ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತ ಸರ್ಕಾರದ ವಿರುದ್ಧ 'ವಾಟ್ಸ್‌ಆ್ಯಪ್‌' ಪ್ರಕರಣ

Last Updated 26 ಮೇ 2021, 4:57 IST
ಅಕ್ಷರ ಗಾತ್ರ

ರಾಯಿಟರ್ಸ್‌: ಹೊಸ ಮಾಹಿತಿ ತಂತ್ರಜ್ಞಾನ ನಿಯಮಗಳು ಜಾರಿಯಾಗುವುದನ್ನು ನಿರ್ಬಂಧಿಸುವಂತೆ ಕೋರಿ 'ವಾಟ್ಸ್‌ಆ್ಯಪ್‌', ಭಾರತ ಸರ್ಕಾರದ ವಿರುದ್ಧ ದೆಹಲಿಯಲ್ಲಿ ದೂರು ದಾಖಲಿಸಿದೆ. ಬುಧವಾರದಿಂದ ಡಿಜಿಟಲ್‌ ನೀತಿ ಸಂಹಿತೆಯ ನಿಯಮಗಳು ಅನುಷ್ಠಾನವಾಗುತ್ತಿದ್ದು, ಇದರಿಂದಾಗಿ ಫೇಸ್‌ಬುಕ್‌ನ ಭಾಗವಾಗಿರುವ ವಾಟ್ಸ್‌ಆ್ಯಪ್‌ ಖಾಸಗಿತನ ಸುರಕ್ಷತೆಯ ಅಂಶಗಳನ್ನು ಕಳೆದುಕೊಳ್ಳುವ ಸಾಧ್ಯತೆ ಇರುವುದಾಗಿ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.

ಮಾಹಿತಿ ತಂತ್ರಜ್ಞಾನ ಸಚಿವಾಲಯವು ಪ್ರಕಟಿಸಿರುವ ಹೊಸ ನಿಯಮಗಳಲ್ಲಿ ಭಾರತದ ಸಂವಿಧಾನ ನೀಡಿರುವ ಖಾಸಗಿತನದ ಹಕ್ಕು ಉಲ್ಲಂಘನೆಯಾಗಿದೆ ಎಂದು ದೆಹಲಿ ಹೈ ಕೋರ್ಟ್‌ಗೆ ವಾಟ್ಸ್‌ಆ್ಯಪ್‌ ದೂರಿನಲ್ಲಿ ಉಲ್ಲೇಖಿಸಿರುವುದಾಗಿ ವರದಿಯಾಗಿದೆ.

ಸರ್ಕಾರದ ಹೊಸ ಮಾಹಿತಿ ತಂತ್ರಜ್ಞಾನ ನಿಯಮಗಳ ಪ್ರಕಾರ, ಕಂಟೆಟ್‌ಗಳು ಮತ್ತು ಸುಳ್ಳು ಸುದ್ದಿಗಳ ಮೂಲಗಳನ್ನು ಪತ್ತೆ ಮಾಡುವಾಗ ಸಾಮಾಜಿಕ ಮಾಧ್ಯಮ ಕಂಪನಿಗಳು 'ಮೊದಲಿಗೆ ಮಾಹಿತಿ ಸೃಜಿಸಿದವರನ್ನು ಗುರುತಿಸಿ' ಅವರ ಮಾಹಿತಿಯನ್ನು ತನಿಖಾ ಸಂಸ್ಥೆಗಳೊಂದಿಗೆ ಹಂಚಿಕೊಳ್ಳಬೇಕಾಗುತ್ತದೆ.

ಆದರೆ, ವಾಟ್ಸ್‌ಆ್ಯಪ್‌ ನಿರ್ದಿಷ್ಟ ವ್ಯಕ್ತಿಯ ವಿವರಗಳನ್ನು ಪತ್ತೆ ಮಾಡುವುದು ಸಾಧ್ಯವಿಲ್ಲ ಎಂದಿದೆ. ವಾಟ್ಸ್‌ಆ್ಯಪ್‌ ಸಂದೇಶಗಳು ಎಂಡ್‌–ಟು–ಎಂಡ್‌ ಎನ್‌ಕ್ರಿಪ್ಟೆಡ್‌ ತಂತ್ರಜ್ಞಾನವನ್ನು ಅಳವಡಿಸಿಕೊಂಡಿರುವುದರಿಂದ ಸ್ವತಃ ವಾಟ್ಸ್‌ಆ್ಯಪ್‌ ಕಂಪನಿಯಾಗಲಿ ಅಥವಾ ಮಧ್ಯದಲ್ಲಿ ಇನ್ನಾವುದೇ ವ್ಯಕ್ತಿಯಾಗಲಿ ಬೇರೆಯವರ ಸಂದೇಶಗಳನ್ನು ಕಸಿಯಲು (ಕದ್ದು ಓದಲು) ಸಾಧ್ಯವಾಗುವುದಿಲ್ಲ. ಕಂಪನಿಯು ಸರ್ಕಾರದ ನಿಯಮಗಳನ್ನು ಅನುಸರಿಸಬೇಕಾದರೆ, ಸಂದೇಶ ಸೃಜಿಸಿದವರು ಮತ್ತು ಸಂದೇಶ ಪಡೆಯುವವರು ಎರಡೂ ಕಡೆಯ ಎನ್‌ಕ್ರಿಪ್ಷನ್‌ (ಗೂಢ ಲಿಪೀಕರಣ) ತೊರೆದು ಹಾಕಬೇಕಾಗುತ್ತದೆ.

ಭಾರತದಲ್ಲಿ ವಾಟ್ಸ್‌ಆ್ಯಪ್‌ ಸುಮಾರು 40 ಕೋಟಿ ಬಳಕೆದಾರರನ್ನು ಹೊಂದಿದೆ. ಕೋರ್ಟ್‌ನಲ್ಲಿ ವಾಟ್ಸ್‌ಆ್ಯಪ್‌, ಪ್ರಕರಣ ದಾಖಲಿಸಿರುವ ಬಗ್ಗೆಯಾಗಲಿ ಅಥವಾ ಕೋರ್ಟ್‌ ದೂರು ಪರಿಶೀಲಿಸುವುದರ ಬಗ್ಗೆಯಾಗಲಿ ಖಚಿತ ಪಡಿಸಲು ಆಗಿಲ್ಲ ಎಂದು ರಾಯಿಟರ್ಸ್‌ ವರದಿಯಲ್ಲಿ ತಿಳಿಸಿದೆ.

ಈ ಕುರಿತು ವಾಟ್ಸ್‌ಆ್ಯಪ್‌ ವಕ್ತಾರರು ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ.

ವಾಟ್ಸ್‌ಆ್ಯಪ್‌ನ ಈ ಪ್ರಕರಣದಿಂದಾಗಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಮತ್ತು ತಂತ್ರಜ್ಞಾನ ಸಂಸ್ಥೆಗಳಾದ ಫೇಸ್‌ಬುಕ್‌, ಗೂಗಲ್‌ನ ಆಲ್ಫಾಬೆಟ್‌ ಹಾಗೂ ಟ್ವಿಟರ್‌ ಜೊತೆಗಿನ ತಿಕ್ಕಾಟ ಮತ್ತಷ್ಟು ಹೆಚ್ಚಿದಂತಾಗಿದೆ. ದೇಶದ ಪ್ರಮುಖ ಪಕ್ಷದ ವಕ್ತಾರರ ಖಾತೆಯಿಂದ ತಿದ್ದುಪಡಿ ಮಾಡಿದ ಕಂಟೆಂಟ್‌ಗಳನ್ನು ಪ್ರಕಟಿಸಲಾಗಿದೆ ಎಂದು ಮೈಕ್ರೊ ಬ್ಲಾಗಿಂಗ್‌ ಸೇವೆ ನೀಡುತ್ತಿರುವ ಟ್ವಿಟರ್‌ ಇತ್ತೀಚೆಗೆ ಗೊತ್ತು ಪಡಿಸಿತ್ತು. 'ನಕಲಿ ಟೂಲ್‌ಕಿಟ್‌' ಕುರಿತು ರಾಜಕೀಯ ಪಕ್ಷಗಳ ನಡುವೆ ಚರ್ಚೆ ಕಾವೇರಿತ್ತು ಹಾಗೂ ಅದರ ಬೆನ್ನಲ್ಲೇ ಪೊಲೀಸರು ಟ್ವಿಟರ್‌ ಕಚೇರಿಗೆ ಭೇಟಿ ನೀಡಿ ವಿಚಾರಣೆಗೆ ಮುಂದಾಗಿದ್ದರು.

ಕೋವಿಡ್‌–19 ಸಂಬಂಧಿಸಿದಂತೆ ತಪ್ಪಾದ ಮಾಹಿತಿಗಳನ್ನು ಹಂಚುತ್ತಿರುವುದನ್ನು ತೆಗೆದು ಹಾಕುವಂತೆ ಸರ್ಕಾರವು ಸಾಮಾಜಿಕ ಮಾಧ್ಯಮ ಕಂಪನಿಗಳಿಗೆ ಸೂಚಿಸಿತ್ತು. ಅದರೊಂದಿಗೆ ಕೋವಿಡ್‌ ಸಾಂಕ್ರಾಮಿಕ ಪರಿಸ್ಥಿತಿಯನ್ನು ಸರ್ಕಾರ ನಿಭಾಯಿಸುತ್ತಿರುವ ಬಗ್ಗೆ ಮತ್ತು ಸಾವಿರಾರು ಜನರು ಸಾವಿಗೀಡಾಗುತ್ತಿರುವ ಕುರಿತು ಟೀಕಿಸಲಾದ ಪೋಸ್ಟ್‌ಗಳನ್ನೂ ಸಹ ತೆಗೆಯುವಂತೆ ಸರ್ಕಾರ ಒತ್ತಡ ಹಾಕಿತ್ತು.

ಖಾಸಗಿತನದ ಸುರಕ್ಷತೆಯನ್ನು ಎತ್ತಿಹಿಡಿದು ಪುಟ್ಟಸ್ವಾಮಿ ಪ್ರಕರಣದಲ್ಲಿ 2017ರಲ್ಲಿ ಭಾರತದ ಸುಪ್ರೀಂ ಕೋರ್ಟ್‌ ನೀಡಿದ್ದ ಆದೇಶವನ್ನು ವಾಟ್ಸ್‌ಆ್ಯಪ್‌ ದೂರಿನಲ್ಲಿ ಪ್ರಸ್ತಾಪಿಸಿದೆ ಎಂದು ವರದಿಯಾಗಿದೆ.

ಸಾಮಾಜಿಕ ಮಾಧ್ಯಮ ವೇದಿಕೆಗಳ ವ್ಯಾಪಕ ದುರ್ಬಳಕೆಯ ದೂರುಗಳ ಕಾರಣಕ್ಕೆ ಸರ್ಕಾರವು ‘ಮಾಹಿತಿ ತಂತ್ರಜ್ಞಾನ (ಮಧ್ಯಸ್ಥ ಸಂಸ್ಥೆಗಳಿಗೆ ಮಾರ್ಗಸೂಚಿ ಮತ್ತು ಡಿಜಿಟಲ್‌ ನೀತಿ ಸಂಹಿತೆ) ನಿಯಮಗಳು 2021’ ಅನ್ನು 2021ರ ಫೆಬ್ರುವರಿಯಲ್ಲಿ ಬಿಡುಗಡೆ ಮಾಡಿತ್ತು. ಆ ನಿಯಮಗಳನ್ನು ಪಾಲಿಸಲು ಮೂರು ತಿಂಗಳ ಗಡುವು ನೀಡಲಾಗಿತ್ತು.

ಹೊಸ ಮಾಹಿತಿ ತಂತ್ರಜ್ಞಾನ ನಿಯಮಗಳ ಪ್ರಕಾರ ಬೃಹತ್ ಸಾಮಾಜಿಕ ಮಾಧ್ಯಮ ಮಧ್ಯಸ್ಥ ಸಂಸ್ಥೆ ಅನುಸರಿಸಬೇಕಾದ ಕ್ರಮಗಳು;

* ಹೆಚ್ಚು ಬಳಕೆದಾರರು ಇರುವ ಸಾಮಾಜಿಕ ಮಾಧ್ಯಮಗಳು ದೂರ ನಿರ್ವಹಣಾ ಘಟಕವನ್ನು ಸ್ಥಾಪಿಸಬೇಕು.

*ಕಂಟೆಂಟ್‌ಗಳನ್ನು (ಚಿತ್ರ, ಫೋಟೊ, ವಿಡಿಯೊ ಸೇರಿದಂತೆ ಯಾವುದೇ ಕಾರ್ಯಕ್ರಮ) ತೆರವು ಮಾಡಬೇಕು ಎಂದು ಸರ್ಕಾರವಾಗಲೀ, ನ್ಯಾಯಾಲಯವಾಗಲೀ ಆದೇಶ ನೀಡಿದ 24 ಗಂಟೆಗಳ ಒಳಗೆ ಅದನ್ನು ಅನುಷ್ಠಾನಕ್ಕೆ ತರಬೇಕು

*ದೂರು ಮತ್ತು ಪರಿಹಾರಗಳ ಬಗ್ಗೆ ಪ್ರತಿ ತಿಂಗಳೂ ವರದಿ ಪ್ರಕಟಿಸಬೇಕು

*ಕಂಟೆಂಟ್‌ಗಳು ಮತ್ತು ಸುಳ್ಳುಸುದ್ದಿಗಳ ಮೂಲ ಯಾರು ಎಂಬುದನ್ನು ಪತ್ತೆಮಾಡಬೇಕು. ತನಿಖೆಯ ಕಾರಣಕ್ಕೆ ಈ ಮಾಹಿತಿಯನ್ನು ತನಿಖಾ ಸಂಸ್ಥೆಗಳ ಜತೆ ಹಂಚಿಕೊಳ್ಳಬೇಕು

*ರಾಷ್ಟ್ರೀಯ ಏಕತೆ, ಸಾರ್ವಭೌಮತೆ, ರಾಷ್ಟ್ರೀಯ ಭದ್ರತೆ, ವಿದೇಶಿ ಸಂಬಂಧ, ಕಾನೂನು ಸುವ್ಯವಸ್ಥೆ ಪಾಲನೆಗೆ ಧಕ್ಕೆ ತರುವಂತಹ ಮತ್ತು ಮಹಿಳೆಯರ ಗೌರವಕ್ಕೆ ಧಕ್ಕೆ ತರುವಂತಹ ಕಂಟೆಂಟ್‌ಗಳಿಗೆ ಸಂಬಂಧಿಸಿದಂತೆ ಈ ನಿಯಮ ಅನ್ವಯ

*ದೂರು, ತನಿಖೆಗೆ ಸಂಬಂಧಿಸಿದಂತೆ ಕಂಟೆಂಟ್‌ನ ಮೂಲಕರ್ತೃವಿಗೆ ಮಾಹಿತಿ ನೀಡುವ ಅವಶ್ಯಕತೆ ಇಲ್ಲ

*ಬಳಕೆದಾರರು ತಮ್ಮನ್ನು ತಾವು ದೃಢೀಕರಿಸಿಕೊಳ್ಳಲು ವ್ಯವಸ್ಥೆ ಇರಬೇಕು; ದೃಢೀಕರಣ ಆಗಿದೆ ಎಂಬುದು ಬಳಕೆದಾರರಿಗೆ ಸ್ಪಷ್ಟವಾಗಿ ಅರಿವಾಗುವ ವ್ಯವಸ್ಥೆ ಇರಬೇಕು

*ಸಾಮಾಜಿಕ ಜಾಲತಾಣದ ಖಾತೆಯಿಂದ ಯಾವುದೇ ಕಂಟೆಂಟ್‌ ಅನ್ನು ಸಂಸ್ಥೆಯು ಅಳಿಸಿ ಹಾಕುವುದಕ್ಕೆ ಮುಂಚೆ, ಬಳಕೆದಾರರಿಗೆ ಆ ಬಗ್ಗೆ ಮಾಹಿತಿ ನೀಡಬೇಕು; ಅಳಿಸಿ ಹಾಕಲು ಕಾರಣವೇನು ಎಂಬ ವಿವರಣೆಯನ್ನೂ ನೀಡಬೇಕು. ಮಧ್ಯಸ್ಥ ಸಂಸ್ಥೆಯ ಕ್ರಮವನ್ನು ಪ‍್ರಶ್ನಿಸಲು ಬಳಕೆದಾರರಿಗೆ ನ್ಯಾಯಬದ್ಧ ಅವಕಾಶ ಮತ್ತು ಸಮಯವನ್ನೂ ನೀಡಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT