ಶುಕ್ರವಾರ, ಸೆಪ್ಟೆಂಬರ್ 25, 2020
27 °C

 ಮಸೂದ್‌ ಅಜರ್‌ಗೆ ಜಾಗತಿಕ ಉಗ್ರಪಟ್ಟ: ಪುಲ್ವಾಮಾ ದಾಳಿ ಪ್ರಮುಖ ಪಾತ್ರ

ಏಜೆನ್ಸಿಸ್ Updated:

ಅಕ್ಷರ ಗಾತ್ರ : | |

ನವದೆಹಲಿ: ಜೈಷ್‌ –ಎ –ಮೊಹಮ್ಮದ್‌ (ಜೆಇಎಂ) ಉಗ್ರ ಸಂಘಟನೆ ಮುಖ್ಯಸ್ಥ ಮಸೂದ್‌ ಅಜರ್‌ನನ್ನು ವಿಶ್ವಸಂಸ್ಥೆ ಜಾಗತಿಕ ಭಯೋತ್ಪಾದಕನೆಂದು ಘೋಷಿಸುವಲ್ಲಿ ಪುಲ್ವಾಮಾ ದಾಳಿ ಪ್ರಮುಖ ಪಾತ್ರವಹಿಸಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಗುರುವಾರ ಹೇಳಿದೆ. 

‘ನಿರ್ದಿಷ್ಟ ಘಟನೆಯ ಆಧಾರದ ಮೇಲಷ್ಟೇ ಜಾಗತಿಕ ಉಗ್ರನೆಂದು ಘೋಷಣೆಯಾಗಿಲ್ಲ. ಹಲವು ಭಯೋತ್ಪಾದನಾ ಚಟುಚಟಿಕೆಗಳೊಂದಿಗೆ ಅಜರ್‌ ನಂಟು ಹೊಂದಿರುವ ಬಗ್ಗೆ ವಿಶ್ವಸಂಸ್ಥೆಯ 1267 ಸಮಿತಿಯೊಂದಿಗೆ ನಾವು ಹಂಚಿಕೊಳ್ಳಲಾಗಿರುವ ಸಾಕ್ಷ್ಯಾಧಾರಗಳನ್ನು ಪರಿಗಣಿಸಿ ಜಾಗತಿಕ ಉಗ್ರನೆಂದು ಘೋಷಿಸಲಾಗಿದೆ’ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರವೀಶ್‌ ಕುಮಾರ್‌ ಹೇಳಿದರು. 

’ಜಾಗತಿಕ ಭಯೋತ್ಪಾದಕ ಪಟ್ಟಿಗೆ ಅಜರ್‌ನನ್ನು ಸೇರಿಸುವುದು ಘೋಷಣೆಯಾಗುತ್ತಿದ್ದಂತೆ ಪಾಕಿಸ್ತಾನ ‍ಹಲವು ಹೇಳಿಕೆಗಳನ್ನು ನೀಡುವ ಮೂಲಕ ರಾಜತಾಂತ್ರಿಕವಾಗಿ ತಾನು ಅನುಭವಿಸಿದ ಹಿನ್ನಡೆ ಮರೆಮಾಚಲು ಗಮನ ಬೇರೆಡೆಗೆ ಸೆಳೆಯವ ಪ್ರಯತ್ನ ಮಾಡಿದೆ’ ಎಂದರು. 

ಇದನ್ನೂ ಓದಿ: ಐಎಸ್‌ಐನ ‘ನೀಲಿ ಕಂಗಳ’ ಹುಡುಗ ಅಜರ್‌

ಅಜರ್‌ ವಿಚಾರವಾಗಿ ಚೀನಾದೊಂದಿಗೆ ನಡೆಸಿರುವ ಮಾತುಕತೆ ಕುರಿತು ಕೇಳಲಾದ ಪ್ರಶ್ನೆಗೆ, ‘ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ವಿಚಾರಗಳಲ್ಲಿ ಭಾರತ ಸಂಧಾನ ನಡೆಸುವುದಿಲ್ಲ. ಮಸೂದ್ ಅಜರ್‌ನನ್ನು ಜಾಗತಿಕ ಭಯೋತ್ಪಾಕನೆಂದು ಹೆಸರಿಸುವುದು ಗುರಿಯಾಗಿತ್ತು’ ಎಂದು ಪ್ರತಿಕ್ರಿಯಿಸಿದರು.

ಮಸೂದ್‌ನನ್ನು ಜಾಗತಿಕ ಉಗ್ರರ ಪಟ್ಟಿಗೆ ಸೇರಿಸಬೇಕು ಎಂಬ ಪ್ರಸ್ತಾವಕ್ಕೆ ತಡೆಯೊಡ್ಡಿದ್ದ ಚೀನಾ, ತನ್ನ ನಿಲುವನ್ನು ಬದಲಿಸಿಕೊಂಡ ನಂತರ ವಿಶ್ವಸಂಸ್ಥೆ ಮೇ 1ರಂದು ಈ ಘೋಷಣೆ ಮಾಡಿತು. ಇದು ಭಾರತಕ್ಕೆ ಸಿಕ್ಕ ಬಹುದೊಡ್ಡ ರಾಜತಾಂತ್ರಿಕ ಜಯ ಎಂದು ಬಣ್ಣಿಸಲಾಗಿದೆ.

ಪುಲ್ವಾಮಾ ದಾಳಿಯ ನಂತರದಲ್ಲಿ ಭಾರತದ ಬೆಂಬಲಕ್ಕೆ ನಿಂತ ಅಮೆರಿಕ, ಬ್ರಿಟನ್‌ ಹಾಗೂ ಫ್ರಾನ್ಸ್; ಅಜರ್‌ನನ್ನು ಜಾಗತಿಕ ಉಗ್ರರ ಪಟ್ಟಿಗೆ ಸೇರಿಸಲು ವಿಶ್ವಸಂಸ್ಥೆಗೆ ಮತ್ತೊಂದು ಪ್ರಸ್ತಾವನೆ ಸಲ್ಲಿಸಿದ್ದವು. ಆದರೆ, ನಾಲ್ಕನೆ ಬಾರಿಗೆ ಚೀನಾ ಈ ಪ್ರಸ್ತಾಪಕ್ಕೆ ಅಡ್ಡಿಪಡಿಸಿತ್ತು. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು