ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿವಮೊಗ್ಗ: ತೆಲಂಗಾಣ ಮಾದರಿ ವಿಶೇಷ ಪ್ಯಾಕೇಜ್‌ಗೆ ರೈತ ಸಂಘ ಆಗ್ರಹ

Last Updated 10 ಏಪ್ರಿಲ್ 2020, 11:26 IST
ಅಕ್ಷರ ಗಾತ್ರ

ಶಿವಮೊಗ್ಗ: ತೆಲಂಗಾಣ ರಾಜ್ಯ ಸರ್ಕಾರದ ಮಾದರಿಯಲ್ಲಿ ರೈತರಿಗೆ ವಿಶೇಷ ಪ್ಯಾಕೇಜ್ ನೀಡಬೇಕು ಎಂದು ಒತ್ತಾಯಿಸಿ ರೈತ ಸಂಘ ಮತ್ತು ಹಸಿರು ಸೇನೆ ಕಾರ್ಯಕರ್ತರು ಶುಕ್ರವಾರ ಕೃಷಿ ಸಚಿವ ಬಿ.ಸಿ.ಪಾಟೀಲ್ ಅವರಿಗೆ ಮನವಿ ಸಲ್ಲಿಸಿದರು.

ರೈತರು ಬೆಳೆದ ಎಲ್ಲ ಉತ್ಪನ್ನಗಳನ್ನು ಹೊಲದಿಂದಲೇ ಅಲ್ಲಿನ ಸರ್ಕಾರ ಖರೀದಿಸುತ್ತಿದೆ. ಚೆಕ್ ಮೂಲಕ ಹಣ ಕೊಡಲು ನಿರ್ಧರಿಸಿದೆ. ಅದೇ ಮಾದರಿಯಲ್ಲಿ ರಾಜ್ಯದಲ್ಲೂ ರೈತರ ಉತ್ಪನ್ನಗಳನ್ನು ಖರೀದಿಸಬೇಕು ಎಂದು ಒತ್ತಾಯಿಸಿದರು.

ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯ ₹6 ಸಾವಿರ, ರಾಜ್ಯ ಸರ್ಕಾರದ ₹4 ಸಾವಿರದ ಜತೆಗೆ, ₹10 ಸಾವಿರ ಸೇರಿಸಿ ₹20 ಸಾವಿರ ರೈತರ ಖಾತೆಗೆ ಜಮೆ ಮಾಡಬೇಕು ಎಂದು ಆಗ್ರಹಿಸಿದರು.

ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ತಕ್ಷಣ ಧಾನ್ಯ ಖರೀದಿಸಬೇಕು. ಎಲ್ಲ ಬೆಳೆಗಳಿಗೆ ಬಡ್ಡಿ ರಹಿತ ಅಡಮಾನ ಸಾಲ ನೀಡಬೇಕು. ಬೇರೆ ರಾಜ್ಯದ ಮಾರುಕಟ್ಟೆಗಳಿಗೆ ಕೃಷಿ ಉತ್ಪನ್ನ ಸಾಗಿಸಲು ವ್ಯವಸ್ಥೆ ಕಲ್ಪಿಸಬೇಕು. ಹಾಪ್‌ಕಾಮ್ಸ್ ವತಿಯಿಂದ ಹಣ್ಣು-ತರಕಾರಿ ಖರೀದಿಸಿ ಗ್ರಾಹಕರ ಮನೆಯ ಬಾಗಿಲಿಗೆ ಮಾರಾಟ ಮಾಡುವ ವ್ಯವಸ್ಥೆ ಮಾಡಬೇಕು. ರೈತರ ಪಂಪ್‌ಸೆಟ್ ಗಳಿಗೆ ರಿವೈಂಡಿಂಗ್ ವೈಯರ್, ಪೈಪ್ ಸೇರಿದಂತೆ ಕೃಷಿ ಕಾರ್ಯಗಳಿಗೆ ಅಗತ್ಯವಿರುವ ಪರಿಕರಗಳ ಮಳಿಗೆ ತೆರೆಯಬೇಕು. ರೈತರ ಮನೆ ಬಾಗಿಲಿಗೆ ಪರಿಕರ ಪೂರೈಸಬೇಕು. ಕಟಾವಿಗೆ ಬಂದ ಭತ್ತ ಕೊಯ್ಲಿಗೆ ಕಟಾವು ಯಂತ್ರಗಳನ್ನು ಹೊರರಾಜ್ಯದಿಂದ ತರಿಸಬೇಕು ಎಂದು ಒತ್ತಾಯಿಸಿದರು.

ರೈತ ಸಂಘದ ಮುಖಂಡರಾದ ಎಚ್.ಆರ್. ಬಸವರಾಜಪ್ಪ ನೇತೃತ್ವದಲ್ಲಿ ಮನವಿ ಸಲ್ಲಿಸಲಾಯಿತು.

ಹೊರ ರಾಜ್ಯಗಳಅನುಮತಿ ಕುರಿತು ಮುಖ್ಯಮಂತ್ರಿ ಜೊತೆ ಚರ್ಚೆ
ಶಿವಮೊಗ್ಗ: ಕೃಷಿ ಪೂರಕ ವಾಣಿಜ್ಯ ಮಳಿಗೆಗಳು ತೆರೆಯಲು ಅವಕಾಶ ನೀಡಲಾಗುವುದು. ಇಲ್ಲಿನ ರೈತರು ಬೆಳೆದ ಹಣ್ಣುಗಳನ್ನು ಹೊರ ರಾಜ್ಯಗಳಿಗೆ ಸಾಗಿಸಲು ಅನುಮತಿ ಪಡೆಯುವ ಕುರಿತು ಮುಖ್ಯಮಂತ್ರಿ ಜತೆ ಚರ್ಚಿಸಲಾಗುವುದು ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಭರವಸೆ ನೀಡಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ರೈತರು, ಜನ ಪ್ರತಿನಿಧಿಗಳು, ವರ್ತಕರ ಜತೆ ನಡೆದ ಸಂವಾದ ಸಭೆಯಲ್ಲಿ ಅವರು ಮಾತನಾಡಿದರು.

ಕೊರೊನಾ ನಿರ್ಬಂಧಗಳು ಕೃಷಿ ಚಟುವಟಿಕೆಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಾರದು. ಖರೀದಿದಾರರು ಇಲ್ಲದೇ ನಾಶವಾಗುತ್ತಿರುವ ಹಣ್ಣಿನ ಬೆಳೆಗಳಿಗೆ ಮಾರುಕಟ್ಟೆ ದೊರಕಿಸಬೇಕು. ಶುಂಠಿ ಬೆಳೆ ಸಂರಕ್ಷಣೆಗೆ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿಗೆ ಸೂಚಿಸಿದರು.

ಜಿಲ್ಲೆಯಲ್ಲಿ 20 ಸಾವಿರ ಟನ್‌ ಫೈನಾಪಲ್ ಬೆಳೆ ನಾಶವಾಗುತ್ತಿದೆ. ಉತ್ತರ ಭಾರತದಲ್ಲಿ ಅನಾನಸ್ ಕಾರ್ಖಾನೆಗಳು ಮುಚ್ಚಿದ ಪರಿಣಾಮ ಅನಾನಸ್ ಮಾರಾಟಕ್ಕೆ ತೊಂದರೆಯಾಗಿದೆ‌. ದೆಹಲಿ, ರಾಜಸ್ಥಾನ ಸೇರಿದಂತೆ ಉತ್ತರದ ರಾಜ್ಯಗಳಲ್ಲಿ ಅನಾನಸ್ ಕಾರ್ಖಾನೆಗಳು ತೆರೆದರೆ ಅನುಕೂಲವಾಗುತ್ತದೆ. ಕಲ್ಲಂಗಡಿ ಬೆಳೆಗಾರರು ಸಂಕಷ್ಟದಲ್ಲಿ ಇದ್ದಾರೆ. ಹೊರ ರಾಜ್ಯಗಳಿಗೆ ಕಳುಹಿಸುವ ವ್ಯವಸ್ಥೆಯಾದರೆ ಅನುಕೂಲವಾಗುತ್ತದೆ ಎಂದು ರೈತರು ಮನವಿ ಮಾಡಿದ್ದಾರೆ. ಎಲ್ಲ ಅಂಶಗಳನ್ನೂ ಪರಿಶೀಲಿಸಿ ತುರ್ತು ಕ್ರಮ ಕೈಗೊಳ್ಳಲಾಗುವುದು ಎಂದರು.

ಕೃಷಿಗೆ ಪೂರಕವಾದ ಪಂಪ್‌ಸೆಟ್, ಪೈಪ್‌, ಎಲೆಕ್ಟ್ರಿಕಲ್ ಅಂಗಡಿಗಳು ಕಾರ್ಯನಿರ್ವಹಿಸಲು ಅವಕಾಶ ನೀಡಲಾಗುವುದು. ಸಾಮಾಜಿಕ ಅಂತರ ಕಾಪಾಡಿಕೊಂಡು ಎಲ್ಲಾ ಚಟುವವಟಿಕೆ ನಡೆಸಲು ಜಿಲ್ಲಾಡಳಿತ ಅನುಮತಿ ನೀಡಬೇಕು. ರೈತರೂ ಸೇರಿದಂತೆ ಎಲ್ಲರೂ ನಿಯಮ ಪಾಲಿಸಬೇಕು ಎಂದು ಸೂಚಿಸಿದರು.

ಟ್ರ್ಯಾಕ್ಟರ್, ಕೃಷಿ ಯಂತ್ರಗಳ ದುರಸ್ತಿ, ಪಂಪ್‌ಸೆಟ್‌ ದುರಸ್ತಿಗೆ ಅಗತ್ಯವಾದ ಮೆಕಾನಿಕ್ ಶಾಪ್‌ಗಳನ್ನು ತೆರೆಯಲು ಸೂಚಿಸಲಾಗಿದೆ. ಕೃಷಿ ಉತ್ಪನ್ನಗಳ ಮಾರಾಟಕ್ಕೆ ಎಪಿಎಂಸಿ ಮಾರುಕಟ್ಟೆಗಳನ್ನು ಮುಕ್ತವಾಗಿಸಲು ಸೂಚಿಸಲಾಗಿದೆ. ಮುಂಗಾರು ಬಿತ್ತನೆಗೆ ಅಗತ್ಯವಾದ ಬಿತ್ತನೆ ಬೀಜ, ರಸಗೊಬ್ಬರದ ಸಂಗ್ರಹಿಸಲಾಗಿದೆ ಎಂದು ವಿವರ ನೀಡಿದರು.

ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ, ಸಂಸದ ಬಿ.ವೈ.ರಾಘವೇಂದ್ರ, ಶಾಸಕರಾದ ಎಚ್.ಹಾಲಪ್ಪ, ಅರಗ ಜ್ಞಾನೇಂದ್ರ, ‌ವಿಧಾನ ಪರಿಷತ್ ಸದಸ್ಯರಾದ ಆಯನೂರು ಮಂಜುನಾಥ್, ಎಸ್.ರುದ್ರೇಗೌಡ, ಜಿಲ್ಲಾಧಿಕಾರಿ ಕೆ.ಬಿ. ಶಿವಕುಮಾರ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT