ಭಾನುವಾರ, 27 ಜುಲೈ 2025
×
ADVERTISEMENT
ADVERTISEMENT

Technology | ಸ್ಮಾರ್ಟ್ ಆಗುತ್ತಿದೆ ಜೀವನ

Published : 18 ಜೂನ್ 2025, 0:30 IST
Last Updated : 18 ಜೂನ್ 2025, 0:30 IST
ಫಾಲೋ ಮಾಡಿ
0
Technology | ಸ್ಮಾರ್ಟ್ ಆಗುತ್ತಿದೆ ಜೀವನ

ಈಗೊಂದು 10 ವರ್ಷಗಳ ಸಾಮಾನ್ಯ ಮಧ್ಯಮ ವರ್ಗದ ಮನೆಯಲ್ಲಿ ಮನೆಯಲ್ಲಿ ನೆಲ ಒರೆಸುವುದಕ್ಕೆಂದು ರೋಬೊ ವ್ಯಾಕ್ಯೂಮ್ ಕ್ಲೀನರ್‌ಗಳಿವೆ ಎಂದರೆ ಜನರು ಅದನ್ನು ಹಾಸ್ಯ ಎಂದೇ ತಿಳಿಯುತ್ತಿದ್ದರು. ಅದೊಂದು ಐಷಾರಾಮಿ ಮತ್ತು ಲಕ್ಷಾಂತರ ಬೆಲೆಯ ವಸ್ತುವಾಗಿತ್ತು. ಅಲೆಕ್ಸಾ ಮತ್ತು ಗೂಗಲ್ ಹೋಮ್‌ಗಳೆಲ್ಲ ಆಗ ಭಾರಿ ಆಕರ್ಷಣೀಯ ಸಂಗತಿಯಾಗಿತ್ತು. ಆದರೆ, ಈಗ 10 ವರ್ಷಗಳ ನಂತರ ಗಮನಿಸಿದರೆ, ಮನೆಯಲ್ಲಿ ನಾವು ನಮಗೇ ಅರಿವಿಗೆ ಬರದಂತೆ ತಂತ್ರಜ್ಞಾನವನ್ನು ಅಳವಡಿಸಿಕೊಂಡುಬಿಟ್ಟಿದ್ದೇವೆ. ನಗರದ ಮನೆಗಳಲ್ಲಿ ಈಗ ಹಲವು ತಂತ್ರಜ್ಞಾನ ಸಾಧನಗಳು ಅತ್ಯಂತ ಸಾಮಾನ್ಯ ಎಂಬಂತಾಗಿವೆ.

ADVERTISEMENT
ADVERTISEMENT

ರೋಬೋಟಿಕ್ ವ್ಯಾಕ್ಯೂಮ್ ಕ್ಲೀನರುಗಳು:


ಇವು ಈ ಕಾಲದ ಅಗತ್ಯವೆಂಬಂತೆ ಬದಲಾಗಿವೆ. ಮನೆಕೆಲಸದವರನ್ನು ಅವಲಂಬಿಸುವುದು ಬೇಡ ಮತ್ತು ನಮ್ಮ ಕೆಲಸವನ್ನು ನಾವೇ ನಿರ್ವಹಿಸುವುದು ಉತ್ತಮ ಎಂಬ ಧೋರಣೆ ಇರುವ ಈಗಿನ ಜನರ ಮನಃಸ್ಥಿತಿಗೆ ಇದು ಹೊಂದಿಕೆಯಾಗುತ್ತದೆ. ಕಳೆದ ನಾಲ್ಕಾರು ವರ್ಷಗಳಿಂದ ಮಾರುಕಟ್ಟೆಯಲ್ಲಿ ಹೆಚ್ಚು ಹೆಚ್ಚು ಕಾಣಿಸುತ್ತಿದ್ದರೂ, ಕಳೆದ ಎರಡು ವರ್ಷಗಳಿಂದ ಇವುಗಳ ಬಳಕೆಯಲ್ಲಿ ಏರಿಕೆಯಾಗುತ್ತಿವೆ. ಅದರಲ್ಲೂ ನಗರಪ್ರದೇಶಗಳ ಜನರು ಇದನ್ನು ಹೆಚ್ಚು ಹೆಚ್ಚಾಗಿ ಬಳಕೆ ಮಾಡುತ್ತಿದ್ದಾರೆ. ನೆಲದ ಮೇಲಿನ ಕಸಗುಡಿಸುವುದು ಮತ್ತು ನೆಲ ಒರೆಸುವುದರಲ್ಲಿ ಈ ಆಧುನಿಕ ರೋಬೊಗಳು ಕೆಲಸದವರಿಗಿಂತ ಪರಿಣಾಮಕಾರಿಯಾಗಿವೆ. ಇದರ ಲಿಡಾರ್ ಸೆನ್ಸರ್‌ಗಳು ಎಷ್ಟು ಪರಿಣಾಮಕಾರಿಯಾಗಿವೆ ಎಂದರೆ, ಕಸಗುಡಿಸುತ್ತಾ ಮೆಟ್ಟಿಲುಗಳಿಂದ ಕೆಳಕ್ಕೆ ಧುಮುಕುವುದಿಲ್ಲ. ಬದಲಿಗೆ, ಆಳವನ್ನು ಅಂದಾಜು ಮಾಡಿ ಮೆಟ್ಟಿಲುಗಳ ಅಂಚಿನವರೆಗಷ್ಟೇ ತಮ್ಮ ಕೆಲಸ ಮುಗಿಸಿ ವಾಪಸಾಗುತ್ತವೆ. ನೆಲ ಒರೆಸುವ ಬಟ್ಟೆಗಳನ್ನು ಸ್ವತಃ ಸ್ವಚ್ಛಗೊಳಿಸಿಕೊಳ್ಳುವ ಹಾಗೂ ಕಸವನ್ನು ಸ್ವತಃ ಡಸ್ಟ್‌ಬಿನ್‌ಗೆ ಹಾಕಿಕುವ ಈ ರೋಬೊಗಳು ಒಂದೆರಡು ವರ್ಷಕ್ಕೆ ಕೆಲಸದವರಿಗೆ ಕೊಡುವ ಹಣದಲ್ಲೇ ಕೈಗೆ ಬರುತ್ತವೆ!

ಸ್ಮಾರ್ಟ್‌ ಲಾಕ್‌ಗಳು:

ADVERTISEMENT

ಇವು ಮಾರುಕಟ್ಟೆಗೆ ಬಂದು ಬಹಳ ವರ್ಷಗಳಾದವು. ಆದರೆ, ಇದರಲ್ಲಿರುವ ಫೀಚರ್‌ಗಳು ಕಾಲಕಾಲಕ್ಕೆ ಅಪ್‌ಡೇಟ್‌ ಆಗುತ್ತಲೇ ಇವೆ. ಹೊಸದಾಗಿ ಕಟ್ಟುತ್ತಿರುವ ಮನೆಗಳಲ್ಲಿ ಇವು ಅತ್ಯಂತ ಸಾಮಾನ್ಯವೂ ಹೌದು. ನಗರಗಳ ಎಲ್ಲ ಹೊಸ ಮನೆಗಳಲ್ಲೂ ಮಾಮೂಲಿ ಕೀ ಹಾಕಿ ತೆರೆಯುವ ಲಾಕ್‌ಗಳ ಬದಲಿಗೆ ಸ್ಮಾರ್ಟ್‌ ಲಾಕ್‌ಗಳನ್ನೇ ಅಳವಡಿಸಲಾಗುತ್ತಿದೆ. ಮೊದಮೊದಲು ಪಿನ್ ಅಷ್ಟೇ ಇರುತ್ತಿದ್ದ ಸ್ಮಾರ್ಟ್ ಲಾಕ್‌ನಲ್ಲಿ ಈಗ ಆಕ್ಸೆಸ್ ಕಾರ್ಡ್ ಸೌಲಭ್ಯ, ಫಿಂಗರ್‌ಪ್ರಿಂಟ್‌ ಹಾಗೂ ಫೇಸ್‌ ಅನ್‌ಲಾಕ್‌ ಸೌಲಭ್ಯಗಳೆಲ್ಲ ಬಂದಿವೆ. ಇನ್ನೂ ಮುಂದೆ ಹೋಗಿ ಕೈಯಾಡಿಸಿದರೆ ತೆರೆಯುವ ಡೋರ್‌ ಲಾಕ್‌ಗಳೂ ಬಂದಿವೆ.

ಸ್ಮಾರ್ಟ್ ಮನರಂಜನೆ:

ಕಳೆದ 10 ವರ್ಷಗಳ ಹಿಂದೆ ‘ಒಟಿಟಿ’ ಎಂಬ ಪರಿಕಲ್ಪನೆ ಭಾರತದಲ್ಲಿ ಈ ಮಟ್ಟಕ್ಕೆ ವ್ಯಾಪಿಸಿರಲಿಲ್ಲ. ಮುಂದುವರಿದ ದೇಶಗಳೆಲ್ಲಲ್ಲ ಟಿ.ವಿ.ಯನ್ನು ನೋಡುವವರೇ ಕಡಿಮೆಯಾಗುತ್ತಿದ್ದಾರಂತೆ ಎಂಬ ಮಾತುಗಳು ಕೆಲವೇ ಕೆಲವರಲ್ಲಿ ಕೇಳಿಸುತ್ತಿತ್ತೇ ಹೊರತು, ಅಂದು ನೆಟ್‌ಫ್ಲಿಕ್ಸ್‌ ಹಾಗೂ ಅಮೆಜಾನ್ ಪ್ರೈಮ್ ವಿಡಿಯೊ ಸಾಮಾನ್ಯ ಜನರವರೆಗೆ ತಲುಪಿರಲಿಲ್ಲ. ಆದರೆ, ಈಗ ಸಾಮಾನ್ಯ ಟಿ.ವಿ.ಗಳೂ ಸ್ಮಾರ್ಟ್ ಆಗಿವೆ. ಅವೆಲ್ಲವುಗಳಲ್ಲೂ ಒಟಿಟಿ ಆ್ಯಪ್‌ಗಳು ಬಂದು ಕುಳಿತಿವೆ. ಜನರನ್ನೂ ಇವು ಸ್ಮಾರ್ಟ್ ಮಾಡಿವೆ. 2016ರಲ್ಲಿ ನೆಟ್‌ಫ್ಲಿಕ್ಸ್‌ ಮತ್ತು ಅಮೆಜಾನ್ ಪ್ರೈಮ್ ವಿಡಿಯೊಗಳೆರಡೂ ಭಾರತದಲ್ಲಿ ಬಿಡುಗಡೆಯಾದಾಗಿನಿಂದ ಸಾವಿರಗಟ್ಟಲೆ ಗಂಟೆಗಳ ಕಂಟೆಂಟ್ ಅನ್ನು ಭಾರತೀಯ ವೀಕ್ಷಕರಿಗೆಂದೇ ತಯಾರಿಸಿವೆ ಹಾಗೂ ತನ್ನೊಳಗೆ ಸೇರಿಸಿಕೊಂಡಿವೆ.

ವಾಯ್ಸ್ ಅಸಿಸ್ಟೆಂಟ್‌ಗಳು:

2018ರಲ್ಲಿ ಅಲೆಕ್ಸಾ ಎಂಬ ಒಂದು ಸಾಧನವನ್ನು ಅಮೆಜಾನ್ ಬಿಡುಗಡೆ ಮಾಡಿದೆ. ಅದು ನಾವು ಕೇಳಿದ ಪ್ರಶ್ನೆಗಳಿಗೆಲ್ಲ ಉತ್ತರಿಸುತ್ತದೆ ಎಂಬುದು ನಮಗೆಲ್ಲರಿಗೂ ಕುತೂಹಲವಾಗಿತ್ತು. ಆದರೆ, ಇಂದು ಇವು ಮನೆಮನೆಗಳಲ್ಲೂ ಬಂದು ಕೂತಿವೆ. ಅಷ್ಟೇ ಅಲ್ಲ, ಜನಕ್ಕೆ ಈ ಏಳೆಂಟು ವರ್ಷಗಳಲ್ಲಿ ಇವುಗಳಿಂದ ಬೇಸರವೂ ಬಂದಾಗಿದೆ. ಇವು ಈಗ ಮೂಲೆಗೆ ಸರಿದು ಜೆನ್ ಎಐ ವಾಯ್ಸ್‌ ಅಸಿಸ್ಟೆಂಟ್‌ಗಳು ಮೊಬೈಲ್‌ನಲ್ಲೇ ಸಿಗುತ್ತಿವೆ! ಈ ಎಂಟು ವರ್ಷಗಳಲ್ಲಿ ಒಂದು ತಂತ್ರಜ್ಞಾನದ ಉತ್ಪನ್ನವೊಂದು ಜನಪ್ರಿಯವಾಗಿ, ಮರೆಯೂ ಆಗುತ್ತಿವೆ!

ಸ್ಮಾರ್ಟ್‌ ಮನೆ:

‘ಇಂಟರ್‌ನೆಟ್‌ ಆಫ್‌ ದಿ ಥಿಂಗ್ಸ್’ ಎಂಬ ಪರಿಕಲ್ಪನೆ ಶುರುವಾಗಿ ಹಲವು ವರ್ಷಗಳೇ ಆದವು. ಆದರೆ, ಇವುಗಳಿಗೆ ಇನ್ನಷ್ಟು ಬಲಬರುತ್ತಿದೆ. ಸ್ಮಾರ್ಟ್‌ ಎಲ್‌ಇಡಿಗಳು ಈಗ ಸರ್ವೇಸಾಮಾನ್ಯವಾಗಿವೆ. ಜೊತೆಗೆ ಸ್ಮಾರ್ಟ್ ಅಲ್ಲದ ಸಾಧನಗಳನ್ನು ಸ್ಮಾರ್ಟ್ ಮಾಡುವುದಕ್ಕೆ ಸ್ಮಾರ್ಟ್ ಪ್ಲಗ್‌ಗಳು ಬಂದಿವೆ. ಅವುಗಳನ್ನು ಬಳಸಿಕೊಂಡು ವೈಫೈ ಮೂಲಕ ನಾವು ಎಲ್ಲೇ ಇದ್ದರೂ ಯಾವುದೇ ಸಾಧನವನ್ನಾದರೂ ಆನ್ ಅಥವಾ ಆಫ್ ಮಾಡಬಹುದು. ಸ್ಮಾರ್ಟ್ ಎಸಿಗಳು ಹಾಗೂ ಸ್ಮಾರ್ಟ್ ಗೀಸರ್‌ಗಳೆಲ್ಲ ಈಗ ಸರ್ವೇಸಾಮಾನ್ಯವಾಗಿವೆ.

ಸ್ಮಾರ್ಟ್‌ ವಾಚ್:

ಸ್ಮಾರ್ಟ್‌ವಾಚ್‌ ಎಂಬ ಪರಿಕಲ್ಪನೆ ಶುರುವಾಗಿದ್ದು, ತುಂಬಾ ಹಿಂದೆಯೇ ಆಗಿದ್ದರೂ, ಕಳೆದ ಆರೆಂಟು ವರ್ಷಗಳಿಂದ ಅವು ಹೆಚ್ಚು ಜನಪ್ರಿಯವಾದವು. ಜನರಲ್ಲಿ ಬೊಜ್ಜು ಹೆಚ್ಚಿದಂತೆಲ್ಲ ಸ್ಮಾರ್ಟ್‌ ವಾಚ್‌ಗಳ ಮಾರುಕಟ್ಟೆಯೂ ಹಿರಿದಾಗುತ್ತಾ ಬಂತು! ಒಂದು ಕಡೆ ಸಾಮಾನ್ಯ ಡಯಲ್ ಇರುವ ವಾಚ್‌ಗಳು ಮರೆಯಾಗುತ್ತಿದ್ದರೆ, ಇನ್ನೊಂದು ಕಡೆ ಈ ಸ್ಮಾರ್ಟ್‌ ವಾಚ್‌ಗಳು ಜನರ ಕೈಯಲ್ಲಿ ಕಾಣಿಸಿಕೊಳ್ಳುತ್ತಿವೆ. ಆರೋಗ್ಯದ ಬಗ್ಗೆ ಕೂಡ ಇವು ಹಲವು ಮಾಹಿತಿಗಳನ್ನು ನೀಡುತ್ತಿವೆ; ನಮ್ಮ ಆರೋಗ್ಯದ ಬಗ್ಗೆ ಕಾಳಜಿಯನ್ನು ವಹಿಸುತ್ತಿವೆ!

ಒಟ್ಟಿನಲ್ಲಿ ತಂತ್ರಜ್ಞಾನದ ಜೊತೆಜೊತೆಗೆ ನಮ್ಮ ಜೀವನಶೈಲಿ ಮತ್ತು ಗುಣಮಟ್ಟ – ಎರಡೂ ಬದಲಾವಣೆಗಳನ್ನು ಕಾಣುತ್ತಿರುವುದಂತೂ ನಿಜ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
Comments0