ಶನಿವಾರ, ಸೆಪ್ಟೆಂಬರ್ 19, 2020
27 °C

ಶರಾವತಿ ಪಾಲಿಗೆ ಮರಣ ಮೃದಂಗವಾಗಲಿದೆಯೇ ಬೆಂಗಳೂರಿಗೆ ನೀರು ಹರಿಸುವ ಯೋಜನೆ?

ಅನಿತಾ ಪೈಲೂರು Updated:

ಅಕ್ಷರ ಗಾತ್ರ : | |

ನಮ್ಮ ನದಿಯ ನೀರಿನ ರುಚಿ ನೋಡಲು ನಾವು ಬೆಂಗಳೂರಿಗೆ ಬರಬೇಕು ಎಂದು ನೀವು ನಿರೀಕ್ಷಿಸುತ್ತೀರಾ?’. ಉತ್ತರಕನ್ನಡ ಜಿಲ್ಲೆಯ ಹೊನ್ನಾವರ ತಾಲ್ಲೂಕಿನ ಮಾಳ್ಕೋಡ್‌ ಗ್ರಾಮದ 60ರ ಪ್ರಾಯದ ಅಮ್ಮಣ್ಣು ಅವರ ಭಾವುಕ ಪ್ರಶ್ನೆಯಿದು. ನದಿ ತೀರದ ಜನರ ಬಾಯಾರಿಕೆ ನೀಗಿಸಲು ಕ್ರಮ ಕೈಗೊಳ್ಳುವುದನ್ನು ಬಿಟ್ಟು ಶರಾವತಿಯ ನೀರನ್ನು ಬೇರೆಡೆ ತಿರುಗಿಸುವ ಯೋಜನೆ ಹಿಂದಿನ ತರ್ಕವೇನು ಎಂಬುದೇ ಅರ್ಥವಾಗುತ್ತಿಲ್ಲ ಎನ್ನುತ್ತಾರವರು.

ಕಳೆದ ನಾಲ್ಕು ವರ್ಷಗಳಿಂದ ಬೇಸಗೆ ಬಂತೆಂದರೆ ಸಾಕು, ಅಮ್ಮಣ್ಣು ಅವರ ಗ್ರಾಮಕ್ಕೆ ಟ್ಯಾಂಕರ್‌ ನೀರೇ ಗತಿ. ಶರಾವತಿ ನದಿ ಪಾತ್ರದ ಸುಮಾರು 50 ಗ್ರಾಮಗಳದ್ದೂ ಇದೇ ಕಥೆ. ಲಿಂಗನಮಕ್ಕಿ ಜಲಾಶಯದ ಮೇಲ್ಭಾಗದ ಮತ್ತು ಕೆಳಭಾಗದ ಜನರದ್ದೂ ಇದೇ ಗೋಳು.

ಇದನ್ನೂ ಓದಿ: ಒಂದು ನದಿ, ಹತ್ತು ಅಣೆಕಟ್ಟು​

ಪಶ್ಚಿಮ ಘಟ್ಟಸಾಲುಗಳ ಸನಿಹವಿರುವ ಈ ಗ್ರಾಮಗಳ ಅಂತರ್ಜಲ ಮಟ್ಟದಲ್ಲಿಯೂ ಗಣನೀಯ ಇಳಿಕೆಯಾಗಿದೆ. ಸಾಗರ ತಾಲ್ಲೂಕಿನ ಬ್ಯಾಕೋಡು ಗ್ರಾಮದ 10 ಕೊಳವೆ ಬಾವಿಗಳ ಪೈಕಿ ಈ ಬಾರಿ ಬೇಸಗೆಯಲ್ಲಿ ನೀರು ದೊರೆತದ್ದು 2ರಲ್ಲಿ ಮಾತ್ರ. ಕುಡಿಯುವ ನೀರಿನ ಉದ್ದೇಶಕ್ಕಾಗಿ ಲಿಂಗನಮಕ್ಕಿ ಜಲಾಶಯದಿಂದ ಬೆಂಗಳೂರಿಗೆ ನೀರು ಹರಿಸುವ ಯೋಜನೆ ಸಹಜವಾಗಿಯೇ ಶರಾವತಿ ನದಿ ಅವಲಂಬಿಸಿರುವ ಸುಮಾರು 10 ಲಕ್ಷ ಜನರನ್ನು ಕುಪಿತರನ್ನಾಗಿಸಿದೆ. ತ್ಯಾಗರಾಜನ್ ಸಮಿತಿ 2014ರಲ್ಲಿ ಸರ್ಕಾರಕ್ಕೆ ಸಲ್ಲಿಸಿದ ಶಿಫಾರಸಿನ ಆಧಾರದಲ್ಲಿ ಪ್ರಸ್ತಾಪಿಸಲಾಗಿರುವ ಈ ಯೋಜನೆಯನ್ನು ಕಳೆದ ತಿಂಗಳು ಘೋಷಿಸಲಾಗಿದೆ.

‘ಹಾಸನದ ಯಗಚಿ ಜಲಾಶಯದ ಮೂಲಕ ಅಥವಾ ಚಿತ್ರದುರ್ಗದ ವಾಣಿ ವಿಲಾಸ ಸಾಗರದ ಮೂಲಕ ಲಿಂಗನಮಕ್ಕಿಯಿಂದ ಬೆಂಗಳೂರಿಗೆ ನೀರು ತರಬಹುದಾಗಿದೆ. ಈ ಪೈಕಿ ಉತ್ತಮ ಯಾವುದೆಂದು ಇನ್ನಷ್ಟೇ ತೀರ್ಮಾನಿಸಬೇಕಿದೆ’ ಎಂದು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಅಧ್ಯಕ್ಷ ತುಷಾರ್ ಗಿರಿನಾಥ್ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ಇದನ್ನೂ ಓದಿ: ಜಲಾಶಯವಲ್ಲ, ಜಲಸಾಕ್ಷರತೆ ಬೇಕು​

132 ಕಿಲೋಮೀಟರ್ ಉದ್ದದ ಶರಾವತಿ ನದಿ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಅಂಬುತೀರ್ಥದಲ್ಲಿ ಹುಟ್ಟಿ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದಲ್ಲಿ ಸಮುದ್ರ ಸೇರುತ್ತದೆ. ನದಿಯ ಹರಿವಿನಲ್ಲಿ ಕಳೆದ 70 ವರ್ಷಗಳಲ್ಲಿ ಆದ ಬದಲಾವಣೆ ಮತ್ತು ವಿದ್ಯುತ್ ಉತ್ಪಾದನೆಗಾಗಿ ನೀರನ್ನು ಬಳಸಿಕೊಳ್ಳಲು ಆರಂಭಿಸಿದ ಬಳಿಕ ನದಿ ತೀರದ ಜನ ಅನೇಕ ಸಂಕಷ್ಟಗಳನ್ನು ಎದುರಿಸಿದ್ದಾರೆ. ನದಿ ಹರಿವು ಮತ್ತು ಪರಿಸರ ವ್ಯವಸ್ಥೆಯನ್ನು ಸಮತೋಲನದಲ್ಲಿ ಇಟ್ಟುಕೊಳ್ಳಬೇಕಾದ ಸವಾಲಿನ ಮಧ್ಯೆಯೇ ಇದೀಗ ಜನರಲ್ಲಿ ಮತ್ತೆ ಆತಂಕ ಮನೆ ಮಾಡಿದೆ.

‘ಶರಾವತಿ ಈಗಾಗಲೇ ನದಿಯ ಗುಣಲಕ್ಷಣವನ್ನು ಕಳೆದುಕೊಂಡಿದೆ’ ಎಂಬುದು ‘ಶರಾವತಿ ಉಳಿಸಿ’ ಅಭಿಯಾನದ ನೇತೃತ್ವ ವಹಿಸಿರುವ ನಾ. ಡಿಸೋಜ ಅವರ ಅಭಿಪ್ರಾಯ. ನದಿ ಪಾತ್ರದ ಜೀವ ವೈವಿಧ್ಯ ಮತ್ತು ಅಲ್ಲಿನನವರು ಎದುರಿಸುತ್ತಿರುವ ಸವಾಲುಗಳನ್ನು ದಾಖಲಿಸಿಟ್ಟುಕೊಂಡಿರುವ ಇವರು, ‘ಸ್ಥಳೀಯರ ಬಳಿ ಸಮಾಲೋಚಿಸದೆ, ವಾಸ್ತವಾಂಶಗಳನ್ನು ಪರಿಗಣಿಸದೆ ಸರ್ಕಾರ ಹೇಗೆ ಇಂತಹ ಮಹತ್ವದ ನಿರ್ಧಾರಗಳನ್ನು ಕೈಗೊಳ್ಳುತ್ತದೆ’ ಎಂದು ಆಘಾತ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ‘ತೀವ್ರವಾಗಿ ಹಾನಿಗೊಳಗಾಗಿರುವ ಪರಿಸರ ವ್ಯವಸ್ಥೆಯನ್ನು ಪುನರ್‌ ನವೀಕರಣಗೊಳಿಸುವುದು ನಮ್ಮ ಮೊದಲ ಆದ್ಯತೆಯಾಗಬೇಕು’ ಎಂದು ‘ಪ್ರಜಾವಾಣಿ’ ಬಳಿ ಪ್ರತಿಪಾದಿಸಿದ್ದಾರೆ.

ಪರಿಸರ, ಆರ್ಥಕತೆಯ ಮೇಲೆ ಪರಿಣಾಮ

‘1930ರ ಬಳಿಕ ಕೈಗೊಳ್ಳಲಾದ ಸರಣಿ ವಿದ್ಯುತ್ ಉತ್ಪಾದನಾ ಯೋಜನೆಗಳು ನದಿ ಪಾತ್ರದ ಪರಿಸರ ಮತ್ತು ಆರ್ಥಿಕತೆ ಮೇಲೆ ತೀವ್ರ ಪರಿಣಾಮ ಬೀರಿವೆ. ಜಲಾಶಯದ ಮೇಲ್ಭಾಗದ ಜನರ ಸ್ಥಳಾಂತರ ಮತ್ತು ಪ್ರತ್ಯೇಕತೆ ಒಂದೆಡೆಯಾದರೆ, ಜೀವ ವೈವಿಧ್ಯ ನಾಶವು ಜಲಾಶಯದ ಕೆಳಭಾಗದ ಜನರ ಜೀವನದ ಮೇಲೆ ಪರಿಣಾಮ ಬೀರಿತ್ತು. ಇಂದಿಗೂ ನಾವದರಿಂದ ತೊಂದರೆ ಅನುಭವಿಸುತ್ತಿದ್ದೇವೆ’ ಎಂದು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ ‘ಶರಾವತಿ ಉಳಿಸಿ’ ಅಭಿಯಾನದ ಸಹ ಸಂಚಾಲಕ ಅಖಿಲೇಶ್ ಚಿಪ್ಲಿ.

ನದಿ ತೀರದಲ್ಲಿ ವಾಸಿಸುವ ಮೀನುಗಾರರ ಮೇಲೆ ವಿದ್ಯುತ್ ಉತ್ಪಾದನಾ ಯೋಜನೆಗಳು ನೇರ ಪರಿಣಾಮ ಬೀರಿವೆ. ‘ಮೀನು ದೊರೆಯದಿರುವುದರಿಂದ ಮಾರಾಟಕ್ಕೆ ತೆರಳುವುದೇ ಕಷ್ಟವಾಗುತ್ತಿದೆ. ಈ ಭಾಗದ ಮೀನು ವೈವಿಧ್ಯ ಮತ್ತು ಗುಣಮಟ್ಟ ಶೇ 75ರಷ್ಟು ಕುಸಿದಿದೆ. ಈ ಪ್ರದೇಶಕ್ಕೆ ಹೆಸರುವಾಸಿಯಾದ ಕೆಲವು ಮೀನು ತಳಿಗಳು ಅಳಿವಿನ ಅಂಚಿನಲ್ಲಿವೆ’ ಎನ್ನುತ್ತಾರೆ ಉತ್ತರ ಕನ್ನಡ ಜಿಲ್ಲೆಯ ತಣಮಡಗಿ ಕುಗ್ರಾಮದ ಸಾವಿತ್ರಿ ಅಂಬಿಗ. ಕುಟುಂಬದವರು ಮೀನು ಕೃಷಿ ಮಾಡುತ್ತಿದ್ದು ಅದನ್ನು ಮಾರಾಟ ಮಾಡುವುದು ಇವರ ಪ್ರಮುಖ ಕಾಯಕ.

ಈ ಪ್ರದೇಶದಲ್ಲಿ ಮೀನುಗಾರಿಕೆಯು ಕುಟುಂಬದ ಜೀವನಾಧಾರ ಮಾತ್ರವಲ್ಲದೆ ಸ್ಥಳೀಯ ಆರ್ಥಿಕತೆಗೂ ಕೊಡುಗೆ ನೀಡುತ್ತಿದೆ. ವಿದ್ಯುತ್ ಯೋಜನೆಗಳಿಂದ ನದಿ ಮತ್ತು ಪರಿಸರದ ಮೇಲಾದ ಪರಿಣಾಮ ಸ್ಥಳೀಯ ಆರ್ಥಿಕತೆಗೂ ಹಿನ್ನಡೆಯುಂಟುಮಾಡಿದೆ.

ಇದನ್ನೂ ಓದಿ: ಇಲ್ಲದ ರೋಗಕ್ಕೆ ಎಲ್ಲೆಲ್ಲಿಂದಲೋ ಮದ್ದು!​

ಬೆಂಗಳೂರಿನ ಐಐಎಸ್‌ಸಿ (ಭಾರತೀಯ ವಿಜ್ಞಾನ ಸಂಸ್ಥೆ) ಈಚೆಗೆ ನಡೆಸಿರುವ ಅಧ್ಯಯನವೊಂದು, ಅಣೆಕಟ್ಟೆಗಳಿಂದ ವರ್ಷವಿಡೀ ನೀರು ಬಿಡುವುದರಿಂದ ಶರಾವತಿ ನದೀಮುಖದಲ್ಲಿ ಲವಣಾಂಶದ ಮೇಲಾಗುವ ಪರಿಣಾಮಗಳ ಬಗ್ಗೆ ವಿಸ್ತೃತವಾಗಿ ಬೆಳಕುಚೆಲ್ಲಿದೆ.

‘ಸಾಮಾನ್ಯವಾಗಿ ನದೀಮುಖಗಳು ಮೀನುಗಳ ಮೊಟ್ಟೆಯಿಡುವ ಮತ್ತು ಅವು ಮರಿಗಳಾಗಿ ಬೆಳೆಯುವ ಪ್ರದೇಶಗಳಾಗಿ ಕಾರ್ಯನಿರ್ವಹಿಸುತ್ತವೆ. ಅವು ನೈಸರ್ಗಿಕವಾಗಿ ವಿಭಿನ್ನ ಲವಣಾಂಶಗಳನ್ನು ಹೊಂದಿದ್ದು, ಸಮುದ್ರ ಮೀನು ವೈವಿಧ್ಯತೆಯ ಅಭಿವೃದ್ಧಿಗೆ ನೆರವಾಗುತ್ತವೆ. ಉತ್ತರ ಕನ್ನಡದ ಅಘಾನಶಿನಿ ನದೀಮುಖದಲ್ಲಿ ಎಂಟು ವಿಧದ ಜಲಚರಗಳಿವೆ. ಇದು ಶರಾವತಿಯಲ್ಲಿ ಒಂದಕ್ಕೆ ಕುಸಿದಿದೆ. ಅಘನಾಶಿನಿಯಲ್ಲಿ 80 ವಿಧದ ಮೀನುಗಳಿದ್ದರೆ ಶರಾವತಿಯಲ್ಲಿ ಕೇವಲ 40 ಪ್ರಬೇಧಗಳ ಮೀನುಗಳಿವೆ’ ಎಂದು ಕರವಾಳಿ ಪರಿಸರ ತಜ್ಞ ಡಾ. ಎಂ.ಡಿ. ಸುಭಾಷ್ ಚಂದ್ರನ್ ತಿಳಿಸಿದ್ದಾರೆ.

ಇದನ್ನೂ ಓದಿ: ಅರ್ಕಾವತಿ–ಕುಮುದ್ವತಿ: ಪ್ರತ್ಯೇಕ ಸಂಸ್ಥೆ ರಚನೆ ಪ್ರಸ್ತಾವ ನನೆಗುದಿಗೆ​

ದಶಕಗಳಿಂದ ನದಿಯಲ್ಲಿ ಲವಣಾಂಶ ಕಡಿಮೆಯಾದ ಕಾರಣ ಶರಾವತಿ ಕಣಿವೆ ಪ್ರದೇಶವು ಕಾಳುಮೆಣಸು, ವೀಳ್ಯದೆಲೆ, ಬಾಳೆಯಂತಹ ಬೆಳೆಗಳಿಗೆ ಪೂರಕವಾಗಿ ಪರಿಣಮಿಸಿದೆ. ಕೃಷಿ ಆರ್ಥಿಕತೆಗೆ ಪೂರಕವಾಗುತ್ತಿದೆ. ಪ್ರಸ್ತಾವಿತ ಯೋಜನೆಯಿಂದ ನದಿಯಲ್ಲಿ ಲವಣಾಂಶ ಹೆಚ್ಚುವ ಸಾಧ್ಯತೆಯಿದ್ದು ಕೃಷಿ ಆರ್ಥಿಕತೆಗೂ ಮಾರಕವಾಗುವ ಸಾಧ್ಯತೆ ಇದೆ ಎಂದು ಸುಭಾಷ್ ಚಂದ್ರನ್ ಅಭಿಪ್ರಾಯಪಟ್ಟಿದ್ದಾರೆ.

ದಶಕಗಳಲ್ಲಿ ನದಿಯ ಲವಣಾಂಶ ಕಡಿಮೆಯಾದ ಕಾರಣ ಕೆಳಭಾಗದ ಪ್ರದೇಶಗಳು ಕಾಳುಮೆಣಸು, ಜಾಯಿಕಾಯಿ, ವೀಳ್ಯದೆಲೆ, ಬಾಳೆ ಮತ್ತು ಇತರ ಹಣ್ಣಿನ ಕೃಷಿಗಳಿಗೆ ಪೂರಕವಾಗಿ ಪರಿಣಮಿಸಿದ್ದು ಕೃಷಿ ಆರ್ಥಿಕತೆಯ ಬೆಳವಣಿಗೆಗೆ ಸಹಾಯಕವಾಗಿವೆ. ಪ್ರಸ್ತಾವಿತ ಯೋಜನೆಯಿಂದಾಗಿ ಲವಣಾಂಶ ಹೆಚ್ಚಾದರೆ ಈಗಿರುವ ಪರಿಸರ ವ್ಯವಸ್ಥೆಗೆ ಮಾರಕವಾಗಲಿವೆ.

ಸವಾಲುಗಳು ಅನೇಕ

‘ಯೋಜನೆ ಮುಂದೆ ಅನೇಕ ಸವಾಲುಗಳಿವೆ’ ಎನ್ನುತ್ತಾರೆ ಕೆಪಿಟಿಸಿಎಲ್‌ನ (ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ) ನಿವೃತ್ತ ಸುಪರಿಂಟೆಂಡೆಂಟ್ ಎಂಜಿನಿಯರ್ ಗಜಾನನ ಶರ್ಮಾ. ಅದನ್ನವರು ಹೀಗೆ ವಿವರಿಸುತ್ತಾರೆ: ‘ಲಿಂಗನಮಕ್ಕಿಯಿಂದ ನೀರನ್ನು ಸುಮಾರು 1,500 ಅಡಿ ಎತ್ತರಕ್ಕೆ ಏರಿಸಿ 400 ಕಿಲೋಮೀಟರ್‌ ದೂರಕ್ಕೆ ಹರಿಸಬೇಕಾಗಿದೆ. ಇದಕ್ಕೆ ಆರಂಭದಲ್ಲೇ ದೊಡ್ಡ ಪಂಪಿಂಗ್ ಮತ್ತು ಪವರ್ ಸ್ಟೇಷನ್ ಅಗತ್ಯವಾಗಿದ್ದು, ನೂರಾರು ಮೆಗಾವಾಟ್‌ ವಿದ್ಯುತ್ ಬೇಕಾಗುತ್ತದೆ. ಇದಕ್ಕಾಗಿ ಒಂದೆರಡು 220 ಕೆ.ವಿ. ಪ್ರಸರಣ ತಂತಿಗಳ ಅವಶ್ಯಕತೆ ಎದುರಾಗಬಹುದಾಗಿದ್ದು, ಇದಕ್ಕೆ ಕಾಡನ್ನು ಕಡಿಯಬೇಕಾಗುತ್ತದೆ’.

ಇದನ್ನೂ ಓದಿ: ಎಂಪ್ರಿ ಶಿಫಾರಸು ಧಿಕ್ಕರಿಸಿದ ಸರ್ಕಾರ​

‘30 ಸಾವಿರ ದಶಲಕ್ಷ ಘನ ಅಡಿ (ಟಿಎಂಸಿಎಫ್‌ಟಿ) ನೀರನ್ನು ಸೆಳೆಯಲು ಅದೇ ಪ್ರಮಾಣದ ನೀರಿನ ಸಹಾಯದಿಂದ ಉತ್ಪಾದಿಸುವುದಕ್ಕಿಂತಲೂ ಹೆಚ್ಚಿನ ವಿದ್ಯುತ್‌ನ ಅಗತ್ಯವಿದೆ. ಹೀಗೆ, ಆರಂಭದಲ್ಲಿ ಬೃಹತ್ ಪೈಪ್‌ಲೈನ್‌ಗಳ ಮೂಲಕ ಮಧ್ಯ ಭಾಗದ ಸಂಗ್ರಹಾಗಾರಕ್ಕೆ ಹರಿಯುವ ನೀರನ್ನು ಅಲ್ಲಿಂದ ಬೆಂಗಳೂರು ಸಮೀಪದ ಜಲಾಶಯಕ್ಕೆ ಹರಿಸಲಾಗುತ್ತದೆ. ಈ ಯೋಜನೆಗೆ ಅಪಾರ ಪ್ರಮಾಣದ ವೆಚ್ಚ ತಗುಲಲಿದ್ದು, ಸರಿಪಡಿಸಲಾರದಂತಹ ಅನೇಕ ಪರಿಣಾಮಗಳನ್ನೂ ಎದುರಿಸಬೇಕಾಗಬಹುದು’.

ಶರಾವತಿ ಪವರ್‌ ಸ್ಟೇಷನ್‌ಗಳಲ್ಲಿ ರಾಜ್ಯದ 1/6ರಷ್ಟು ವಿದ್ಯುತ್ ಉತ್ಪಾದನೆಯಾಗುತ್ತಿದೆ. ಈ ಸ್ಟೇಷನ್‌ಗಳು ಕಡಿಮೆ ವೆಚ್ಚದಲ್ಲಿ ವಿದ್ಯುತ್ ಉತ್ಪಾದನೆಗೆ ರಾಜ್ಯಕ್ಕೆ ನೆರವಾಗುತ್ತಿವೆ ಎಂದಿರುವ ಗಜಾನನ ಶರ್ಮಾ ಅವರು, ಅಣೆಕಟ್ಟೆಗಳಿಂದ ನದಿಗೆ ಆಗುತ್ತಿರುವ ಹೊರೆಯ ಬಗ್ಗೆಯೂ ಪ್ರಸ್ತಾಪಿಸಿದ್ದಾರೆ.

ಐದು ಪವರ್‌ ಸ್ಟೇಷನ್‌ಗಳು, 4 ಬೃಹತ್ ಅಣೆಕಟ್ಟೆಗಳು (ಮೂರು ಮಾತ್ರ ಕಾರ್ಯಾಚರಿಸುತ್ತಿವೆ), 4 ಕಾಲುವೆಗಳು – ಇವೆಲ್ಲ ಕೇವಲ 50 ಕಿಲೋಮೀಟರ್‌ನಷ್ಟು ವ್ಯಾಪ್ತಿಯಲ್ಲಿದ್ದು ಇವುಗಳಿಂದ ನದಿಯ ಮೇಲೆ ಹೆಚ್ಚಿನ ಒತ್ತಡವಾಗುತ್ತಿದೆ. ಮಾಣಿ ಮತ್ತು ಹುಲಿಕಲ್ ಅಣೆಕಟ್ಟೆ ನೇರವಾಗಿ ಶರಾವತಿಗೇ ಅಡ್ಡಲಾಗಿ ಕಟ್ಟದಿದ್ದರೂ ಇದೇ ನದಿಯ ಪರಿಸರ ವ್ಯವಸ್ಥೆಗೆ ಹೊಂದಿಕೊಂಡಿವೆ. ಈ ಪ್ರದೇಶದ ಇನ್ನೊಂದು ಪ್ರಸ್ತಾವಿತ ಯೋಜನೆಯಿಂದ ಮತ್ತೊಂದು ಪವರ್ ಸ್ಟೇಷನ್ ಮತ್ತು ಎರಡು ದೊಡ್ಡ ಕಾಲುವೆಗಳು ನಿರ್ಮಾಣವಾಗಲಿವೆ. ಜತೆಗೆ 2000 ಮೆಗಾವಾಟ್ ಸಾಮರ್ಥ್ಯದ ಅಂಡರ್‌ಗ್ರೌಂಡ್ ಪವರ್‌ ಸ್ಟೇಷನ್ ನಿರ್ಮಾಣವಾಗಲಿದೆ.

ಇದನ್ನೂ ಓದಿ: ಈ ಹೊತ್ತಿಗೂ ಇವರೆಲ್ಲ ಶಾಪಗ್ರಸ್ತರು!: ಬೀದಿಗೆ ಬಿದ್ದ ಬದುಕು…

‘ಅಣೆಕಟ್ಟೆಗಳ ನಿರ್ಮಾಣವಾದ ಬಳಿಕ ಉಂಟಾದ ನೀರಿನ ಅಸಮರ್ಪಕ ಹರಿವು ನದಿ ದಡಗಳನ್ನು ಸವೆಯುವಂತೆ ಮಾಡಿದ್ದು, ಸಾಂಪ್ರದಾಯಿಕ ಕೃಷಿಗಳಾದ ಭತ್ತ, ಅಡಿಕೆ, ಕಲ್ಲಂಗಡಿ ಮತ್ತು ಸಾಂಭಾರ ಪದಾರ್ಥ ಬೆಳೆಗಳ ಮೇಲೆ ಪರಿಣಾಮ ಬೀರಿದೆ. ಕಡಲತೀರದಿಂದ 15 ಕಿಲೋಮೀಟರ್ ವ್ಯಾಪ್ತಿಯಲ್ಲಿರುವ ಗ್ರಾಮಗಳ ಕೃಷಿಭೂಮಿ ಲವಣಾಂಶ ಪ್ರವೇಶದಿಂದ ತೊಂದರೆಗೆ ಸಿಲುಕಿದೆ. ಹಿಂದೆ ಈ ಸಮಸ್ಯೆ ಕಡಲತೀರದಿಂದ 2 ಕಿಲೋಮೀಟರ್ ವ್ಯಾಪ್ತಿಯಲ್ಲಿರುವ ಗ್ರಾಮಗಳಿಗೆ ಸೀಮಿತವಾಗಿತ್ತು’ ಎನ್ನುತ್ತಾರೆ ಮಾಳ್ಕೋಡ್‌ ಗ್ರಾಮದ ಗಣೇಶ್ ಗಣಪ ನಾಯಕ್.

ಗೆರುಸೊಪ್ಪ ಅಣೆಕಟ್ಟೆ ನಿರ್ಮಾಣದ ನಂತರ ಶರಾವತಿಯ ಹರಿವು ಗಣನೀಯವಾಗಿ ಕಡಿಮೆಯಾಗಿದ್ದರಿಂದ ಮತ್ತು ಪ್ರವಾಹ ಬಹುತೇಕ ನಿಂತುಹೋಗಿದ್ದರಿಂದ, ನದಿಯಲ್ಲಿ ದ್ವೀಪಗಳು ರೂಪುಗೊಂಡಿವೆ.

‘ಕೆಲವು ವರ್ಷಗಳಿಂದ ನದಿ ಬತ್ತಿಹೋಗುತ್ತಿರುವುದನ್ನು ನಾವು ನೋಡುತ್ತಿದ್ದೇವೆ’ ಎಂದು ಹೊನ್ನಾವರದ ಬಾಳ್ಕೂರು ಗ್ರಾಮದ ಕೇಶವ ನಾಯ್ಕ ಹೇಳಿದ್ದಾರೆ. ಉತ್ತಮ ಬೆಳವಣಿಗೆಯೊಂದರಲ್ಲಿ, ಅರಣ್ಯ ಇಲಾಖೆಯು ಶರವಾತಿ ದ್ವೀಪ ಪ್ರದೇಶಗಳಲ್ಲಿ ಮ್ಯಾಂಗ್ರೋವ್ ಸಸ್ಯಗಳನ್ನು ನೆಡುವ ಮೂಲಕ ನದಿಯಲ್ಲಿನ ಪ್ರಭೇದಗಳು ಬೆಳವಣಿಗೆ ಹೊಂದಲು ನೆರವು ನೀಡುತ್ತಿದೆ.


ಮರಳು ಗಣಿಗಾರಿಕೆ

ಅಣೆಕಟ್ಟೆಗಳ ನಿರ್ಮಾಣ ಮತ್ತು ಜನಸಂಖ್ಯಾ ಸ್ಫೋಟದಿಂದ ಮಾತ್ರ ಪರಿಸರ ವ್ಯವಸ್ಥೆಯ ಮೇಲೆ ಒತ್ತಡ ಉಂಟಾಗಿಲ್ಲ. 90ರ ದಶಕದಲ್ಲಿ ಆರಂಭವಾದ ವಿವೇಚನಾರಹಿತ ಮರಳು ಗಣಿಗಾರಿಕೆಯೂ ಪರಿಸರದ ಮೇಲಿನ ಹಾನಿಗೆ ಕಾರಣವಾಗಿದೆ. ಶಿವಮೊಗ್ಗ ಮತ್ತು ಉತ್ತರ ಕನ್ನಡ ಜಿಲ್ಲಾಡಳಿತಗಳು ಮರಳಿನ ಅಕ್ರಮ ಗಣಿಗಾರಿಕೆ ತಡೆಗೆ ಕೆಲವು ಕ್ರಮಗಳನ್ನು ಕೈಗೊಂಡಿದ್ದರೂ ಶರಾವತಿ ನದಿಯಲ್ಲಿ ಅದು ಇನ್ನೂ ಮುಂದುವರಿದಿದೆ ಎನ್ನುತ್ತಾರೆ ಸಾಗರದ ಅಧಿಕಾರಿಯೊಬ್ಬರು.

ಇದನ್ನೂ ಓದಿ: ಜಲರಾಶಿಯಲ್ಲಿ ಲೀನವಾದ ಬದುಕು

ಅನುಮತಿ ಪಡೆದು ಮರಳು ಗಣಿಗಾರಿಕೆ ನಡೆಸುತ್ತಿರುವವರೂ ಅಕ್ರಮದಲ್ಲಿ ಭಾಗಿಯಾಗುತ್ತಾರೆ. ಸದ್ಯ ನದಿಯಿಂದ ಹೊರತೆಗೆಯಲಾಗುತ್ತಿರುವ ಮರಳಿನ ಪೈಕಿ ಶೇ 40ರಷ್ಟನ್ನು ಅಕ್ರಮವಾಗಿಯೇ ತೆಗೆಯಲಾಗುತ್ತಿದೆ ಎಂಬುದನ್ನು ಹೆಸರು ಬಹಿರಂಗಪಡಿಸಲು ಇಚ್ಛಿಸದ ನೋಂದಾಯಿತ ಮರಳು ಗಣಿಗಾರರೊಬ್ಬರು ಒಪ್ಪಿಕೊಂಡಿದ್ದಾರೆ. ‘ಇತ್ತೀಚಿನ ದಿನಗಳಲ್ಲಿ ಮರಳು ಸಾಗಣೆ ವಾಹನಗಳಿಗೆ ಜಿಪಿಎಸ್ ಅಳವಡಿಸಲಾಗುತ್ತಿದೆ. ಹೀಗಾಗಿ ವಿಚಕ್ಷಣಾ ದಳದ ತಂಡವನ್ನು ಕಣ್ಣು ತಪ್ಪಿಸುವುದು ಅಷ್ಟು ಸುಲಭವಲ್ಲ’ ಎಂದೂ ಅವರು ಹೇಳಿದ್ದಾರೆ.

ಹೊಸನಗರ, ಸಾಗರ ಮತ್ತು ಹೊನ್ನಾವರ ಪ್ರದೇಶಗಳಲ್ಲಿ ನಡೆಯುತ್ತಿರುವ ಮರಳು ಅಕ್ರಮ ಗಣಿಗಾರಿಕೆಯು ನದಿ ತೀರದ ಪರಿಸರದ ಮೇಲೆ ತೀವ್ರ ಪರಿಣಾಮ ಬೀರಿರುವುದಲ್ಲದೆ ಅಂತರ್ಜಲ ಕುಸಿತಕ್ಕೂ ಕಾರಣವಾಗಿದೆ.

ಇದನ್ನೂ ಓದಿ: ಬಿಸಿಲು, ಮಳೆಗೆ ಬೆಚ್ಚಿ ಬೀಳುವರು!

ಹಸಿರು ಮರುಭೂಮಿಗಳು

ತೀರ್ಥಹಳ್ಳಿಯಿಂದ ಆರಂಭವಾಗಿ ಶರಾವತಿ ನದಿ ತೀರದುದ್ದಕ್ಕೂ ಅಕೇಶಿಯಾ ಮರಗಳನ್ನು ಬೆಳೆಸಿರುವುದನ್ನು ಕಾಣಬಹುದಾಗಿದೆ. ‘ಮೈಸೂರು ಪೇಪರ್‌ ಮಿಲ್‌’ಗೆ ಮರದ ತಿರುಳು ಪೂರೈಕೆ ಮಾಡಲು ಮತ್ತು ಮಣ್ಣಿನ ಸವೆತ ತಡೆಗೆಂದು ಇವುಗಳನ್ನು ನೆಟ್ಟು ಬೆಳೆಸಲಾಗಿದೆ ಎನ್ನಲಾಗುತ್ತಿದೆ. ಅರಣ್ಯ ಇಲಾಖೆ ಅಧಿಕಾರಿಗಳು ಹೇಳುವ ಪ್ರಕಾರ, ಶಿವಮೊಗ್ಗ ಜಿಲ್ಲೆಯೊಂದರಲ್ಲೇ 9,000 ಹೆಕ್ಟೇರ್ ಪ್ರದೇಶದಲ್ಲಿ ಒಂದೇ ತಳಿಯ ಗಿಡಗಳನ್ನು ನೆಟ್ಟು ಬೆಳೆಸಲಾಗಿದೆ. ಜಿಲ್ಲೆಯ 2,000 ಹೆಕ್ಟೇರ್ ಪ್ರದೇಶದಲ್ಲಿ ನಿಲಗಿರಿ ಬೆಳೆಸಲಾಗಿದೆ.

‘ಆದರೆ ವಾಸ್ತವವಾಗಿ ಇನ್ನೂ ಹೆಚ್ಚು ಪ್ರದೇಶದಲ್ಲಿ ಹೀಗೆ ಏಕ ತಳಿಯ ಗಿಡಗಳನ್ನು ನೆಡಲಾಗಿದೆ. ದಾಖಲೆಗಳಲ್ಲಿ ಉಲ್ಲೇಖಿಸಿದ್ದಕ್ಕಿಂತಲೂ ದುಪ್ಪಟ್ಟು ಒಂದೇ ತಳಿಯ ಗಿಡಗಳನ್ನು ನಮ್ಮ ಭಾರತೀಪುರ ಗ್ರಾಮದಲ್ಲಿ ಬೆಳೆಸಲಾಗಿದೆ’ ಎಂದು ತಿಳಿಸಿದ್ದಾರೆ ‘ಮಲೆನಾಡು ಜಾಗೃತ ಸಮುದಾಯ’ದ ಕಾರ್ಯದರ್ಶಿ ಶ್ರೀಧರ ಕಲ್ಲಹಳ್ಳ. ಶಿಧರ ಅವರು ಜೀವವೈವಿಧ್ಯವುಳ್ಳ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಏಕ ತಳಿಯ ಗಿಡಗಳನ್ನು ಸಾಮೂಹಿಕವಾಗಿ ನೆಡುವುದರ ಔಚಿತ್ಯ ಪ್ರಶ್ನಿಸಿ ನ್ಯಾಯಾಲಯಕ್ಕೆ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನೂ (ಪಿಐಎಲ್) ಸಲ್ಲಿಸಿದ್ದಾರೆ. ಅರಣ್ಯ ಮತ್ತು ಕೃಷಿ ಭೂಮಿಯಲ್ಲಿ ಅಕೇಶಿಯಾವನ್ನು ನೆಡುವ ಮೊದಲು ಅರಣ್ಯ ಇಲಾಖೆ ಜನರ ಒಪ್ಪಿಗೆಯನ್ನೂ ಪಡೆದುಕೊಂಡಿಲ್ಲ ಎನ್ನುತ್ತಾರೆ ಅವರು.

ಇದನ್ನೂ ಓದಿ: ನೀರಿಗೆ ಜಾಗ ಬಿಟ್ಟವರಿಗೆ ಕುಡಿವ ನೀರಿಲ್ಲ!

ಪಶ್ಚಿಮ ಘಟ್ಟಕ್ಕೆ ಎದುರಾಗಿದೆ ವಿಪತ್ತು: ‘ಪಶ್ಚಿಮ ಘಟ್ಟ ಪ್ರದೇಶದಲ್ಲಿ ಅಪಾರ ಪ್ರಮಾಣದಲ್ಲಿ ಒಂದೇ ತಳಿಯ ಗಿಡಗಳನ್ನು ನೆಡುವುದರ ಹಿಂದೆ ವೈಜ್ಞಾನಿಕ ತಿಳಿವಳಿಕೆ ಕೊರತೆ ಇವುರುದು ಸ್ಪಷ್ಟ. ಇದು ದುರದೃಷ್ಟಕರವೂ ಹೌದು. ಇದರ ಜತೆ ರಬ್ಬರ್, ಶುಂಠಿಯಂತಹ ವಾಣಿಜ್ಯ ಬೆಳೆಗಳನ್ನೂ ಹೆಚ್ಚು ಬೆಳೆಯುವುದರಿಂದ ಪಶ್ಚಿಮ ಘಟ್ಟವು ಪ್ರವಾಹ, ಭೂಕುಸಿತ, ಜೀವಹಾನಿ, ಆಸ್ತಿ ಹಾನಿಯಂತಹ ವಿಪತ್ತುಗಳಿಗೆ ತೆರೆದುಕೊಳ್ಳುತ್ತಿದೆ’ ಎನ್ನುತ್ತಾರೆ ಐಐಎಸ್‌ಸಿಯ ಪರಿಸರ ವಿಜ್ಞಾನ ಕೇಂದ್ರದ ಡಾ. ಟಿ.ವಿ.ರಾಮಚಂದ್ರ.

ಅರಣ್ಯ ನಾಶದಿಂದಾಗಿ ನೀರನ್ನು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯವನ್ನು ಮಣ್ಣು ಕಳೆದುಕೊಂಡಿದೆ. ಮಳೆ ನೀರೆಲ್ಲ ಹರಿದುಹೋಗುತ್ತಿದೆ. ಮಣ್ಣು ನೀರನ್ನು ಹಿಡಿದಿಡದೇ ಇರುವುದರಿಂದ ಆ ಪ್ರದೇಶದಲ್ಲಿ ನೀರಿನ ಕೊರತೆ ಉಂಟಾಗುತ್ತಿದೆ ಎಂಬುದು ರಾಮಚಂದ್ರ ಅವರ ಪ್ರತಿಪಾದನೆ.

ಅರಣ್ಯಗಳ ಸುತ್ತಲಿನ ಗ್ರಾಮಗಳಲ್ಲಿ ಎಲ್ಲ ಅವಧಿಯಲ್ಲಿಯೂ ನೀರಿನ ಲಭ್ಯತೆ ಹೆಚ್ಚಿರುವ ಕಾರಣ ಬೆಳೆಗಳ ಹೆಚ್ಚುವರಿ ಇಳುವರಿಯಿಂದ ವಾರ್ಷಿಕ ₹1.5 ಲಕ್ಷ ಸಂಪಾದನೆಯಾಗುತ್ತಿರುವುದನ್ನು ರಾಮಚಂದ್ರ ನೇತೃತ್ವದ ತಂಡ ಅಧ್ಯಯನದ ಮೂಲಕ ಕಂಡುಕೊಂಡಿದೆ. ಆದರೆ, ಒಂದೇ ತಳಿಯ ಸಸ್ಯ ಬೆಳೆಯುವ ಮೂಲಕ ಎಕರೆಯೊಂದಕ್ಕೆ ವಾರ್ಷಿಕ ₹32,000 ಆದಾಯ ಗಳಿಸಬಹುದಷ್ಟೆ. ಇದಕ್ಕೆ ಕಡಿಮೆ ಇಳುವರಿ ಮತ್ತು ಆರರಿಂದ ಎಂಟು ತಿಂಗಳು ಮಾತ್ರ ನೀರು ಲಭ್ಯವಿರುವುದು ಕಾರಣ ಎನ್ನುತ್ತದೆ ಅಧ್ಯಯನ.

ಅರಣ್ಯ, ಪರಿಸರ ಮತ್ತು ಹವಾಮಾನ ಬದಲಾವಣೆ ಇಲಾಖೆಯು 2018ರಲ್ಲಿ ಹೊರಡಿಸಿದ್ದ ಅಧಿಸೂಚನೆಯಲ್ಲಿ ಸಾಗರ ಹಾಗೂ ಹೊಸನಗರ ತಾಲ್ಲೂಕುಗಳ 252 ಗ್ರಾಮಗಳನ್ನು ಪರಿಸರಸೂಕ್ಷ್ಮ ಪ್ರದೇಶಗಳು ಎಂದು ಉಲ್ಲೇಖಿಸಲಾಗಿದೆ.

ಇತರ ಬೆದರಿಕೆಗಳು

ಶರಾವತಿ ಕಣಿವೆಯಲ್ಲಿ ‘ಪಂಪ್ಡ್ ಸ್ಟೋರೇಜ್ ಪ್ಲಾಂಟ್ (ಜಲವಿದ್ಯುತ್ ಶೇಖರಣಾ ಘಟಕ)’ ಸ್ಥಾಪನೆಗೆ ಕರ್ನಾಟಕ ವಿದ್ಯುತ್ ನಿಗಮ (ಕೆಪಿಸಿಎಲ್) 2017ರಲ್ಲಿ ಪ್ರಸ್ತಾವನೆ ಸಲ್ಲಿಸಿತ್ತು. ‘ಅರಣ್ಯ ಇಲಾಖೆಯಿಂದ ಇನ್ನೂ ಅನುಮತಿ ದೊರೆತಿಲ್ಲ. ಪರಿಸರಕ್ಕೆ ಹೆಚ್ಚು ಹಾನಿಯಾಗದಂತೆ ಘಟಕ ನಿರ್ಮಾಣ ಮಾಡಲಿದ್ದೇವೆ’ ಎಂದು ಕೆಪಿಸಿಎಲ್‌ ವ್ಯವಸ್ಥಾಪಕ ನಿರ್ದೇಶಕ ವಿ. ಪೊನ್ನುರಾಜ್ ತಿಳಿಸಿದ್ದಾರೆ.

ನದಿ ತಿರುವು ಯೋಜನೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ಇದರಿಂದ ಶರಾವತಿಯಾದ್ಯಂತ ಇರುವ ವಿದ್ಯುತ್ ಉತ್ಪಾದನಾ ಘಟಕಗಳಲ್ಲಿನ ಉತ್ಪಾದನೆ ಕುಂಠಿತವಾಗಲಿದೆ. ಹೀಗಾಗಿ ಲಿಂಗನಮಕ್ಕಿಯಿಂದ ನೀರು ಕೊಂಡೊಯ್ಯದಂತೆ ನಾವು ಸೂಚಿಸುತ್ತೇವೆ’ ಎಂದು ಹೇಳಿದ್ದಾರೆ. ಜುಲೈ 23ರವರೆಗಿನ ಲೆಕ್ಕಾಚಾರ ಪ್ರಕಾರ ಲಿಂಗನಮಕ್ಕಿ ಜಲಾಶಯದಲ್ಲಿ ಅದರ ಒಟ್ಟು ಸಾಮರ್ಥ್ಯದ ಶೇ 30ರಷ್ಟು ನೀರು ಮಾತ್ರವೇ ಸಂಗ್ರಹವಾಗಿದೆ.

ದೇಶದ ಅತ್ಯಂತ ಪರಿಣಾಮಕಾರಿ ವಿದ್ಯುತ್ ಉತ್ಪಾದನಾ ಘಟಕಗಳಲ್ಲಿ ಶರಾವತಿ ಕೂಡ ಒಂದಾಗಿದೆ ಎಂಬುದು ತಜ್ಞರ ಕಾಳಜಿಗೆ ಕಾರಣ. ‘ಶರಾವತಿ ಮತ್ತು ಅದರ ವಿದ್ಯುತ್ ಉತ್ಪಾದನಾ ಸಾಮರ್ಥ್ಯವನ್ನು ಉಳಿಸಿಕೊಳ್ಳಬೇಕಿದೆ’ ಎನ್ನುತ್ತಾರೆ ಪರಿಸರ ಸಂಶೋಧಕ ಪಾಂಡುರಂಗ ಹೆಗ್ಡೆ.

ವರ್ಷವಿಡೀ ಪ್ರವಾಸಿಗರನ್ನು ಸೆಳೆಯುವ ಉದ್ದೇಶದಿಂದ ಎಲ್ಲ ಋತುಗಳಲ್ಲಿಯೂ ಜೋಗ ಜಲಪಾತದಲ್ಲಿ ನೀರು ಇರುವಂತೆ ನೋಡಿಕೊಳ್ಳುವ ‘ಜೋಗ ನಿರ್ವಹಣಾ ಪ್ರಾಧಿಕಾರದ (ಜೆಎಂಎ)’ ಮತ್ತೊಂದು ಯೋಜನೆಯೂ ಪರಿಸರವಾದಿಗಳ ಕೆಂಗಣ್ಣಿಗೆ ಗುರಿಯಾಗಿದೆ. ಈ ಮಧ್ಯೆ ಜೆಎಂಎ ಅಧಿಕಾರಿಯೊಬ್ಬರು, ‘ಯೋಜನೆಯ ಅನುಷ್ಠಾನಕ್ಕೆ ಸರ್ಕಾರದ ಅನುಮತಿಗಾಗಿ ಕಾಯುತ್ತಿದ್ದೇವೆ’ ಎಂದಿದ್ದಾರೆ.

ಕೆಲವು ವರ್ಷಗಳ ಹಿಂದೆ ಸಾಗರ ಪಟ್ಟಣಕ್ಕೆ ನೀರು ತರುವ ಯೋಜನೆಯನ್ನು ವಿರೋಧಿಸದೇ ಇರುವುದಕ್ಕಾಗಿ ಕಾರ್ಗಲ್‌ನ ಪಂಚಾಯತ್ ಸದಸ್ಯ ಸಂತೋಷ್ ಕುಮಾರ್ ಈಗ ಪಶ್ಚಾತ್ತಾಪ ಪಡುತ್ತಿದ್ದಾರೆ. ‘ಸಾಗರದಲ್ಲಿನ ನೀರಿನ ಮೂಲಗಳನ್ನು ನಿರ್ಲಕ್ಷಿಸಲಾಗಿದೆ ಅಥವಾ ಅತಿಕ್ರಮಿಸಿಕೊಳ್ಳಲಾಗಿದೆ. 2016ರಿಂದಲೂ ಪಟ್ಟಣವು ಶರಾವತಿಯ ನೀರನ್ನು ಪಡೆಯುತ್ತಿದೆ. ಆಗಲೇ ನಾವು ‘ಶರಾವತಿ ಉಳಿಸಿ’ ಅಭಿಯಾನ ಆರಂಭಿಸಬೇಕಿತ್ತು’ ಎಂಬುದು ಅವರ ಅಭಿಪ್ರಾಯ. ಪ್ರಸ್ತಾವಿತ ಯೋಜನೆ ಪೈಪ್‌ಲೈನ್‌ಗಾಗಿ ಗಮಟೆಘಟ್ಟ ಪ್ರದೇಶದಲ್ಲಿ ಅರಣ್ಯ ನಾಶವಾಗಲಿದೆ ಎನ್ನುತ್ತಾರೆ ಸ್ಥಳೀಯರು.

‘ಶರಾವತಿಯ ನೀರನ್ನು ಬೆಂಗಳೂರಿಗೆ ಪಂಪ್ ಮಾಡುವ ಯೋಜನೆಯಿಂದ ಪರಿಸರಕ್ಕೆ ಹಾನಿಯಲ್ಲದೆ ಹೆಚ್ಚಿನ ವೆಚ್ಚದ ಅಗತ್ಯವಿದೆ. ಇದಕ್ಕೆ ಲಿಂಗನಮಕ್ಕಿಯಲ್ಲಿ ತಯಾರಾಗುವಷ್ಟೇ ವಿದ್ಯುತ್ ಬೇಕಾಗಬಹುದು’ ಎಂದಿದ್ದಾರೆ ಸಾಗರದ ನಿವೃತ್ತ ಎಂಜಿನಿಯರ್ ಶಂಕರ್ ಶರ್ಮಾ. ಯೋಜನೆಯ ಕಾರ್ಯಸಾಧ್ಯತೆಯನ್ನೇ ಅವರು ಪ್ರಶ್ನಿಸಿದ್ದಾರೆ.

ಯೋಜನೆ ವಿರೋಧಿಸಿ ಶಿವಮೊಗ್ಗ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಈಗಾಗಲೇ ಪ್ರತಿಭಟನೆಗಳು ನಡೆದಿವೆ. ಬೆಂಗಳೂರಿಗರೂ ಸಹ ಯೋಜನೆಯನ್ನು ವಿರೋಧಿಸಿದ್ದಾರೆ.

‘ವಿದ್ಯುತ್ ಉತ್ಪಾದನೆಗೆಂದೇ ಲಿಂಗನಮಕ್ಕಿ ಅಣೆಕಟ್ಟೆಯನ್ನು ನಿರ್ಮಿಸಲಾಗಿದೆ. ಒಂದು ವೇಳೆ ಅದನ್ನು ಕುಡಿಯುವ ನೀರಿನ ವಿಚಾರಕ್ಕೆ ಬಳಸಿಕೊಳ್ಳುವುದಾದರೆ ಸ್ಥಳೀಯರಿಗೆ ಮೊದಲ ಆದ್ಯತೆ ನೀಡಬೇಕು’ ಎಂಬುದು ಪರಿಸರ ಹೋರಾಟಗಾರ, ‘ಶರಾವತಿ ಉಳಿಸಿ’ ಅಭಿಯಾನದ ಸಹ ಸಂಚಾಲಕ ಎಚ್‌.ಬಿ. ರಾಘವೇಂದ್ರ ಅವರ ವಾದ.

‘ಎತ್ತಿನಹೊಳೆ ಯೋಜನೆಯಿಂದ ದಕ್ಷಿಣ ಕನ್ನಡದ ಪರಿಸರದ ಮೇಲಾದ ಪರಿಣಾಮವನ್ನು ನಾವು ನೋಡಿದ್ದೇವೆ. ಯೋಜನೆಯ ವೆಚ್ಚವೂ ಏರಿಕೆಯಾಗಿದ್ದು, ಅದರ ಕಾರ್ಯಸಾಧ್ಯತೆ ಬಗ್ಗೆ ಜನರಲ್ಲಿ ಅನುಮಾನವಿದೆ. ಸುಸ್ಥಿರ ಪರಿಹಾರಗಳಿಗಾಗಿ ಎದುರುನೋಡಬೇಕಾದ ಸಮಯವಿದು’ ಎಂಬುದು ಅಖಿಲೇಶ್ ಎಂಬುವವರ ಅಭಿಪ್ರಾಯ.

ಹೆಚ್ಚಿನ ಪರಿಸರ ಮೌಲ್ಯವಿರುವ ಪ್ರದೇಶ

ಯೋಜನೆಯ ಸುಸ್ಥಿರತೆಯಿಂದ ತೊಡಗಿ ಬೆಂಗಳೂರಿಗೆ ಇರುವ ನೀರಿನ ಅಗತ್ಯ, ಮಳೆನೀರು ಕೊಯ್ಲು ಮತ್ತು ನೀರನ್ನು ಪರಿಣಾಮಕಾರಿಯಾಗಿ ಬಳಸುವಲ್ಲಿನ ಅಸಮರ್ಥತೆ ಹೊರತಾಗಿಯೂ ಯೋಜನೆಯನ್ನು ವಿರೋಧಿಸಲು ತಜ್ಞರು ಅನೇಕ ಕಾರಣಗಳನ್ನು ನೀಡಿದ್ದಾರೆ.

ನಿರಂತರ ಸಮಸ್ಯೆಗಳ ಹೊರತಾಗಿಯೂ ಶರಾವತಿ ಇನ್ನೂ ಹೆಚ್ಚು ಪರಿಸರ ಮೌಲ್ಯ, ಅರಣ್ಯ ಪ್ರದೇಶವನ್ನು ಹೊಂದಿದೆ. ಶರಾವತಿ ಕಣಿವೆ ಪ್ರದೇಶವನ್ನು ಸಿಂಗಳೀಕ ಅಭಯಾರಣ್ಯ ಎಂದು 2019ರ ಜೂನ್ 7ರಂದು ಸರ್ಕಾರ ಘೋಷಿಸಿದೆ. ಇದರಲ್ಲಿ ಶರಾವತಿ ಕಣಿವೆ ವನ್ಯಜೀವಿ ಅಭಯಾರಣ್ಯ, ಅಘನಾಶಿನಿ ಸಿಂಗಳೀಕ ಅಭಯಾರಣ್ಯ, ಹೊನ್ನಾವರ ಮತ್ತು ಸಾಗರದ ಅರಣ್ಯ ಪ್ರದೇಶವೂ ಸೇರಿದೆ. ಪಶ್ಚಿಮ ಘಟ್ಟ ಪ್ರದೇಶದಲ್ಲಿ ಅಳಿವಿನಂಚಿನಲ್ಲಿರುವ ಸಿಂಗಳೀಕಗಳ ರಕ್ಷಣೆಗಾಗಿಯೇ ಈ ಕ್ರಮ ಕೈಗೊಳ್ಳಲಾಗಿದೆ.

ಜನರು ನೀರಿಗಾಗಿ ಹೊಡೆದಾಡುತ್ತಿರುವಾಗ ಪರಿಸರದ ಎಲ್ಲ ಅಂಶಗಳೂ ತಮ್ಮ ಅನಿಶ್ಚಿತ ಭವಿಷ್ಯದ ಬಗ್ಗೆ ಅರಿವಿಲ್ಲದೇ ಪ್ರಾಕೃತಿಕ ಸಮತೋಲನವನ್ನು ಕಾಪಾಡಲು ಹೋರಾಡುತ್ತಿವೆ ಎಂಬುದು ಸತ್ಯ.

ಇನ್ನಷ್ಟು...

ಬೆಂಗಳೂರು ನಗರಕ್ಕೆ ಜಲ ಸಂಕಟ ಭೀತಿ

ಜಲಾಶಯಗಳಲ್ಲಿ ಕುಸಿದ ನೀರಿನ ಮಟ್ಟ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು