ಸೋಮವಾರ, ಮೇ 23, 2022
30 °C

ಆಳ-ಅಗಲ| ಟ್ವಿಟರ್ ವರ್ಸಸ್ ಸರ್ಕಾರ

ಅವಿನಾಶ್ ಬಿ./ಜಯಸಿಂಹ ಆರ್./ಅಮೃತ ಕಿರಣ್ ಬಿ.ಎಂ. Updated:

ಅಕ್ಷರ ಗಾತ್ರ : | |

ಟ್ವಿಟರ್‌ ಮತ್ತು ಭಾರತ ಸರ್ಕಾರದ ನಡುವಣ ಜಟಾಪಟಿಗೂ ರೈತರ ಪ್ರತಿಭಟನೆಗೂ ನೇರ ಸಂಬಂಧವಿದೆ. ಜನವರಿ 26ರಂದು ರೈತರ ಟ್ರ್ಯಾಕ್ಟರ್‌ ಪರೇಡ್‌ನ ವೇಳೆ ಹಿಂಸಾಚಾರ ನಡೆದಿತ್ತು. ಆನಂತರ ಟ್ವಿಟರ್‌ನಲ್ಲಿ #ModiPlanningFarmerGenocide ಎಂಬ ಹ್ಯಾಶ್‌ಟ್ಯಾಗ್‌ನಲ್ಲಿ ಸಾವಿರಾರು ಮಂದಿ ಟ್ವೀಟ್ ಮಾಡಿದ್ದರು. ಈ ಹ್ಯಾಶ್‌ಟ್ಯಾಗ್‌ ಅನ್ನು ಬಳಸಿದ್ದ ಕೆಲವರ ಟ್ವಿಟರ್ ಖಾತೆಗಳನ್ನು ಸರ್ಕಾರವು ಗುರುತಿಸಿತ್ತು.

‘ಸುಳ್ಳು ಸುದ್ದಿ ಮತ್ತು ತಪ್ಪು ಮಾಹಿತಿ ನೀಡುತ್ತಿರುವ 250 ಖಾತೆಗಳನ್ನು ಸ್ಥಗಿತಗೊಳಿಸಿ’ ಎಂದು ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು ಟ್ವಿಟರ್‌ಗೆ ಆದೇಶ ನೀಡಿತ್ತು. ಕೇಂದ್ರ ಸರ್ಕಾರದ ನೂತನ ಕೃಷಿ ಕಾಯ್ದೆಗಳ ವಿರುದ್ಧ ಹೋರಾಟವನ್ನು ಸಂಘಟಿಸುತ್ತಿರುವ ಕಿಸಾನ್ ಏಕತಾ ಮೋರ್ಚಾ, ಭಾರತೀಯ ಕಿಸಾನ್ ಯೂನಿಯನ್‌ನ ಟ್ವಿಟರ್‌ ಖಾತೆಗಳನ್ನು ಸ್ಥಗಿತಗೊಳಿಸುವಂತೆ ಸರ್ಕಾರವು ಆದೇಶಿಸಿತ್ತು. ಕ್ಯಾರವಾನ್ ನಿಯತಕಾಲಿಕೆಯ ಟ್ವಿಟರ್ ಖಾತೆಯನ್ನೂ ಸ್ಥಗಿತಗೊಳಿಸುವಂತೆ ಸರ್ಕಾರ ಸೂಚಿಸಿತ್ತು. ಇದನ್ನು ಟ್ವಿಟರ್‌ ಪಾಲಿಸಿತ್ತು. ಆದರೆ ಕೆಲವೇ ದಿನಗಳಲ್ಲಿ ಈ ಖಾತೆಗಳಿಗೆ ಟ್ವಿಟರ್ ಮರುಚಾಲನೆ ನೀಡಿತ್ತು. ಇಲ್ಲಿಂದಲೇ ಸರ್ಕಾರ ಮತ್ತು ಟ್ವಿಟರ್‌ ನಡುವಣ ಜಟಾಪಟಿ ಜೋರಾಯಿತು.

‘ಈ ಖಾತೆಗಳ ಮೇಲೆ ಹೇರಲಾಗಿದ್ದ ನಿರ್ಬಂಧವನ್ನು ಟ್ವಿಟರ್ ಏಕಪಕ್ಷೀಯವಾಗಿ ತೆರವುಮಾಡಿದೆ. ಈ ಮೂಲಕ ಸರ್ಕಾರದ ಆದೇಶವನ್ನು ಉಲ್ಲಂಘಿಸಿದೆ. ಸುಪ್ರೀಂ ಕೋರ್ಟ್‌ ವಿವಿಧ ಆದೇಶಗಳಲ್ಲಿ ಹೇಳಿದ್ದ ವಿವರಣೆಯನ್ನು ಟ್ವಿಟರ್ ಸರಿಯಾಗಿ ಅರ್ಥಮಾಡಿಕೊಳ್ಳಬೇಕು. ಈಗ ಮಾಡಿರುವ ಉಲ್ಲಂಘನೆಗೆ ಟ್ವಿಟರ್‌ನ ಪ್ರತಿನಿಧಿಗಳನ್ನು ಜೈಲಿಗೆ ಕಳುಹಿಸಲೂ ಅವಕಾಶವಿದೆ’ ಎಂದು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು ಟ್ವಿಟರ್‌ಗೆ ನೋಟಿಸ್‌ ನೀಡಿತ್ತು. ಇದರ ಬೆನ್ನಲ್ಲೇ ಟ್ವಿಟರ್‌ನ ಭಾರತ ಮತ್ತು ದಕ್ಷಿಣ ಏಷ್ಯಾ ವಲಯದ ಸಾರ್ವಜನಿಕ ನೀತಿ ನಿರ್ದೇಶಕಿ ಮಹಿಮಾ ಕೌಲ್ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದರು.

ಆನಂತರ, ಭಾರತೀಯ ರೈತರ ಪ್ರತಿಭಟನೆಯನ್ನು ಬೆಂಬಲಿಸಿ ಟ್ವೀಟ್‌ ಮಾಡುತ್ತಿರುವ 1,178 ಟ್ವಿಟರ್‌ ಖಾತೆಗಳನ್ನು ಸ್ಥಗಿತಗೊಳಿಸುವಂತೆ ಸರ್ಕಾರ ಸೂಚಿಸಿತ್ತು. ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕಲಾಗದು ಎಂದು ಟ್ವಿಟರ್ ಪ್ರತಿಕ್ರಿಯೆ ನೀಡಿತ್ತು. ರೈತರ ಪ್ರತಿಭಟನೆಯನ್ನು ಬೆಂಬಲಿಸಿ ಟ್ವೀಟ್ ಮಾಡಿದ್ದ ಪಾಪ್ ಗಾಯಕಿ ರಿಯಾನಾ ಅವರಿಗೆ ಟ್ವಿಟರ್‌ನಲ್ಲಿ ಭಾರಿ ಬೆಂಬಲ ವ್ಯಕ್ತವಾಗಿತ್ತು. ರಿಯಾನ ಅವರನ್ನು ಬೆಂಬಲಿಸಿದ್ದ ಟ್ವೀಟ್‌ಗಳನ್ನು ಟ್ವಿಟರ್ ಸಿಇಒ ಜೆ.ಪಿ. ಡಾರ್ಸಿ ಲೈಕ್ ಮಾಡಿದ್ದರು. ಭಾರತೀಯ ರೈತರ ಪ್ರತಿಭಟನೆಗೆ ಪೂರಕವಾಗಿ ಟ್ವಿಟರ್‌ನಲ್ಲಿ ಒಂದು ಎಮೋಜಿ ರೂಪಿಸಿ ಎಂಬ ಅಭಿಯಾನದ ಟ್ವೀಟ್‌ಗಳಿಗೂ ಡಾರ್ಸಿ ಲೈಕ್ ಒತ್ತಿದ್ದರು.

ಸರ್ಕಾರದ ನೋಟಿಸ್‌ಗೆ ಪ್ರತಿಕ್ರಿಯೆ ನೀಡಿರುವ ಟ್ವಿಟರ್, ‘ಸರ್ಕಾರದ ಆದೇಶಗಳು, ದೇಶದ ಕಾನೂನುಗಳಿಗೆ ವ್ಯತಿರಿಕ್ತವಾಗಿವೆ’ ಎಂದು ಹೇಳಿದೆ. ಈಗ ಟ್ವಿಟರ್ ಬದಲಿಗೆ ಪರ್ಯಾಯ ಅಪ್ಲಿಕೇಷನ್ ಅನ್ನು ಬಳಸುವ ಅಭಿಯಾನವನ್ನು ಕೇಂದ್ರ ಸಚಿವರೇ ಆರಂಭಿಸಿದ್ದಾರೆ.

ಕೆಲವೆಡೆ ಟ್ವಿಟರ್‌ ನಿಷೇಧ

ಜಗತ್ತಿನ ಬೇರೆ ದೇಶಗಳಲ್ಲಿ ಟ್ವಿಟರ್‌ ಮತ್ತು ಅಲ್ಲಿನ ಸರ್ಕಾರಗಳು ನೇರವಾಗಿ ಜಟಾಪಟಿಗೆ ಇಳಿದಿಲ್ಲ. ಹಾಗೆಂದು, ಟ್ವಿಟರ್‌ನ ಕಾರ್ಯಾಚರಣೆ ವಿಶ್ವದಾದ್ಯಂತ ಸರಾಗವಾಗಿದೆ ಎಂದೂ ಅಲ್ಲ. ಕೆಲವು ದೇಶಗಳಲ್ಲಿ ಟ್ವಿಟರ್ ಅನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.

ಚೀನಾ, ಉತ್ತರ ಕೊರಿಯಾ, ಇರಾನ್, ತುರ್ಕ್‌ಮೆನಿಸ್ತಾನ್‌ನಲ್ಲಿ ಟ್ವಿಟರ್ ಅನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಚೀನಾದಲ್ಲಿ ಕೆಲವು ರಾಜತಾಂತ್ರಿಕ ಅಧಿಕಾರಿಗಳು ಮಾತ್ರ ಟ್ವಿಟರ್‌ ಬಳಸಲು ಅವಕಾಶವಿದೆ. ಇರಾನ್‌ನಲ್ಲಿ ಸರ್ಕಾರದ ವಿರುದ್ಧ ಹೋರಾಟ ಸಂಘಟಿಸಲು ಟ್ವಿಟರ್‌ ಅನ್ನು ಬಳಸಿಕೊಳ್ಳಲಾಗಿತ್ತು. ಈ ಹೋರಾಟವನ್ನು ಹತ್ತಿಕ್ಕುವ ಉದ್ದೇಶದಿಂದ ಟ್ವಿಟರ್ ಅನ್ನು ಸಂಪೂರ್ಣವಾಗಿ ನಿಷೇಧಿಸಲಾಗಿತ್ತು. ಉತ್ತರ ಕೊರಿಯಾದಲ್ಲೂ ಸುಳ್ಳು ಮಾಹಿತಿ ಹರಡಲಾಗುತ್ತಿದೆ ಎಂಬ ಕಾರಣದಿಂದ ಟ್ವಿಟರ್‌ ಮೇಲೆ ನಿಷೇಧ ಹೇರಲಾಗಿದೆ.

ಈಜಿಪ್ಟ್‌ (2011) ಮತ್ತು ಟರ್ಕಿಯಲ್ಲಿ (2014) ಟ್ವಿಟರ್‌ ಮೇಲೆ ತಾತ್ಕಾಲಿಕವಾಗಿ ನಿಷೇಧ ಹೇರಲಾಗಿತ್ತು. ನಂತರ ನಿಷೇಧವನ್ನು ತೆಗೆದುಹಾಕಲಾಗಿತ್ತು. 2011ರಲ್ಲಿ ಬ್ರಿಟನ್ ಸಹ ಸರ್ಕಾರದ ವಿರುದ್ಧದ ಹೋರಾಟಕ್ಕೆ ಟ್ವಿಟರ್ ಅನ್ನು ಬಳಸಿಕೊಳ್ಳಲಾಗುತ್ತಿದೆ ಎಂಬ ಕಾರಣಕ್ಕೆ ಸಂಸ್ಥೆಗೆ ನಿಷೇಧದ ಎಚ್ಚರಿಕೆ ನೀಡಿತ್ತು.

ಭಾರತ, ಪಾಕಿಸ್ತಾನ, ಫ್ರಾನ್ಸ್‌, ಇಸ್ರೇಲ್‌, ಟರ್ಕಿ, ಈಜಿಪ್ಟ್, ರಷ್ಯಾ, ದಕ್ಷಿಣ ಕೊರಿಯಾ, ತಾಂಜಾನಿಯಾ ಮತ್ತು ವೆನಿಜುಯೆಲಾದಲ್ಲಿ ಟ್ವಿಟರ್‌ಗೆ ನಿರ್ಬಂಧಿತ ಆಕ್ಸೆಸ್ ನೀಡಲಾಗಿದೆ. ಈ ದೇಶಗಳಲ್ಲಿ ಸರ್ಕಾರದ ಆದೇಶದ ಮೇರೆಗೆ ಟ್ವೀಟ್‌ಗಳನ್ನು ಅಳಿಸಿಹಾಕಲು ಮತ್ತು ಟ್ವಿಟರ್‌ ಖಾತೆಗಳನ್ನು ನಿಷೇಧಿಸಲು ಅವಕಾಶವಿದೆ.

ಅಮೆರಿಕದ ನಿಕಟಪೂರ್ವ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಟ್ವಿಟರ್ ಖಾತೆಯನ್ನು ಜನವರಿ 14ರಂದು ಟ್ವಿಟರ್ ಶಾಶ್ವತವಾಗಿ ನಿಷೇಧ ಮಾಡಿತು. ಕ್ಯಾಪಿಟಲ್ ಹಿಲ್‌ನಲ್ಲಿ ನಡೆದ ಹಿಂಸಾಚಾರಕ್ಕೆ ಕುಮ್ಮಕ್ಕು ನೀಡಿದಂತಹ ವಿಡಿಯೊಗಳನ್ನು ಟ್ವೀಟ್‌ ಮಾಡಿದ್ದೇ ಇದಕ್ಕೆ ಕಾರಣ ಎಂದು ಟ್ವಿಟರ್ ಸಮರ್ಥಿಸಿಕೊಂಡಿತ್ತು. ಟ್ವಿಟರ್ ಈ ಕ್ರಮ ತೆಗೆದುಕೊಂಡಾಗ ಟ್ರಂಪ್ ಅವರು ಇನ್ನೂ ಅಮೆರಿಕದ ಅಧ್ಯಕ್ಷರಾಗೇ ಇದ್ದರು.

ಸರ್ಕಾರ ನಿಲುವು

l ಕೆಲವು ಟ್ವಿಟರ್ ಖಾತೆಗಳು ಮತ್ತು ಟ್ವೀಟ್‌ಗಳು ಹಿಂಸಾಚಾರವನ್ನು ಪ್ರಚೋದಿಸುವ ರೀತಿಯಲ್ಲಿವೆ. ಹೀಗಾಗಿ, ಇಂತಹ ಖಾತೆ ಮತ್ತು ಟ್ವೀಟ್‌ಗಳನ್ನು ಸ್ಥಗಿತಗೊಳಿಸಬೇಕು

l ModiPlanningFarmerGenocide ಎಂಬ ಹ್ಯಾಶ್‌ಟ್ಯಾಗ್ ಜನರನ್ನು ಪ್ರಚೋದಿಸುತ್ತದೆ, ಅಪರಾಧಗಳನ್ನು ಮಾಡಲು ಪ್ರೋತ್ಸಾಹಿಸುತ್ತದೆ ಮತ್ತು ಹಿಂಸಾಚಾರವನ್ನು ಉಲ್ಬಣಗೊಳಿಸಲು ಕಾರಣವಾಗುತ್ತದೆ 

l ಟ್ವಿಟರ್‌ನಲ್ಲಿ ಖಾಲಿಸ್ತಾನದ ಪರ ಇರುವವರು, ಪಾಕಿಸ್ತಾನದ ಬೆಂಬಲಿತರು ಇದ್ದಾರೆ. ಇವು ದೇಶದ ಕಾನೂನು ಮತ್ತು ಸುವ್ಯವಸ್ಥೆಗೆ ಅಪಾಯ ಉಂಟುಮಾಡುವ ವಿದೇಶಿ ಶಕ್ತಿಗಳಾಗಿವೆ

l ಈ ಕೆಲವು ಖಾತೆಗಳು ಸ್ವಯಂಚಾಲಿತವಾಗಿ ಕಾರ್ಯನಿರ್ವಹಿಸುತ್ತಿವೆ. ಇಲ್ಲಿಂದ ರೈತರ ಪ್ರತಿಭಟನೆಯನ್ನು ಪ್ರಚೋದನಕಾರಿಗೊಳಿಸುವ ಟ್ವೀಟ್‌ಗಳು ಪ್ರಕಟವಾಗುತ್ತಿವೆ

l ಆದಾಗ್ಯೂ, ಇಂತಹ ಖಾತೆಗಳ ವಿರುದ್ಧ ಟ್ವಿಟರ್ ವೇದಿಕೆ ಇನ್ನೂ ಯಾವುದೇ ಕ್ರಮಗಳನ್ನು ತೆಗೆದುಕೊಂಡಿಲ್ಲ. ‘ಮುಕ್ತ ಅಭಿವ್ಯಕ್ತಿ’ ಎಂಬ ತತ್ವವನ್ನು ಟ್ವಿಟರ್ ಉಲ್ಲೇಖಿಸಿದೆ.

ಟ್ವಿಟರ್ ವಾದ

l ಟ್ವಿಟರ್ ವೇದಿಕೆಯ ನಿಯಮಗಳನ್ನು ಯಾವುದೇ ಕಂಟೆಂಟ್ ಉಲ್ಲಂಘಿಸುತ್ತದೆ ಎಂದು ಕಂಡುಬಂದಲ್ಲಿ, ಆ ಖಾತೆಯನ್ನು ಸಂಪೂರ್ಣವಾಗಿ ತೆಗೆದುಹಾಕಲಾಗುತ್ತದೆ. ಆದರೆ, ಸ್ಥಳೀಯ ಕಾನೂನುಗಳನ್ನು ಅದು ಉಲ್ಲಂಘಿಸುತ್ತದೆ ಎಂದಾದರೆ ಮಾತ್ರ, ಆ ದೇಶದ ಒಳಗೆ ಮಾತ್ರ ಕಂಟೆಂಟ್ ಅನ್ನು ನಿರ್ಬಂಧಿಸಲಾಗುತ್ತದೆ

l ಸರ್ಕಾರ ಹೇಳಿರುವಂತೆ ಕೆಲವು ಖಾತೆಗಳು ಮತ್ತು ಪ್ರಕಟವಾಗಿರುವ ಟ್ವೀಟ್‌ಗಳು ಸುದ್ದಿಮಾಹಿತಿಯನ್ನು ಹೊಂದಿವೆಯಷ್ಟೇ

l ಫೆಬ್ರವರಿ 1 ರಂದು ವೇದಿಕೆಯಿಂದ ತಡೆಹಿಡಿಯಲಾದ ಖಾತೆಗಳು ಮತ್ತು ಟ್ವೀಟ್‌ಗಳನ್ನು ಭಾರತದೊಳಗೆ ಮಾತ್ರ ತಡೆಹಿಡಿಯಲಾಗಿದೆ

ಸರ್ಕಾರಕ್ಕೆ ಕಾಯ್ದೆಯ ಬಲ

ಕೆಲವು ಖಾತೆಗಳನ್ನು ಅಮಾನತಿನಲ್ಲಿಡುವಂತೆ ಟ್ವಿಟರ್‌ಗೆ ಸರ್ಕಾರ ಆದೇಶಿಸಿದೆ. ಇದಕ್ಕೆ ಐಟಿ ಕಾಯ್ದೆ 2000ರ ಸೆಕ್ಷನ್ 69 ಎ ನೆರವಾಗುತ್ತದೆ.

ಭಾರತದ ಸಾರ್ವಭೌಮತ್ವ, ಸಮಗ್ರತೆ, ರಕ್ಷಣೆ, ರಾಜ್ಯದ ಭದ್ರತೆ, ವಿದೇಶಿ ರಾಜ್ಯಗಳೊಂದಿಗಿನ ಸ್ನೇಹ ಸಂಬಂಧ, ಅಥವಾ ಸಾರ್ವಜನಿಕ ಸುವ್ಯವಸ್ಥೆ ಅಥವಾ ಪ್ರಚೋದನೆಯನ್ನು ತಡೆಯುವ ಉದ್ದೇಶದಿಂದ ಖಾತೆ ಸ್ಥಗಿತಕ್ಕೆ ಸರ್ಕಾರ ಆದೇಶಿಸಬಹುದು.

ಮಧ್ಯವರ್ತಿಗಳು, ದೂರಸಂಪರ್ಕ ಕಂಪನಿಗಳು, ಇಂಟರ್ನೆಟ್ ಸೇವಾ ಪೂರೈಕೆದಾರರು, ನೆಟ್‌ವರ್ಕ್ ಆಪರೇಟರ್‌ಗಳು, ವೆಬ್-ಹೋಸ್ಟಿಂಗ್ ಸೇವೆಗಳು, ಸರ್ಚ್ ಇಂಜಿನ್‌ಗಳು, ಪಾವತಿ ಗೇಟ್‌ವೇಗಳು ಮತ್ತು ಇತರ ಸಂಬಂಧಿತ ಪೋರ್ಟಲ್‌ಗಳು ಮತ್ತು ಸೇವೆಗಳನ್ನು ಈ ಕಾಯ್ದೆಯಡಿ ನಿಯಂತ್ರಣಕ್ಕೆ ತೆಗೆದುಕೊಳ್ಳಬಹುದು. ಸೆಕ್ಷನ್ 69 ಎ ಅನ್ನು ಸಹ ಸುಪ್ರೀಂ ಕೋರ್ಟ್ ಎತ್ತಿಹಿಡಿದಿದೆ.

ಬಿಕ್ಕಟ್ಟಿನಲ್ಲಿ ಟ್ವಿಟರ್

ಸರ್ಕಾರ ಸೂಚಿಸಿದಂತೆ ಕೆಲವು ಖಾತೆಗಳನ್ನು ಅಮಾನತಿನಲ್ಲಿಡಲು ಟ್ವಿಟರ್ ವಿಫಲವಾದರೆ, ಸಂಸ್ಥೆಯು ತೀವ್ರ ತೊಂದರೆಗೆ ಸಿಲುಕಿಕೊಳ್ಳಬಹುದು ಎಂದು ಸರ್ಕಾರದ ಹಿರಿಯ ಅಧಿಕಾರಿಗಳು ಹೇಳಿದ್ದಾರೆ.

ಆಸ್ಟ್ರೇಲಿಯಾ ಸರ್ಕಾರವು ಗೂಗಲ್ ವಿರುದ್ಧ ಸಂಘರ್ಷ ಹೂಡಿರುವ ಸಮಯದಲ್ಲೇ ಭಾರತದಲ್ಲಿ ಇಂತಹದ್ದೇ ಬಿಕ್ಕಟ್ಟು ತಲೆದೋರಿದೆ. ಸರ್ಕಾರ ನೋಟಿಸ್ ನೀಡಿದರೂ, ಕ್ರಮ ತೆಗೆದುಕೊಳ್ಳುವಂತೆ ಸೂಚಿಸಿದರೂ, ಟ್ವಿಟರ್ ಮಾತ್ರ ಎಲ್ಲವನ್ನೂ ಹಗುರವಾಗಿ ತೆಗೆದುಕೊಂಡಂತೆ ಮೇಲ್ನೋಟಕ್ಕೆ ಕಾಣುತ್ತಿದೆ.

10 ಕೋಟಿ ಬಳಕೆದಾರರಿದ್ದ ಟಿಕ್‌ಟಾಕ್‌ ನಿಷೇಧ ಮಾಡಿರುವ ಸರ್ಕಾರವು ಕಡಿಮೆ ಬಳಕೆದಾರರಿರುವ ಟ್ವಿಟರ್ ನಿಷೇಧಿಸಿ ಅದನ್ನು ನಿಭಾಯಿಸಬಲ್ಲದು. ಚೀನಾದ ನೂರಾರು ಆ್ಯಪ್‌ಗಳನ್ನು ಸರ್ಕಾರ ನಿಷೇಧಿಸಿದೆ. ಬಳಕೆದಾರರು ಪರ್ಯಾಯ ಆ್ಯಪ್‌ಗಳಿಗೆ ಬದಲಾಗಿದ್ದಾರೆ. ಟ್ವಿಟರ್ ಕೂಡ ಇದಕ್ಕೆ ಹೊರತಾಗಲಾರದು ಎನ್ನುತ್ತಾರೆ ವಿಶ್ಲೇಷಕರು.

ಸರ್ಕಾರದ ಮುಂದಿರುವ ಆಯ್ಕೆಗಳು

1. ಸೆಕ್ಷನ್ 69 ಎ ಅಡಿಯಲ್ಲಿ ಟ್ವಿಟರ್ ವೇದಿಕೆ ವಿರುದ್ಧ ಎಫ್‌ಐಆರ್ ದಾಖಲಿಸುವುದು. ಈ ಹಿಂದೆ, ಫೇಸ್‌ಬುಕ್ ಮತ್ತು ಯೂಟ್ಯೂಬ್ ವೇದಿಕೆಗಳು ಇಂತಹ ಸ್ಥಿತಿ ಎದುರಿಸಿದ್ದವು

2. ಭಾರತದಾದ್ಯಂತ ಟ್ವಿಟರ್ ಅನ್ನು ನಿರ್ಬಂಧಿಸುವುದು. ಇದು ಸದ್ಯದ ಮಟ್ಟಿಗೆ ಕಷ್ಟವಾದರೂ, ದೀರ್ಘಕಾಲದಲ್ಲಿ ತಳ್ಳಿಹಾಕಲಾಗದು

ಟ್ವಿಟರ್‌ಗೆ ಪರ್ಯಾಯ‘ಕೂ’ ಆ್ಯಪ್?

ಗಾಲ್ವನ್ ಕಣಿವೆಯಲ್ಲಿ ಚೀನಾ ದುಸ್ಸಾಹಸಕ್ಕಿಳಿದು ಭಾರತೀಯ ಸೈನಿಕರ ಮೇಲೆ ದಾಳಿ ಮಾಡಲಾರಂಭಿಸಿದಾಗ ಭಾರತೀಯರಲ್ಲಿ ಚೀನಾದ ವಿರುದ್ಧ ಆಕ್ರೋಶ ಮುಗಿಲುಮುಟ್ಟಿತ್ತು. ಚೀನಾದ ಈ ಪರಿಯಾದ ಆಷಾಢಭೂತಿತನವಷ್ಟೇ ಅಲ್ಲದೆ, ಭಾರತೀಯ ಅರ್ಥ ವ್ಯವಸ್ಥೆಯ ಮೇಲೂ ತನ್ನ ಕಬಂಧ ಬಾಹುಗಳನ್ನು ಚಾಚಿದ್ದನ್ನು ಮನಗಂಡ ಭಾರತ ಸರ್ಕಾರವು, ಅತ್ಯಂತ ಜನಪ್ರಿಯವಾಗಿದ್ದ ಚೀನೀ ಆ್ಯಪ್‌ಗಳನ್ನು ನಿಷೇಧಿಸಿತು. ಅಂತೆಯೇ ಆತ್ಮ ನಿರ್ಭರ ಭಾರತದ ಕನಸಿಗೆ ಹೆಚ್ಚಿನ ಒತ್ತು ನೀಡಿದ ಸಂದರ್ಭದಲ್ಲಿ ಕೇಳಿ ಬಂದಿದ್ದೇ ಟ್ವಿಟರ್‌ಗೆ ಪರ್ಯಾಯವಾಗಿರುವ ದೇಸೀ ಆ್ಯಪ್ ಎಂದು ಹೆಸರು ಪಡೆದ ‘ಕೂ (Koo)’. ಪ್ರಧಾನ ಮಂತ್ರಿ ನರೇಂದ್ರ ಮೋದಿ ಕೂಡ ತಮ್ಮ ಮಾಸಿಕ ‘ಮನದ ಮಾತು’ ಕಾರ್ಯಕ್ರಮದಲ್ಲಿ ಕನ್ನಡಿಗರೇ ರೂಪಿಸಿದ ಸಾಮಾಜಿಕ ಮಾಧ್ಯಮ ‘ಕೂ’ ಬಗ್ಗೆ ಉಲ್ಲೇಖಿಸಿದ ಹಂತದಲ್ಲಿ ಸಾಕಷ್ಟು ಮಂದಿ ಭಾರತೀಯರು ಅದನ್ನು ಅಪ್ಪಿಕೊಂಡುಬಿಟ್ಟಿದ್ದರು.

ತತ್ಪರಿಣಾಮವಾಗಿ ಮಾರ್ಚ್ 2020ರಿಂದ ಆರಂಭವಾಗಿದ್ದ ಕೂ ಆ್ಯಪ್, ಹನ್ನೊಂದೇ ತಿಂಗಳಲ್ಲಿ ಬಹುಭಾಷಾ ವೇದಿಕೆಗಳ ಮೂಲಕ 30 ಲಕ್ಷಕ್ಕೂ ಹೆಚ್ಚು ಬಳಕೆದಾರರನ್ನು ತನ್ನತ್ತ ಸೆಳೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ.

ಇದು ಕನ್ನಡಿಗರೇ ರೂಪಿಸಿರುವ, ತಮ್ಮ ಮನದ ಅನಿಸಿಕೆ ಹಂಚಿಕೊಳ್ಳುವ ವೇದಿಕೆ. ಚೀನಾ ಸೇರಿದಂತೆ ವಿದೇಶೀ ಮೂಲದ ಆ್ಯಪ್‌ಗಳು ಡೇಟಾ ಕಳ್ಳತನ ಮಾಡುವುದು, ಬಳಕೆದಾರರ ಮಾಹಿತಿ ಮಾರಿ ದುಡ್ಡು ಮಾಡುವುದು, ವ್ಯಕ್ತಿಯ ಖಾಸಗಿತನಕ್ಕೆ ಧಕ್ಕೆ ತರುವುದೇ ಮುಂತಾದ ಆರೋಪಗಳ ಮಧ್ಯೆ, ಸ್ವದೇಶೀ ಆ್ಯಪ್ ‘ಕೂ’ ವೇದಿಕೆಗೆ ಕಳೆದೆರಡು ದಿನಗಳಿಂದ ಭರ್ಜರಿ ವಲಸೆ ಶುರುವಾಗಿದೆ.

ಟ್ವಿಟರ್ ಭಾರತದ ವಿರುದ್ಧದ ಪೋಸ್ಟ್‌ಗಳಿಗೆ ಹೆಚ್ಚು ಒತ್ತು ನೀಡುತ್ತಿದೆ ಎಂಬ ಆರೋಪಗಳ ನಡುವೆ ಭಾರತೀಯ ‘ಕೂ’ ಆ್ಯಪ್‌ಗೆ ವಲಸೆ ಬರುತ್ತಿರುವುದರಿಂದಾಗಿ ಕಳೆದೆರಡು ದಿನಗಳಲ್ಲಿ ಸರ್ವರ್‌ಗೆ ಭಾರಿ ಒತ್ತಡ ಬಿದ್ದಿದೆ. ತಮ್ಮದು ಸಣ್ಣ ಸ್ಟಾರ್ಟಪ್ ಕಂಪನಿಯಾಗಿದ್ದು, ಈಗಷ್ಟೇ ಪ್ರಸಿದ್ಧಿಗೆ ಬರುತ್ತಿದೆ. ಈಗ್ಗೆ ಎರಡು ದಿನಗಳಿಂದ ದಿಢೀರ್ ಆಗಿ ಬಳಕೆದಾರರ ಸಂಖ್ಯೆ ಹೆಚ್ಚುತ್ತಿರುವುದರಿಂದ ಸರ್ವರ್ ಮೇಲೆ ಒತ್ತಡ ಬಿದ್ದಿದ್ದು ಹೌದು. ಇದಕ್ಕೆ ಬೇಕಾದ ಹಾರ್ಡ್‌ವೇರ್ ಸಹಿತ ಮೂಲಸೌಕರ್ಯ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಲಾಗುತ್ತಿದೆ ಎಂದಿದ್ದಾರೆ ಇದರ ಸಹ ಸಂಸ್ಥಾಪಕ ಹಾಗೂ ಸಿಇಒ ಅಪ್ರಮೇಯ ರಾಧಾಕೃಷ್ಣ.

‘ಕೂ’ಗೆ ಬನ್ನಿ ಎಂದು ಕೇಂದ್ರ ಸಚಿವ ಪೀಯೂಷ್ ಗೋಯಲ್ ಮಂಗಳವಾರವಷ್ಟೇ ಟ್ವೀಟ್ ಮಾಡಿ ಸೇರಿಕೊಂಡಿದ್ದಾರೆ. ನಟ ಅನುಪಮ್ ಖೇರ್, ರಾಜಕಾರಣಿ ಅಮಿತ್ ಮಾಳವೀಯ ಮುಂತಾದವರೂ ಇದರಲ್ಲಿದ್ದು, ನಟಿ ಕಂಗನಾ ರಾನೌತ್ ಕೂಡ ಇದನ್ನು ಬಳಸುವುದಾಗಿ ಬುಧವಾರ ಟ್ವೀಟ್ ಮಾಡಿದ್ದಾರೆ. ಪಿಐಬಿ, ಬಿಎಸ್ಎನ್ಎಲ್ ಮುಂತಾದ ಸರ್ಕಾರಿ ಸಂಸ್ಥೆಗಳು, ಪತ್ರಕರ್ತರು, ಪೊಲೀಸರು ಕೂಡ ಕೂ ಆ್ಯಪ್ ಬಳಸುತ್ತಿರುವುದು ಸಂತಸದ ಸಂಗತಿ ಎಂದಿದ್ದಾರೆ ಅಪ್ರಮೇಯ.

ಕರ್ನಾಟಕದಿಂದ ಮುಖ್ಯಮಂತ್ರಿ, ಸಚಿವರು, ಪೊಲೀಸರು ಕೂಡ ಈ ವೇದಿಕೆಯಲ್ಲಿದ್ದಾರೆ. ಇದರ ಜೊತೆಗೆ ತಮಿಳು, ತೆಲುಗು, ಹಿಂದಿ, ಇಂಗ್ಲಿಷ್ ಭಾಷೆಗಳಲ್ಲಿಯೂ ‘ಕೂ’ ಕಾರ್ಯಾಚರಿಸುತ್ತಿದ್ದು, ಮುಂದೆ ಮರಾಠಿ, ಬಾಂಗ್ಲಾ, ಮಲಯಾಳಂ, ಗುಜರಾತಿ, ಒಡಿಯಾ, ಪಂಜಾಬಿ, ಅಸ್ಸಾಮಿ ಭಾಷೆಗಳಲ್ಲಿಯೂ ಬರಲಿದೆ. ಕೆಲವು ಭಾಷೆಗಳ ಕೂ ವೇದಿಕೆಗಳು ಈಗಾಗಲೇ ಪ್ರಾಯೋಗಿಕ ಹಂತದಲ್ಲಿವೆ.

ಈ ಆ್ಯಪ್‌ನಲ್ಲಿ ಕೂಡ ಇತರ ಸಾಮಾಜಿಕ ಮಾಧ್ಯಮಗಳಂತೆಯೇ ಧ್ವನಿ, ಪಠ್ಯ, ವಿಡಿಯೊ ಮೂಲಕ ಜನರು ಅಭಿಪ್ರಾಯ ವ್ಯಕ್ತಪಡಿಸಬಹುದು. ಸದ್ಯಕ್ಕೆ ಫೋನ್ ನಂಬರ್ ಮುಖಾಂತರ ಕೂ ಆ್ಯಪ್‌ನಲ್ಲಿ ನೋಂದಾಯಿಸಿಕೊಂಡು ಬಳಕೆ ಮಾಡಿಕೊಳ್ಳಬಹುದಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು