ಸೋಮವಾರ, 11 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಕರಕೋಶಗಳು: ಆಧುನಿಕ ಸಂಜೀವಿನಿ

Published 17 ಅಕ್ಟೋಬರ್ 2023, 23:30 IST
Last Updated 17 ಅಕ್ಟೋಬರ್ 2023, 23:30 IST
ಅಕ್ಷರ ಗಾತ್ರ

ಮೂರಡಿಯ ವಾಮನ ಈರಡಿಗಳಲ್ಲಿ ಭೂಮಂಡಲವನ್ನು ಅಳೆಯಬಲ್ಲ ತ್ರಿವಿಕ್ರಮನಾಗಿ ಬೆಳೆದಂತೆ, ಒಂದು ಸಣ್ಣ ಬಿಂದುವಿನ ಗಾತ್ರದಲ್ಲಿ ಆವಿರ್ಭವಿಸಿದ ಕೋಶವೊಂದು ಅತ್ಯಂತ ಸಂಕೀರ್ಣವಾದ ಜೀವಿಯಾಗಿ ಬೆಳೆದು ನಿಲ್ಲುವುದು ಅನುದಿನ ನಮ್ಮ ಕಣ್ಣೆದುರೇ ಘಟಿಸುವ ಒಂದು ಪವಾಡವೇ ಸರಿ. ಎಷ್ಟೆಲ್ಲ ಅಸಾಮಾನ್ಯ ಕಾರ್ಯಗಳನ್ನು ಸಾಧಿಸುವ ಮನುಷ್ಯನೆಂಬ ಜೀವಿ ಹುಟ್ಟುವಾಗಿನ ಗಾತ್ರ, ಈ ವಾಕ್ಯದ ಕೊನೆಯಲ್ಲಿರುವ ಪೂರ್ಣವಿರಾಮದಷ್ಟೇ ಎಂದು ಅರಿವಾದಾಗ ‘ಈ ವಿಚಿತ್ರಕೆ ನಮಿಸೋ’ ಎನ್ನದೇ ಇರಲಾಗದು. ಮನುಷ್ಯನ ಜೀವನಯಾನದ ಈ ಆದಿಬಿಂದುವಿನ ಹೆಸರು ‘ಯುಗ್ಮಜ’ ((zygote). ಇದು ಒಂದು ಅಂಡಾಣು ಮತ್ತು ಒಂದು ವೀರ್ಯಾಣುವಿನ ಸಮ್ಮಿಲನದಿಂದ ಉಂಟಾದ ಜೀವಕೋಶ. ಈ ಕೋಶವು ಒಂದಿರುವುದು ಎರಡಾಗಿ, ಎರಡು ನಾಲಕ್ಕಾಗಿ, ನಾಲ್ಕು ಎಂಟಾಗಿ – ಹೀಗೆ ಎರಡರ ಮಗ್ಗಿಯನ್ನನುಸರಿಸುತ್ತ, ಮಾಂಸಖಂಡ, ಹೃದಯ, ನರಕೋಶಗಳು ಮುಂತಾಗಿ ವಿವಿಧ ರೀತಿಯ ಜೀವಕೋಶಗಳು ಸೃಷ್ಟಿಯಾಗುತ್ತವೆ. ಈ ಎಲ್ಲ ರೀತಿಯ ಕೋಶಗಳು ಒಂದೇ ರೀತಿಯ ಜೀವಕೋಶಗಳಿಂದ ರೂಪಗೊಂಡಂತಹವು. ಅಂದರೆ ಕೆಲವು ವಿಶಿಷ್ಟ ಜೀವಕೋಶಗಳು ಬೇರೆ ಯಾವುದೇ ರೀತಿಯ ಜೀವಕೋಶಗಳಾಗಿ ಬದಲಾಗುವ ಸಾಮರ್ಥ್ಯವುಳ್ಳಂತಹವು. ಈ ಕೋಶಗಳಿಗೆ ‘ಆಕರಕೋಶಗಳು’ (stem cells) ಎಂದು ಹೆಸರು. ವೈದ್ಯಕೀಯ ಜಗತ್ತಿನಲ್ಲಿ ಹೊಸ ಕ್ರಾಂತಿಯನ್ನೇ ತರಬಲ್ಲ ಆಶಾಭಾವನೆ ಮೂಡಿಸಿರುವ ಈ ಕೋಶಗಳು ಇಪ್ಪತ್ತೊಂದನೆಯ ಶತಮಾನದ ಅತಿ ಮುಖ್ಯ ಬೆಳವಣಿಗೆ ಎನ್ನಬಹುದು.

ನಮ್ಮ ಶರೀರ ಒಂದು ಕಾರ್ಖಾನೆಯಂತೆ. ಇದರಲ್ಲಿರುವ ಕೆಲಸಗಾರರೆಂದರೆ ನಮ್ಮ ಜೀವಕೋಶಗಳು. ಹೇಗೆ ಒಂದು ಕಾರ್ಖಾನೆಯಲ್ಲಿ ಒಂದು ವಿಭಾಗದ ಕೆಲಸಗಾರನಿಗೆ ಇನ್ನೊಂದು ವಿಭಾಗದ ಕೆಲಸ ಮಾಡುವುದು ಸಾಧ್ಯವಿರುವುದಿಲ್ಲವೋ ಅದೇ ರೀತಿ ನಮ್ಮ ಶರೀರದ ಒಂದೊಂದು ಅಂಗದಲ್ಲಿರುವ ಜೀವಕೋಶಗಳು ಆ ನಿರ್ದಿಷ್ಟ ಕೆಲಸವನ್ನು ಮಾತ್ರ ಮಾಡುವಂತೆ ರಚಿತವಾಗಿರುತ್ತವೆ. ಹೃದಯದಲ್ಲಿನ ಕೋಶ ಕಣ್ಣಿನಲ್ಲಿರುವ ಕೋಶದ ಕೆಲಸವನ್ನು ಮಾಡಲಾರದು. ಆದರೆ ಆಕರಕೋಶಗಳಿಗೆ ಈ ನಿಯಮ ಅನ್ವಯಿಸುವುದಿಲ್ಲ. ಇವು ಯಾವುದೇ ವಿಧದ ಕೋಶಗಳಾಗಿ ಮಾರ್ಪಾಡಾಗುತ್ತವೆ.

ನಮ್ಮ ದೇಹದಲ್ಲಿ ಅಪಘಾತ, ರೋಗಗಳಿಂದಾಗಿ ಜೀವಕೋಶಗಳು ಘಾಸಿಯಾಗುವುದು, ಸಾಯುವುದು ಸಾಮಾನ್ಯ. ಅಂತಹ ಸಂದರ್ಭಗಳಲ್ಲಿ ಸಾಮಾನ್ಯವಾಗಿ ಅದೇ ಅಂಗಾಂಶದಲ್ಲಿರುವ ಜೀವಕೋಶಗಳು ವಿಭಜನೆಗೊಂಡು, ನಾಶವಾದ ಜೀವಕೋಶದ ಸ್ಥಾನವನ್ನು ತುಂಬುತ್ತದೆ. ಕೆಲವು ಅಂಗಾಂಶಗಳಲ್ಲಿ ಕೋಶಗಳು ಪುನರುತ್ಪತ್ತಿ ಆಗಲಾರವು. ಅಂತಹ ಅಂಗಾಂಶಗಳಲ್ಲಿ ಆಕರ ಕೋಶಗಳು ಇರುತ್ತವೆ. ಈ ಆಕರಕೋಶಗಳು ಘಾಸಿಯಾದ ಜೀವಕೋಶಗಳ ಸ್ಥಾನವನ್ನು ತುಂಬುತ್ತವೆ. ಆಕರಕೋಶಗಳ ಈ ಗುಣವನ್ನು ನಿಯಂತ್ರಿಸಲು ಸಾಧ್ಯವಾದರೆ ಅವುಗಳನ್ನು ನಮಗೆ ಬೇಕಾದಂತೆ ದುಡಿಸಿಕೊಳ್ಳಬಹುದೇ? ಈ ಪ್ರಶ್ನೆಯೇ ಆಕರಕೋಶಗಳ ಕುರಿತು ಸಂಶೋಧನೆಗಳು ಆರಂಭವಾಗಲು ಕಾರಣವಾದ ಮಂತ್ರ.

ಆಕರಕೋಶಗಳಲ್ಲಿ ಮೂರು ವಿಧಗಳು. ಭ್ರೂಣ ಆಕರ ಕೋಶಗಳು, ಪ್ರೌಢ ಆಕರ ಕೋಶಗಳು, ಮತ್ತು ಪ್ರೇರಿತ ಸರ್ವಸಮರ್ಥ ಆಕರಕೋಶಗಳು (iPSC). ಭ್ರೂಣ ಆಕರಕೋಶಗಳು ಭ್ರೂಣಗಳಲ್ಲಿ ಕಂಡುಬರುವಂತಹವು. ಇವು ಯಾವುದೇ ಕೋಶಗಳಾಗಿ ಬದಲಾಗುವ ಸಾಮರ್ಥ್ಯವುಳ್ಳವು. ಪ್ರೌಢ ಆಕರಕೋಶಗಳೆಂದರೆ ವಿವಿಧ ಅಂಗಾಂಶಗಳ ಕೋಶಗಳ ಜೊತೆ ಇದ್ದು ಆ ಅಂಗಾಂಶದೊಳಗಿನ ನಿರ್ದಿಷ್ಟ ಕೋಶಗಳಾಗಿ ಬದಲಾಗುವ ಸಾಮರ್ಥ್ಯವುಳ್ಳವು. iPSCಗಳೆಂದರೆ ಪ್ರಯೋಗಾಲಯದಲ್ಲಿ ಪ್ರೌಢ ಆಕರಕೋಶಗಳನ್ನು ನಿರ್ದೇಶಿಸಿ ಕೃತಕವಾಗಿ ಭ್ರೂಣ ಆಕರಕೋಶಗಳನ್ನಾಗಿಸಲಾಗಿರುತ್ತದೆ. ಈ ಕೋಶಗಳ ಗಡಿಯಾರವನ್ನು ವಿಜ್ಞಾನಿಗಳು ಹಿಮ್ಮುಖವಾಗಿ ತಿರುಗಿಸಿದ್ದಾರೆನ್ನಬಹುದು. ಇವುಗಳು ಭ್ರೂಣ ಆಕರಕೋಶಗಳಂತೆಯೇ ಸಾಮರ್ಥ್ಯವನ್ನು ಹೊಂದಿವೆ.

ಇಂತಹ ಆಕರಕೋಶಗಳು ಯಾವುದೇ ನಿರ್ದಿಷ್ಟ ಕೋಶಗಳಾಗಿ ಮಾರ್ಪಡುವ ಸಾಮರ್ಥ್ಯ ಹೊಂದಿರುವುದರಿಂದ ವೈದ್ಯಕೀಯದಲ್ಲಿ ಎದುರಾಗುವ ಕೆಲವು ಮುಖ್ಯ ಸಮಸ್ಯೆಗಳಿಗೆ ಪರಿಹಾರವಾಗಿ ಒದಗಬಲ್ಲವು. ಬಿಳಿ ರಕ್ತಕಣಗಳನ್ನು ಉತ್ಪಾದಿಸುವ ಅಸ್ಥಿಮಜ್ಜೆ ಸರಿಯಾಗಿ ಕೆಲಸ ಮಾಡದಿದ್ದಾಗ ರಕ್ತದ ಕ್ಯಾನ್ಸರ್‌ ಉಂಟಾಗುತ್ತದೆ. ಇದಕ್ಕೆ ಚಿಕಿತ್ಸೆಯಾಗಿ ರೋಗಿಯಿಂದಲೇ ಪಡೆದ ಅಥವಾ ರೋಗಿಗೆ ಹೊಂದುವ ದಾನಿಯಿಂದ ಪಡೆದ ಅಸ್ಥಿಮಜ್ಜೆಯ ಆಕರಕೋಶಗಳನ್ನು ರೋಗಿಗೆ ನೀಡಲಾಗುತ್ತಿದೆ. ಮೇದೋಜೀರಕ ಗ್ರಂಥಿಯಲ್ಲಿ ಇನ್ಸುಲಿನ್ ಉತ್ಪಾದಿಸುವ ಜೀವಕೋಶಗಳು ನಾಶವಾಗುವುದರಿಂದ ಮಧುಮೇಹ ಉಂಟಾಗುತ್ತದೆ. ಆಕರಕೋಶಗಳನ್ನು ಇನ್ಸುಲಿನ್ ಉತ್ಪಾದಕ ಜೀವಕೋಶಗಳಾಗಿ ಮಾರ್ಪಡಿಸಿ ಮಧುಮೇಹವನ್ನು ಗುಣಪಡಿಸುವ ಸಾಧ್ಯತೆ ಇದೆ. ರೋಗ ಅಥವಾ ಅಪಘಾತಗಳಿಂದಾಗಿ ಒಬ್ಬ ವ್ಯಕ್ತಿಯ ಅಂಗಗಳು ನಿಷ್ಕ್ರಿಯವಾದಾಗ ಬೇರೊಬ ವ್ಯಕ್ತಿಯಿಂದ ದಾನ ಪಡೆದ ಅಂಗವನ್ನು ಕಸಿ ಮಾಡಬೇಕಾಗುತ್ತದೆ. ಆದರೆ ನಮ್ಮ ಶರೀರದಲ್ಲಿರುವ ರೋಗನಿರೋಧಕ ವ್ಯವಸ್ಥೆ ಕಸಿ ಮಾಡಲ್ಪಟ್ಟ ಅಂಗವನ್ನು ‘ಪರಕೀಯ’ ಎಂದೇ ಭಾವಿಸಿ ಅದರ ಮೇಲೆ ದಾಳಿ ಮಾಡುವ ಸಾಧ್ಯತೆ ಇರುತ್ತದೆ. ಇದರ ಬದಲು, ಅಂಗಾಂಗ ಕಸಿಯ ಅವಶ್ಯಕತೆ ಇರುವ ರೋಗಿಯಿಂದಲೇ ಕೋಶಗಳನ್ನು ಪಡೆದು ಆಕರಕೋಶವಾಗಿಸಿ, ಆ ಆಕರಕೋಶಗಳಿಂದಲೇ ಅಂಗಾಶವನ್ನು ಸೃಷ್ಟಿಸಿ ಅದನ್ನು ಕಸಿ ಮಾಡಿದರೆ ರೋಗಿಯ ಶರೀರ ಅದನ್ನು ತನ್ನದೇ ಎಂದು ಭಾವಿಸುತ್ತದೆ. ಮುಂದೊಂದು ದಿನ, ನಮ್ಮ ದೇಹದಿಂದ ತೆಗೆದ ಕೋಶಗಳನ್ನು ಪ್ರಯೋಗಾಲಯದಲ್ಲಿ ಕಾಪಿಟ್ಟು, ಅವಶ್ಯಕತೆ ಇರುವಾಗ ಅಂಗಾಗಗಳನ್ನು ಪ್ರಯೋಗಾಲಯದಲ್ಲೇ ಸೃಷ್ಟಿಸಿ ಕಸಿ ಮಾಡಬಹುದಾದ ಅನುಕೂಲ ಕೂಡ ಸಾಧ್ಯವಾಗಬಹುದು. ಹೃದ್ರೋಗ, ಅಲ್ಝೀಮರ್ಸ್, ಬೆನ್ನುಹುರಿಯ ಸಮಸ್ಯೆಗಳು ಸೇರಿದಂತೆ ಹಲವು ಸಂಕೀರ್ಣ ಸಮಸ್ಯೆಗಳಿಗೆ ಸಂಪೂರ್ಣವಾಗಿ ಚಿಕಿತ್ಸೆ ನೀಡಲು ಸಾಧ್ಯವಾಗಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT