ಸೋಮವಾರ, ಮಾರ್ಚ್ 1, 2021
29 °C

ಆಸ್ಟ್ರೇಲಿಯಾದಲ್ಲಿ ಸರ್ಚ್‌ ಎಂಜಿನ್‌ ಸ್ಥಗಿತಗೊಳಿಸುವ ಬೆದರಿಕೆ ಹಾಕಿದ ಗೂಗಲ್‌!

ರಾಯಿಟರ್ಸ್‌ Updated:

ಅಕ್ಷರ ಗಾತ್ರ : | |

Prajavani

ಸಿಡ್ನಿ: ಆಸ್ಟ್ರೇಲಿಯಾದಲ್ಲಿ ಗೂಗಲ್‌ ತನ್ನ 'ಹುಡುಕು ತಾಣ' (ಸರ್ಚ್‌ ಎಂಜಿನ್‌) ನಿರ್ಬಂಧಿಸುವುದಾಗಿ ಶುಕ್ರವಾರ ಪ್ರಕಟಿಸಿದೆ. ಸುದ್ದಿ, ಲೇಖನ ಸೇರಿದಂತೆ ಇತರೆ ವಿಷಯಗಳನ್ನು ಬಳಸಿಕೊಳ್ಳಲು ಗೂಗಲ್‌ ಮಾಧ್ಯಮಗಳಿಗೆ ಹಣ ಪಾವತಿಸಬೇಕು ಎಂದು ಆಸ್ಟ್ರೇಲಿಯಾ ಸರ್ಕಾರ ಪ್ರಸ್ತಾಪಿಸಿದೆ.

ಗೂಗಲ್‌ನ ಬೆದರಿಕೆಯಿಂದಾಗಿ ನ್ಯೂಸ್‌ ಕಾರ್ಪ್‌ ನಂತಹ ಮಾಧ್ಯಮಗಳೊಂದಿಗೆ ಗುದ್ದಾಟ ಹೆಚ್ಚಿಸಿದೆ. ಸರ್ಕಾರ ಹೊಸ ನೀತಿಯನ್ನು ಅನುಷ್ಠಾನಗೊಳಿಸಿದರೆ, ಆಸ್ಟ್ರೇಲಿಯಾದ 1.9 ಕೋಟಿ ಬಳಕೆದಾರರಿಗೆ ಅಂತರ್ಜಾಲದಲ್ಲಿ ಹುಡುಕಾಟ ಹಾಗೂ ಯುಟ್ಯೂಬ್‌ ಬಳಕೆಯಲ್ಲಿ ಅಡಚಣೆ ಎದುರಾಗಲಿದೆ ಎಂದು ಗೂಗಲ್‌ ಹೇಳಿದೆ.

ಸ್ಥಳೀಯ ಮಾಧ್ಯಮಗಳು ಹಾಗೂ ಪ್ರಸಾರ ಸಂಸ್ಥೆಗಳು ಪ್ರಕಟಿಸುವ ವಿಷಯಗಳನ್ನು ಗೂಗಲ್‌ ತನ್ನ ಹುಡುಕಾಟದಲ್ಲಿ ತೋರಿಸಲು ಅಥವಾ ನ್ಯೂಸ್‌ ಫೀಡ್ಸ್‌ನಲ್ಲಿ ಬಳಕೆ ಮಾಡಲು, ಟೆಕ್‌ ಸಂಸ್ಥೆಗಳು ಮಾಧ್ಯಮಗಳಿಗೆ ಹಣ ಸಂದಾಯ ಮಾಡಬೇಕಾಗುತ್ತದೆ. ಇದಕ್ಕೆ ಸಂಬಂಧಿಸಿದ ಕಾನೂನಿಗೆ ಅನುಮೋದನೆ ನೀಡಲು ಆಸ್ಟ್ರೇಲಿಯಾ ಸರ್ಕಾರ ಮುಂದಾಗಿದೆ. ಟೆಕ್‌ ಸಂಸ್ಥೆಗಳು ಮಾಧ್ಯಮಗಳೊಂದಿಗೆ ಪಾವತಿ ಒಪ್ಪಂದ ಮಾಡೊಕೊಳ್ಳದಿದ್ದರೆ, ಸರ್ಕಾರ ನೇಮಿಸುವ ನಿರ್ಣಾಯಕರು ವಿಷಯಗಳ ಬಳಕೆಗೆ ಬೆಲೆ ನಿಗದಿ ಪಡಿಸಲಿದ್ದಾರೆ.

'ಈ ರೀತಿಯ ನೀತಿಯು ಕಾನೂನು ಆದರೆ, ಹಣಕಾಸು ಮತ್ತು ಕಾರ್ಯಾಚರಣೆ ನಿರ್ವಹಣೆಗೆ ಅಸಾಧ್ಯವಾಗಲಿದೆ. ಇದರಿಂದಾಗಿ ನಮಗೆ ಬೇರೆ ಆಯ್ಕೆ ಇಲ್ಲದೆ, ಆಸ್ಟ್ರೇಲಿಯಾದಲ್ಲಿ ಗೂಗಲ್‌ ಸರ್ಚ್‌ ನಿರ್ಬಂಧಿಸುವ ದಾರಿಯೊಂದೆ ಉಳಿಯುತ್ತದೆ' ಎಂದು ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್‌ನ ಎಂಡಿ ಮೆಲೆನಿಯ ಸಿಲ್ವ ಸಂಸದೀಯ ಸಮಿತಿಗೆ ತಿಳಿಸಿದ್ದಾರೆ. ಆದರೆ, ಯುಟ್ಯೂಬ್‌ ಕಾರ್ಯಾಚರಣೆಗೆ ಸಂಬಂಧಿಸಿದಂತೆ ಯಾವುದೇ ಹೇಳಿಕೆ ನೀಡಿಲ್ಲ.

ಗೂಗಲ್‌ ಹೇಳಿಕೆಗೆ ಪ್ರತಿಕ್ರಿಯಿಸಿರುವ ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್‌ ಮಾರಿಸನ್‌, 'ಆಸ್ಟ್ರೇಲಿಯಾದಲ್ಲಿ ನೀವು ಮಾಡಬಹುದಾದ ಕಾರ್ಯಾಚರಣೆಗೆ ಸಂಬಂಧಿಸಿದಂತೆ ರಾಷ್ಟ್ರವು ನಿಯಮ ರೂಪಿಸುತ್ತದೆ. ಅದರೊಂದಿಗೆ ದೇಶದಲ್ಲಿ ಕಾರ್ಯಾಚರಿಸಲು ಬಯಸುವವರಿಗೆ ಸ್ವಾಗತವಿದೆ. ಆದರೆ, ನಾವು ಬೆದರಿಕೆಗಳಿಗೆ ಪ್ರತಿಕ್ರಿಯಿಸುವುದಿಲ್ಲ' ಎಂದಿದ್ದಾರೆ.

ಜಾಗತಿಕವಾಗಿ ಗೂಗಲ್‌ಗೆ 'ಸರ್ಚ್' ಮೂಲಕ ಸಿಗುವ ಜಾಹಿರಾತುಗಳಿಂದಲೇ ಆದಾಯ ಮತ್ತು ಲಾಭ ಗಳಿಕೆಯಾಗುತ್ತಿದೆ. ಪ್ರಸ್ತಾಪಿತ ಕಾನೂನು ರದ್ದು ಪಡಿಸುವಂತೆ ಅಮೆರಿಕ ಸರ್ಕಾರ ಸಹ ಆಸ್ಟ್ರೇಲಿಯಾಗೆ ಆಗ್ರಹಿಸಿತ್ತು.

ಗೂಗಲ್‌ ಮತ್ತು ಸಾಮಾಜಿಕ ಮಾಧ್ಯಮ ಫೇಸ್‌ಬುಕ್‌ ಮಾಧ್ಯಮ ಕ್ಷೇತ್ರದಲ್ಲಿ ಅತ್ಯಧಿಕ ಮಾರುಕಟ್ಟೆ ಪ್ರಭಾವನ್ನು ಹೊಂದಿರುವುದು ಸರ್ಕಾರದ ತನಿಖೆಯಿಂದ ತಿಳಿದು ಬಂದಿತ್ತು. ಇಂಥ ಪರಿಸ್ಥಿತಿಯು ಪ್ರಜಾಪ್ರಭುತ್ವದ ಸಮರ್ಥ ಕಾರ್ಯಾಚರಣೆಗೆ ಅಡ್ಡಿಯಾಗುತ್ತದೆ ಎಂದು ಸರ್ಕಾರ ಭಾವಿಸಿದೆ.

ಫ್ರೆಂಚ್‌ ಸುದ್ದಿ ಮಾಧ್ಯಮಗಳೊಂದಿಗೆ ಗೂಗಲ್‌ ಇತ್ತೀಚೆಗಷ್ಟೇ 3 ವರ್ಷಗಳ ಅವಧಿಗೆ 1.3 ಬಿಲಿಯನ್‌ ಡಾಲರ್‌ ಒಪ್ಪಂದ ಮಾಡಿಕೊಂಡಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು