. ಭಾರತೀಯ ಭದ್ರತಾ ಪಡೆಗಳಿಂದ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿದೆ ಎಂದು ಜಾಗತಿಕ ಸಂಸ್ಥೆಗಳು ಹೇಳುತ್ತಿವೆ. ಏನು ನಿಮ್ಮ ಪ್ರತಿಕ್ರಿಯೆ?

ಉತ್ತರ: ನೀವು ‘ಜಾಗತಿಕ ಸಂಸ್ಥೆಗಳು’ ಎನ್ನುವ ಪದವನ್ನುಯಾವ ಅರ್ಥದಲ್ಲಿ ಬಳಸುತ್ತಿದ್ದರೀರೋ ನನಗೆ ಅರ್ಥವಾಗುತ್ತಿಲ್ಲ. ವಿಶ್ವಸಂಸ್ಥೆಯು ಈವರೆಗೆ (ಭಾರತದ ಬಗ್ಗೆ) ಏನೂ ಹೇಳಿಲ್ಲ. ಭಾರತದ ಪ್ರಜಾತಂತ್ರ ವ್ಯವಸ್ಥೆ, ಮಾನವ ಹಕ್ಕುಗಳಿಗೆ ಭಾರತದ ಹೊಂದಿರುವ ಬದ್ಧತೆಯ ಬಗ್ಗೆಯಾವುದೇ ಆಕ್ಷೇಪ ಕೇಳಿ ಬಂದಿಲ್ಲ.

ನಿಮಗೊಂದು ವಿಷಯ ಗೊತ್ತೆ? ವಿಶ್ವಸಂಸ್ಥೆಯ ಮಾನವ ಹಕ್ಕು ಘೋಷಣೆಯಲ್ಲಿ ‘ಎಲ್ಲ ಪುರುಷರೂ ಸಮಾನರು’ಎಂದು ಇದ್ದ ‘ಎಲ್ಲ ಮನುಷ್ಯರೂ ಸಮಾನರು’ ಎಂದು ಬದಲಿಸಲು ಕಾರಣವಾಗಿದ್ದು ಭಾರತ. ಪುರುಷ–ಮಹಿಳೆ ಸಮಾನರು ಎಂದು ಹೇಳಿದ್ದು ನಾವು.

ನಮ್ಮ ಸಂವಿಧಾನ ತೆರೆದ ಪುಸ್ತಕ. ನಮ್ಮ ಶಾಸಕಾಂಗದಲ್ಲಿ ಏನು ನಡೆಯುತ್ತೆ ಎನ್ನುವುದನ್ನು ನಾವು ಮುಚ್ಚಿಡುವುದಿಲ್ಲ.ಟೀವಿ ಅನ್ ಮಾಡಿ, ಭಾರತದಲ್ಲಿರುವ ವಿವಿಧ ಧ್ವನಿಗಳು ನಿಮಗೆ ಕಾಣಿಸುತ್ತವೆ.ಒಂದು ವೇಳೆ ನಮ್ಮ ದೇಶದಲ್ಲಿ ಸಮಸ್ಯೆ ಇದ್ದರೆ ನಮ್ಮ ದೇಶದ್ದೇ ಆದ ನ್ಯಾಯಾಲಯಗಳು ಅದನ್ನು ಸರಿಪಡಿಸುತ್ತವೆ. ಜಾಗತಿಕ ಸಂಸ್ಥೆಗಳು ನಮ್ಮ ದೇಶದ ಆಂತರಿಕ ವ್ಯವಹಾರಗಳಲ್ಲಿ ಮೂಗು ತೂರಿಸುವ ಅಗತ್ಯವಿಲ್ಲ. ನಮ್ಮ ಬದುಕು ಹೇಗಿರಬೇಕು ಅಂತ ನಿರ್ದೇಶಿಸುವ ಅಗತ್ಯವೂ ಇಲ್ಲ.

ನಾವು ನೂರು ಕೋಟಿಗೂ ಹೆಚ್ಚು ಜನರು ಇರುವ ರಾಷ್ಟ್ರ. ನಮ್ಮ ಅನುಭವವೂ ಅಗಾಧ. ಗುರಿಗಳನ್ನು ಮುಟ್ಟುವ ಬದ್ಧತೆ ಇದೆ. ಈ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ನಮಗೆ ಅವಕಾಶ ಮತ್ತು ಸಮಯ ಕೊಡಿ.

(ಅಕ್ಬರುದ್ದೀನ್ ಮಾಧ್ಯಮಗೋಷ್ಠಿ ಮುಗಿಸಿ ನಡೆದರು. ಅಷ್ಟರಲ್ಲಿ ಮತ್ತೋರ್ವರು ಪ್ರಶ್ನೆ ಕೇಳಿದಾಗ ಹಿಂದಿರುಗಿ ಬಂದು ಮಾತನಾಡಲು ಆರಂಭಿಸಿದರು).

ಉತ್ತರ: ನಾನು ಉತ್ತರ ಹೇಳಬೇಕಿರಲಿಲ್ಲ. ನನ್ನ ಹಿಂದೆ ಮಾತನಾಡಿದವರು (ಚೀನಾ ಮತ್ತು ಪಾಕ್ ಪ್ರತಿನಿಧಿಗಳು)ನಿಮ್ಮ ಪ್ರಶ್ನೆಗಳನ್ನೇ ಪರಿಗಣಿಸಲಿಲ್ಲ.ಅವರು ಹೇಳಬೇಕಾದ್ದನ್ನು ಹೇಳಿ, ಅವರ ಪಾಡಿಗೆ ಅವರುಹೋದರು. ಆದರೆ ನಾನು ಹಾಗಲ್ಲ.ಮುಕ್ತ ದೇಶದ ಪ್ರತಿನಿಧಿಯಾಗಿ ನಾನು ನಿಮ್ಮ ಪ್ರಶ್ನೆಗೆ ಉತ್ತರ ಹೇಳುತ್ತಿದ್ದೇನೆ.

ಸಾರ್ವಜನಿಕವಾಗಿ ಸುವ್ಯವಸ್ಥೆ ಕಾಪಾಡುವುದು ಪ್ರಜಾತಂತ್ರ ಉಳಿಸಿಕೊಳ್ಳಲು ಅನಿವಾರ್ಯ. ಅಲ್ಲಿ (ಕಾಶ್ಮೀರದಲ್ಲಿ) ನಿರ್ಬಂಧಗಳು ಇವೆ ಎನ್ನುವುದನ್ನು ನಾವು ಒಪ್ಪಿಕೊಳ್ಳುತ್ತೇವೆ. ಅದನ್ನು ಸಡಿಲಗೊಳಿಸುತ್ತೇವೆ ಎಂದುಈಗಲೇ ಹೇಳಲು ಅಥವಾ ನಿರ್ಧರಿಸಲು ಆಗುವುದಿಲ್ಲ.ಅದರದ್ದೇ ಆದ ವೇಗದಲ್ಲಿ ಕೆಲಸಗಳು ಆಗುತ್ತವೆ. ಈ ಬಗ್ಗೆನಿಮಗೆ ಸಮಾಧಾನ ಇಲ್ಲದಿರಬಹುದು, ಇತರರಿಗೆ ಖುಷಿ ಆಗದೆ ಇರಬಹುದು. ಆದರೆ ಪ್ರಜಾಸತ್ತಾತ್ಮಕವಾಗಿ ಅಧಿಕಾರಕ್ಕೆ ಬಂದವರು, ಆಡಳಿತದ ಹೊಣೆ ಹೊತ್ತವರು ಅದನ್ನು ನಿರ್ಣಯಿಸುತ್ತಾರೆ.

ಭಾರತದ ಪ್ರಜಾಪ್ರಭುತ್ವ ಸಶಕ್ತವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT