ಶನಿವಾರ, 22 ನವೆಂಬರ್ 2025
×
ADVERTISEMENT
ADVERTISEMENT

Video Shoot: ಸ್ನೇಹಕ್ಕೊಂದು ಸುಂದರ ಫ್ರೇಮ್

Published : 21 ನವೆಂಬರ್ 2025, 23:30 IST
Last Updated : 21 ನವೆಂಬರ್ 2025, 23:30 IST
ಫಾಲೋ ಮಾಡಿ
Comments
ಸ್ನೇಹಿತೆಯರು ಸೆಲ್ಫಿ ಕ್ಲಿಕ್ಕಿಸಿಕೊಳ್ಳುವುದು, ವಿಡಿಯೊ ಮಾಡಿಕೊಳ್ಳುವುದು ಸಾಮಾನ್ಯ. ಆದರೆ ವಿಭಿನ್ನ ಗೆಟಪ್‌ಗಳಲ್ಲಿ, ವೃತ್ತಿಪರ ವಿಡಿಯೊಗ್ರಾಫರ್‌ಗಳಿಂದ ವಿಡಿಯೊ ಶೂಟ್‌ ಮಾಡಿಸಿಕೊಳ್ಳುವುದು ಇದೀಗ ಹೊಸ ಟ್ರೆಂಡ್‌. ನಿತ್ಯ ಬದುಕಿನ ಜಂಜಡಗಳನ್ನೆಲ್ಲಾ ಮರೆತು, ಕೆಲ ಹೊತ್ತಾದರೂ ಸ್ನೇಹ ಸಿಂಚನದಲ್ಲಿ ಮೀಯಲು ಇದಕ್ಕಿಂತ ಬೇರೆ ನೆಪ ಇನ್ನೇನು ಬೇಕು? 
ಸುಂದರ ಸ್ನೇಹವಿದು...
ಶಿವಮೊಗ್ಗದ ಕಾವ್ಯಶ್ರೀ ಹಾಗೂ ನಂದಿನಿ ಹೆಗ್ಡೆ ಕೂಡ ಈ ರೀತಿ ಥೀಮ್ ಆಧಾರಿತ ವಿಡಿಯೊ ಶೂಟ್ ಮಾಡಿಸಿದ್ದಾರೆ. ತಮ್ಮ ಸ್ನೇಹದ ಪರಿಯನ್ನು ವಿಡಿಯೊ ಮೂಲಕ ತೆರೆದಿಟ್ಟಿದ್ದಾರೆ. ಅವರು ಹೇಳುವಂತೆ: ನಾನು ನನ್ನ ಗೆಳತಿ ಕಾವ್ಯಾ ಚಿಕ್ಕವಯಸ್ಸಿನಿಂದಲೂ ಸ್ನೇಹಿತರು. ಸುಮಾರು ಇಪ್ಪತ್ತು ವರ್ಷಗಳ ಗೆಳೆತನದ ನಂಟನ್ನು ಹಂಚಿಕೊಳ್ಳಬೇಕು ಈ ಬಂಧವನ್ನು ಜೀವನವಿಡೀ ನೆನಪಿಟ್ಟುಕೊಳ್ಳುವಂತೆ ಏನಾದರೂ ಹೊಸತನ್ನು ಮಾಡಬೇಕು ಎಂದು ಇಬ್ಬರೂ ಆಲೋಚಿಸುತ್ತಿದ್ದೆವು. ಈ ಥೀಮ್ ಆಧಾರಿತ ವಿಡಿಯೊಗಳನ್ನು ನೋಡುತ್ತಲೇ ನಾವೂ ಹೀಗೇ ವಿಡಿಯೊ ಮಾಡಿಸಬೇಕು ಎನ್ನಿಸಿತು. ನಮ್ಮ ಸ್ನೇಹದ ಅನುಬಂಧವನ್ನು ವ್ಯಕ್ತಪಡಿಸಲು ಒಂದು ದಾರಿಗಾಗಿ ಹುಡುಕಾಡುತ್ತಿದ್ದ ನಮಗೆ ಈ ಮಾದರಿ ಸೂಕ್ತ ಎನಿಸಿತು. ಇಬ್ಬರೂ ಒಂದೇ ಬಗೆಯ ಸೀರೆ ಉಟ್ಟು ‘ನಗೂ ಎಂದಿದೇ...’ ಹಾಡಿಗೆ ವಿಡಿಯೊ ಮಾಡಿಸಿದೆವು. ಎಲ್ಲಿಯೂ ನಟನೆ ಎನಿಸಬಾರದು ನೈಜವಾಗಿರಬೇಕು ಎಂಬ ಕಾರಣಕ್ಕೆ ಸುಮ್ಮನೆ ಬೀದಿಯಲ್ಲಿ ತಿರುಗಾಡುವಂತೆ ಶಾಪಿಂಗ್ ಮಾಡುವಂತೆ ಹರಟುತ್ತಿರುವಂತೆ ಇರುವ ದೃಶ್ಯಗಳನ್ನು ಒಟ್ಟುಗೂಡಿಸಿ ವಿಡಿಯೊ ಮಾಡಿಸಿದೆವು. ಈ ವಿಡಿಯೊವನ್ನು ತುಂಬಾ ಜನ ಇಷ್ಟಪಟ್ಟರು. ನಮ್ಮಿಬ್ಬರಿಗೂ ಬಹಳ ಖುಷಿಯಾಯಿತು.
ಸಂತೋಷವೇ ಮುಖ್ಯ
ಬೆಂಗಳೂರಿನ ಮಮತಾ ಶೆಟ್ಟಿ ತಮ್ಮ ಸ್ನೇಹಿತೆಯರ ಪುಟ್ಟದೊಂದು ವಲಯವನ್ನೇ ಹೊಂದಿದ್ದಾರೆ. ಸದಾ ನಗು ನಗುತ್ತಾ ಇರಬೇಕು ಎಂದು ಬಯಸುವ ಈ ಸ್ನೇಹಿತೆಯರ ಗುಂಪು ತಮ್ಮ ಸಂತೋಷಕೂಟಗಳ ವಿಡಿಯೊಗಳನ್ನು ಮಾಡುತ್ತಾ ಖುಷಿಪಡುತ್ತದೆ. ‘ನಮ್ಮ ಸ್ನೇಹವನ್ನು ಅಭಿವ್ಯಕ್ತಪಡಿಸಲು ವಿಡಿಯೊ ಒಂದು ನೆಪವಷ್ಟೇ. ಹಳೆಯ ವಿಡಿಯೊಗಳನ್ನು ನೋಡುವಾಗ ಸುಮಧುರ ನೆನಪುಗಳು ಖುಷಿ ನೀಡುತ್ತವೆ, ಮನಕ್ಕೆ ಉತ್ಸಾಹ ತುಂಬುತ್ತವೆ’ ಎನ್ನುತ್ತಾರೆ ಮಮತಾ.
ಮಮತಾ ಶೆಟ್ಟಿ

ಮಮತಾ ಶೆಟ್ಟಿ

ಸಂಭ್ರಮ ಸೆರೆಹಿಡಿಯುವ ಖುಷಿ
ಸುಮಾರು ಒಂದು ವರ್ಷದಿಂದೀಚೆಗೆ ಫ್ರೆಂಡ್ಸ್ ಫೋಟೊಗ್ರಫಿ/ವಿಡಿಯೊಗ್ರಫಿಗೆ ಬೇಡಿಕೆ ಬರುತ್ತಿದೆ. ಸ್ನೇಹಿತರೆಲ್ಲಾ ಸೇರಿದಾಗ ಸಹಜವಾಗಿ ಯಾವ ರೀತಿ ಇರುತ್ತಾರೋ ಆ ಕ್ಯಾಂಡಿಡ್ ಕ್ಷಣಗಳನ್ನು ಸೇರಿಸಿ ವಿಡಿಯೊ ಮಾಡಬೇಕೆಂದು ಬಯಸುವವರು ಕೆಲವರಾದರೆ, ಒಂದೇ ಥರ ಉಡುಪುಗಳನ್ನು ಧರಿಸಿ ಅವರಿಗೆ ಏನು ಕ್ರೇಜ್ ಇರುತ್ತದೋ ಅದರೊಂದಿಗೆ ವಿಡಿಯೊಗ್ರಫಿ ಮಾಡಿಸಿ ಕೊಳ್ಳುವುದು ಮತ್ತೊಂದು ರೀತಿ. ಕೆಲವು ಸ್ನೇಹಿತೆಯರು ಒಟ್ಟಿಗೆ ಬೈಕ್ ಓಡಿಸುತ್ತಾ, ಕಾರು ಓಡಿಸುತ್ತಾ ಒಟ್ಟಿನಲ್ಲಿ ತಮ್ಮ ಹವ್ಯಾಸ ಗಳನ್ನೇ ಇಟ್ಟುಕೊಂಡು ಶೂಟ್ ಮಾಡಿಸಿಕೊಳ್ಳುತ್ತಾರೆ. ಅವರ ಖುಷಿಯನ್ನು ಸೆರೆಹಿಡಿಯುವುದು ನಮಗೂ ಖುಷಿ.
ದಿಲೀಪ್, ಛಾಯಾಗ್ರಾಹಕ
ದಿಲೀಪ್‌

ದಿಲೀಪ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT