ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ರಾಜಧಾನಿ ಕೋಟಾದಲ್ಲಿ ಒಂದೇ ವರ್ಷ 19 ಆತ್ಮಹತ್ಯೆ

Last Updated 27 ಡಿಸೆಂಬರ್ 2018, 6:51 IST
ಅಕ್ಷರ ಗಾತ್ರ

ಜೈಪುರ: ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ರಾಜಧಾನಿ ಎಂಬ ಖ್ಯಾತಿ ಹೊಂದಿರುವರಾಜಸ್ಥಾನದ ಕೋಟಾ ನಗರದ ವಿವಿಧ ತರಬೇತಿ ಕೇಂದ್ರದಲ್ಲಿ ಇದೇ ವರ್ಷ 19 ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದು ಕೇಂದ್ರಗಳಲ್ಲಿನ ತರಬೇತಿ ಪ್ರಕ್ರಿಯೆ, ದಾಖಲಾತಿ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ನಡೆಯುವ ಸಿದ್ಧತೆ ಸಂಬಂಧಿಸಿದಂತೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ ಎಂದು ದಿ ನ್ಯೂ ಇಂಡಿಯನ್‌ ಎಕ್ಸ್‌ಪ್ರೆಸ್‌ ವರದಿ ಮಾಡಿದೆ.

ಕಳೆದ ನಾಲ್ಕು ದಿನಗಳಲ್ಲಿ (ಶನಿವಾರದಿಂದೀಚೆಗೆ) ಮೂರು ಆತ್ಮಹತ್ಯೆ ಪ್ರಕರಣಗಳು ವರದಿಯಾಗಿವೆ. ಐಐಟಿ ಪ್ರವೇಶ ಪರೀಕ್ಷೆ ಪರೀಕ್ಷೆಗಾಗಿ ಕಳೆದ ಮೂರು ವರ್ಷಗಳಿಂದ ನಗರದಲ್ಲಿನ ಪ್ರತಿಷ್ಠಿತ ಕೇಂದ್ರವೊಂದರಲ್ಲಿ ತರಬೇತಿ ಪಡೆಯುತ್ತಿದ್ದ ಬಿಹಾರ ವಿದ್ಯಾರ್ಥಿ ಜಿತೇಶ್‌ಇತ್ತೀಚೆಗೆ ಆತ್ಮಹತ್ಯೆ ಮಾಡಿಕೊಂಡಿದ್ದರು.

‘ಜಿತೇಶ್‌ನನ್ನು ಸಂಪರ್ಕಿಸಲು ಆತನ ಕುಟುಂಬದವರುಮಂಗಳವಾರ ಸಾಕಷ್ಟು ಬಾರಿ ಪ್ರಯತ್ನಿಸಿದ್ದಾರೆ. ಸಾಧ್ಯವಾಗದಿದ್ದಾಗ ಆತನ ಸ್ನೇಹಿತರೊಬ್ಬರನ್ನು ಸಂಪರ್ಕಿಸಿದ್ದರು. ಜಿತೇಶ್‌ ಕೊಠಡಿಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ವಿಚಾರ ಆತನ ಸ್ನೇಹಿತ ಕೊಠಡಿ ಬಳಿಗೆ ತೆರಳಿದಾಗ ಬೆಳಕಿಗೆ ಬಂದಿತ್ತು’ ಎಂದುಮೂಲಗಳು ತಿಳಿಸಿವೆ.

ವೈದ್ಯಕೀಯ ಪ್ರವೇಶ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿದ್ದ ದಿಶಾ ಸಿಂಗ್‌ ಎನ್ನುವವರು ಭಾನುವಾರ ಆತ್ಮಹತ್ಯೆ ಮಾಡಿಕೊಂಡಿದ್ದರು. ಉತ್ತರ ಪ್ರದೇಶದ ಖುಷಿನಗರದಿಂದ ಬಂದಿದ್ದ ಅವರು ನಗರದ ಪ್ರಮುಖ ಪ್ರದೇಶದಲ್ಲಿರುವ ಹಾಸ್ಟೆಲ್‌ನಲ್ಲಿ ಉಳಿದುಕೊಂಡಿದ್ದರು. ಪ್ರಕರಣದ ತನಿಖೆ ನಡೆಸುತ್ತಿರುವ ಸಬ್‌ಇನ್‌ಸ್ಪೆಕ್ಟರ್‌ ನಾಯಕ್‌ ಮೊಹಮ್ಮದ್‌ ಅವರು, ’ಕೆಲವು ವಿದ್ಯಾರ್ಥಿನಿಯರು ರಾತ್ರಿ ಒಂದು ಗಂಟೆ ಸುಮಾರಿಗೆ ದಿಶಾ ಕೊಠಡಿ ಬಳಿ ತೆರಳಿದಾಗ ಪ್ರಕರಣ ಬೆಳಕಿಗೆ ಬಂದಿದೆ.ದಿಶಾ ಮರಣ ಪತ್ರ(ಡೆತ್‌ ನೋಟ್‌) ಬರೆದಿದ್ದಾರೆ. ಅದರಲ್ಲಿ ವಿದ್ಯಾಭ್ಯಾಸಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಒತ್ತಡ ಅನುಭವಿಸುತ್ತಿರುವುದಾಗಿ ಉಲ್ಲೇಖಿಸಿದ್ದಾರೆ’ ಎಂದು ಮಾಹಿತಿ ನೀಡಿದ್ದಾರೆ.

ದಿಶಾ ಆತ್ಮಹತ್ಯೆಗಿಂತ ಮೊದಲು 17 ವರ್ಷದ ದೀಪಕ್‌ ದಧೀಚ್‌ ಎನ್ನುವವರು ಇಲ್ಲಿನ ಆರ್.ಕೆ.ನಗರ ಪ್ರದೇಶದಲ್ಲಿರುವ ತರಬೇತಿ ಕೇಂದ್ರದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ. ಆತನ ಕೋಣೆಯಲ್ಲಿ ಡೆತ್‌ನೋಟ್‌ಗಳಾಗಲಿ ಅಥವಾ ಸಾವಿಗೆ ನಿಖರ ಕಾರಣ ತಿಳಿಸುವ ಯಾವುದೇ ಸುಳಿವು ಸಿಕ್ಕಿರಲಿಲ್ಲ. ಆದರೆ, ’ಪರೀಕ್ಷೆಗೆ ಸಂಬಂಧಿಸಿದಂತೆ ಪೋಷಕರು ಹೊಂದಿದ್ದ ನಿರೀಕ್ಷೆಗಳನ್ನು ಪೂರೈಸಲು ಆತನಿಗೆ ಸಾಧ್ಯವಾಗಿರಲಿಲ್ಲ. ಹಾಗಾಗಿ ರಜೆಯಲ್ಲಿ ಮನೆಗೆ ತೆರಳುವುದು ಹೇಗೆ, ತಂದೆ–ತಾಯಿಯನ್ನು ಭೇಟಿ ಮಾಡುವುದು, ಅವರೆದುರು ನಿಲ್ಲುವುದು ಹೇಗೆ ಎಂಬ ಆತಂಕದಿಂದ ದೀಪಕ್‌ ಆತ್ಮಹತ್ಯೆ ಮಾಡಿಕೊಂಡಿರಬಹುದು’ ಎಂದು ವೈದ್ಯಕೀಯ ಕಾಲೇಜಿನ ಭೌತಶಾಸ್ತ್ರ ಪ್ರಾಧ್ಯಾಪಕ ಬಿ.ಎಸ್‌. ಶೇಖಾವತ್‌ ಅಭಿಪ್ರಾಯಪಟ್ಟಿದ್ದಾರೆ.

ಮಾನಸಿಕ ಒತ್ತಡ ಹಾಗೂ ಖಿನ್ನತೆಯಿಂದ ವಿದ್ಯಾರ್ಥಿಗಳನ್ನು ದೂರವಿರಿಸುವುದಕ್ಕಾಗಿ ಮಾರ್ಗದರ್ಶನ ನೀಡಬೇಕು ಎಂದು ತರಬೇತಿ ಕೇಂದ್ರಗಳಿಗೆ ಜಿಲ್ಲಾಡಳಿತವು ಸೂಚಿಸಿದೆ.

2016ರಲ್ಲಿ ಒಟ್ಟು 17 ಹಾಗೂ 2017ರಲ್ಲಿ 7 ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದರು. ಇದೀಗ ಆ ಸಂಖ್ಯೆ 19ಕ್ಕೆ ಏರಿಕೆ ಕಂಡಿರುವುದು ಆತಂಕ ಹೆಚ್ಚಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT