ಶನಿವಾರ, ಮಾರ್ಚ್ 28, 2020
19 °C
ರವಿಕುಮಾರ್‌ ಕ್ಷಮೆಗೆ ಪಟ್ಟು

ದೊರೆಸ್ವಾಮಿಗೆ ಸದನದಲ್ಲೇ ಅವಮಾನ: ಕಾಂಗ್ರೆಸ್‌, ಜೆಡಿಎಸ್‌ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ವಿರುದ್ಧ ಮಂಗಳವಾರ ವಿಧಾನ ಪರಿಷತ್‌ನಲ್ಲೇ ಬಿಜೆಪಿ ಸದಸ್ಯ ಎನ್. ರವಿಕುಮಾರ್‌ ಧಿಕ್ಕಾರ ಕೂಗಿದ್ದರಿಂದಾಗಿ ಸಿಟ್ಟಿಗೆದ್ದ ವಿರೋಧ ಪಕ್ಷದ ಸದಸ್ಯರು, ಧರಣಿ ನಡೆಸಿದರು. ಇದರಿಂದಾಗಿ ಇಡೀ ದಿನ ಕಲಾಪ ನಡೆಯಲಿಲ್ಲ.

ಕಾಂಗ್ರೆಸ್ ಸದಸ್ಯ ಐವನ್ ಡಿಸೋಜ ಅವರು ನಿಯಮ 342ರ ಅಡಿಯಲ್ಲಿ ದೊರೆಸ್ವಾಮಿ ವಿರುದ್ಧ ಶಾಸಕ ಬಸನಗೌಡ ಪಾಟೀಲ ಯತ್ನಾಳ್‌ ಅವರು ಅವಹೇಳನಕಾರಿಯಾಗಿ ಮಾತನಾಡಿದ್ದನ್ನು ಆಕ್ಷೇಪಿಸಿದರು. ಯತ್ನಾಳ್ ವಿರುದ್ಧ 23 ಪ್ರಕರಣಗಳು ದಾಖಲಾಗಿದ್ದು, ಅವರನ್ನೇ ಬಂಧಿಸಬೇಕು ಎಂದರು.

ಆಗ ಭಿತ್ತಿ ಫಲಕವನ್ನು ಕೈಯಲ್ಲಿ ಹಿಡಿದುಕೊಂಡು ಎದ್ದುನಿಂತ ರವಿಕುಮಾರ್‌, ‘ಸಾವರ್ಕರ್‌ ಅವರನ್ನು ಹೇಡಿ ಎಂದು ಕರೆದಿರುವ, ಪ್ರಧಾನಿ ನರೇಂದ್ರ ಮೋದಿ ಅವರನ್ನೇ ಮುಗಿಸಿ ಎಂದು ಹೇಳಿರುವ ದೊರೆಸ್ವಾಮಿ ಅವರಿಗೆ ಧಿಕ್ಕಾರ, ಅವರಿಗೆ ನಾಚಿಕೆಯಾಗಬೇಕು’ ಎಂದರು. ಇದಕ್ಕೆ ಧ್ವನಿಗೂಡಿಸಿದ ತೇಜಸ್ವಿನಿ ಗೌಡ ಅವರು ‘ಪ್ರಧಾನಿ ಮೋದಿ ಅವರನ್ನು ಮುಗಿಸಿ ಎಂದು ಹೇಳಿದವರಿಗೆ ಬೆಂಬಲ ನೀಡುತ್ತಿದ್ದೀರಿ’ ಎಂದು ಹೇಳಿದರು. ವೈ.ಎ. ನಾರಾಯಣಸ್ವಾಮಿ ಅವರೂ ಕೂಗಾಡಿದರು.

ಈ ಹಂತದಲ್ಲಿ ಕ್ರಿಯಾಲೋಪ ಎತ್ತಿದ ಜೆಡಿಎಸ್‌ನ ಕೆ.ಟಿ‌.ಶ್ರೀಕಂಠೇಗೌಡ, ಸದಸ್ಯರೊಬ್ಬರು ಮಾತನಾಡುತ್ತಿದ್ದಾಗ ದೊರೆಸ್ವಾಮಿ ಬಗ್ಗೆ ಧಿಕ್ಕಾರ ಕೂಗಿದ್ದು ಸರಿಯಲ್ಲ, ತಕ್ಷಣ ಕ್ಷಮೆಯಾಚಿಸಬೇಕು ಎಂದರು. ಬಸವರಾಜ ಹೊರಟ್ಟಿ ಅದಕ್ಕೆ ದನಿಗೂಡಿಸಿದರು. ಆದರೆ ಕ್ಷಮೆ ಕೇಳಲು ರವಿಕುಮಾರ್ ಒಪ್ಪಲಿಲ್ಲ, ಬದಲಿಗೆ ಸಾವರ್ಕರ್‌, ಮೋದಿಗೆ ಅವಹೇಳನ ಮಾಡಿದವರ ವಿರುದ್ಧ ತಾವು ಆಡಿದ್ದು ಸರಿ ಎಂದರು. ಸಭಾಪತಿ ಪೀಠದ ಮುಂಭಾಗಕ್ಕೆ ವಿರೋಧ ಪಕ್ಷದ ಸದಸ್ಯರು ಧಾವಿಸಿ ಪ್ರತಿಭಟನೆ ನಡೆಸಿದ್ದರಿಂದ ಕಲಾಪವನ್ನು ಮುಂದೂಡಲಾಯಿತು.

ಮಧ್ಯಾಹ್ನ ಮತ್ತೆ ಕಲಾಪ ಆರಂಭವಾದಾಗ ವಿರೋಧ ಪಕ್ಷದ ನಾಯಕ ಎಸ್‌.ಆರ್‌.ಪಾಟೀಲ ಅವರು ಕಡತದಲ್ಲೇ ಸೇರಿಕೊಂಡಿರುವ ರವಿಕುಮಾರ್‌ ಮತ್ತು ತೇಜಸ್ವಿನಿ ಗೌಡ ಅವರು ಆಡಿರುವ ಮಾತುಗಳನ್ನು ಉಲ್ಲೇಖಿಸಿದರು. ಕ್ಷಮೆ ಕೇಳದಿದ್ದರೆ ಪ್ರತಿಭಟನೆ ಮುಂದುವರಿಯಲಿದೆ ಎಂದರು. ಕ್ಷಮೆ ಕೇಳದಿದ್ದರೆ ರವಿಕುಮಾರ್ ಅವರನ್ನು ಸದನದಿಂದ ಅಮಾನತು ಮಾಡಬೇಕು ಎಂದರು. ಕ್ಷಮೆ ಕೇಳಲು ರವಿಕುಮಾರ್ ನಿರಾಕರಿಸಿದರು. ಹೀಗಾಗಿ ಸಭಾಪತಿ ಕೆ.ಪ್ರತಾಪಚಂದ್ರ ಶೆಟ್ಟಿ ಅವರು ಕಲಾಪವನ್ನು ಬುಧವಾರ ಬೆಳಿಗ್ಗೆ 11 ಗಂಟೆಗೆ ಮುಂದೂಡಿದರು.

ನಿಯಮ 342ರಡಿ ಚರ್ಚೆಗೆ ಅವಕಾಶ: ಬೆಳಿಗ್ಗೆ ಕಲಾಪ ಆರಂಭವಾಗುತ್ತಿದ್ದಂತೆಯೇ ಪ್ರತಿಭಟನೆ ಮುಂದುವರಿದಿತ್ತು. ಉಪಯುಕ್ತ ಚರ್ಚೆಯೇ ಮೇಲ್ಮನೆಗೆ ಶೋಭೆ ಎಂದು ಜೆಡಿಎಸ್‌ನ ಬಸವರಾಜ ಹೊರಟ್ಟಿ ಹೇಳಿದರು. ಎಸ್‌.ಆರ್.ಪಾಟೀಲ ಅವರು ತಾವು ನಿಯಮ 342ರ ಅಡಿಯಲ್ಲಿ ವಿಷಯ ಪ್ರಸ್ತಾಪಿಸಿದರು.

ಪೌರತ್ವ (ತಿದ್ದುಪಡಿ) ಕಾಯ್ದೆಯ ವಿರುದ್ಧ ನಿರ್ಣಯ?
ನಿಯಮ 122 ಅಡಿಯಲ್ಲಿ ಸಿಎಎ ವಿಷಯದಲ್ಲಿ ನಿರ್ಣಯ ಮಂಡಿಸಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಕಾಂಗ್ರೆಸ್‌ ಮತ್ತು ಜೆಡಿಎಸ್‌ ಪಕ್ಷಗಳು ತಂತ್ರ ರೂಪಿಸಿವೆ.

ಕರ್ನಾಟಕದ ಮೇಲ್ಮನೆಯಲ್ಲಿ ಸಿಎಎಗೆ ವಿರೋಧ ಇದೆ ಎಂಬ ಸಂದೇಶವನ್ನು ಕೇಂದ್ರ ಸರ್ಕಾರಕ್ಕೆ ರವಾನಿಸುವುದು ಇದರ ಉದ್ದೇಶ.

ಇದಕ್ಕಾಗಿ ವಾರದ ಮೊದಲೇ ಅರ್ಜಿ ಸಲ್ಲಿಸಲಾಗಿದ್ದು, ಬಹುತೇಕ ಬುಧವಾರವೇ ಈ ನಿರ್ಣಯ ಮಂಡನೆಯಾಗುವ ಸಾಧ್ಯತೆ ಇದೆ. ಇದಕ್ಕೆ ಸಭಾಪತಿ ಅನುಮತಿ ನೀಡಬಹುದು, ನೀಡದೆಯೂ ಇರಬಹುದು, ಒಂದು ವೇಳೆ ಅನುಮತಿ ನೀಡಿ, ನಿರ್ಣಯಕ್ಕೆ ಬಹುಮತ ದೊರೆತರೆ ವಿಶಿಷ್ಟ ವಿದ್ಯಮಾನವೊಂದು ಸೃಷ್ಟಿಯಾಗಬಹುದು.

ಪ್ರತಿಧ್ವನಿಸಿದ ‘ಪ್ರಜಾವಾಣಿ’
ಸ್ವಾತಂತ್ರ್ಯ ಹೋರಾಟಗಾರರ ವಿರುದ್ಧ ಹೇಳಿಕೆ ನೀಡಿರುವವರಿಗೆ ಸರಿಯಾಗಿ ಮಾರ್ಗದರ್ಶನ ನೀಡದಿರುವ ಬಿಜೆಪಿಯ ವರ್ತನೆಯನ್ನು ಖಂಡಿಸಿದ ಎಸ್‌.ಆರ್‌.ಪಾಟೀಲ, ‘ಪ್ರಜಾವಾಣಿ’ಯಲ್ಲಿ ಪ್ರಕಟವಾದ ಸಂಪಾದಕೀಯವನ್ನು ಉಲ್ಲೇಖಿಸಿದರು. ‘ಸಡಿಲ ಮಾತಿನ ಬಗ್ಗೆ ಮೌನ ಸರಿಯಲ್ಲ, ಕ್ರಮ ಅಗತ್ಯ’ ಎಂಬ ಶೀರ್ಷಿಕೆ ಓದಿ, ಕೆಲವು ಸಾಲುಗಳನ್ನೂ ಓದಿದರು. ಬಳಿಕ ಐವನ್‌ ಡಿಸೋಜ ಅವರೂ ಉಲ್ಲೇಖಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು