ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಯೋಗ ಆಕಾಶದಲ್ಲಿ; ಫಲ ಭೂಮಿಯಲ್ಲಿ

Last Updated 12 ಅಕ್ಟೋಬರ್ 2021, 19:30 IST
ಅಕ್ಷರ ಗಾತ್ರ

ಮುಂದೊಂದು ದಿನ ಮಾನವನು ಚಂದ್ರನ ಮೇಲೆ ವಾಸವಾಗಿರಲು ಅಗತ್ಯವಾದ ತಂತ್ರಜ್ಞಾನಗಳ ಅಭಿವೃದ್ಧಿಯನ್ನು ಮಾಡಲಾಗುತ್ತಿದೆ. ಚಂದ್ರನ ಮೇಲೆ ಇರುವ ಮಾನವರಿಗೆ ಇಂಟರ್‌ನೆಟ್‌ ಸೌಲಭ್ಯವನ್ನು ನೀಡುವುದು ಹೇಗೆ ಎಂದು ಯೋಚಿಸಿದ ಸ್ಕ್ಯಾನ್ ವಿಜ್ಞಾನಿಗಳು, 2013ರಲ್ಲಿ ಪ್ರಾಯೋಗಿಕವಾಗಿ ಎಲ್‍ಎಲ್‍ಸಿಡಿಯನ್ನು ಮಾಡಿದರು.

ಉಪಗ್ರಹಗಳು, ಬಾಹ್ಯಾಕಾಶ ನೌಕೆಗಳು, ಪ್ರಯೋಗಾಲಯಗಳು - ಹೀಗೆ ವಿವಿಧ ಮಾಧ್ಯಮಗಳ ಮೂಲಕ ಸಂಗ್ರಹಿಸುವ ಅಗಾಧ ಪ್ರಮಾಣದ ಮಾಹಿತಿ (ಡೇಟಾ)ವನ್ನು ನಾವು ಭೂಮಿಗೆ ತರಿಸಿಕೊಂಡು, ಇಲ್ಲಿ ಈ ಮಾಹಿತಿಯ ಸಂಸ್ಕರಣೆ, ವಿಶ್ಲೇಷಣೆ ಮತ್ತು ಸಂಗ್ರಹಣೆಯನ್ನು ಮಾಡುತ್ತಿದ್ದೇವೆ. ಅದೇ ರೀತಿ ಉಪಗ್ರಹಗಳು, ಬಾಹ್ಯಾಕಾಶ ನೌಕೆಗಳ ನಿರ್ವಹಣೆಗಾಗಿ ಪ್ರತಿದಿನ ಸಾವಿರಾರು ಆದೇಶಗಳನ್ನು ನಾವು ಕಳುಹಿಸುತ್ತಿದ್ದೇವೆ. ಉಪಗ್ರಹಗಳು, ಬಾಹ್ಯಾಕಾಶ ನೌಕೆಗಳ ಸಂಖ್ಯೆ ಹೆಚ್ಚಾದಂತೆ, ಅವುಗಳ ನಿಯಂತ್ರಣ ಮತ್ತು ನಿರ್ವಹಣೆಗೆಂದು ನಾವು ಪ್ರತಿದಿನ ಕಳುಹಿಸುವ ಆದೇಶಗಳ ಸಂಖ್ಯೆ ಹಲವು ಪಟ್ಟು ಹೆಚ್ಚಾಗುತ್ತಿದ್ದು, ಈ ಸಂವಹನದಲ್ಲಿ ಕೂಡ ಈಗ ಉನ್ನತ ತಂತ್ರಜ್ಞಾನಗಳ ಬಳಕೆಯಾಗುತ್ತಿದೆ.

ಉದಾಹರಣೆಗೆ, ಅಮೆರಿಕದ ‘ಸ್ಕ್ಯಾನ್’ (ಸ್ಪೇಸ್ ಕಮ್ಯೂನಿಕೇಷನ್ ಎಂಡ್ ನ್ಯಾವಿಗೇಷನ್) ಯೋಜನೆಯನ್ನು ನೋಡೋಣ. 2024ರಲ್ಲಿ ಚಂದ್ರನ ಮೇಲೆ ಒಬ್ಬ ಪುರುಷ ಮತ್ತು ಸ್ತ್ರೀಗಗನಯಾತ್ರಿಯನ್ನು ಇಳಿಸುವ ಮಹಾತ್ವಾಕಾಂಕ್ಷೆಯ ಯೋಜನೆಯನ್ನು ನಾಸಾ ಹೊಂದಿದೆ. ಈ ಯೋಜನೆ ಸಫಲವಾಗಲು ಹಲವಾರು ಉನ್ನತ ತಂತ್ರಜ್ಞಾನಗಳ ಬಳಕೆಯಾಗುತ್ತಿವೆ:

1) ಟ್ರ್ಯಾಕಿಂಗ್ ಮತ್ತು ಡೇಟಾ ರಿಲೇ ಉಪಗ್ರಹಗಳು (ಟಿಡಿಆರ್‍ಎಸ್) ವ್ಯವಸ್ಥೆಯನ್ನು ಬಳಸಿ ದಿನದ 24 ಗಂಟೆ ನಿರಂತರವಾಗಿ ಮತ್ತು ಕರಾರುವಕ್ಕಾಗಿ ಕೆಲಸ ಮಾಡುವ ಹೊಸ ಸಂವಹನ ವ್ಯವಸ್ಥೆಯನ್ನು ಸ್ಕ್ಯಾನ್ ವಿಜ್ಞಾನಿಗಳು ಮತ್ತು ತಂತ್ರಜ್ಞರು ಅನುಷ್ಠಾನಗೊಳಿಸಿದ್ದಾರೆ. 2013ರಿಂದ 2017ರ ಅವಧಿಯಲ್ಲಿ ಮೂರು ಟಿಡಿಆರ್‍ಎಸ್ ಉಪಗ್ರಹಗಳನ್ನು ಉಡಾವಣೆ ಮಾಡಲಾಗಿದ್ದು, ಈಗ ಟಿಡಿಆರ್‍ಎಸ್ ವ್ಯವಸ್ಥೆಯನ್ನು ‘ಐಎಸ್‍ಎಸ್’ (ಇಂಟರ್‍ನ್ಯಾಷನಲ್ ಸ್ಪೇಸ್ ಸ್ಟೇಶನ್) ಮೊದಲಾದ ಬಾಹ್ಯಾಕಾಶ ಯೋಜನೆಗಳು ಬಳಸುತ್ತಿವೆ. ಈ ಮೊದಲು ಇದ್ದ 1980 ದಶಕದಲ್ಲಿ ಅಭಿವೃದ್ಧಿಯಾದ ಸಂವಹನ ವ್ಯವಸ್ಥೆಗಿಂತ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಬಳಸಿ ಅಭಿವೃದ್ಧಿ ಪಡಿಸಲಾಗಿರುವ ಟಿಡಿಆರ್‍ಎಸ್ ವ್ಯವಸ್ಥೆ ಮುಂಬರುವ ಹತ್ತು ವರ್ಷಗಳ ಕಾಲ ಬಾಹ್ಯಾಕಾಶ ಯೋಜನೆಗಳ ಸಂವಹನಕ್ಕಾಗಿ ಬಳಕೆಯಾಗಲಿದೆ.

2) ಮುಂದೊಂದು ದಿನ ಮಾನವನು ಚಂದ್ರನ ಮೇಲೆ ವಾಸವಾಗಿರಲು ಅಗತ್ಯವಾದ ತಂತ್ರಜ್ಞಾನಗಳ ಅಭಿವೃದ್ಧಿಯನ್ನು ಮಾಡಲಾಗುತ್ತಿದೆ. ಚಂದ್ರನ ಮೇಲೆ ಇರುವ ಮಾನವರಿಗೆ ಇಂಟರ್‌ನೆಟ್‌ ಸೌಲಭ್ಯವನ್ನು ನೀಡುವುದು ಹೇಗೆ ಎಂದು ಯೋಚಿಸಿದ ಸ್ಕ್ಯಾನ್ ವಿಜ್ಞಾನಿಗಳು, 2013ರಲ್ಲಿ ಪ್ರಾಯೋಗಿಕವಾಗಿ ಎಲ್‍ಎಲ್‍ಸಿಡಿ(ಲೂನಾರ್ ಲೇಸರ್ ಕಮ್ಯೂನಿಕೇಷನ್ ಪ್ರಯೋಗ)ವನ್ನು ಮಾಡಿದರು. ಸೆಕೆಂಡಿಗೆ 622 ಎಂ.ಬಿ. ವೇಗದ ಇಂಟರ್‌ನೆಟ್ ಸೌಲಭ್ಯವನ್ನು ಚಂದ್ರನಿಂದ ಭೂಮಿಗೆ ಕಲ್ಪಿಸಲು ಸಾಧ್ಯವಿದೆ ಎಂದು ಈ ಪ್ರಯೋಗದಿಂದ ತಿಳಿಯಲಾಯಿತು. ಇಷ್ಟು ವೇಗದ ಅಥವಾ ಇದಕ್ಕಿಂತ ಹೆಚ್ಚು ವೇಗದ ಇಂಟರ್‌ನೆಟ್ ಸೌಲಭ್ಯವನ್ನು ಚಂದ್ರನ ಮೇಲೆ ವಾಸವಾಗಿರುವ ಮನುಷ್ಯರಿಗೆ ನೀಡಿದಾಗ, ಅವರು ಚಂದ್ರ ಮತ್ತು ಬಾಹ್ಯಾಕಾಶ ಕುರಿತು ಚಿತ್ರಿಸುವ ವಿಡಿಯೋವನ್ನು ಯಾವುದೇ ವಿಳಂಬವಿಲ್ಲದೆ, ನಾವು ಭೂಮಿಯಿಂದ ನೋಡಲು ಸಾಧ್ಯವಾಗುತ್ತದೆ.

3) ಸಾರ್ವಜನಿಕರ ಉಪಯೋಗಕ್ಕಾಗಿ ನೀಡಿರುವ ಗೂಗಲ್ ಮ್ಯಾಪ್ ಮೊದಲಾದ ಸೌಲಭ್ಯಗಳಲ್ಲಿ ಜಿಪಿಎಸ್ ತಂತ್ರಜ್ಞಾನವನ್ನು ಬಳಸುತ್ತಾರೆ. ಆದರೆ ಬಾಹ್ಯಾಕಾಶದಲ್ಲಿ ಜಿಪಿಎಸ್ ಆಧಾರಿತ ಸೇವೆಗಳನ್ನು ಹೇಗೆ ನೀಡುವುದು ಎನ್ನುವ ಪ್ರಶ್ನೆಗೆ ಸ್ಕ್ಯಾನ್‍ನ ವಿಜ್ಞಾನಿಗಳು 2016ರಲ್ಲಿ ಎಂಎಂಎಸ್ ಹೆಸರಿನ ಪ್ರಯೋಗವನ್ನು ನಡೆಸಿದರು. ಭೂಮಿಯಿಂದ ಸುಮಾರು ಎಪ್ಪತ್ತು ಸಾವಿರ ಕಿ.ಮೀ.ಗಳಷ್ಟು ಎತ್ತರದಲ್ಲಿ ಜಿ.ಪಿ.ಎಸ್. ಸೌಲಭ್ಯವನ್ನು ನೀಡಲು ಇದರಿಂದ ಸಾಧ್ಯವಾಗಿದ್ದು, ವಿಶ್ವದಾಖಲೆಯಾಯಿತು. 2017ರಲ್ಲಿ ಸ್ಕ್ಯಾನ್ ವಿಜ್ಞಾನಿಗಳು ಈ ಕುರಿತು ನೆಡೆಸಿದ ಪ್ರಯೋಗದಲ್ಲಿ, ಭೂಮಿಯಿಂದ ಸುಮರು ಒಂದು ಲಕ್ಷ ಐವತ್ತು ಸಾವಿರ ಕಿ.ಮೀ.ಗಳಷ್ಟು ಎತ್ತರದಲ್ಲಿ ಜಿ.ಪಿ.ಎಸ್. ಸೌಲಭ್ಯವನ್ನು ಸಾಧ್ಯವಾಗಿದ್ದು ಹೊಸ ವಿಶ್ವ ದಾಖಲೆಯಾಯಿತು. 2019ರಲ್ಲಿ ಈ ವಿಜ್ಞಾನಿಗಳು ನೆಡೆಸಿದ ಪ್ರಯೋಗದಲ್ಲಿ ಭೂಮಿಯಿಂದ ಸುಮಾರು ಒಂದು ಲಕ್ಷ ಎಂಬತ್ತಾರು ಕಿ.ಮೀ.ಗಳಷ್ಟು ಎತ್ತರದಲ್ಲಿ ಜಿ.ಪಿ.ಎಸ್. ಸೌಲಭ್ಯವನ್ನು ನೀಡಲು ಸಾಧ್ಯವಾಗಿದ್ದು, ಹೊಸ ವಿಶ್ವ ದಾಖಲೆಯಾಗಿದೆ. ಅಂದ ಹಾಗೆ, ಭೂಮಿಯಿಂದ ಚಂದ್ರನವರೆಗೆ ಇರುವ ದೂರದಲ್ಲಿ ಅರ್ಧ ಭಾಗವು ಸುಮಾರು ಒಂದು ಲಕ್ಷ ಎಂಬತ್ತಾರು ಕಿ.ಮೀ.ಗಳಷ್ಟಾಗುತ್ತದೆ.

4) ವಿಮಾನವೊಂದು ಅಪಘಾತಕ್ಕೀಡಾಗುವ ಪರಿಸ್ಥಿತಿ ಎದುರಾದರೆ, ವಿಮಾನದಲ್ಲಿರುವ ತುರ್ತುಪರಿಸ್ಥಿತಿಯ ಬೀಕನ್‍ಗಳು ಕಾರ್ಯಪ್ರವೃತ್ತರಾಗುತ್ತವೆ. ಇದರಿಂದಾಗಿ ಸಂಕಷ್ಟದಲ್ಲಿರುವ ವಿಮಾನವನ್ನು ಗುರುತಿಸಲು ಮತ್ತು ಅಗತ್ಯ ನೆರವು ನೀಡಲು ವಿಮಾನ ನಿಲ್ದಾಣದ ಸಿಬ್ಬಂದಿಗೆ ಸಹಾಯವಾಗುತ್ತದೆ. ವಿಮಾನ ಅಪಘಾತಕ್ಕೀಡಾದರೂ ಈ ತುರ್ತುಪರಿಸ್ಥಿತಿಯ ಬೀಕಾನ್‍ಗಳು ಕೆಲಸ ಮಾಡುತ್ತಿರುವಂತೆ ಹೇಗೆ ಮಾಡುವುದು ಎಂದು ಸ್ಕ್ಯಾನ್‍ನ ವಿಜ್ಞಾನಿಗಳು ಮತ್ತು ತಂತ್ರಜ್ಞರು ಪ್ರಯೋಗಗಳನ್ನು ನೆಡೆಸಿದರು. ನಾಗರಿಕ ವಿಮಾಯಾನ ಸಂಸ್ಥೆಗಳು ಬಳಸುವಂತಹ ಕೋಟ್ಯಂತರ ರೂಪಾಯಿ ಬೆಲೆ ಬಾಳುವ ಮೂರು ವಿಮಾನಗಳನ್ನು ಅಪಘಾತಕ್ಕೀಡಾಗುವಂತೆ ಮಾಡಲಾಯಿತು. ಈ ಪ್ರಯೋಗದಿಂದ ನಾಗರಿಕ ವಿಮಾನಯಾನಕ್ಕೆ ಬಳಸಲಾಗುವ ವಿಮಾನಗಳಲ್ಲಿ ತುರ್ತುಪರಿಸ್ಥಿತಿಯ ಬೀಕನ್‍ಗಳನ್ನು ಎಲ್ಲಿ ಅಳವಡಿಸಿದರೆ, ವಿಮಾನ ಆಪಘಾತವಾದರೂ, ಈ ಬೀಕನ್‍ಗಳು ಕೆಲಸ ಮಾಡುತ್ತಿರುವಂತೆ ಮಾಡಬಹುದು ಎಂದು ವಿಜ್ಞಾನಿಗಳು ಮತ್ತು ತಂತ್ರಜ್ಞರಿಗೆ ಗೊತ್ತಾಯಿತು. ಮುಂಬರುವ ದಿನಗಳಲ್ಲಿ ವಿಮಾನಯಾನ ಮಾಡುವ ಪ್ರಯಾಣಿಕರಿಗೆ ಹೆಚ್ಚು ಸುರಕ್ಷತೆಯನ್ನು ನೀಡಲು ಸಾಧ್ಯವಾಗುತ್ತಿದೆ.

5) ಸೂರ್ಯನತ್ತ ಸಾಗುತ್ತಿರುವ ಪಾರ್ಕರ್ ಸೋಲಾರ್ ಪ್ರೋಬ್, ನಮ್ಮ ಸೌರವ್ಯೂಹದಿಂದ ಹೊರಗೆ ಹೋಗಿ ತಮ್ಮ ಪಯಣ ಮಾಡುತ್ತಿರುವ ವಾಯೋಜರ್ ಬಾಹ್ಯಾಕಾಶ ನೌಕೆಗಳು, ಶನಿಗ್ರಹದ ವಾತಾವರಣವನ್ನು ಪ್ರವೇಶಿಸಿದ ಸೆಸೆನಿ ಬಾಹ್ಯಾಕಾಶ ನೌಕೆ, ಹೀಗೆ ಬಾಹ್ಯಾಕಾಶ ಸಂಶೋಧನೆಯಲ್ಲಿ ಹೊಸ ಭಾಷ್ಯವನ್ನು ಬರೆಯುತ್ತಿರುವ ಯೋಜನೆಗಳ ಯಶಸ್ಸಿಗೆ ನಿರಂತರ ಮತ್ತು ಕರಾರುವಕ್ಕಾಗಿರುವ ಸಂವಹನ ವ್ಯವಸ್ಥೆ ಮುಖ್ಯವಾಗುತ್ತದೆ. ಅಮೇರಿಕಾದ ‘ಡೀಪ್ ಸ್ಪೇಸ್ ನೆಟವರ್ಕ್‌’ (ಡಿಎಸ್‍ಎನ್) ವರ್ಷ 2013ರಲ್ಲಿ 50 ವರ್ಷಗಳ ಕಾರ್ಯಾಚರಣೆಯ ಸಂಭ್ರಮವನ್ನಾಚರಿಸಿತು.

ಮುಂಬರುವ ದಿನಗಳಲ್ಲಿ ಸಂವಹನ ಕ್ಷೇತ್ರದಲ್ಲಿ ಹೊಸ ತಂತ್ರಜ್ಞಾನಗಳು ಮತ್ತು ಆವಿಷ್ಕಾರಗಳು ಬಳಕೆಗೆ ಬಂದಂತೆ, ಬಾಹ್ಯಾಕಾಶ ಸಂಶೋಧನೆ ಮಾತ್ರವಲ್ಲ, ಜನಸಾಮಾನ್ಯರಿಗೂ ಪ್ರಯೋಜನವಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT