ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊಬೈಲ್‌ನಲ್ಲಿ ಹರಿದಾಡುವ ಸುಳ್ಳು ಸುದ್ದಿಗಳ ನಿಯಂತ್ರಣ ಅಷ್ಟು ಸುಲಭವೇ?

Last Updated 10 ಜುಲೈ 2018, 11:22 IST
ಅಕ್ಷರ ಗಾತ್ರ

ಸ್ಮಾರ್ಟ್‌ಫೋನ್‌ಗಳು ಈಗ ಎಲ್ಲರ ಕೈಗೆಟುಕುತ್ತಿವೆ. ಇಂಟರ್ನೆಟ್‌ ಸೇವೆ ಗ್ರಾಮೀಣ ಪ್ರದೇಶಗಳಲ್ಲೂ ಸಿಗುತ್ತಿದೆ. ಈ ಬೆಳವಣಿಗೆಯಿಂದ ಆನ್‌ಲೈನ್ ವಿಹಾರಿಗಳ ಸಂಖ್ಯೆ ಸಹಜವಾಗಿಯೇ ಹೆಚ್ಚಾಗಿದೆ. ಅಂಗೈಅಗಲದ ಮೊಬೈಲ್‌ಗೆ ವಿಶ್ವವನ್ನು ಇಳಿಸಿಕೊಟ್ಟ ಇಂಟರ್ನೆಟ್‌ ಭಾರೀ ವೇಗದಲ್ಲಿ ಮಾಹಿತಿ ಹರಡುವ ಸಾಧನವೂ ಆಯಿತು. ಆದರೆ ಮೊಬೈಲ್‌ನಿಂದ ಮೊಬೈಲ್‌ಗೆಓಡುವ ಮಾಹಿತಿಯಷ್ಟು ಪೂರ್ವಪರ ಯೋಚಿಸದೆ ನಂಬುವವರ ಸಂಖ್ಯೆಯೂ ವೃದ್ಧಿಸಿದೆ. ಸುಳ್ಳು–ಸತ್ಯದ ನಡುವಣ ಗೆರೆಯನ್ನು ಕಂಡುಕೊಳ್ಳುವ ವ್ಯವಧಾನವನ್ನೂ ಬಹುತೇಕರು ಕಳೆದುಕೊಂಡಿದ್ದಾರೆ. ಹೀಗಾಗಿಅಸಂಖ್ಯತಪ್ಪು ಮಾಹಿತಿಯನ್ನು ಅಂಕೆಯಿಲ್ಲದೆ ಸಾಮಾಜಿಕ ಮಾಧ್ಯಮಗಳಲ್ಲಿ ಓಡಾಡುತ್ತಿದೆ. ಇಲ್ಲಿ ಹರಿದಾಡುವ ಸುಳ್ಳುಸುದ್ದಿ, ವದಂತಿಗಳು ಹಲ್ಲೆ ಮತ್ತು ಹತ್ಯೆಯಂತಹ ಹೀನಕೃತ್ಯಗಳಿಗೂ ಕಾರಣವಾಗುತ್ತಿವೆ.

‘ಸುಳ್ಳುಸುದ್ದಿ ಎಂದರೆ ಏನು ಎಂಬುದನ್ನು ವ್ಯಾಖ್ಯಾನಿಸಲು ಮತ್ತು ಅದನ್ನು ನಿಯಂತ್ರಣ ಮಾಡುವ ಕಾನೂನು ರೂಪಿಸಲು ಜಗತ್ತಿನ ಹಲವಾರು ರಾಷ್ಟ್ರಗಳು ಹರಸಾಹಸ ಪಡುತ್ತಿವೆ. ಈ ಕೆಲಸದಲ್ಲಿ ಯಾವೊಂದು ರಾಷ್ಟ್ರವು ಈವರೆಗೂ ಯಶಸ್ಸನ್ನು ಗಳಿಸಿಲ್ಲ. ಸಮಾಜದ ಸ್ವಾಸ್ಥ್ಯಕ್ಕೆ ಮಾರಕವಾದ ಸುಳ್ಳಿನ ಸಂದೇಶಗಳನ್ನು ನಿಯಂತ್ರಿಸುವಂತೆ ಸಾಮಾಜಿಕ ಮಾಧ್ಯಮಗಳನ್ನು ನಿರ್ವಹಿಸುವ ಕಂಪನಿಗಳಿಗೆ ಕೇಂದ್ರ ಸರ್ಕಾರದ ಎಲೆಕ್ಟ್ರಾನಿಕ್ಸ್‌ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಜುಲೈ 2 ರಂದು ಸೂಚನೆಯೊಂದನ್ನು ನೀಡಿದೆ. ಆದರೆ, ಈ ಸೂಚನೆ ಜಾರಿಗೆ ಕಂಪನಿಗಳು ರೂಪಿಸುವ ಕ್ರಮಗಳಿಗೂ ಕಾನೂನಿನ ತೊಡಕುಗಳಿವೆ’ ಎಂದು ದೆಹಲಿಯಿಂದ ಪ್ರಕಟವಾಗುವ ಲೈವ್‌ಮಿಂಟ್ ಪತ್ರಿಕೆಯ ಲೇಖನದಲ್ಲಿಸೋಹಿನಿ ಚಟರ್ಜಿ ಮತ್ತು ಅಕ್ಷತಾ ಅಗರ್‌ವಾಲ್ ಉಲ್ಲೇಖಿಸಿದ್ದಾರೆ.

ಉದಾ: ವಾಟ್ಸ್ಯಾಪ್‌ ಬಳಸುತ್ತಿರುವ ದೇಶದ 20 ಕೋಟಿ ಜನರು ನಡೆಸುವ ತಾಂತ್ರಿಕ ಸಂವಹನದ ಮೇಲೆ ಕಂಪನಿ ನಿಗಾ ಇಡಲು ಸಾಧ್ಯವೆ?, ಕ್ಷಣ ಕ್ಷಣಕ್ಕೂ ಸೃಷ್ಟಿಯಾಗುವ ಲಕ್ಷಾಂತರ ಸಂದೇಶಗಳನ್ನು ಪರಿಶೀಲಿಸಲು ಆಗುತ್ತದೆಯೇ?. ಹಾಗೊಂದು ವೇಳೆ ಸಂದೇಶಗಳ ಮೇಲೆ ಕಣ್ಣಾಡಿಸುವ ಕೆಲಸ ಮಾಡಿದ್ದೆ ಆದಲ್ಲಿ, ಸಂವಿಧಾನದ19(1)(ಎ) ವಿಧಿಯಲ್ಲಿ ಉಲ್ಲೇಖಿಸಿರುವ ಮುಕ್ತ ಅಭಿವ್ಯಕ್ತಿಯ ಮೇಲೆ ನಿಯಂತ್ರಣ ಸಾಧಿಸಿದಂತೆ ಆಗುತ್ತದೆ. ಸರ್ಕಾರವೆ ಮುಂದೆ ನಿಂತು ಮೂಲಭೂತ ಹಕ್ಕುಗಳಲ್ಲಿ ಉಲ್ಲೇಖಿಸಿರುವ ಖಾಸಗಿತನದ ಹಕ್ಕಿಗೆ ಧಕ್ಕೆಯಾಗಲು ನೆರವಾದಂತೆ ಆಗುತ್ತದೆಯಲ್ಲ ಎಂಬ ಪ್ರಶ್ನೆ ಎದ್ದಿದೆ.

ಸುಳ್ಳುಸುದ್ದಿಗಳ ನಿಯಂತ್ರಣಕ್ಕೆ ಕಾನೂನು ತರುವುದಾದರೆ, ಸತ್ಯದಸುದ್ದಿ ಮತ್ತು ಸುಳ್ಳುಸುದ್ದಿ ಎಂದು ವರ್ಗೀಕರಣ ಮಾಡುವ ಮಾನದಂಡಗಳನ್ನು ರೂಪಿಸುವುದು ಸುಲಭದ ಕೆಲಸವಲ್ಲ. ಮಾಧ್ಯಮರಂಗದ ಸುದ್ದಿಯು ಮಾಹಿತಿ ಮತ್ತು ಅಭಿಪ್ರಾಯಗಳನ್ನು ಒಳಗೊಂಡಿರುತ್ತದೆ. ಅದರಲ್ಲಿನ ಮಾಹಿತಿಯಿಂದ ಸತ್ಯಾಂಶವನ್ನು ಸ್ಪಷ್ಟವಾಗಿ ಪ್ರತ್ಯೇಖಿಸಲು ಆಗದು. ಇಲ್ಲಿ ಕಲೆಹಾಕಿದ ಮಾಹಿತಿಯನ್ನು ಸುಳ್ಳು ಎಂದು ಪ್ರತಿಪಾದಿಸಿ ಸುದ್ದಿಗಾರರನ್ನೆ ಬಲಿಪಶು ಮಾಡುವ ಸಂಭವವೂ ಇರುತ್ತದೆ.

ವದಂತಿಗಳು ಕ್ಷಣಾರ್ಧದಲ್ಲಿ ಸಹಸ್ರಾರು ಜನರನ್ನು ತಲುಪಲು ವಾಟ್ಸ್ಯಾಪ್‌ ಸುಲಭದ ಸಾಧನವಾಗಿದೆ. ಕೇಂದ್ರ ಸರ್ಕಾರದ ಸೂಚನೆಯ ನಂತರ ಎಚ್ಚೆತ್ತುಕೊಂಡಿರುವವಾಟ್ಸ್ಯಾಪ್ ಇದೀಗಫಾವರ್ಡ್‌ ಆದ ಸಂದೇಶಗಳು ಮತ್ತು ಸ್ವತಃ ಬರೆದ ಸಂದೇಶಗಳನ್ನು ಗುರುತಿಸುವ ಆಯ್ಕೆಯನ್ನು ನೀಡಲು ಮುಂದಾಗಿದೆ. ‘ನಿಮಗೆ ಬಂದ ಸಂದೇಶಗಳನ್ನು ಮತ್ತೊಬ್ಬರಿಗೆ ರವಾನಿಸುವ ಮುನ್ನ ಅವುಗಳ ಸತ್ಯಾಸತ್ಯತೆಯ ಬಗ್ಗೆತುಸು ಯೋಚಿಸಿ’ ಎಂದು ಕಂಪನಿಜಾಹೀರಾತುಗಳನ್ನು ನೀಡಿ ಬಳಕೆದಾರರಲ್ಲಿ ಅರಿವು ಮೂಡಿಸಲು ಯತ್ನಿಸುತ್ತಿದೆ.

ಸುಳ್ಳುಸುದ್ದಿಗಳನ್ನು ಎದುರಿಸಲು ಮೂರು ದಾರಿಗಳನ್ನು ಕಂಡುಕೊಳ್ಳಬಹುದು ಎಂದು ಮಾಧ್ಯಮತಜ್ಞರು ಅಭಿಪ್ರಾಯಪಡುತ್ತಾರೆ. ಅದರಲ್ಲಿ ಮೊದಲನೆಯದು: ಜನರಲ್ಲಿ ಅರಿವು ಮೂಡಿಸುವುದು. ಇದರಿಂದ ಮಾಧ್ಯಮಗಳಲ್ಲಿ ತಮ್ಮ ಕಣ್ಣಿಗೆ ಬಿದ್ದ ಮಾಹಿತಿಯ ನಿಜಾಂಶವೇನು ಎಂಬುದನ್ನು ಅಂತರ್ಜಾಲದಲ್ಲಿ ಹುಡುಕಲು ಬಳಕೆದಾರರು ಯತ್ನಿಸುತ್ತಾರೆ.ಡಿಜಿಟಲ್‌ ಮಾಧ್ಯಮದ ಮಿತಿಗಳನ್ನೂಅರಿತುಕೊಳ್ಳುತ್ತಾರೆ.

ಎರಡನೆಯದು: ಸ್ಮಾರ್ಟ್‌ ಸಾಧನಗಳ ಮೂಲಕ ಬರುವ ಸಂದೇಶಗಳನ್ನು ಸಂದೇಹಾತ್ಮಕವಾಗಿ ನೋಡುವ ಗುಣವನ್ನು ಬಳಕೆದಾರ ಬೆಳೆಸಿಕೊಳ್ಳಬೇಕು. ಸಾಧ್ಯವಾದರೆ ಆ ಸಂದೇಶ ಸೃಷ್ಟಿಸಿದ ಮೂಲವನ್ನು ತಿಳಿಯಲು ಪ್ರಯತ್ನಿಸಬೇಕು. ಈ ಗುಣವನ್ನು ಬಳಕೆದಾರರಲ್ಲಿ ಬೆಳೆಸಲು ಸಾರ್ವಜನಿಕ ಮತ್ತು ಖಾಸಗಿ ಸಂಘ–ಸಂಸ್ಥೆಗಳು ಅಭಿಯಾನ ಹಮ್ಮಿಕೊಳ್ಳಬೇಕು.ಕೊನೆಯದಾಗಿ: ಹರಿದಾಡುವ ಮಾಹಿತಿಯಿಂದ ವ್ಯಕ್ತಿಯ ಜೀವಕ್ಕೆ ಕುತ್ತು ಒದಗಿದರೆ ಅಥವಾ ದೇಶದ ಭದ್ರತೆಗೆ ಹಾನಿ ಉಂಟು ಮಾಡುವಂತಿದ್ದರೆ ಅದನ್ನು ನಿಯಂತ್ರಿಸಲು ಇರುವ ಕಾನೂನಿನ ಕ್ರಮಗಳನ್ನು ಆಡಳಿತ ವ್ಯವಸ್ಥೆ ಜರುಗಿಸಬಹುದಾಗಿದೆ. ಮಾನಹಾನಿ, ದೇಶದ್ರೋಹದಂತಹ ಕಟ್ಟಳೆಗಳಿಂದ ಪರಿಸ್ಥಿತಿ ಹದ್ದುಮೀರಿ ಹೋಗದಂತೆ ತಡೆಯಬಹುದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT