ಗುರುವಾರ , ನವೆಂಬರ್ 21, 2019
23 °C
ಬಿಎಸ್‌–6 ನಿಯಮಗಳ ಜಾರಿ ಮತ್ತು ಪ್ರವಾಹವೂ ಕಾರಣ

ಆರ್ಥಿಕ ಹಿಂಜರಿತ: ವಾಣಿಜ್ಯ ವಾಹನ ಮಾರಾಟ ಭಾರಿ ಕುಸಿತ

Published:
Updated:
Prajavani

ಬೆಂಗಳೂರು: ರಾಜ್ಯದಲ್ಲಿ ಜುಲೈನಲ್ಲಿ ವಾಣಿಜ್ಯ ವಾಹನಗಳ ಮಾರಾಟವು ತೀವ್ರ ಕುಸಿತ ಕಂಡಿದೆ. 2018ರ ಜುಲೈಗೆ ಹೋಲಿಸಿದರೆ 2019ರ ಜುಲೈನಲ್ಲಿ ಶೇ 29ರಷ್ಟು ಕಡಿಮೆ ವಾಹನಗಳು ಮಾರಾಟವಾಗಿವೆ.

ಇದೇ ಮೇ ಮತ್ತು ಜೂನ್‌ನಲ್ಲೂ ವಾಣಿಜ್ಯ ವಾಹನಗಳ ಮಾರಾಟ ತೀವ್ರ ಕುಸಿತ ಕಂಡಿತ್ತು. 2018ರ ಮೇ ಮತ್ತು ಜೂನ್‌ಗೆ ಹೋಲಿಸಿದರೆ 2019ರ ಮೇನಲ್ಲಿ ಶೇ 12.5ರಷ್ಟು ಮತ್ತು ಜೂನ್‌ನಲ್ಲಿ ಶೇ 19.27ರಷ್ಟು ಕುಸಿತವಾಗಿತ್ತು.

‘ದೇಶದಲ್ಲಿ ಆರ್ಥಿಕ ಹಿಂಜರಿತ ಆರಂಭವಾಗಿದೆ. ಕೈಗಾರಿಕಾ ಬೆಳವಣಿಗೆ ಕುಸಿತವಾಗಿರುವುದು ವಾಣಿಜ್ಯ ವಾಹನಗಳ ಮಾರಾಟದ ಮೇಲೆ ನೇರವಾಗಿ ಪರಿಣಾಮ ಬೀರಿದೆ. ಸರಕು ಸಾಗಣೆ ವಹಿವಾಟು ಕುಸಿದಿರುವುದರಿಂದ ಹೊಸ ವಾಹನಗಳ ಖರೀದಿಗೆ ಸರಕು ಸಾಗಣೆ ಕಂಪನಿಗಳು ಹಿಂದೇಟು ಹಾಕುತ್ತಿವೆ’ ಎಂದು ವಾಹನ ಮಾರಾಟ ಕ್ಷೇತ್ರದ ತಜ್ಞರು ಹೇಳಿದ್ದಾರೆ. ‘ಜೆ.ಡಿ.ಪವರ್ ಸರ್ವೆ’ ಮತ್ತು ‘ವಾಹನ ಮಾರಾಟಗಾರರ ಸಂಘಟನೆಗಳ ಒಕ್ಕೂಟ–ಎಫ್‌ಎಡಿಎ’ ನಡೆಸಿರುವ ಸಮೀಕ್ಷೆಯಲ್ಲೂ ಇದೇ ಅಭಿಪ್ರಾಯ ವ್ಯಕ್ತವಾಗಿದೆ.

ಶೇ 65ರಷ್ಟು ಡೀಲರ್‌ಗಳು ಪರಿಸ್ಥಿತಿ ಚಿಂತಾಜನಕವಾಗಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

‘ವಾಣಿಜ್ಯ ವಾಹನಗಳ ಮೇಲೆ ಶೇ 28ರಷ್ಟು ಜಿಎಸ್‌ಟಿ ಇರುವುದರಿಂದ ವಾಹನಗಳ ಬೆಲೆ ದುಬಾರಿಯಾಗಿದೆ. ಜಿಎಸ್‌ಟಿ ಇಳಿಕೆಗೆ ಲಾರಿ ಮಾಲೀಕರ ಸಂಘಟನೆಗಳು ಒತ್ತಾಯಿಸಿವೆ. ಜಿಎಸ್‌ಟಿ ಇಳಿಸುವವರೆಗೂ ಹೊಸ ವಾಹನ ಖರೀದಿಸದೇ ಇರಲು ಹಲವರು ನಿರ್ಧಿರಿಸಿದ್ದಾರೆ ಎಂದು ಲಾರಿ ಮಾಲೀಕರ ಸಂಘಟನೆಗಳ ಒಕ್ಕೂಟವು ಹೇಳಿತ್ತು. ಇದೂ ಸಹ ಮಾರಾಟ ಕುಸಿತಕ್ಕೆ ಕಾರಣವಾಗಿದೆ’ ಎಂದು ತಜ್ಞರು ಹೇಳಿದ್ದಾರೆ.

ಎಲ್ಲಾ ಸ್ವರೂಪದ ವಾಹನಗಳ ಮಾರಾಟ ಕುಸಿತ: ರಾಜ್ಯದಲ್ಲಿ ಎಲ್ಲಾ ಸ್ವರೂಪದ ವಾಹನಗಳ ಮಾರಾಟವು 2019ರ ಮೇ, ಜೂನ್ ಮತ್ತು ಜುಲೈನಲ್ಲಿ 2018ರಲ್ಲಿ ಇದೇ ತಿಂಗಳುಗಳಿಗೆ ಹೋಲಿಸಿದರೆ ಕ್ರಮವಾಗಿ ಶೇ 5.3, ಶೇ 11.12 ಮತ್ತು ಶೇ 11ರಷ್ಟು ಇಳಿಕೆಯಾಗಿದೆ.

2018ರ ಸೆಪ್ಟೆಂಬರ್‌ನಿಂದಲೇ ರಾಜ್ಯದಲ್ಲಿ ವಾಹನ ಮಾರಾಟ ಇಳಿಕೆಯತ್ತ ಸಾಗಿತ್ತು. 2019ರ ಜನವರಿ ಮತ್ತು ಏಪ್ರಿಲ್ ಮಧ್ಯೆ ಮಾರಾಟದಲ್ಲಿ ತುಸು ಏರಿಕೆಯಾಗಿತ್ತು. ಆದರೆ ನಂತರದ ದಿನಗಳಲ್ಲಿ ಮಾರಾಟವು ತೀವ್ರ ಕುಸಿತ ಕಂಡಿದೆ. ಈ ಆಗಸ್ಟ್‌ನಲ್ಲಿ ಮಾರಾಟ ಮತ್ತಷ್ಟು ಇಳಿಕೆಯಾಗಿದೆ. ಆದರೆ ತಿಂಗಳು ಪೂರ್ಣಗೊಳ್ಳದ ಕಾರಣ ಸಾಂಖ್ಯಿಕ ವಿವರ ಲಭ್ಯವಿಲ್ಲ.

ಎರಡು ಲಕ್ಷ ಉದ್ಯೋಗ ನಷ್ಟ: ಮಾರಾಟ ಕುಸಿತವಾಗಿರುವುದರಿಂದ ದೇಶದಾದ್ಯಂತ ವಾಹನ ಷೋರೂಂಗಳಲ್ಲಿ 2 ಲಕ್ಷಕ್ಕೂ ಹೆಚ್ಚು ಜನರು ಉದ್ಯೋಗ ಕಳೆದುಕೊಂಡಿದ್ದಾರೆ. ಇವರಲ್ಲಿ ಬಹುತೇಕ ಮಂದಿ ಮಾರಾಟ ಪ್ರತಿನಿಧಿಗಳಾಗಿದ್ದರು ಎಂದು ‘ವಾಹನ ಮಾರಾಟಗಾರರ ಸಂಘಟನೆಗಳ ಒಕ್ಕೂಟ–ಎಫ್‌ಎಡಿಎ’ ಹೇಳಿದೆ. ಕರ್ನಾಟಕಕ್ಕೆ ಸಂಬಂಧಿಸಿದಂತೆ ಈ ವಿವರ ಲಭ್ಯವಿಲ್ಲ.

ಮಾರಾಟ ಕುಸಿದಿರುವುದರಿಂದ ಮಾರಟ ಪ್ರತಿನಿಧಿಗಳು ಮಾತ್ರ ಈಗ ಕೆಲಸ ಕಳೆದುಕೊಂಡಿದ್ದಾರೆ. ಈ ಪರಿಸ್ಥಿತಿ ಹೀಗೇ ಮುಂದುವರಿದರೆ, ಮುಂದಿನ ದಿನಗಳಲ್ಲಿ ವಾಹನಗಳ ಸರ್ವಿಸ್ ಕ್ಷೇತ್ರದಲ್ಲೂ ಭಾರಿ ಪ್ರಮಾಣದ ಉದ್ಯೋಗ ನಷ್ಟವಾಗಲಿದೆ ಎಂದು ಎಫ್‌ಎಡಿಎ ಕಳವಳ ವ್ಯಕ್ತಪಡಿಸಿದೆ.

ಕುಸಿತಕ್ಕೆ ಕಾರಣಗಳು: ಎಫ್‌ಎಡಿಎ ವಿಶ್ಲೇಷಣೆ

* ಜಾಗತಿಕ ಮಟ್ಟದಲ್ಲಿ ಮತ್ತು ದೇಶದಲ್ಲೂ ಆರ್ಥಿಕತೆ ಕುಂಠುತ್ತಿದೆ. ವಾಹನಗಳ ಮಾರಾಟದಲ್ಲೂ ಈ ಕುಂಠಿತ ಕಾಣುತ್ತಿದೆ. ಜನರಲ್ಲಿ ವಾಹನ ಖರೀದಿಸುವ ಇಚ್ಛೆ ಕಡಿಮೆಯಾಗಲೂ ಇದೇ ಕಾರಣ

* ಗ್ರಾಹಕರಲ್ಲಿ ವಾಹನವನ್ನು ಕೊಳ್ಳುವ ಇಚ್ಛೆ ಕಡಿಮೆಯಾಗುತ್ತಿದೆ. ಮೊದಲ ಬಾರಿ ವಾಹನ ಖರೀದಿಸಲು ಮುಂದಾಗಿದ್ದವರು, ಖರೀದಿಯನ್ನು ಮುಂದೂಡಿದ್ದಾರೆ. ರಾಜ್ಯ ಮತ್ತು ದೇಶದ ಎಲ್ಲೆಡೆ ಪರಿಸ್ಥಿತಿ ಇದೇ ರೀತಿಯಲ್ಲಿದೆ

* ಮುಂದಿನ ಆರು ತಿಂಗಳಿನ ನಂತರ ದೇಶದಾದ್ಯಂತ ಭಾರತ್ ಸ್ಟೇಜ್–6 (ಬಿಎಸ್‌–6) ಎಂಜಿನ್‌ ಇರುವ ವಾಹನಗಳು ಮಾತ್ರ ಮಾರಾಟವಾಗಬೇಕಿದೆ. ಈಗ ಭಾರತ್ ಸ್ಟೇಜ್–4 ಎಂಜಿನ್‌ನ ವಾಹನಗಳು ಮಾರಾಟವಾಗುತ್ತವೆ. ‘ಹೊಸದಾಗಿ ಮಾರಾಟವಾಗುವ ಬಿಎಸ್‌–4 ವಾಹನಗಳು ಶೀಘ್ರವೇ ಹಳತಾಗಲಿವೆ. ಆರು ತಿಂಗಳು ಕಾಯ್ದರೆ ಬಿಎಸ್‌–6 ವಾಹವನ್ನೇ ಖರೀದಿಸಬಹುದು’ ಎಂಬ ಇಚ್ಛೆಯನ್ನು ಬಹುತೇಕ ಗ್ರಾಹಕರು ಹೊಂದಿದ್ದಾರೆ ಎಂದು ಎಫ್‌ಎಡಿಎ ಹೇಳಿದೆ. ಹೀಗಾಗಿ ಬಹುತೇಕ ಮಂದಿ ತಮ್ಮ ವಾಹನವನ್ನು ಅಪ್‌ಗ್ರೇಡ್‌ (ಹಳೆಯ ವಾಹನವನ್ನು ವಿನಿಮಯ ಮಾಡಿಕೊಂಡು, ಅದಕ್ಕಿಂತಲೂ ಉತ್ತಮ ವಾಹನ ಖರೀದಿಸುವುದು) ಮಾಡಿಕೊಳ್ಳುವುದನ್ನು ಮುಂದೂಡಿದ್ದಾರೆ. ಮೊದಲ ಬಾರಿ ವಾಹನ ಖರೀದಿಸುವವರೂ ಇದೇ ರೀತಿ ಯೋಚಿಸುತ್ತಿದ್ದಾರೆ

* ರಾಜ್ಯದ ಪ್ರಮುಖ ನಗರಗಳು ಈ ಅವಧಿಯಲ್ಲಿ ಪ್ರವಾಹವನ್ನು ಎದುರಿಸಿವೆ. ಹೀಗಾಗಿ ವಾಹನಗಳ ಮಾರಾಟ ಈ ಅವಧಿಯಲ್ಲಿ ಮತ್ತಷ್ಟು ಕುಸಿತ ಕಂಡಿದೆ. ಇದು ತಾತ್ಕಾಲಿಕವಾದರೂ, ಭಾರಿ ನಷ್ಟಕ್ಕೆ ಕಾರಣವಾಗಿದೆ

ತಯಾರಿಕೆ ಸ್ಥಗಿತ

ಬೆಂಗಳೂರಿನಲ್ಲಿ ನಿರ್ಮಾಣ ಘಟಕ ಹೊಂದಿರುವ ಟೊಯೋಟಾ ಕಂಪನಿಯು ಆಗಸ್ಟ್ ತಿಂಗಳ 16 ಮತ್ತು 17ರಂದು ತಯಾರಿಕೆ ಸ್ಥಗಿತಗೊಳಿಸಿತ್ತು. ಡೀಲರ್‌ಗಳ ಬಳಿ ಮಾರಾಟವಾಗದೇ ಉಳಿದಿರುವ ವಾಹನಗಳ ಸಂಖ್ಯೆ ಭಾರಿ ಪ್ರಮಾಣದಲ್ಲಿ ಇದೆ. ತಯಾರಿಕೆ ಮುಂದುವರಿಸಿದರೆ ಈ ಸಂಖ್ಯೆ ಮತ್ತಷ್ಟು ಹೆಚ್ಚಲಿದೆ. ಹೀಗಾಗಿ ತಯಾರಿಕೆಯನ್ನು ಎರಡು ದಿನ ಸ್ಥಗಿತಗೊಳಿಸಲಾಗಿತ್ತು ಎಂದು ಕಂಪನಿ ಹೇಳಿದೆ.

ಬೇರೆ ವಾಹನ ತಯಾರಿಕಾ ಕಂಪನಿಗಳೂ ದೇಶದ ಬೇರೆಡೆ ನಿರ್ಮಾಣ ಘಟಕಗಳನ್ನು ಹೊಂದಿವೆ. ಅವೂ ಸಹ ಕೆಲವು ದಿನ ತಯಾರಿಕೆಯನ್ನು ಸ್ಥಗಿತಗೊಳಿಸಿದ್ದವು.

**

ಆರ್ಥಿಕ ಹಿಂಜರಿತ; ಜನ ಏನಂತಾರೆ? 

ಶೂನ್ಯ ಅಭಿವೃದ್ಧಿ ನೀತಿಗಳು

ದೇಶದ ಭವಿಷ್ಯ ಕಾಣುವವರು ದೇಶವನ್ನು ಮೊದಲು ಸುತ್ತಬೇಕು. ಕೇವಲ ಭಾಷಣ ಮಾಡಲು ಬರುವ ನಾಯಕರು ಸಾಮಾನ್ಯರ ಜೊತೆಗೂ ಬೆರೆಯಲಿ. ಇದರಿಂದ ನಾಯಕರಿಗೆ ಆರ್ಥಿಕ ನೀತಿ ರೂಪಿಸಲು ಮಾಹಿತಿ ದೊರೆಯಲಿದೆ.
- ಹಂಡಿ ಜೋಗಿ ದುರುಗಪ್ಪ, ಸಂಡೂರು

**

ಸಣ್ಣ, ಮಧ್ಯಮ ಕೈಗಾರಿಕೆಗಳಿಗೆ ಹೊಡೆತ

ಬೇಡಿಕೆಗೆ ತಕ್ಕಂತೆ ಸಮಾನವಾಗಿ ಉತ್ಪಾದನೆಯಾದರೆ ದೇಶ ಸುಸ್ಥಿರ ಅಭಿವೃದ್ಧಿ ಕಾಣಲಿದೆ. ದೊಡ್ಡ ಉದ್ಯಮಗಳು ನೆಲ
ಕಚ್ಚಿದರೆ ಅದು ಪರ್ಯಾಯ ಮಾರ್ಗದಲ್ಲಿ ಮತ್ತೆ ಪುಟಿದೇಳುತ್ತವೆ. ಆದರೆ, ಅಂಬೆಗಾಲಿಟ್ಟಿರುವ ನವೋ
ದ್ಯಮಗಳು ಹಾಗೂ ಸಣ್ಣ, ಮಧ್ಯಮ ಕೈಗಾರಿಕೆಗಳಿಗೆ ನಡೆಯುವ ಮುನ್ನವೇ ಕಾಲು ಕತ್ತರಿಸಿದಂತಾಗಿದೆ.

- ಚಿದಂಬರ ಕುಲಕರ್ಣಿ, ವಿಜಯಪುರ

**

ನೀತಿ ರೂಪಿಸುವ ಮುನ್ನ ಚರ್ಚೆಯಾಗಲಿ

ಒಂದು ನೀತಿ ಜಾರಿಯಾಗುವ ಮುನ್ನ ಅದಕ್ಕೆ ಸಂಬಂಧಿಸಿದವರ ಬಳಿ ಚರ್ಚಿಸಿ ಅಳಿವು ಉಳಿವನ್ನು ತೂಗಬೇಕು. ಕೈಗಾರಿಕೆಗಳಲ್ಲಿ ಹಗಲಿರುಳೆನ್ನದೇ ದುಡಿಯುವ ಕಾರ್ಮಿಕರ ಪಾಡು ಹವಾನಿಯಂತ್ರಿತ ಕೊಠಡಿಯಲ್ಲಿ ಕೂತವರಿಗೆ ಹೇಗೆ ಕಾಣುತ್ತದೆ. ಅಂತೆಯೇ ಆರ್ಥಿಕ ನೀತಿ ಕಣ್ಣುಮುಚ್ಚಿ ಜಾರಿಗೊಳಿಸಿದಂತಿದೆ.

- ಡಿ.ಜಿ.ಗೌರಿ, ತುಮಕೂರು

**

ಅಭಿವೃದ್ಧಿ ಶೀಲದಿಂದ ಹಿಂದುಳಿಯುವತ್ತ

ದೇಶದ ಅಭಿವೃದ್ಧಿ ಹಿಂದೆ ದುಡಿಯುವ ಕಾರ್ಮಿಕರ ಕೈಗಳಿವೆ ಎನ್ನುವುದನ್ನು ನಾಯಕರು ಮರೆತಿದ್ದಾರೆ. ಅಭಿವೃದ್ಧಿಶೀಲ ಭಾರತವನ್ನು ಹಿಂದುಳಿದ ದೇಶವನ್ನಾಗಿ ಮಾಡುತ್ತಿದ್ದಾರೆ. ಈಗಲೇ ಎಚ್ಚೆತ್ತುಕೊಳ್ಳದಿದ್ದರೆ ಭವ್ಯಭಾರತ ಕನಸಾಗಿಯೇ ಉಳಿಯಲಿದೆ.
- ಮಂಜುನಾಥ್‌, ಹಾವೇರಿ

**

ಆಳುವವರೇ ಅಳಿಸುತ್ತಿದ್ದಾರೆ

ಕೈಗಾರಿಕೆಗಳು ಮುಚ್ಚಿದರೆ ಉದ್ಯಮಿಗಳು ಮತ್ತೊಂದು ದಾರಿ ಹಿಡಿಯುತ್ತಾರೆ. ಆದರೆ, ಕೆಲಸ ಕಳೆದುಕೊಂಡ ಕಾರ್ಮಿಕರು ಮತ್ತೊಂದು ಉದ್ಯೋಗ ಪಡೆಯುವುದು ಕನಸಿನ ಮಾತು. ‘ಕೈಗಾರೀಕರಣ ಇಲ್ಲವೇ ವಿನಾಶ’ ಎಂಬ ಘೋಷಣೆಯನ್ನು ಆಳುವವರೇ ಅಳಿಸುತ್ತಿದ್ದಾರೆ.

- ಆನಂದ್‌, ವಿಜಯಪುರ

**

ಕೃಷಿಗೂ ‍ಪೆಟ್ಟು

ಆರ್ಥಿಕ ಹಿಂಜರಿತದಿಂದ ಕೈಗಾರಿಕೆಗಳನ್ನೇ ನಂಬಿ ಕೃಷಿ ಮಾಡುವ ರೈತರ ಮೇಲೆ ಈಗ ಹೆಚ್ಚು ಪರಿಣಾಮ ಬೀಳಲಿದೆ. ಕೈಗಾರಿಕೆಗಳನ್ನು ಮುಚ್ಚಿ ಕೃಷಿಯನ್ನು ಮತ್ತಷ್ಟು ನಾಶ ಮಾಡುವ ಹುನ್ನಾರ ಮಾಡುತ್ತಿದ್ದಾರೆ.
- ಬಿ.ವಿ.ಶ್ವೇತಾ, ಹಿರಿಯೂರು

**

ಆರ್ಥಿಕ ತುರ್ತುಪರಿಸ್ಥಿತಿ ಜಾರಿ..

ದೇಶದಲ್ಲಿ ಕೈಗಾರಿಕೆಗಳು ಸ್ಥಗಿತಗೊಳ್ಳುತ್ತಿರುವುದು ಆರ್ಥಿಕ ತುರ್ತು ಪರಿಸ್ಥಿತಿಯ ಮುನ್ಸೂಚನೆ. ಅಗತ್ಯವಾಗಿದ್ದ ಉದ್ಯೋಗಗಳು ಕ್ಷೀಣಿಸುತ್ತಿವೆ. ಈ ಎರಡೂ ಸಮತೋಲನ ಸ್ಥಿತಿಯಲ್ಲಿದ್ದರೆ ಮಾತ್ರ ದೇಶದ ಉಳಿವು.
- ದಿವ್ಯಸುಧಾ, ಮೈಸೂರು

**

ಅಳಿವಿನತ್ತ ದೇಶದ ಭವಿಷ್ಯ

ಜನಸಂಖ್ಯೆಗೆ ಪೂರಕವಾದ ಉದ್ಯೋಗ ಸೃಷ್ಟಿಯಾಗದಿದ್ದಲ್ಲಿ ದೇಶ ಅಭಿವೃದ್ಧಿಯಲ್ಲಿ ಹಿನ್ನಡೆಯಾಗುತ್ತದೆ. ಉದ್ಯೋಗ ಸೃಷ್ಟಿಸಬೇಕಾದ ಸರ್ಕಾರಗಳೇ ಉದ್ಯೋಗ ಕಸಿದುಕೊಳ್ಳುತ್ತಿರುವುದು ವಿಪರ್ಯಾಸ.
- ಸವಿನಾ ನಾಯ್ಕ್, ಶಿರಸಿ

ಪ್ರತಿಕ್ರಿಯಿಸಿ (+)