ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿಂದಿ ಹೇರಿಕೆ ವಿರುದ್ಧ ಟ್ವಿಟರ್‌ ಅಭಿಯಾನ

Last Updated 4 ಜೂನ್ 2019, 19:33 IST
ಅಕ್ಷರ ಗಾತ್ರ

ಬೆಂಗಳೂರು: ಹಿಂದಿಯೇತರ ರಾಜ್ಯಗಳ ಪ್ರಾಥಮಿಕ ಶಾಲೆಗಳಲ್ಲಿ ವಿದ್ಯಾರ್ಥಿಗಳು ಹಿಂದಿಯನ್ನು ಕಡ್ಡಾಯವಾಗಿ ಕಲಿಯಬೇಕು ಎಂಬ ಅಂಶವನ್ನು ರಾಷ್ಟ್ರೀಯ ಶಿಕ್ಷಣ ನೀತಿಯ ಕರಡಿನಲ್ಲಿ ಸೇರಿಸಿದ್ದರ ವಿರುದ್ಧ ಟ್ವಿಟರ್‌ನಲ್ಲಿ ಅಭಿಯಾನ ನಡೆದಿದೆ. ಈ ನಡುವೆ, ಕಡ್ಡಾಯವಾಗಿ ಹಿಂದಿಯನ್ನು ಕಲಿಯಬೇಕು ಎಂಬ ವಿವಾದಾತ್ಮಕ ಅಂಶವನ್ನು ಕರಡುವಿನಿಂದ ಕೈಬಿಡಲಾಗಿದೆ.

#karnatakaAgainstHindiImposition ಅಡಿ ಅಭಿಯಾನ ನಡೆಸಲಾಯಿತು. ಹಿಂದಿ ಹೇರಿಕೆ ಯತ್ನದ ವಿರುದ್ಧ ನೂರಾರು ಜನ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇವುಗಳಲ್ಲಿ ಕೆಲವರ ಟ್ವೀಟ್‌ಗಳು ಇಂತಿವೆ.

ನಮ್ಮ ರಾಷ್ಟ್ರದ ಬಹುಭಾಷಾ ಚೌಕಟ್ಟನ್ನು ಅಥವಾ ಸಂಸ್ಕೃತಿಯನ್ನು ಎಲ್ಲರೂ ಪಾಲಿಸಬೇಕು. ಯಾವುದೇ ಒಂದು ಭಾಷೆ ನಮ್ಮನ್ನು ಒಗ್ಗೂಡಿಸಲಾರದು. ಪರಭಾಷೆಯನ್ನು ಗೌರವಿಸಿ. ಪ್ರಮುಖ ಭಾಷಿಕರಿಗೆ ಸರ್ಕಾರಿ ಹುದ್ದೆಗಳನ್ನು ದೊರಕಿಸುವ ಮೂಲಕ ಒಗ್ಗೂಡಿಸುವ ಕೆಲಸ ಮಾಡಿ.

ಕಿರಣ್‌ ಎಂ. ಭಟ್

***

ಕಳೆದ ವರ್ಷ ಆಗಸ್ಟ್‌ನಲ್ಲಿ ಮಾರಿಷಸ್‌ನಲ್ಲಿ ನಡೆದ ಹಿಂದಿ ಸಮ್ಮೇಳನಕ್ಕೆ ನೂರಾರು ಕೋಟಿ ರೂಪಾಯಿಯನ್ನು ಕೇಂದ್ರ ಸರ್ಕಾರ ವ್ಯಯಿಸಿದೆ. ಕನ್ನಡ, ತುಳು, ಕೊಡವ ಸಮ್ಮೇಳನಕ್ಕೆ ಇದೇ ಕೇಂದ್ರ ಸರ್ಕಾರ ಈವರೆಗೆ ಎಷ್ಟು ಹಣ ಖರ್ಚು ಮಾಡಿದೆ ಎಂಬುದನ್ನು ಆಗಿನ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್‌ ಹೇಳುತ್ತಾರೆಯೇ ?

ಜಯತೀರ್ಥ ನಾಡಗೌಡ

***

ಇದು ಹಿಂದೂಸ್ತಾನ. ಹಾಗಾಗಿ ಹಿಂದಿ ಕಲಿಯಲೇಬೇಕು ಎಂದು ಕೆಲವು ಅಹಂಕಾರಿ ಅಧಿಕಾರಿಗಳು ಹೇಳುತ್ತಾರೆ. ಕನ್ನಡ ದ್ವಿತೀಯ ದರ್ಜೆ ಭಾಷೆ. ಬ್ಯಾಂಕ್ ವ್ಯವಹಾರಗಳಲ್ಲಿ ಅದಕ್ಕೆ ಸ್ಥಾನವಿಲ್ಲ ಎಂಬರ್ಥದ ಮಾತುಗಳನ್ನಾಡುತ್ತಾರೆ. ಸಾವಿರಾರು ವರ್ಷಗಳ ಇತಿಹಾಸವಿರುವ ಭಾಷೆಗೆ ಮಾಡುವ ಅವಮಾನವಿದು.

ಅಭಿಷೇಕ ಜಿ.ಜೆ.

***

ಪ್ರಿಯ ಕೇಂದ್ರ ಸರ್ಕಾರ. ಹಿಂದಿ ಜನಪ್ರಿಯ ಭಾಷೆಯೇನಲ್ಲ. ನಾವು ಕನ್ನಡಿಗರು. ಕನ್ನಡವೇ ನಮ್ಮ ಗುರುತು. ಹಿಂದಿಯನ್ನು ನಮ್ಮ ಮೇಲೆ ಹೇರಬೇಡಿ. ಇದನ್ನು ನಾವು ಒಪ್ಪುವುದಿಲ್ಲ. ಈ ಕುರಿತು ಸಂವಿಧಾನದಲ್ಲೇನಿದೆ ಎಂದು ತಿಳಿಯುವುದು ಉತ್ತಮ.

ರಾಜಣ್ಣ ಎ.ಪಿ

***

ಸಮೀಕ್ಷೆಯೊಂದರ ಪ್ರಕಾರ, ದಕ್ಷಿಣ ಭಾರತೀಯರ ಪೈಕಿ ಶೇ 60ರಿಂದ 70ರಷ್ಟು ಮಂದಿ ಹಿಂದಿ ಮಾತನಾಡುವ ಪ್ರದೇಶಗಳಿಗೆ ತೆರಳುವುದಿಲ್ಲ. ಬೆರಳೆಣಿಕೆಯಷ್ಟು ಜನ ಮಾತ್ರ ಇಂತಹ ಪ್ರದೇಶಗಳಿಗೆ ತೆರಳುತ್ತಾರೆ. ಇಂತಹ ಕೆಲವರ ಅನುಕೂಲಕ್ಕಾಗಿ ಹಿಂದಿ ಹೇರಲು ಕೇಂದ್ರ ಸರ್ಕಾರ ಯತ್ನಿಸುತ್ತಿದೆ.

ಅರುಣ್‌ ವಿರೂಪಾಕ್ಷ

***

ದಕ್ಷಿಣ ಭಾರತೀಯರು ನಿಯಮಿತವಾಗಿ ದೆಹಲಿಗೆ ಭೇಟಿ ನೀಡುವುದರಿಂದ ನಾವು ಹಿಂದಿ ಕಲಿಯಬೇಕು ಎಂದು ಅವರು ಬಯಸುತ್ತಾರೆ. ಆದರೆ, ಬೆಂಗಳೂರಿನಲ್ಲಿ ನೆಲೆಸ ಬಯಸುವ ಅದೇ ಉತ್ತರ ಭಾರತೀಯರು ಕನ್ನಡ ಕಲಿಯಲು ಇಚ್ಛಿಸುವುದಿಲ್ಲ. ನಮಗೇ ಹಿಂದಿ ಕಲಿಸಿ, ಅವರು ಬಂದು ಇಲ್ಲಿ ಉಳಿಯಲು ಯೋಚಿಸುತ್ತಿದ್ದಾರೆ.

ಬಾಬು ಅಜಯ್‌

***

ಒಬ್ಬ ಸೇಲ್ಸ್‌ಮನ್‌ ಅಥವಾ ಪ್ರವಾಸಿ ಗೈಡ್‌ 5ರಿಂದ 10 ಭಾಷೆಗಳನ್ನು ಮಾತನಾಡುತ್ತಾನೆ. ಅಂದರೆ, ಈ ಎಲ್ಲ ಭಾಷೆಗಳನ್ನೂ ಅವನು ಒಂದನೇ ತರಗತಿಯಿಂದಲೇ ಕಲಿತಿದ್ದಾನೆ ಎಂದರ್ಥವಲ್ಲ. ಅನಿವಾರ್ಯತೆಗೆ ಅನುಗುಣವಾಗಿ ಭಾಷೆ ಕಲಿಯಲಾಗುತ್ತದೆ. ಶಾಲೆಗಳಲ್ಲಿ ಮೂರು ಭಾಷೆಗಳನ್ನು ಕಲಿಯುವ ಅಗತ್ಯವಾದರೂ ಏನಿದೆ ?

ರಕ್ಷಿತ್‌ ಜೆ. ಗೌಡ

***

ಕನ್ನಡಕ್ಕಿಂತ ಯಾವುದೋ ಮೋದಿ, ಯಾವುದೋ ಗಾಂಧಿ, ಯಾವುದೋ ಗೌಡ ದೊಡ್ಡವರಲ್ಲ. ಕನ್ನಡಿಗರ ಮೇಲೆ ಹಿಂದಿ ಹೇರಿಕೆ ಬೇಡ.

ನರೇನ್‌ ಮೊರಲ್

***

ಹಿಂದಿ ಎಂದರೆ ‘ಹಿಂದೂ’ ಎಂದರ್ಥವಲ್ಲ. ಸನಾತನ ಸಂಸ್ಕೃತಿಯನ್ನು ಯಾರು ಪಾಲಿಸುತ್ತಾರೋ ಅವರು ಹಿಂದೂಗಳು. ಇದಕ್ಕೂ ಭಾಷೆಗೂ ಸಂಬಂಧವಿಲ್ಲ. ದಯವಿಟ್ಟು ಅರ್ಥ ಮಾಡಿಕೊಳ್ಳಿ.

ಶರತ್‌ ದುಂಡಳ್ಳಿ ಲಿಂಗರಾಜೇಗೌಡ

***

2,500 ವರ್ಷಗಳ ಇತಿಹಾಸ ಹೊಂದಿರುವ ಕನ್ನಡವು ಸ್ಥಳೀಯ ಭಾಷೆಯಂತೆ. ಕೇವಲ 500 ವರ್ಷಗಳ ಹಿಂದೆ ಹುಟ್ಟಿರುವ ಹಿಂದಿ ರಾಷ್ಟ್ರಭಾಷೆಯಂತೆ. ಇದು ಯಾವ ಲಾಜಿಕ್‌ ?

ಅರ್ಜುನ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT